ಮಾಲಿಕೆ 3 : ಮಠ ಪೀಠಗಳು ಬೋಧಿಸದೆ ಬಚ್ಚಿಟ್ಟ ವಚನಗಳು

ಮಠ ಪೀಠಗಳು ಬೋಧಿಸದೆ ಬಚ್ಚಿಟ್ಟ ವಚನಗಳ ಮಾಲಿಕೆ-3

*ಮಠ ಪೀಠಗಳ ಪೀಠಾಧೀಶರು  ಭಕ್ತರ ಮತವೇ ತನ್ನ ಮತ ಎನ್ನಬೇಕು, ಧರ್ಮದಲ್ಲಿ ಪ್ರಜಾಪ್ರಭುತ್ವವನ್ನು ಪಾಲಿಸಬೇಕು*

-ಸಚ್ಚಿದಾನಂದ ಪ್ರಭು ಚಟ್ನಳ್ಳಿ

*ಒಡಲ ಕಳವಳಕ್ಕೆ, ಬಾಯ ಸವಿಗೆ,*

*ಬಯಸಿ ಉಂಡೆನಾದಡೆ ನಿಮ್ಮ ತೊತ್ತಿನ ಮಗ ನಾನಲ್ಲ.*

*ಬೇಡೆ, ಬೇಡೆ, ನಿಮ್ಮ ನಂಬಿದ ಸದ್ಭಕ್ತರ.*

*ಅವರೊಕ್ಕುದ ಉಂಬೆ ಅವರೆಂದಂತೆ ಎಂಬೆ.*

*ಎನ್ನೊಡೆಯ ಲಿಂಗದೇವನೊಲ್ಲದವರ ನಾ ಹಿಡಿದೆನಾದಡೆ*

*ನಿಮ್ಮ ಪಾದದಾಣೆ.*

    -ಧರ್ಮ ಗುರು ಬಸವಣ್ಣನವರು

ಗುರು ಬಸವಣ್ಣನವರು 12ನೇ ಶತಮಾತನದಲ್ಲಿ ರಾಜಶಾಹಿ (Monorchy)ವ್ಯವಸ್ಥೆ ಇದ್ದಾಗಲೂ ಧರ್ಮದಲ್ಲಿ ಪ್ರಜಾಪ್ರಭುತ್ವ (Democracy) ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಹೀಗಾಗಿಯೇ ಗುರು ಬಸವಣ್ಣನವರನ್ನು ನಾವು ಪ್ರಜಾ ಪ್ರಭುತ್ವದ ಪಿತಾಮಹ ಹಾಗು ಪ್ರಥಮ ಸಂಸತ್ತು ಅನುಭವ ಮಂಟಪದ ಸಂಸ್ಥಾಪಕರು ಎಂದು ಕರೆಯುತ್ತೇವೆ.

ಈ ಕಾರಣದಿಂದಲೇ ಗುರು ಬಸವಣ್ಣನವರ ಪುತ್ಥಳಿಯನ್ನು ಪ್ರಜಾಭುತ್ವದ ತಾಯಿ ಎನಿಸಿಕೊಂಡ ಲಂಡನ್ ಸಂಸತ್ತಿನ ಎದುರಿಗೆ ಪ್ರತಿಷ್ಠಾಪಿಸಲು ಸಾಧ್ಯವಾಯಿತು. ಕೆಲವು ಮಠಗಳು ಪೀಠಗಳು ಭಕ್ತರ ಕಾಣಿಕೆಯಿಂದ ಮತ್ತೆ ಕೆಲವರು ಸರಕಾರದ ಸಹಾಯದಿಂದ ಗುರು ಬಸವಣ್ಣನವರ ಪುತ್ಥಳಿಗಳನ್ನು ನಿಲ್ಲಿಸಿದ್ದಾರೆ. ಅನೇಕ ಮಹಾನಗರ, ಪ್ರಮುಖ ನಗರ, ಮತ್ತು ಹಳ್ಳಿಗಳ ಪ್ರಮುಖ ಸ್ಥಳಗಳಲ್ಲಿ ಗುರು ಬಸವಣ್ಣನವರ ಪುತ್ಥಳಿಗಳನ್ನು ಕಾಣುತ್ತೇವೆ. ಇದು ಗುರು ಬಸವಣ್ಣವರಿಗೆ ಕೊಡುವ ಒಂದು ಪ್ರಮುಖವಾದ ಗೌರವ. 

