ಮಾಲಿಕೆ 2 : ಮಠ ಪೀಠಗಳು ಬೋಧಿಸದೆ ಬಚ್ಚಿಟ್ಟ ವಚನಗಳು

 *ಮಠ ಪೀಠಗಳು ಬೋಧಿಸದೆ ಬಚ್ಚಿಟ್ಟ ವಚನ ಮಾಲಿಕೆ-೨*


*ಗುರುವಾದವರು ಕೆಲಬರಿಗೆ ಗುರುವಾಗಿ ಮತ್ತೆ ಕೆಲಬರಿಗೆ ವೈರಿಯಾಗದೇ ಎಲ್ಲಾ ಶಿಷ್ಯಂದಿರನ್ನು ಸಮಭಾವದಿಂದ ಕಾಣಬೇಕು*

-ಶರಣ ಸಚ್ಚಿದಾನಂದ ಪ್ರಭು ಚಟ್ನಳ್ಳಿ


*ಅಮೃತ ಸರ್ವರಿಗೂ ಅಮೃತವಾಗಿಪ್ಪುದಲ್ಲದೆ*

*ಕೆಲಬರಿಗೆ ಅಮೃತವಾಗಿ ಕೆಲಬರಿಗೆ ವಿಷವಾಗದು ನೋಡಾ.*

*ಎಂತು ಅಂತೆ,*

*ಶ್ರೀಗುರು ಸರ್ವರಿಗೆಯೂ ಗುರುವಾಗಿರಬೇಕಯ್ಯಾ*

*ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.*

-ಶರಣ ಉರಿಲಿಂಗ ಪೆದ್ದಿಗಳ ವಚನ

ಲಿಂಗಾಯತ ಧರ್ಮದಲ್ಲಿ ಗುರು ತತ್ವ ಜಂಗಮ ತತ್ವ ತುಂಬಾ ವಿಶೇಷವಾಗಿದೆ. ವಚನಗಳಲ್ಲಿ ಈ ವಿಚಾರವಾಗಿ ಅನೇಕ ರೀತಿಯ ವಿವರಣೆ ಇದೆ. ಗುರು/ಜಂಗಮನು ಸಮಾಜದಲ್ಲಿ ಬೆಸುಗೆಯನ್ನು ಬೆಸೆಯುವ ಲೌಕಿಕರ ಒಡೆದ ಮನಸ್ಸನ್ನು ಜೋಡಿಸಲು ಲಿಂಗದೇವನ ಪ್ರತಿನಿಧಿಯಾಗಿ ಕಾರ್ಯ ಮಾಡಬೇಕು. ಅವರು ಬಡವ ಬಲ್ಲಿದ, ಜ್ಞಾನಿ, ಅಜ್ಞಾನಿ  ವಿದ್ಯಾವಂತ ಅವಿದ್ಯಾವಂತ ಎಲ್ಲರ ಮೇಲೂ ಸಮನಾದ ಅನುಗ್ರಹ ದೃಷ್ಟಿಯನ್ನು ಬೀರಬೇಕು. 

ಗುರು/ಜಂಗಮ ಒಬ್ಬರ ಮನೆಗೆ ಪ್ರಸಾದಕ್ಕೆ ಹೋಗಿ ಮರುದಿನ ಈ ಮನೆಯವರನ್ನು ಮುಂದಿನ ಮನೆಗೆ ಪ್ರಸಾದಕ್ಕೆ ಕರೆದುಕೊಂಡು ಹೋಗಿ ಇಬ್ಬರಲ್ಲಿಯೂ ಉಂಬುವ ಊಡುವ ಶಿವಾಚಾರವನ್ನು ಬೆಳೆಸಬೇಕು. ಇಬ್ಬರ ಮಧ್ಯೆ ಇರುವ ವೈಮನಸ್ಸನು ಹೊಡಿದುಹಾಕಿ ಇಬ್ಬರ ಮಧ್ಯೆಯೂ ಬಾಂಧವ್ಯ ಬೆಸೆಯಬೇಕು. ಒಬ್ಬ ಭಕ್ತರ ಮನೆಗೆ ಹೋಗಿ ಇನ್ನೊಬ್ಬ ಭಕ್ತನ ಬಗ್ಗೆ ಆಡಿ ಕೊಂಡು ಇಬ್ಬರ ಮಧ್ಯೆ ಬಿರುಕನ್ನು ಸೃಷ್ಟಿ ಮಾಡಬಾರದು. 

