ಮಾಲಿಕೆ-1 : ಮಠ ಪೀಠಗಳು ಬೋಧಿಸದೆ ಬಚ್ಚಿಟ್ಟ ವಚನಗಳು

 ಮಠ ಪೀಠಗಳು ಬೋಧಿಸದೆ ಬಚ್ಚಿಟ್ಟ ವಚನಗಳ ಮಾಲಿಕೆ-೧

-ಶರಣ ಸಚ್ಚಿದಾನಂದ ಪ್ರಭು ಚಟ್ನಳ್ಳಿ

ಸಯದಾನವ ತಂದು ನೀಡುವೆನಲ್ಲದೆ ಸಂಬಂಧಿ ನಾನಲ್ಲಯ್ಯಾ.

ಕರ್ತಂಗೆ ಭೃತ್ಯಾಚಾರವ ಮಾಡಿ ಒಕ್ಕುದ ಕೊಂಡಿಪ್ಪೆನಯ್ಯಾ.

ಭೋಗಾದಿಭೋಗವ ಸಮವಾಗಿ ಭೋಗಿಸಲು ಅಘೋರನರಕದಲ್ಲಿಕ್ಕುವ ಲಿಂಗದೇವ.

-ಗುರುಬಸವಣ್ಣನವರು

ಲಿಂಗದೇವನ ಶರಣರ ಸಮಸಮವಾಗಿ ಅನುಗ್ರಹ ನೀಡಿದ ಗುರುವಿನ ಸಮಸಮವಾಗಿ ಸೌಲಭ್ಯಗಳನ್ನು ಪಡೆದರೆ ಲಿಂಗದೇವರು ನರಕದಲ್ಲಿಕ್ಕುವ ಎಂದು ಗುರು ಬಸವಣ್ಣನವರು ಮೇಲಿನ ವಚನದಲ್ಲಿ ಹೇಳುತ್ತಿದ್ದಾರೆ. ಒಂದು ಧರ್ಮದ ಒಳಿತಿಗೆ ಇದು ಬಹು ದೊಡ್ಡ ಸಂದೇಶ.

 *ಸಯದಾನವ ತಂದು ನೀಡುವೆನಲ್ಲದೆ ಸಂಬಂಧಿ ನಾನಲ್ಲಯ್ಯ* ಎಂದರೆ ನಾನು ಅನುಭವ ಮಂಟಪಕ್ಕೆ, ಶೂನ್ಯ ಪೀಠಕ್ಕೆ ಮಹಾಮನೆಗೆ ಶರಣರ ದಾಸೋಹಕ್ಕೆ ಕಾಣಿಕೆ, ಪಡಿ ಪದಾರ್ಥಗಳನ್ನು ತಂದು ಕೊಡುವುದಷ್ಟೇ ನನ್ನ ಕರ್ತವ್ಯ ಅದರ ಸಂಬಂಧಿ ನಾನಲ್ಲ. ಅಂದರೆ *"ಅದನ್ನು ಉಪಯೋಗಿಸುವ ಹಕ್ಕು, ಭೋಗಿಸುವ ಅಧಿಕಾರ ನನಗಿಲ್ಲ"* ಎಂದು ಹೇಳುತ್ತಿದ್ದಾರೆ.  

*ಕರ್ತಂಗೆ ಭ್ರತ್ಯಾಚಾರವ ಮಾಡಿ ಒಕ್ಕುದ ಕೊಂಡಿಪ್ಪೆನಯ್ಯ*  ಎಂದರೆ,  ಕಾಣಿಕೆಯನ್ನು ನೀಡಿದ ಶರಣರಿಗೆ ಧರ್ಮ ಬೋಧಿಸುವ ಸೇವೆಯನ್ನು ಮಾಡಿ ಮಹಾಮನೆಯಲ್ಲಿ ಅವರಿಗೆ ಪ್ರೀತಿ ಗೌರವಗಳಿಂದ ದಾಸೋಹ ಮಾಡಿ, ಅವರು ಉಪಯೋಗಿಸಲು ಹೇಳಿದಷ್ಟನ್ನು ಮಾತ್ರ ಶರಣರಿಗೆ ಸಮ್ಮತವಾದುದನ್ನು ಮಾತ್ರ ನಾನು ಪಡೆದುಕೊಳ್ಳುತ್ತೇನೆ. ಅವರು ನನಗೆ ಉಪಯೋಗಿಸಲು ಅನುಮತಿ ಕೊಟ್ಟಿದ್ದನ್ನು ಮಾತ್ರ ಉಪಯೋಗಿಸುತ್ತೇನೆ. ಹೆಚ್ಚಿನ ಭಾಗವನ್ನು ಭಕ್ತರ ಸೌಕರ್ಯಕ್ಕಾಗಿ ಧರ್ಮದ ಉನ್ನತಿಗಾಗಿ ಬಳಸಬೇಕು ಎಂದು ಸಮಾಜ ಕಟ್ಟುವ ಸೂತ್ರವನ್ನು ಗುರು ಬಸವಣ್ಣನವರು ಮೇಲಿನ ವಚನದಲ್ಲಿ ಹೇಳುತ್ತಿದ್ದಾರೆ. 