ಆದರೆ, ಪ್ರಜಾಪ್ರಭುತ್ವದ ತಾಯಿಯಲ್ಲಿಗೆ ಪ್ರಜಾಪ್ರಭುತ್ವದ ತಂದೆಯನ್ನು ಕಳಿಸಿ, ಅನೇಕ ಪಟ್ಟಣ ಹಳ್ಳಿಗಳ ಪ್ರಮುಖ ಸ್ಥಳಗಳಿಗೆ ಪ್ರಜಾಪ್ರಭುತ್ವದ ತಂದೆಯನ್ನು ಕಳಿಸಿ ತಮ್ಮ ಮಠ ಪೀಠಗಳಿಂದ ಪ್ರಜಾಪ್ರಭುತ್ವವನ್ನು ಹೊರಹಾಕಿದ್ದಾರೆ. 

ಶರಣ ಬಂಧುಗಳೇ ನಾವು ನಿನ್ನೆ ತಾನೆ ನಮ್ಮ ದೇಶದ 73ನೇ ಗಣತಂತ್ರ ದಿನವನ್ನು ಆಚರಿಸಿದ್ದೇವೆ. ಡಾ.ಭೀಮರಾವ್ ಅಂಬೇಡ್ಕರರವರ ಹೋರಾಟ ಮತ್ತು ಪರಿಶ್ರಮದಿಂದ ನಮ್ಮ ದೇಶದಲ್ಲಿ ತಕ್ಕ ಮಟ್ಟಿಗೆ ಗಣತಂತ್ರ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಲು ಸಾಧ್ಯವಾಗಿದೆ. *ಡಾ.ಭೀಮರಾವ್ ಅಂಬೇಡ್ಕರರು ಭಾರತವನ್ನು ಗಣ ರಾಷ್ಟ್ರವನ್ನು ಕೊಟ್ಟರೆ ಗುರು ಬಸವಣ್ಣನವರು ಲಿಂಗಾಯತ ಧರ್ಮ - ಗಣ ಧರ್ಮವನ್ನು ಕೊಟ್ಟಿದ್ದಾರೆ.* 

ಲಿಂಗಾಯತ ಧರ್ಮ ಒಂದು ಗಣ ಧರ್ಮ ಇದನ್ನು ಮಠ ಪೀಠಗಳು ಬೋಧಿಸಲೇ ಇಲ್ಲ. ತಮ್ಮ ಪೀಠಗಳಿಗೆ ಸಿಂಹಾಸನ ಎಂದು ಹೆಸರಿಟ್ಟು ಕರೆದು ಸಿಂಗಳಾಗಿ ಭಕ್ತರೆಂಬ ಹುಲ್ಲೆಗಳ ಮೇಲೆ ಆಕ್ರಮಣ ಮಾಡುತ್ತ ಧಾರ್ಮಿಕ ಭಯೋತ್ಪಾದನೆ ಮಾಡುತ್ತ ಕಾಣಿಕೆಗಳನ್ನು ಪಡೆದು ಮಠ ಪೀಠಗಳನ್ನು ಬೆಳೆಸಿಕೊಂಡರೇ ವಿನಃ ಮಠದ ಆಡಳಿತ ವ್ಯವಸ್ಥೆ ಮಠ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಭಕ್ತರ ಮತವನ್ನು ಕೇಳಲೇ ಇಲ್ಲ.  