ಅಮೃತ ಎಲ್ಲರಿಗೂ ಅಮೃತವಾಗಿರುತ್ತದೆ. ಕೆಲವರು ಕುಡಿದರೆ ಅಮೃತವಾಗಿ ಮತ್ತೆ ಕೆಲವರು ಕುಡಿದರೆ ವಿಷವಾಗಿ ಪರಿಣಮಿಸುವುದಿಲ್ಲ. ಹಾಗೆಯೇ ಗುರು ಎಲ್ಲರಿಗೂ ಗುರುವಾಗಿರಬೇಕು. ಕೆಲವರಿಗೆ ಗುರುವಾಗಿ, ಕೆಲವರಿಗೆ ನರನಾಗಿ ಮತ್ತೆ ಕೆಲವರಿಗೆ ವೈರಿಯಾಗಿರಬಾರದು.

ಇತಿಹಾಸದಲ್ಲಿಯೂ ಗುರುವು ತನ್ನ ಅಮೃತತ್ವದ ಗುಣಗಳನ್ನು ಕಳೆದುಕೊಂಡಾಗ ದೊಡ್ಡ ದೊಡ್ಡ ದುರಂತಗಳು ನಡೆದು ಹೋಗಿವೆ. ನಾನು ಏಳನೇ ತರಗತಿಯಲ್ಲಿ ಓದುವಾಗ ಏಕಲವ್ಯ ಎಂದು ಒಂದು ಪಾಠವಿತ್ತು. ಅದು ಹೀಗಿದೆ. ಮಹಾಭಾರತದಲ್ಲಿ ಬರುವ ಏಕಲವ್ಯ ಅಪ್ರತಿಮ ವೀರ ಶೂರ. ಗುರು ದ್ರೋಣಚಾರ್ಯರ ಬಳಿಗೆ ಹೋಗಿ ಬಿಲ್ವಿದ್ಯೆಯನ್ನು ಕಲಿಸಬೇಕೆಂದು ಕೇಳಿಕೊಂಡಾಗ ನಾನು ಕ್ಷತ್ರೀಯರಿಗಲ್ಲದೆ ಬಿಲ್ವಿದ್ಯೆ ಕಲಿಸುವುದಿಲ್ಲ ಎಂದು ಮಾತು ಕೊಟ್ಟಿದ್ದೇನೆ ಅದಕ್ಕಾಗಿ ನಿನಗೆ ಕಲಿಸಲು ಸಾಧ್ಯವಿಲ್ಲ ಎನ್ನುತ್ತಾನೆ. ಆದರೆ ಏಕಲವ್ಯ ದ್ರಣಾಚಾರ್ಯರ ಮೂರ್ತಿಯನ್ನು ಮಾಡಿಕೊಂಡು ಅದನ್ನೇ ಗುರುವಾಗಿ ಸ್ವೀಕರಿಸಿ ಸ್ವಯಂ ಆಗಿ ಬಿಲ್ವಿದ್ಯೆಯನ್ನು ಕಲಿತುಕೊಳ್ಳುತ್ತಾನೆ. 

ಎಲ್ಲಾವಿದ್ಯೆಗಳನ್ನು ಕರಗತ ಮಾಡಿಕೊಂಡ ಏಕಲವ್ಯ ಶಬ್ದವೇಧಿವಿದ್ಯೆಯನ್ನೂ ಕಲಿತುಕೊಳ್ಳುತ್ತಾನೆ. ಒಂದು ದಿನ ನಾಯಿಗಳು ಬೊಗಳುವಾಗ ಅವನಿಗೆ ಶಬ್ದವೇಧಿ ವಿದ್ಯೆ ಕರಗತ ವಾಗಿರುವುದರ ಬಗ್ಗೆ ತಿಳಿದುಕೊಳ್ಳಲು ನಾಯಿಗಳ ಶಬ್ದ ಬಂದಕಡೆ ಬಾಣ ಬಿಟ್ಟು ನಾಯಿಗಳ ಬೊಗಳುವಿಕೆಯನ್ನು ನಿಲ್ಲಿಸುತ್ತಾನೆ. 