*ಪೀಠಾಧಿಕಾರಿಗಳು ಜಂಗಮರು ನಮಗೆ ಧನವನ್ನು ಜಂಗಮಕ್ಕೆ ಅರ್ಪಿಸಬೇಕು ಧನವನ್ನು ಜಂಗಮಕ್ಕೆ ಅರ್ಪಿಸಬೇಕು* ಎಂದು ಒಂದೇ ತತ್ವವನ್ನು ಪದೇ ಪದೇ ಬೋಧಿಸಿ, *ಭಕ್ತಿಯ ಭಯೋತ್ಪಾದನೆ ಹುಟ್ಟಿಸಿದರು.* ಭಕ್ತರು ಕಷ್ಟಪಟ್ಟು ಬೆವರು ಸುರಿಸಿ ಕಾಯಕದಿಂದ ದುಡಿದ ಹಣವನ್ನು ಪಡೆದು,  ಆ ಧನವನ್ನು ಅರ್ಪಿಸಿಕೊಂಡ ಜಂಗಮ ಭಕ್ತರಿಂದ ಪಡೆದ ಧನವನ್ನು ಹೇಗೆ ಉಪಯೋಗಿಸಬೇಕು ಎನ್ನುವುದನ್ನು ಇದುವರೆಗೂ ತಮ್ಮ ಪ್ರವಚನಗಳಲ್ಲಿ ಯಾರೂ ಹೇಳಿಯೇ ಇಲ್ಲ. 

ಭಕ್ತರು ಕೊಟ್ಟ ಕಾಣಿಕೆಯಿಂದ ತಮ್ಮ ತಮ್ಮ ಅಕ್ಕ-ತಂಗಿಯರಿಗೆ ಅಣ್ಣ-ತಮ್ಮಂದಿರಿಗೆ ತಂದೆ-ತಾಯಂದಿರಿಗೆ ವೈಭೋಗದ ಜೀವನವನ್ನು ರೂಪಿಸಿಕೊಟ್ಟಿದ್ದಾರೆ.*

ಹುಚ್ಚರಂತೆ ಅಲ್ಪ ಕೀರ್ತಿಯ ಆಸೆಗಾಗಿ ವಿಮರ್ಶಾ ಪ್ರಜ್ಞೆಯಿಲ್ಲದೆ ನಾವು ಕಾಣಿಕೆ ಕೊಟ್ಟ ಹಣ ಎಲ್ಲೆಲ್ಲಿ ಸೋರಿ ಹೋಗುತ್ತಿದೆ ಎನ್ನುವ ಅರಿವಿಲ್ಲದೆ ಕೊಡುತ್ತಿದ್ದೇವೆ. 

ಅತ್ಯಂತ ಕೆಟ್ಟ  ಆಚರಣೆಯಾದ ಪಾದಪೂಜೆಯನ್ನು ಮಾಡಿ ಧನವನ್ನು  ಕಳೆದುಕೊಳ್ಳುತ್ತಿದ್ದೇವೆ. ಭಕ್ತರ ಹಣ ದುರುಪಯೋಗ ಮಾಡಿಕೊಳ್ಳುವ ಜಂಗಮರು ಬರುತ್ತಾರೆ ಎನ್ನುವ ಮುಂದಾಲೋಚನೆಯಿಂದಲೇ ಶರಣರು ಬಸವಣ್ಣ ಗುರುವಾದ ಬಸವಣ್ಣ ಲಿಂಗವಾದ ಬಸವಣ್ಣ ಜಂಗಮವಾದ ಎಂದು ಬೋಧಿಸಿ ಜಂಗಮ ಪೂಜೆಯನ್ನೂ ಗುರು ಬಸವಣ್ಣನವರ ಪೂಜೆಯಲ್ಲಿಯಲ್ಲಿಯೇ ಕಂಡುಕೊಳ್ಳಿರಿ  ಎಂದು ಬೋಧಿಸಿ ನಮಗೆ ಭಕ್ತಿಯ ಪಥ ತೋರಿದ್ದಾರೆ.

ಅತಿಮುಖ್ಯವಾಗಿ  *ಭೋಗಾದಿ ಭೋಗವ ಸಮವಾಗಿ ಭೋಗಿಸಲು ನರಕದಲ್ಲಿಕ್ಕುವ ಲಿಂಗದೇವ* ಎಂದರೆ ಕಾಣಿಕೆ ಕೊಟ್ಟ ಭಕ್ತ ದೊಡ್ಡ ಶ್ರೀಮಂತ ಇದ್ದಾರೆ ಅವರ ಹಾಗೆ ನಾನು ಶ್ರೀಮಂತಿಕೆಯಿಂದ ಮೆರೆಯಬೇಕು ಅಥವಾ ಬೇರೆ ಮಠ ಪೀಠದ ಗುರುಗಳು ಬೆಲೆಬಾಳುವ ವಾಹನದಲ್ಲಿ ಓಡಾಡುತ್ತಾರೆ ನಾನು ಅಷ್ಟು ಬೆಲೆಬಾಳುವ ವಾಹನದಲ್ಲಿ ಓಡಾಡಬೇಕು. ದೊಡ್ಡ ಗುರುಗಳಿಗೆ ಸಿಗುವಷ್ಟು ಸೌಲಭ್ಯ ಮತ್ತು ಸೇವಕರು ತನಗೂ ಬೇಕು, ಗುರುಗಳಿಗೆ ಸಿಗುವಷ್ಟು ಗೌರವ ತನಗೂ ಬೇಕು,  ನಾನು ತಂದ ಕಾಣಿಕೆ ಇದು ಇದರ ಮೇಲೆ ನನ್ನ ಅಧಿಕಾರ ಇದೆ, ಇದನ್ನು ನಾನೇ ಅನುಭವಿಸಬೇಕು ಎನ್ನುವುದು ಧರ್ಮದ ಹಿತದೃಷ್ಟಿಯಿಂದ ಬಹುದೊಡ್ಡ ತಪ್ಪಾಗುತ್ತದೆ. ಗುರು ಬಸವಣ್ಣನವರಿಗೆ ಸಮ್ಮತವಲ್ಲದ ಮತ್ತು ಧರ್ಮ ಸಮ್ಮತವಲ್ಲದ ನಡೆಯಾಗುತ್ತದೆ.

 ತಾನು ತಂದ ಕಾಣಿಕೆ ಮೇಲೆ ತನಗೆ ಅಧಿಕಾರ ಇಲ್ಲ *ಸಂಬಂಧಿ ನಾನಲ್ಲ* ಅದನ್ನು ಧರ್ಮದ ಹಿತಕ್ಕೆ ಕಾಣಿಕೆ ಕೊಟ್ಟ ಭಕ್ತರ ಹಿತಕ್ಕಾಗಿಯೇ ಬಳಸಬೇಕು ಎನ್ನುವುದು *ಗುರು ಬಸವಣ್ಣನವರ ಅಭಿಲಾಷೆ ಮತ್ತು ಆಜ್ಞೆ.*

*ಗುರು ಬಸವಣ್ಣನವರು ತಮ್ಮ ಮೇಲಿನ ವಚನದಲ್ಲಿ ಧರ್ಮ ಕಟ್ಟುವ ಸೂತ್ರವನ್ನು ಬೋಧಿಸಿದ್ದಾರೆ ಅದರಂತೆ ನಡೆ ಎಂದು ಆದೇಶಿಸಿದ್ದಾರೆ.*