*ಕೆಲವೊಮ್ಮೆ ಗುರುಗಳು ಕನಸಲ್ಲಿ ಬಂದು ಹೇಳಿದ್ದಾರೆ ನೀವು ಲಕ್ಷ  ರೂಪಾಯಿಗಳೇ  ಕೊಡಬೇಕು ಎಂದು ಅನೇಕರಲ್ಲಿ ಬಲವಂತವಾಗಿ ಹಣ ಪಡೆದ ಘಟನೆಗಳು ನನ್ನ ಗಮನಕ್ಕೆ ಬಂದಿವೆ.  ಗುರುಗಳು ಹಣ ಕೇಳುವವರ ಕನಸಲ್ಲೇ ಏಕೆ ಬರಬೇಕು ಹಣ ಕೊಡುವವರ ಕನಸಲ್ಲೂ ಬರಬೇಕಲ್ಲ..* ನ

ನಿರಂಕುಶ ಪ್ರಭುತ್ವದಂತೆ ನಿರ್ಧಾರಗಳನ್ನು ಕೈಗೊಳ್ಳುತ್ತ ಮಠ ಪೀಠ ಕಟ್ಟಿದ ಭಕ್ತರನ್ನೇ ಕಡೆಗಣಿಸುವ ರೀತಿ ನೀತಿ ಗಣ ಧರ್ಮವಾದ ಲಿಂಗಾಯತ ಧರ್ಮದ ಸಂವಿಧಾನ ಒಪ್ಪುವುದೇ ಇಲ್ಲ. ಇಂಥ ಮಠ ಪೀಠಗಳು ಲಿಂಗಾಯತ ಧರ್ಮ ಬೋಧಿಸುವ ಅದರ ಪ್ರಾತಿನಿಧ್ಯ ವಹಿಸಿಕೊಳ್ಳುವ ನೈತಿಕ ಹಕ್ಕನ್ನೂ ಕಳೆದುಕೊಳ್ಳುತ್ತವೆ. ಆ ಪ್ರಾತಿನಿಧ್ಯ ಕೇವಲ ಆಸ್ತಿ ಪಾಸ್ತಿದ್ದಾಗಿರುತ್ತದೆಯೇ ಹೊರತು ತತ್ವದ್ದಾಗಿರುವುದಿಲ್ಲ. 

12ನೇ ಶತನಮಾನದಲ್ಲಿ ಶರಣರು ತತ್ವಕ್ಕಾಗಿ ಹೋರಾಟ ಮಾಡಿದರು, ತತ್ವಕ್ಕಾಗಿ ಪ್ರಾಣಕೊಟ್ಟರೇ ಹೊರತು ಅಧಿಕಾರ, ಸಂಪತ್ತು ಆಸ್ತಿಗಾಗಿ ಹೋರಾಡಲಿಲ್ಲ. *ಏಕೆಂದರೆ ಅಧಿಕಾರ ಸಂಪತ್ತು ಆಸ್ತಿ ಇವೆಲ್ಲವೂ ಜಗಕಕ್ಕಿಕ್ಕಿದ ವಿಧಿ ನಿನ್ನೊಡವೆಯೆಂಬುದು ಜ್ಞಾನರತ್ನ.*  ಎಲ್ಲಾ ಆಸ್ತಿ ಪಾಸ್ತಿ ಹಣವನ್ನು ಫೂಜ್ಯ ಶ್ರೀ ಮಾತೆ ಮಹಾದೇವಿ ಯಾಯಿಯವರೂ ಇಲ್ಲೇ ಬಿಟ್ಟು ಹೋದಂತೆ ನಾವೂ ಬಿಟ್ಟು ಹೋಗಲೇಬೇಕಾಗುತ್ತದೆ. ಇದೇ ರೀತಿ ಮುಂದುವರೆದರೆ  ಈಗ ನಾವು ಕಚ್ಚಾಡುವಂತೆ ನಾವು ಬಿಟ್ಟುಹೋದನ ನಂತರ ಮುಂದಿನವರ ಕಚ್ಚಾಡುತ್ತಾರೆ. ಅದಕ್ಕಾಗಿ ಶರಣ ಬಂಧುಗಳೇ ಅಂಥ ಜ್ಞಾನ ಒಡವೆಯನ್ನು ಕೊಟ್ಟ ಶರಣರಿಗೆ ವಂದಿಸುತ್ತ ನಾವು ನಿಜ ಲಿಂಗಾಯತ ಧರ್ಮವನ್ನು ತಿಳಿಯೋಣ.

ಮೇಲಿನ ಗುರು ಬಸವಣ್ಣನವರ ವಚನದಲ್ಲಿ *ಅವರೊಕ್ಕುದ ಉಂಬೆ ಅವರೆಂದಂತೆ ಎಂಬೆ.*

ಎನ್ನುವ ಸಾಲಿನಲ್ಲಿ *ಧರ್ಮವು ಗಣ ಧರ್ಮವಾಗಬೇಕು ಎನ್ನುವ ಸ್ಪಷ್ಟ ಸಂದೇಶ ಮತ್ತು ಆಜ್ಞೆಯಿದೆ.*  ಈ ಮೇಲಿನ ವಚನದ ಸಾಲುಗಳನ್ನ ಒಂದೊಂದಾಗಿ ಶರಣ ಗಣಕ್ಕೆ ವಿವರಿಸುತ್ತೇನೆ.


*ಒಡಲ ಕಳವಳಕ್ಕೆ, ಬಾಯ ಸವಿಗೆ,*

*ಬಯಸಿ ಉಂಡೆನಾದಡೆ ನಿಮ್ಮ ತೊತ್ತಿನ ಮಗ ನಾನಲ್ಲ.*


ಹಿಂದಿನ ಕಾಲದಲ್ಲಿ ಬಹುತೇಕ ಮಠಾಧೀಶರು ಜಂಗಮರು ಬಡ ಭಕ್ತರಿಗಿಂತ ಶ್ರೀಮಂತ ಭಕ್ತರನ್ನು ಓಲೈಸುತ್ತಿದ್ದರು. ಶ್ರೀಮಂತ ಮತ್ತು ಬಡವ ಇಬ್ಬರೂ ಒಂದೇ ದಿನ ಪ್ರಸಾದಕ್ಕೆ ಕರೆದರೆ ಶ್ರೀಮಂತ ಭಕ್ತರ ಬಿನ್ನಹಕ್ಕೆ ಆದ್ಯತೆ ಕೊಡುತ್ತಿದ್ದರು. ಏಕೆಂದರೆ ಅಲ್ಲಿ ಅವರಿಗೆ ಒಡಲ ಕಳವಳಕ್ಕೆ ಬಾಯಿಯ ಸವಿಗೆ ಬೇಕಾದಂಥ ಪ್ರಸಾದ ಸಿಗುತ್ತಿತ್ತು. ಕೆಲವೊಮ್ಮೆ ಅವರಲ್ಲಿ ಬೇಡಿ ಬೇಡಿ ತಮಗೆ ಬೇಕಾದ ಅಡುಗೆ ಸಿದ್ಧ ಪಡಿಸಲು ಹೇಳುತ್ತಿದ್ದರು. ಗುರುಗಳು ತಮ್ಮನ್ನು ಹೊಗಳುತ್ತಾರೆ ಎಂದು ಶ್ರೀಮಂತ ಭಕ್ತರು ಗುರುಳು ಜಂಗಮರು  ಹೇಳಿದ ಹಾಗೆ ಮಾಡುತ್ತಿದ್ದರು. 

