Part 2 : ಲಿಂಗದೇವಾ ಮತ್ತು ಕೂಡಲ ಸಂಗಮದೇವಾ ಒಂದು ಅಧ್ಯಯನ
ಲಿಂಗದೇವಾ ಮತ್ತು ಕೂಡಲ ಸಂಗಮದೇವಾ ಒಂದು ಅಧ್ಯಯನ; ಭಾಗ-೨
-ಶರಣ ಸಚ್ಚಿದಾನಂದ ಪ್ರಭು ಚಟ್ನಳ್ಳಿ
ವಚನಾಂಕಿತಗಳು ಇದು ಯಾರು ಬರೆದಿರುವ ವಚನ ಎಂದು ಗುರುತಿಸಲಿಕ್ಕೆ ಬರೆದ ಒಂದು ವಿಶಿಷ್ಟವಾದ ಪದವಾಗಿದೆ. ಗುರು ಬಸವಣ್ಣನವರು, ಗುರು ಸಿದ್ಧರಾಮೇಶ್ವರರು ಮತ್ತು ಗುರು ಅಕ್ಕಮಹಾದೇವಿಯವರು ಶಿವ ಭಕ್ತಿಯ ಮನೆತನದಲ್ಲಿ ಹುಟ್ಟಿ, ಬಾಲ್ಯದಲ್ಲಿ ಶಿವಭಕ್ತಿಯನ್ನೇ ಮೈಗೂಡಿಸಿಕೊಂಡು, ಬಾಲ್ಯದಲ್ಲಿಯೇ ವಚನಗಳನ್ನು ಬರೆಯಲು ಆರಂಭಿಸಿದರು. ಈ ಮೂವರು ಬಾಲ್ಯದಲ್ಲಿ ಶಿವನ ಸಂಕೇತವಾದ/ ಶಿವ ಪರಂಪರೆಯ ಗ್ರಹಸ್ಥ/ವಿರಕ್ತ ಜಂಗಮರ ಸಂಕೇತವಾದ ಸ್ಥಾವರ ಲಿಂಗದ ಹೆಸರಿನ ವಚನಾಂಕಿತವನ್ನಿಟ್ಟುಕೊಂಡು ವಚನಗಳನ್ನು ಬರೆದರು.
ಗುರು ಬಸವಣ್ಣನವರು ಕೂಡಲ ಸಂಗಮದೇವಾ ಎನ್ನುವ ವಚನಾಂಕಿತದೊಂದಿಗೆ ಬಾಲ್ಯದಲ್ಲಿ ವಚನಗಳನ್ನು ಬರೆದರು. ‘ಕೂಡಲಸಂಗಮದೇವ’ ಇಂದಿನ ಕೂಡಲ ಸಂಗಮದ ಸಂಗಮೇಶ್ವರ ದೇವಸ್ಥಾನದಲಿರುವ ಸಂಗಮೇಶ್ವರ ಸ್ಥಾವರ ಲಿಂಗದ ಹೆಸರು.
ಸಂಗಮೇಶ್ವರ ಎನ್ನುವ ಹೆಸರಿನ ಶಿವ ಪರಂಪರೆಯ ಒಬ್ಬ ಯೋಗಿ/ಮಹಾತ್ಮ/ಒಬ್ಬ ವಿರಕ್ತ ಜಂಗಮ ಆ ಭಾಗದಲ್ಲಿ ಒಂದಾನೊಂದು ಕಾಲದಲ್ಲಿ ತಪಸ್ಸು ಮಾಡಿ, ಶಿವ ತತ್ವ ಬೋಧೆ ಮಾಡುತ್ತ ಗುರುವಾಗಿ ಪ್ರಸಿದ್ಧಿ ಪಡೆದವರು. ಅವರ ಲಿಂಗೈಕ್ಯರಾದ ನಂತರ ಅವರ ಸಮಾಧಿಯ ಮೇಲೆ ಒಂದು ಸ್ಥಾವರ ಲಿಂಗವನ್ನು ಸ್ಥಾಪಿಸಿ ಅದಕ್ಕೆ ಸಂಗಮೇಶ್ವರ ಲಿಂಗ ಎಂದು ಹೆಸರಿಟ್ಟು ಅಲ್ಲೊಂದು ದೇವಸ್ಥಾನವನ್ನು ಕಟ್ಟಿದರು. ಅದುವೇ ಇಂದಿನ ಸಂಗಮೇಶ್ವರ ದೇವಸ್ಥಾನ. ಗುರು ಬಸವಣ್ಣನವರು ಬಾಲ್ಯದಲ್ಲಿ ಇದೇ ಸಂಗಮೇಶ್ವರಲಿಂಗದ ಆರಾಧಕರಾಗಿದ್ದರು.
ಗುರು ಅಕ್ಕಮಹಾದೇವಿ ತಾಯಿಯವರ ಮನೆತನದ ಮನೆದೇವರು ಶ್ರೀಶೈಲದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿರುವ ಮಲ್ಲಿಕಾರ್ಜುನ ಹೆಸರಿನ ಸ್ಥಾವರ ಲಿಂಗ.
ಮಲ್ಲಿಕಾರ್ಜುನ ಎನ್ನುವ ಹೆಸರಿನ ಯೋಗಿ ಶ್ರೀಶೈಲದಲಿ ವಾಸವಾಗಿದ್ದು ಆ ಭಾಗದಲ್ಲಿ ಶಿವ ತತ್ವವನ್ನು ಬೋಧಿಸುತ್ತ ಶಿವ ಪರಂಪರೆಯ/ ಶಿವ ಪೀಠದ ಗೃಹಸ್ಥ ಜಂಗಮರಾಗಿದ್ದರು. ಅವರ ಧರ್ಮಪತ್ನಿಯ ಹೆಸರು ಭ್ರಮರಾಂಬ ಆಗಿತ್ತು. ಶ್ರೀಶೈಲದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪಕ್ಕದಲ್ಲಿಯೇ ಅವರ ಧರ್ಮಪತ್ನಿಯಾಗಿದ್ದ ಭ್ರಮರಾಂಬರವರ ದೇವಸ್ಥಾನವನ್ನೂ ನಾವು ಇಂದಿಗೂ ಕಾಣಬಹುದು.
ಮಲ್ಲಿಕಾರ್ಜುನ ಎಂಬ ಗೃಹಸ್ಥ ಜಂಗಮ ಲಿಂಗೈಕ್ಯರಾದಮೇಲೆ ಅವರ ಸಮಾಧಿಯ ಮೇಲೆ ಒಂದು ಸ್ಥಾವರ ಲಿಂಗವನ್ನಿಟ್ಟು ದೇವಸ್ಥಾನವನ್ನು ಕಟ್ಟಿಸಿ ಅದಕ್ಕೆ ಮಲ್ಲಿಕಾರ್ಜುನ ಲಿಂಗ ಎಂದು ಹೆಸರಿಟ್ಟರು. ಗುರು ಅಕ್ಕಮಹಾದೇವಿಯವರು ಮತ್ತು ಗುರು ಸಿದ್ಧರಾಮೇಶ್ವರರು ಬಾಲ್ಯದಲ್ಲಿ ಆರಾಧಿಸಿದ್ದು ಇದೇ ಮಲ್ಲಿಕಾರ್ಜುನನ್ನು. ಹೀಗಾಗಿ ಗುರು ಅಕ್ಕಮಹಾದೇವಿಯವರು ಬಾಲ್ಯದಲ್ಲಿ ಚೆನ್ನಮಲ್ಲಿಕಾರ್ಜುನ/ ಚೆನ್ನಮಲ್ಲಿಕಾರ್ಜುನ ದೇವಾ ಎನ್ನು ವಚನಾಂಕಿತಗಳನ್ನು ಬಳಸಿ ವಚನಗಳನ್ನು ಬರೆದರು. ಪ್ರೌಢರಾದಂತೆ ದೇವಸ್ಥಾನದಲ್ಲಿರುವ ಮಲ್ಲಿಕಾರ್ಜುನ ಲಿಂಗವು, ಮಲ್ಲಿಕಾರ್ಜುನ ಎನ್ನುವ ಹೆಸರಿನ ಗೃಹಸ್ಥ ಜಂಗಮನ ಸಮಾಧಿ ಲಿಂಗ. ಅವರ ಹೆಸರಿನ ಲಿಂಗ ಎಂದು ಅರಿತು ತಾವು ಶಿವ ಭಕ್ತಿಯಿಂದ ಲಿಂಗದೇವನ ಭಕ್ತಿಗೆ ಪರಿವರ್ತನೆಯಾದರು. ಇದರ ನಂತರ ಅವರು ಚೆನ್ನಮಲ್ಲಿಕಾರ್ಜುನ ದೇವರ ದೇವಾ ಎನ್ನುವ ವಚನಾಂಕಿತವನ್ನು ಬಳಸಿದ್ದನನ್ನು ಕಾಣುತ್ತೇವೆ.
ಗುರು ಸಿದ್ಧರಾಮೇಶ್ವರರು ಬಾಲ್ಯದಲ್ಲಿ ಹೊಲದಲ್ಲಿ ದನಗಳನ್ನು ಮೇಯಿಸುತ್ತಿದ್ದಾಗ ಮಲ್ಲಿಕಾರ್ಜುನ ಹೆಸರಿನ ಯೋಗಿಯೊಬ್ಬರು ವೃಷಭ ವಾಹನರಾಗಿ ಬಂದ್ದಿದ್ದರು. ಬಾಲಕ ಸಿದ್ಧರಾಮೇಶ್ವರರಿಗೆ ತನಗೆ ಬುತ್ತಿ ಬೇಕೆಂದು ಕೇಳಿದರು. ಬಾಲಕ ಸಿದ್ಧರಾಮೇಶ್ವರರು ಮನೆಗೆ ಹೋಗಿ ಬುತ್ತಿ ತರುವಷ್ಟರಲ್ಲಿ ಮಲ್ಲಿಕಾರ್ಜುನ ಯೋಗಿ ಅಲ್ಲಿಂದ ಹೊರಟು ಹೋಗಿದ್ದರು. ಅವರನ್ನು ಅರಸುತ್ತ ನಡೆದ ಬಾಲಕ ಸಿದ್ಧರಾಮೇಶ್ವರರು ಕಪಿಲಸಿದ್ಧಮಲ್ಲಿಕಾರ್ಜುನ (ವೃಷಭ ವಾಹನದ ಜೊತೆಯಿರುವ ಮಲ್ಲಿಕಾರ್ಜುನ) ಕಪಿಲಸಿದ್ಧಮಲ್ಲಿಕಾರ್ಜುನ ಎಂದು ಕರೆಯುತ್ತ ಆ ಯೋಗಿಯನ್ನು ಅರಸತೊಡಗಿದರು.
ಅಯ್ಯಾ! ನೀ ಬಾರಯ್ಯ!
ಬಂದು ಎನ್ನ ಹೃದಯ ಮನ ಶಾಸನವ ಮಾಡಿ ನಿಲ್ಲಯ್ಯ
ಹಾ! ಅಯ್ಯಾ! ಅಯ್ಯಾ! ನೀ ಬಾರಾ ನಿನ್ನ ಧರ್ಮ!
ಕಪಿಲಸಿದ್ಧಮಲ್ಲಿನಾಥಯ್ಯ.
ಅಯ್ಯಾ ಬಾರಯ್ಯ ಬಾರಾ ಆನಂದಾದಿಯಲ್ಲಿ
ಅಯ್ಯಾ ಒಯ್ಯನನೇ ಕೈಗೊಡಯ್ಯ.
ಅಯ್ಯಾ ಕಂಗೆಟ್ಟ ಪಶುವಾನಾದೆನು.
ಎಲೆ ಅಯ್ಯಾ, ಕಪಿಲಸಿದ್ಧ ಮಲ್ಲಿಕಾರ್ಜುನ.
ಹೀಗಿ ಕಪಿಲಸಿದ್ಧ ಮಲ್ಲಿಕಾರ್ಜುನನಿಗಾಗಿ ಹಂಬಲಿಸುತ್ತ, ತಮ್ಮ ಭಕ್ತಿಯನ್ನು ಅವರಲ್ಲಿ ವ್ಯಕ್ತ ಪಡಿಸಲಾರಂಭಿಸಿದರು. ಬೆಳೆದು ದೊಡ್ಡವರಾದಂತೆ ಶ್ರೀ ಶೈಲದ ಮಲ್ಲಿಕಾರ್ಜುನನೇ ನನಗೆ ಕಪಿಲಸಿದ್ಧ ಮಲ್ಲಿಕಾರ್ಜುನನಾಗಿ ಬಂದನೆಂದು ಅವನಲ್ಲಿಯೇ ತಮ್ಮ ಭಕ್ತಿಯನ್ನು ಅಭಿವ್ಯಕ್ತಮಾಡಲಾರಂಭಿಸಿದರು. ಈ ಕಪಿಲಸಿದ್ಧಮಲ್ಲಿಕಾರ್ಜುನನ ಹಂಬಲ ಅವರಿಗೆ ಗುರು ಅಲ್ಲಮಪ್ರಭುದೇವರ ದರ್ಶನವಾಗುವವರೆಗ ಮುಂದುವರೆಯುತ್ತದೆ.
(....ಭಾಗ -೩ರಲ್ಲಿ ಮುಂದುವರೆಯುವುದು)

ಇವರು ಬರೆದ ವಚನ ಸಾಹಿತ್ಯ ಮತ್ತು ಇವರ ವಿಚಾರಗಳನ್ನು ನೋಡಿದರೆ ಸಾಕು ಸಾವಿರ ವರ್ಷಗಳ ಹಿಂದೆಯೇ ಹುಟ್ಟಿರ ಬಹುದೆಂದು ಅನಿಸಿಕೆ
ಪ್ರತ್ಯುತ್ತರಅಳಿಸಿ