ಇಂದು ಅನೇಕ ಮಠ ಪೀಠಗಳಲ್ಲಿ ನಡೆಯುತ್ತಿರುವುದು ಇದಕ್ಕೆ ತದ್ವಿರುದ್ದವಾದ ಆಚರಣೆ.‌

‌*ಲಕ್ಷ ಲಕ್ಷ ಕಾಣಿಕೆ ಕೊಟ್ಟ ಭಕ್ತರೇ ಮಠ ಪೀಠಗಳಿಗೆ ಬಂದಾಗ, ತ್ರಷೆಗೆ ಕುಡಿಯಲು ಶುದ್ಧ ನೀರಿನ ವ್ಯವಸ್ಥೆ, ಹಸಿವಿಗೆ ಪ್ರಸಾದ ದಾಸೋಹ ಇರುವುದಿಲ್ಲ. ಶುದ್ಧ ಶೌಚಾಲಯಗಳಂತೂ ಮೊದಲೇ ಇಲ್ಲ. ಇನ್ನು ಮಠಗಳಿಗೆ ಹೋಗುವ ಬಡ ಭಕ್ತರ ಪಾಡೇನು?* 

ಭಕ್ತರು ಕೊಟ್ಟ ಕಾಣಿಕೆ ತಮ್ಮ ವೈಭೋಗದ ಜೀವನಕ್ಕೆ, ತನ್ನ ವೈಯಕ್ತಿಕ ದುಡಿಮೆಯೆಂದು ಭಾವಿಸಿ ರಕ್ತ ಸಂಭಧಿಗಳ ಹಿತಕ್ಕೆ ಬಳಸುವವರೇ ಹೆಚ್ಚು. ಇಂಥವರಿಗೆ ಭಕ್ತರ ಸೌಕರ್ಯಗಳ ಅಭಿವ್ರದ್ದಿ ಮಾಡುವ ಮನಸ್ಸಾದರೂ ಹೇಗೆ ಬರುತ್ತೆ?

ಗುರು ಅಕ್ಕಮಹಾದೇವಿ ತಾಯಿಯವರು ಗುರು ಬಸವಣ್ಣನವರ ಐವತ್ತೆರಡು ಗುಣಗಳ ಬಗ್ಗೆ ಹೇಳುವಾಗ  *ಪಾತ್ರ ಅಪಾತ್ರವನರಿದೀವ* ಎಂದು ಹೇಳಿದ್ದಾರೆ. ಅಂದರೆ ಗುರು ಬಸವಣ್ಣನವರು ತಾನು ಕೊಡುವ ಕಾಣಿ ಸತ್ಕಾರ್ಯಗಳಿಗೆ ನಿಜವಾಗಿಯೂ ಸಲ್ಲತ್ತದೆಯೇ ಎಂದು ಯೋಚನೆ ಮಾಡುತ್ತಿದ್ದರು. ಸತ್ಕಾರ್ಯಗಳಿಗೆ ಸದುಪಯೋಗವಲ್ಲಿ ಮಾತ್ರ ಕಾಣಿಕೆ ಕೊಡುತ್ತಿದ್ದರು. ಆ ಮಹಾಗುರುವಿನ ಅನುಯಾಯಿಗಳಾದ ನಾವೂ ನಮ್ಮ ಕಾಣಿಕೆ ಎಲ್ಲಿ ವಿನಿಯೋಗವಾಗುತ್ತಿದೆ ಎಂದು ವಿಮರ್ಶಾ ಪ್ರಜ್ಞೆ ಬೆಳಿಸಿಕೊಳ್ಳಲೇಬೆಕು.

*ಕಾವಿ ಧರಿಸಿದ ಮರುದಿನವೇ ಅರ್ಧಕೋಟಿ ಬೆಲೆಯ ವಾಹನದಲ್ಲಿ ಓಡಾಡಬೇಕೆಂಬ ಅಪೇಕ್ಷೆಯಿರುವವರೇ ಹೆಚ್ಚು, ಅರಿವು ಆಚಾರ ಅನುಭಾವವಿಲ್ಲದಿದ್ದರೂ ಕುದುರೆ ಸತ್ತಿಗೆಯರೆಂದು ತಿಳಿದು ಕಾಲ ಹಿಡಿವರು ಎನ್ನುವ ದುರಾಲೋಚನೆ ಇರುವವರೇ ಹೆಚ್ಚು*

*ಅದಕ್ಕಾಗಿಯೇ ಮಠ ಪೀಠಗಳು ಮೇಲಿನ ಗುರು ಬಸವಣ್ಣನವರ ವಚನವನ್ನು ಇದುವರೆಗೂ ಎಂದೂ ಬೋಧಿಸಿಲ್ಲ ಮುಂದೆ  ಬೋಧಿಸುವುದೂ ಇಲ್ಲ!!!*

*ಆಶ್ಚರ್ಯಕರ ಸಂಗತಿಯೆಂದರೆ ಈ ತತ್ವದ ಬೋಧಕರು ಗುರು ಬಸವಣ್ಣನವರು ಆದರೆ ಸಾಧಕರು ಬೇರೆ ಧರ್ಮೀಯರು!!*

ಸಿಖ್ ಧರ್ಮೀಯರನ್ನು ನೋಡಿದಾಗ ಇದು ನಮಗೆ ನಿಜ ಎನಿಸುತ್ತದೆ. ಅವರು ಕೆಲವೇ ಸಂಖ್ಯೆಗಳಲ್ಲಿ ವಾಸಿಸುತ್ತಿದ್ದರೂ 

ಸುಂದರವಾದ ಗುರುದ್ವಾರ ಗಳನ್ನು ಕಟ್ಟಿಕೊಂಡಿದ್ದಾರೆ ಭಕ್ತಿ ಹಾಗೂ ಪ್ರೀತಿಯಿಂದ ದಾಸೋಹವನ್ನು ಮಾಡುತ್ತಾರೆ ಶುದ್ಧಿ ಮತ್ತು ಸೂಚಿ ಎರಡನ್ನು ಕಾಪಾಡಿ ಕೊಂಡಿರುತ್ತಾರೆ. ನಾವು ದಾಸೋಹ ತತ್ವ ಮರೆತು ಶತಮಾನಗಳೇ ಕಳೆದವು. ಕೇವಲ ಮಠ ಪೀಠಗಳನ್ನು ಬೆಳೆಸುವ ಭರದಲ್ಲಿ ಅವುಗಳನ್ನು ಶ್ರೀಮಂತವಾಗಿ ಮಾಡಿ ಬಸವ ಮಂಟಪಗಳನ್ನು ನಿರ್ಮಿಸಿಕೊಳ್ಳಲಾರದಷ್ಟು ಬಡವತನ ತಂದುಕೊಂಡಿದ್ದೇವೆ. 

ನಾವು ಎಚ್ಚರವಾಗದಿದ್ದರೆ, ನಮ್ಮ ಭಕ್ತಿಯಲ್ಲಿ ಅವಧಾನ ಬೆಳಸಿಕೊಳ್ಳದಿದ್ದರೆ, ಪಾತ್ರಪಾತ್ರವನ್ನರಿಯದಿದ್ದರೆ  ಕಾವಿಗಳು ನಮ್ಮನ್ನು ಆಪೋಷನಕೊಂಬುವುದರಲ್ಲಿ ಯಾವುದೇ ಸಂದೇಹವಿಲ್ಲ. 

ಬಸವ ಮಂಟಪಗಳು ಹಿಂದಿಗಿಂತಲೂ ಇಂದು ಬಹಾಳ ಅಗತ್ಯವಾಗಿವೆ. ಎಲ್ಲಾ ಪೀಠಗಳು ಮಠಗಳು ಬಹಾಳ ಶ್ರೀಮಂತವಾಗಿವೆ ಸ್ವಯಂಚಾಲನ ಶಕ್ತಿ ಅವುಗಳಿಗೆ ಬಂದಿದೆ. ಅದಕ್ಕಾಗಿ ನಾವು ನಮ್ಮ ಧರ್ಮ ಮಂದಿರಗಳಾದ *ಬಸವ ಮಂಟಪಗಳನ್ನು ನಿರ್ಮಿಸಿಕೊಳ್ಳುವವರೆಗೆ ಮಠ ಪೀಠಗಳಿಗೆ ಕಾಣಿಕೆ ಕೊಡುವುದನ್ನು ನಿಲ್ಲಿಸೋಣ.*  ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳು ಹೆಚ್ಚು ಬೆಳೆದಿದ್ದು ಅವರ ಧರ್ಮಮಂದಿರಗಳಿಂದಲೇ ಹೊರತು ಧರ್ಮಪೀಠಗಳಿಂದಲ್ಲ ಎನ್ನುವುದು ನನಗೆ ಇತ್ತೀಚಿನ ಕೆಲವು ವರ್ಷಗಳಿಂದ ಹೆಚ್ಚು ಮನವರಿಕೆಯಾಗುತ್ತಿದೆ. ಎರಡು-ಮೂರು ವರ್ಷಗಳ ಕೆಳಗೆಯೇ ಈ ವಿಚಾರಗಳನ್ನು ನಾನು ನಮ್ಮ ಅನೇಕ ಶರಣ ಬಂಧುಗಳೊಂದಿಗೆ ಹಂಚಿಕೊಂಡಿದ್ದೇನೆ. 

೨೦೦೮ರಲ್ಲೇ *ವ್ಯಕ್ತಿ ಮತ್ತು ಸಮಾಜದ ಏಳಿಗೆಯಲ್ಲಿ ಬಸವ ಮಂಟಪಗಳ ಪಾತ್ರ* ಎನ್ನು ಸಂಶೋಧಾನಾತ್ಮಕ ಪ್ರಬಂಧವನ್ನು  ನಾನು ಕಲ್ಯಾಣಕಿರಣದಲ್ಲಿ ಬರೆದಿದ್ದೆ.

 ಹಳ್ಳಿಗೊಂದೊಂದೊಂದು ಬಸವ ಮಂಟಪಗಳಾಗಬೇಕು. ಪಟ್ಟಣಗಳಲ್ಲಿ ಓಣಿಗೊಂದು ಬಸವ ಮಂಟಪ ವಿಲ್ಲದಿದ್ದರೂ ಬಡಾವಣೆಗೊಂದು ಬಸವ ಮಂಟಪ ನಿರ್ಮಿಸಿಕೊಳ್ಳಲೇಬೇಕು. *ಆರ್ಥಿಕವಾಗಿ ಹೆಚ್ಚು ಅನುಕೂಲವಾಗಿರುವವರು ತಮ್ಮ ಮನೆಯಲ್ಲಿಯೇ ಒಂದು ಮಹಡಿ ಬಸವ ಮಂಟಪ ಕಟ್ಟಿದರೆ ಇದಕ್ಕಿಂತ ದೊಡ್ಡ ಜಂಗಮಪೂಜೆ ಮತ್ತೊಂದಿಲ್ಲ*

*ನಾನು ಹಲವು  ವರ್ಷಗಳಿಂದ ವರ್ಷಗಳಿಂದ ಗಮನಿಸಿದ ಸಂಗತಿಯೆಂದರೆ ಬಸವ ಮಂಟಪಗಳಿರುವ ಊರುಗಳ/ಬಸವ ಮಂಟಪಕ್ಕೆ ಹೋಗುವ ಭಕ್ತರು; ಬಸವ ಮಂಟಪವಿಲ್ಲದ ಊರುಗಳ/ಬಸವ ಮಂಟಪಕ್ಕೆ ಹೋಗದ ಭಕ್ತರಿಗಿಂತ ಹೆಚ್ಚು ಭಕ್ತಿವಂತರಾಗಿದ್ದಾರೆ ಹೆಚ್ಚು ವಿಮರ್ಶಾಪ್ರಜ್ಞೆ ಉಳ್ಳವರಾಗಿದ್ದಾರೆ ಮತ್ತು ಹೆಚ್ಚು ತತ್ವ ನಿಷ್ಠರಾಗಿದ್ದಾರೆ.*

*ಆದ್ದರಿಂದ ನಾವು ಮಠ ಪೀಠಗಳು ಬೋಧಿಸದೇ ನಮ್ಮಿಂದ ಮುಚ್ಚಿಟ್ಟ ವಚನಗಳನ್ನು ಓದೋಣ ಬಸವ ಮಂಟಪಗಳನ್ನು ನಿರ್ಮಿಸೋಣ ಭಕ್ತಿ ವಂತರಾಗಿ ಬಾಳೋಣ.*

ಶರಣು ಶರಣಾರ್ಥಿಗಳು

ತಾವೇನಂತೀರಾ????

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…