*ಪರಮ ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಪರಮ ಪೂಜ್ಯ ಮಾತೆ ಮಹಾದೇವಿಯವರು ಲಿಂಗಾಯತ ಧರ್ಮದ ಪುನರುತ್ಥಾನ ಕಾರ್ಯ ಕೈಗೊಂಡಿದ್ದರಿಂದ ಈ ರೀತಿ ಶ್ರೀಮಂತ ಭಕ್ತರ ಕರೆಗೆ ಪ್ರಾಮುಖ್ಯತೆ ಕೊಡುವ ಗುರುಗಳು ಜಂಗಮರು ಕಡಿಮೆಯಾಗಿದ್ದಾರೆ ಆದರೆ ಪೂರ್ತಿಯಾಗಿ ಅಲ್ಲ!! ಅರ್ಥಾತ್ ಇನ್ನು ಕೆಲವರು ಇಂಥ ಗುರುಗಳು ಉಳಿದುಕೊಂಡಿದ್ದಾರೆ!!! ಇದು ವಿಪರ್ಯಾಸ ಮತ್ತು ದೀಪದ ಕೆಳಗಿನ ಕತ್ತಲೆಯ ಪರಿಣಾಮ (Effect of proverb darkness below the lamp)* ಇರಬಹುದು.


*ಬೇಡೆ, ಬೇಡೆ, ನಿಮ್ಮ ನಂಬಿದ ಸದ್ಭಕ್ತರ.*

*ಅವರೊಕ್ಕುದ ಉಂಬೆ ಅವರೆಂದಂತೆ ಎಂಬೆ.*


ಲಿಂಗದೇವನನ್ನು ನಂಬಿದ ಭಕ್ತರಿಗೆ ನಾನು ಬೇಡುವುದಿಲ್ಲ. *ಅವರೊಕ್ಕುದ ಉಂಬೆ* ಅವರು ಸಂತೋಷದಿಂದ ಕೊಟ್ಟಿದ್ದನ್ನು ಮಾತ್ರ ಸ್ವೀಕರಿಸುತ್ತೇನೆ. *ಅವರೆಂದಂತೆ ಎಂಬೆ*, *ಶರಣರ ಮತವೇ ನನ್ನ ಮತ. ಶರಣರ ಅಭಿಪ್ರಾಯವೇ ನನ್ನ ಅಭಿಪ್ರಾಯ* ಎನ್ನುತ್ತಾರೆ ಗುರು ಬಸವಣ್ಣನವರು. ನಾನು ಅನುಭಾವ ಮಂಟಪ ಮಹಾಮನೆ ನಿರ್ಮಿಸಿದವನು ನಾನು ಈ ರಾಜ್ಯದ ಪ್ರಧಾನಿ. ನೀವೆಲ್ಲರೂ ನನ್ನ ಆಜ್ಞೆ ಆದೇಶವನ್ನೇ ಪಾಲಿಸಬೇಕು ಎಂದು ಗುರು ಬಸವಣ್ಣನವರು ಎಂದೂ ಹೇಳಲಿಲ್ಲ ಬದಲಿಗೆ *ತತ್ವವ ಹೊತ್ತವರಿಗೆ ತೊತ್ತಾಗಿ ನಡೆವೆ* ಎಂದರು. ಈ ವಿಚಾರವನ್ನು ಇಂದಿನ ಮಠ ಪೀಠಾಧೀಶರಿಗೆ ಹೋಲಿಸಿದಲ್ಲಿ ಗುರು ಬಸವಣ್ಣನವರೆಲ್ಲಿ ಗುರು ಬಸವಣ್ಣನವರ ಹೆಸರಿನಲ್ಲಿ ಪೀಠಾಧಿಕಾರ ನಡೆಸುವ ಇಂದಿನ ಜಂಗಮರೆಲ್ಲಿ…!!!!?? ನಿಟ್ಟುಸಿರು ಬಿಡಬೇಕಷ್ಟೆ.


*ಎನ್ನೊಡೆಯ ಲಿಂಗದೇವನೊಲ್ಲದವರ ನಾ ಹಿಡಿದೆನಾದಡೆ*

*ನಿಮ್ಮ ಪಾದದಾಣೆ.*


*ಯಾರು ಭಕ್ತಿಯ ಪಥದಲ್ಲಿರುವುದಿಲ್ಲವೋ ಲಿಂಗದೇವನ್ನು ಆರಾದಿಸುವದಿಲ್ಲವೋ, ಲಿಂಗದೇವನನ್ನು ಆರಾಧಿಸಿಯೂ ಪರಧನ ಪರಸತಿಯರಿಗೆಳಸುತ್ತಾರೋ, ಧರ್ಮದಲ್ಲಿ ರಾಜಕಾರಣ ಮಾಡುತ್ತಾರೋ ಯಾರನ್ನು ಲಿಂಗದೇವನು ಒಲ್ಲನೋ ಅಂಥವರನ್ನು ನಾನು ಓಲೈಸಿದರೆ ನಿಮ್ಮ ಪಾದದಾಣೆ ಎಂದು ಗುರು ಬಸವಣ್ಣನವರು ದೇವರ ಮೇಲೇ ಆಣೆ ಇಡುತ್ತಾರೆ.* 

ಇದಕ್ಕೆ ವ್ಯತಿರಿಕ್ತವಾಗಿ ಇಂದಿನ ಮಠಾಧೀಶರು, ಪೀಠಾಧಿಕಾರಿಗಳು, ಲಿಂಗದೇವನನ್ನು ಒಲ್ಲದವರನ್ನೇ ಹಿಡಿಯುತ್ತಿದ್ದಾರೆ. ಅವರನ್ನೇ ಓಲೈಸುತ್ತಾರೆ. ಈ ಮೂಲಕ ತತ್ವ ನಿಷ್ಠೆಯಿಂದ ಕೂಡಿದ, ಯಾವುದೇ ಅಧಿಕಾರಕ್ಕೆ ಹಪಾಹಪಿಯಿರದ, ರಾಜಕೀಯ ಪ್ರೇರಿತವಲ್ಲದ  ಬೃಹತ್ ಸಂಘಟನೆಯನ್ನು ಒಡೆದು ರಾಜಕೀಯ ದುರುದ್ದೇಶ ಹೊಂದಿದ, ಎಲ್ಲಿಯೂ ಸಲ್ಲದ ಜನರನ್ನು ಇಲ್ಲಿ ಸಲ್ಲುವಂತೆ ಮಾಡಿ ಬಹು ದೊಡ್ಡ ದುರಂತಕ್ಕೆ ಕಾರಣವಾಗುವ ಅಂಚಿನಲ್ಲಿ ನಿಂತ್ತಿದ್ದಾರೆ. 

ಇಂಥ ಸಂದರ್ಭದಲ್ಲಿ *“ಗುರು ಬಸವಣ್ಣನವರೇ ತಾವೇ ಇದನ್ನು ಕಾಪಾಡಬೇಕು, ಸರಿಪಡಿಸಬೇಕು”* ಎಂದು ನಾನು ಅಂಗಲಾಚುತ್ತಿರುವಾಗ ಗುರು ಬಸವಣ್ಣನವರು ನನ್ನ ಕೆನ್ನೆಗೆ ಎರಡು ಪಟ ಪಟನೆ ಹೊಡೆದು, *ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ. ಲಿಂಗವಂತನು ಲಿಂಗವಂತರಿಗೆ ಬುದ್ಧಿಯ ಹೇಳುವಲ್ಲಿಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ.* ಮತ್ತು  *ಆಪ್ಯಾಯನಕ್ಕೆ ನೀಡುವೆ, ಲಾಂಛನಕ್ಕೆ ಶರಣೆಂಬೆ. ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದಡೆ ಲಿಂಗದೇವರ ಸಾಕ್ಷಿಯಾಗಿ ಛೀ ಎಂಬೆನು.* ಎನ್ನುವಂಥ ವಚನಗಳನ್ನು ಏಕೆ ಕೊಟ್ಟಿದ್ದೇನೆ?? ನನ್ನ ಧರ್ಮದ ಅನುಯಾಯಿಗಳೆಂದು ನಿಮ್ಮ ನಂಬಿದ್ದೇನಯ್ಯಾ ನಚ್ಚಿದೇನೆಯ್ಯಾ. ನಾನು ಬೋಧಿಸಿದ ತತ್ವ ನಿಷ್ಠೆ ಗಣಾಚಾರ ತತ್ವಗಳನ್ನು ಮಡಿವಾಳ ಮಾಚಿ ತಂದೆ ಅಳವಡಿಸಿಕೊಂಡಂತೆ ನೀವೇಕೆ ಅಳವಡಿಸಿಕೊಳ್ಳುತ್ತಿಲ್ಲ..? ಎಂದು ಪ್ರಶ್ನಿನಿಸುತ್ತಿದ್ದಾರೆ.

ಗುರು ಬಸವಣ್ಣನವರ ಈ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿದೆಯೇ? ಉತ್ತರ ಕೊಡೋಣವೇ? ಶರಣರೇ ಗುರು ಬಸವಣ್ಣನವರು ನಮಗೆ ಜವಾಬ್ದಾರಿ ಕೊಟ್ಟಿದ್ಧಾರೆ. ನಾವು ಈ ಸಂಧರ್ಭದಲ್ಲಿ ಧರ್ಮವನ್ನು ಕಾಪಾಡೋಣ. ತಾವೆಲ್ಲರೂ ನಿಜ ಧರ್ಮದ ಪಕ್ಷದಲ್ಲಿ ನಿಜ ತತ್ವದ ಪಕ್ಷದಲ್ಲಿ ಇರುತ್ತೀರಿ ತಾನೆ?

*ಅದಕ್ಕಾಗಿ ಶರಣ ಬಂಧುಗಳೇ ಗುರು ಬಸವಣ್ಣನವರು ಬೋಧಿಸಿದ, ಮಠ ಪೀಠಗಳು ಬೋಧಿಸದ ಗಣ ಧರ್ಮದ ವಚನಗಳನ್ನು ಓದೋಣ, ಲಿಂಗಾಯತ ಗಣ ಧರ್ಮವನ್ನು ಉಳಿಸೋಣ, ಲಿಂಗಾಯತ ಧರ್ಮದಲ್ಲಿ  ಭಕ್ತರ ಮತವನ್ನು ಉಳೀಸೋಣ. ಅನುಭಾವ ಗೋಷ್ಠಿ ಮಾಡೋಣ, ಅನುಭಾವ ಮಂಥನ ಮಾಡೋಣ, ಲಿಂಗಾಯತ ಧರ್ಮ ತಿಳಿಯೋಣ, ಗುರುಬಸವಪ್ರಿಯ ಲಿಂಗದೇವನನ್ನು ಅರಿಯೋಣ. ಹೊಸತನದೆಡೆಗೆ ಸಾಗೋಣ.*

-ಶರಣ ರತ್ನ ಸಚ್ಚಿದಾನಂದ ಚಟ್ನಳ್ಳಿ

9886694454.

ಕಾಮೆಂಟ್‌ಗಳು

  1. ಚೇನ್ನಬಸವಾನಂದಸ್ವಾಮಿಜಿಯವರು ವಿಶ್ವ ಗುರು ಬಸವಣ್ಣನವರ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದಾರೆ ಹಾಗೇ ಪರಮ ಪೂಜ್ಯ ಡಾಕ್ಟರ್ ಜಗದ್ಗುರು ಮಾತೇಮಾಹಾದೇವಿ ಮಾತಾಜಿಯವರ ಲಿಂಗದೇವ ಸಂಶೋಧನೆ ಯು ಬಹಳ ಚೆನ್ನಾಗಿ ತಿಳಿಪಡಿಸಿದ್ದಾರೇ ಶರಣುಶರಣಾರ್ಥಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…