ಅದೇ ದಾರಿಯಲ್ಲಿ ಕ್ಷತ್ರಿಯರ ಗುರುಗಳಾದ ದ್ರೋಣಾಚಾರ್ಯರು ತಮ್ಮ ಶಿಷ್ಯ ಅರ್ಜುನನೊಂದಿಗೆ ಎಲ್ಲಿಗೋ ಹೋಗುತ್ತಿರುತ್ತಾರೆ. ಶಬ್ದವೇಧಿ ವಿದ್ಯೆಯ ಮೂಲಕ ಬಾಣ ಬಿಟ್ಟು ನಾಯಿಗಳ ಬೊಗಳುವಿಕೆ  ನಿಲ್ಲಿಸಿರುವುದನ್ನು ನೋಡಿ ಆಶ್ಚರ್ಯ ಪಡುತ್ತಾರೆ. ಅರ್ಜುನ ಗುರುಗಳೊಂದಿಗೆ ಜಗಳಕ್ಕೆ ಇಳಿದು ಗುರುಗಳೇ ತಾವು ನನಗಲ್ಲದೇ ಯಾರಿಗೂ ಶಬ್ದವೇಧಿ ವಿದ್ಯೆ ಕಲಿಸುವುದಿಲ್ಲ ಎಂದು ಮಾತು ಕೊಟ್ಟಿದ್ದೀರಿ, ಮತ್ತೇ ಹೇಗೆ ಇವನಿಗಿ ಕಲಿಸಿದಿರಿ ಅವನ ಆ ವಿದ್ಯೆಯನ್ನು ನೀವು ಕಿತ್ತುಕೊಳ್ಳಲೇಬೇಕು ಎಂದು ಗುರುಗಳ ಮೇಲೆ ಒತ್ತಡ ತರುತ್ತಾನೆ. 

ಆಗ ದ್ರೋಣಾಚಾರ್ಯರು ಏಕಲವ್ಯನಲ್ಲಿಗೆ ಬಂದು “ಯಾರಪ್ಪ ನಿನ್ನ ಗುರು?” ಎಂದು ಕೇಳಿದಾಗ ಏಕಲವ್ಯ ತಾನು ಮಾಡಿಟ್ಟ ಅವರ ಮೂರ್ತಿಯನ್ನೇ  ತೋರಿಸಿ ಅವರೇ ನನ್ನ ಗುರು ಎಂದು ಹೇಳಿದಾಗ ಗುರುಗಳಿಗೆ ತುಂಬಾ ಸಂತೋಷವಾಗುತ್ತದೆ. ಈ ಏಕಲವ್ಯನ ಗುರು ನಿಷ್ಠ ಮತ್ತು ವೀರತನ ಬಗ್ಗೆ ಮನದಲ್ಲಿ ತುಂಬಾ ಅಭಿಮಾನ ಮೂಡುತ್ತದೆ. ಆದರೆ ಪಕ್ಕದಲ್ಲೇ ಇದ್ದ ಶಿಷ್ಯ ಅರ್ಜುನ ಗುರುಕಾಣಿಕೆಯಾಗಿ ಅವನ ಬಲಗೈ ಹೆಬ್ಬೆರಳನ್ನು ಪಡೆಯಿರಿ ಎಂದು ಚುಚ್ಚುತ್ತಾನೆ. 

ಆಗ ದ್ರೋಣಾಚಾರ್ಯರು ಏಕಲವ್ಯನಿಗೆ *“ಗುರುಕಾಣಿಕೆ ಕೊಡುವೆಯಾ”* ಎಂದು ಮೊದಲೇ ಮಾತು ತೆಗೆದುಕೊಳ್ಳುತ್ತಾರೆ. ಮಾತಿಗೆ ತಪ್ಪದ ಏಕಲವ್ಯ *ನಿನ್ನ ಬಲಗೈ ಹೆಬ್ಬರಳನ್ನು ಗುರುಕಾಣಿಕೆಯಾಗಿ ಕೊಡು”* ಎಂದು ಕೇಳಿದಾಗ ಹಿಂದು ಮುಂದು ಆಲೋಚಿಸದೇ ಏಕಲವ್ಯ *”ಇದೋ ತೆಗೆದುಕೊಳ್ಳಿ ಗುರುಗಳೇ”* ಎಂದು ಬಾಣದಿಂದ ತನ್ನ ಬಲಗೈ ಹೆಬ್ಬೆರಳನ್ನು ಕಡಿದು ಕೊಡುತ್ತಾನೆ. ಹೆಬ್ಬರಳು ಇಲ್ಲದಿದ್ದರೆ ಬಾಣ ಬಿಡಲು ಆಗುವುದಿಲ್ಲ.


ತಾನು ಕಲಿಸಿದ ವಿದ್ಯೆಗೆ,  ಸ್ವಯಂ ಪ್ರತಿಭೆಯಿಂದೆ ಏಕಲವ್ಯ ಕಲಿತ ವಿದ್ಯೆಗೆ  ಗುರು ಕಾಣಿಕೆ ಕೇಳಿ,  ಒಬ್ಬ ಶಿಷ್ಯನ ಹಿತಾಸಕ್ತಿಗೆ ಮೆಚ್ಚಿ, ಒಬ್ಬ ಶಿಷ್ಯನ ಒತ್ತಡಕ್ಕೆ ಮಣಿದು ಇನ್ನೊಬ್ಬ ಶಿಷ್ಯನ ಪ್ರತಿಭೆಯನ್ನು ಕಿತ್ತುಕೊಂಡರು.

ಹೀಗೆ  ಗುರುವೆಂಬ ಅಮೃತ ಕೆಲವರಿಗೆ ಅಮೃತವಾಗಿ ಕೆಲವರಿಗೆ ವಿಷವಾದಾಗಲೆಲ್ಲ ಇತಿಹಾಸದಲ್ಲಿ ಬಹುದೊಡ್ಡ ದುರಂತ ನಡೆದು ಹೋಗಿವೆ. ಇತಿಹಾಸ/ ಭಾರತ ದೇಶ ಒಬ್ಬ ಅಪ್ರತಿಮ ವೀರನ್ನು ಕಳೆದುಕೊಂಡಿತ್ತು. ಮತ್ತು ಸಕಲ ಬಿಲ್ವಿದ್ಯೆ ಬಲ್ಲ ಗುರುವನ್ನು ಕಳೆದುಕೊಂಡಿತು.

*ಅದೇ ರೀತಿ ಧರ್ಮದಲ್ಲಿ ಗುರುಗಳು/ಜಂಗಮರು ಕೆಲವರಿಗೆ ಅಮೃತವಾಗಿ ಕೆಲವರಿಗೆ ವಿಷವಾದರೆ ಬಹು ದೊಡ್ಡ ದುರಂತಗಳು ನಡೆದು ಹೋಗುತ್ತವೆ.  ಕೆಲವು ಶಿಷ್ಯರ ಹಿತಾಸಕ್ತಿಗೆ ಮೆಚ್ಚಿ, ಕೆಲವು ಶಿಷ್ಯರ ಒತ್ತಡಕ್ಕೆ ಮಣಿದು ಮತ್ತೆ ಕೆಲವು ಶಿಷ್ಯರ ಕಡೆಗೆಣಿಸಿದರೆ, ಕೆಲವು ಶಿಷ್ಯರನ್ನು ತಿರಸ್ಕರಿಸಿದರೆ; ಮಠ ಪೀಠಗಳ ಐಕ್ಯತೆಗೆ ಸಮಗ್ರತೆಗೆ ಮೂಲ ಆಶಯಕ್ಕೆ ಧಕ್ಕೆ ಬರುತ್ತದೆ. ಮಠ ಪೀಠಗಳ ನಿರ್ಮಾತೃಗಳ ಆಶಯಕ್ಕೆ ಧಕ್ಕೆ ಬರುತ್ತದೆ. ನಿಷ್ಠಾವಂತ ಶರಣರನ್ನು ತತ್ವಕ್ಕಾಗಿ ತಮ್ಮ ಪ್ರಾಣವನ್ನೂ ಕೊಡಲು ಸಿದ್ಧರಿರುವಂತ ಭಕ್ತರನ್ನು ಶರಣರನ್ನು ಧರ್ಮ ಪೀಠಗಳು ಮಠಗಳು ಕಳೆದುಕೊಂಡು ದುರಂತ ಇತಿಹಾಸಕ್ಕೆ ಕಾರಣರಾಗಬೇಕಾಗುತ್ತದೆ.* 

ದ್ರೋಣಾಚಾರ್ಯರು ಯಾರಿಗೆ ಅಮೃತವಾಗಿದ್ದರೋ ಅವರ ಪಕ್ಷದಿಂದಲೇ ಹತ್ಯೆಗೊಳಗಾದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಗುರು ಬಸವಣ್ಣನವರು ಅನೇಕ ಇತಿಹಾಸದ ಘಟನೆಗಳನ್ನು ತಮ್ಮ ವಚನಗಳಲ್ಲಿ ಹೇಳುತ್ತಾ ಇಂಥವುಗಳನ್ನ ಕೇಳಿ ನಂಬಯ್ಯಾ, ನೋಡಿ ನಂಬಯ್ಯಾ, ತಿಳಿದು ನಂಬಯ್ಯಾ ಎಂದು ಪದೇ ಪದೇ ಬುದ್ದಿ ಹೇಳಿ ಎಚ್ಚರಿಸಿದ್ದಾರೆ. ಒಬ್ನರ ಹಿತಾಸಕ್ತಿಗೆ, ಒತ್ತಡಕ್ಕೆ ಒಳಗಾಗಿ ಇನ್ನೊಬ್ಬರನ್ನು ಕಡೆಗಣೆಸುವ ಗುರುಗಳ ಅಳಿವು ಅವರಿಂದ ಹಿತಾಸಕ್ತಿಗೊಳಗಾದವರಿಂದಲೇ ಎನ್ನುವುದನ್ನೂ ಇತಿಹಾಸ ಸಿದ್ದಪಡಿಸಿದೆ.

ಬಹುತೇಕ ಗುರುