ಲಿಂಗಾಯತ ಧರ್ಮ ಸಂವಿಧಾನಕ್ಕೆ ಗುರು ಚೆನ್ನಬಸವಣ್ಣನವರ ಕೊಡುಗೆ - Part 1

 *ಲಿಂಗಾಯತ ಧರ್ಮ ಸಂವಿಧಾನಕ್ಕೆ ಗುರು ಚೆನ್ನಬಸವಣ್ಣನವರ ಕೊಡುಗೆ* ಭಾಗ-೧

Contributions of Guru ChennaBasavanna to the Constitution of Lingayat Religion, Part-1

ಗುರು ಚೆನ್ನಬಸವಣ್ಣನವರ ಜಯಂತೋತ್ಸವ ಈ ವರ್ಷ 26-10-2022ರಂದು ಬಂದಿದೆ. ನನ್ನ ಲೇಖನಗಳು ತುಂಬಾ ಉದ್ದವಿರುತ್ತವೆ ಓದಲಿಕ್ಕೆ ಕಷ್ಟವಾಗುತ್ತದೆ ಎಂದು ಕೆಲವರು ಹೇಳಿದ್ದಾರೆ. ಅದಕ್ಕಾಗಿ ಆ ಮಹಾ ಗುರುವಿನ ಜೀವನ ಸಾಧನೆ ಸಂದೇಶವನ್ನು ಈ ಮೂರುದಿನಗಳ ಕಾಲ ತಿಳಿದುಕೊಳ್ಳೋಣ. ನಾಲ್ಕು ಭಾಗಗಳಲ್ಲಿ (24-10-2022 ಭಾಗ-1, 25-10-2022ರಂದು ಭಾಗ-1, 26-10-2022ರಂದು ಬೆಳಿಗ್ಗೆ ಭಾಗ-3, ಮತ್ತು ಸಂಜೆ ಭಾಗ-4)  ಮೇಲಿನ ಶೀರ್ಷಿಕೆಯ ವಿಚಾರಗಳನ್ನು ಮಂಡಿಸುತ್ತೇನೆ.

ವೀರ ಮಾತೆ, ಕ್ರಾಂತಿ ಗಂಗೋತ್ರಿ ಅ ತಾಯಿ ಅಕ್ಕನಾಗಮ್ಮನವರ ಚಿದ್ಗರ್ಭದಲ್ಲಿ ಹುಟ್ಟಿ ಗುರು ಬಸವಣ್ಣನವರ ಮಡಿಲಲ್ಲಿ ಬೆಳೆದ ಅಪರೂಪದ ಶಿಶು ಗುರು ಚೆನ್ನಬಸವಣ್ಣನವರು. ತಾಯಿಯ ಒಡಲಲ್ಲಿ ಇರುವಾಗಲೇ ಗುರು ಬಸವಣ್ಣನವರಿಂದ ಅನುಗೃಹ ಪಡೆದ ಕಾರಣಿಕ ಶಿಶು ಗುರು ಚೆನ್ನಬಸವಣ್ಣನವರು. 

*೧೨ನೇ ಶತಮಾನದ ಆದಿ ಶರಣರಲ್ಲಿ ಸಂಪೂರ್ಣವಾಗಿ ಲಿಂಗಾಯತ ಧರ್ಮದಲ್ಲೇ ಹುಟ್ಟಿ ಬೆಳೆದಿದ್ದು ಗುರು ಚೆನ್ನಬಸವಣ್ಣನವರು ಮಾತ್ರ. ಅವರಿಂದ ಅನೇಕ ಸ್ವತಂತ್ರ ವಿಚಾರಗಳು ಲಿಂಗಾಯತ ಧರ್ಮ ಸಂವಿಧಾನಕ್ಕೆ ಕೊಡಲ್ಪಟ್ಟಿವೆ. ಗುರುಬಸವಣ್ಣನವರ ನಂತರ ಲಿಂಗಾಯತ ಧರ್ಮಕ್ಕೆ ಎರಡನೆಯದಾಗಿ ಅತೀ ಹೆಚ್ಚಿನ ಕೊಡುಗೆಯನ್ನು ನೀಡಿದವರು ಗುರು ಚೆನ್ನಬಸವಣ್ಣನವರು.*


ಅದಕ್ಕಾಗಿಯೇ *ನಾನೊಂದು ಕಾರಣ ಮರ್ತ್ಯಕ್ಕೆ ಬಂದೆನು, ಬಂದ ಬಳಲಿಕೆಯ ಪರಿಹರಿಸಲಿಕ್ಕೆ ಚೆನ್ನಬಸವಣ್ಣ ಬಂದನು* ಎಂದು ಗುರು ಬಸವಣ್ಣನವರು ಹೇಳಿದ್ದಾರೆ. ವಚನಗಳನ್ನು ಬರೆದ ಕೈಯಲ್ಲಿ ಖಡ್ಗ ಹಿಡಿದು ಹೋರಾಡಿ ವಚನ ಸಾಹಿತ್ಯ ರಕ್ಷಣೆ ಮಾಡಿದವರಲ್ಲಿ ಗುರು ಚೆನ್ನಬಸವಣ್ಣನವರೂ ಒಬ್ಬರು.

ಅವರು ಯುದ್ಧದಿಂದಾದ ಗಾಯಗಳಿಂದ ಚೇತರಿಸಿಕೊಳ್ಳಲಾರದೆ, ಮುಂದೆ ಸಾಗಲೂ ಆಗದೆ *ಅವ್ವಾ ನಾನಿಲ್ಲೇ ಉಳಿವೆ* ಎಂದರು. ಹೀಗೆ ಅವರು ಉಳಿದ ಮತ್ತು ವಚನಸಾಹಿತ್ತಯವನ್ನು ಉಳಿಸಿದ ನೆಲವೇ *ಉಳಿವೆ*ಯಾಯಿತು.

*ಯುದ್ದದಲ್ಲಿ (ಗುರು ಬಸವಣ್ಣನವರ ಬಳಲಿಕೆ ಪರಿಹರಿಸಿ) ಬಹಾಳ ಬಳಲಿದ್ದರು ಜೊತೆಗೆ ಅಂದು ಆ ಮಲೆನಾಡಿನಲ್ಲಿ ಸರಿಯಾದ ಚಿಕಿತ್ಸೆ ವ್ಯವಸ್ಥೆ ಇರಲಿಲ್ಲ ಹೀಗಾಗಿ ಬಹು ಬೇಗನೆ ಗುರು ಚೆನ್ನಬಸವಣ್ಣನವರು ಲಿಂಗೈಕ್ಯರಾದರು.*

ಕೆಲವು ತಿಂಗಳ ಹಿಂದೆ ನನ್ನ ಆರೋಗ್ಯ ಹದಗೆಟ್ಟು ವಾರಗಟ್ಟಲೇ ಆಸ್ಪತ್ರೆಯ ಬೆಡ್ ಮೇಲೆ ಮಲಗುವ ಸಂದರ್ಭ ಬಂದಾಗ ಅವ್ವೆ ವಚನಾಂಬೆಯ ಸೇವೆ ಮಾಡುವುದು ಸಾಕಷ್ಟಿದೆ ಹೀಗೆ ಮಲಗಿದರೆ ಹೇಗೆ ಎಂದು ಕಳವಳಗೊಂಡಿದ್ದೆ. 

ರಾಶಿ ರಾಶಿ ವಚನಸಾಹಿತ್ಯ ವನ್ನು ರಕ್ಷಣೆಮಾಡಿ ಅದನ್ನು ಸುತ್ತಲೂ ಹರವಿಕೊಂಡು, ಅದಕ್ಕೊಂದು ವ್ಯವಸ್ಥಿತ ರೂಪ ಕೊಟ್ಟು ಲಿಂಗಾಯತ ಧರ್ಮಗ್ರಂಥ ಬರೆಯಬೇಕೆಂಬ ಹಂಬಲ ತುಂಬಿಕೊಂಡ ಗುರು ಚೆನ್ನಬಸವಣ್ಣನವರು ಅದೆಷ್ಟು ಸಂಕಟಪಟ್ಟರೋ ಅದೆಷ್ಟು ನೋವು ಅನುಭವಿಸಿದರೋ ಎನ್ನುವುದನ್ನು ನೆನೆದು ಆಸ್ಪತ್ರೆಯಲ್ಲಿದ್ದು ವಚನ ಸಾಹಿತ್ಯ ಸೇವೆ ಮಾಡದ ದಿನಗಳಂದು ನನಗೆ ದಿನವೂ ಕಣ್ಣಂಚಿನಲ್ಲಿ ನೀರು ಬರುತ್ತಿತ್ತು. 

ಅವರು ಇನ್ನಷ್ಟು ದಿನ ಬದುಕಿದ್ದರೇ ಅಂದೇ ಲಿಂಗಾಯತ ಧರ್ಮ ಗ್ರಂಥ ಕೊಟ್ಟು ಹೋಗುತ್ತಿದ್ದರು! ಆದರೆ ಹಾಗಾಲಿಲ್ಲ. *ಭೂಮಿಯೊಳಗೆ ಬೀಜ ಬಿದ್ದಲ್ಲಿ ಕೆಟ್ಟಿತ್ತೆಂದೆನಬೇಡ, ಮುಂದಣ ಫಲದೊಳಗರಸಿಕೊ!* 

ಎಂದು ಹೇಳಿ ನಮ್ಮಮೇಲೆ ಬಹುದೊಡ್ಡ ಜವಾಬ್ದಾರಿಯನ್ನು ಅವರು ಹೊರಿಸಿದ್ದಾರೆ. 

*ಅವರು ಲಿಂಗಾಯತ ಧರ್ಮ ಸಂವಿಧಾನಕ್ಕೆ ನೀಡಿದ್ದ ಅನನ್ಯ(Unique)ವಾದ ತತ್ವಗಳನ್ನು ಅರಿತು ಅಳವಡಿಸಿಕೊಂಡು ಆಚರಿಸೋಣ.*


ಪ್ರತಿಯೊಬ್ಬ ಲಿಂಗಾಯತ/ಲಿಂಗಾಯತ ಧರ್ಮ ಪ್ರಚಾರಕನ ಆಚರಣೆಗಳು ನಡೆ-ನುಡಿಗಳು, ಹೇಗಿರಬೇಕು ಎನ್ನುವುದನ್ನು ಮತ್ತು ಅನೇಕ ಆಚಾರ ಸಂಹಿತೆಯನ್ನು ಗುರು ಚೆನ್ನಬಸವಣ್ಣನವರು ನೀಡಿದ್ದಾರೆ.

*ತನ್ನ ಮನೆಯ ಹೊಗದ ಗುರುವಿನ ಕೈಯಲ್ಲಿ ಕಾರುಣ್ಯವ ಪಡೆದ ಶಿಷ್ಯ, ತಾ ಹೋಗದ ಮನೆಯವರ ಉಪದೇಶವ ಮಾಡುವ ಗುರು ಅಂಧಕನ ಕೈ ಅಂಧಕ ಹಿಡಿದಂತೆ. ಇವರಿಬ್ಬರ ಭಕ್ತರೆಂದವರ ಕೂಡಲ ಚೆನ್ನ ಸಂಗಯ್ಯ ನರಕದಲ್ಲಿಕ್ಕುವ*

ಕೆಲವರು ಗುರುಗಳು ಅನೇಕರಿಗೆ ದೀಕ್ಷಾನುಗ್ರಹ ಮುಂತಾದುದೆಲ್ಲ ಮಾಡಿದರೂ ಅವರ ಮನೆಯಲ್ಲಿ ಪ್ರಸಾದ ಮಾಡಲಿಕ್ಕೆ ಹೋಗುವುದಿಲ್ಲ. ಅವರು ಕೆಳಜಾತಿಯವರು ಎನ್ನುವ ಭಾವನೆ ಆ ಗುರುಗಳಲ್ಲಿರುತ್ತದೆ. ಇದು ತಪ್ಪು, ದೀಕ್ಷೆಯಾದ ತಕ್ಷಣವೇ ಪೂರ್ವಾಶ್ರಯ ಅಳಿದು ವ್ಯಕ್ತಿ ಪುನರ್ಜಾತನಾಗುತ್ತಾನೆ. ಅವನ ಭವಿತನ ಕಳೆದು ಭಕ್ತನಾಗುತ್ತಾನೆ. ಇಂಥವರನ್ನು ಎಲ್ಲಾ ರೀತಿಯಲ್ಲಿ ಸರಿ ಸಮವಾಗಿ ಕಾಣಬೇಕು. ಹೀಗೆ ಮಾಡದ ಗುರುವನ್ನು, ಭಕ್ತರೆಂದವರಿಗೇ ನರಕದಲ್ಲಿಕ್ಕಿದ್ದರೆ, ಈ ರೀತಿ ತನ್ನ ಭಕ್ತನ ಮನೆಗೆ ಹೋಗದ, ಭಕ್ತನನ್ನು ಎಲ್ಲರ ಸಮವಾಗಿ ಕಾಣದ ಗುರುವಿಗೆ ಗುರುವಿಗೆ ಇನ್ನೆಂಥ ಅಘೋರವಾದ ಶಿಕ್ಷೆ ಇದೆಯೋ! ಅದಕ್ಕಾಗಿ, ತನ್ನ ಮನೆಗೆ ಬಂದು ಪ್ರಸಾದ ಸ್ವೀಕಾರ ಮಾಡಲು ಹಿಂಜರಿಯುವ ಗುರುವಿನಿಂದ ಅನುಗ್ರಹ ಪಡೆಯಬಾರದು ಎಂದು ಚೆನ್ನಬಸವಣ್ಣನವರ ಆಜ್ಞೆ ಇದೆ.

(ಭಾಗ-೨ರಲ್ಲಿ ಮುಂದುವರೆಯುವುದು…)

*-ಸಚ್ಚಿದಾನಂದ ಪ್ರಭು ಚಟ್ನಳ್ಳಿ*9886694454

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…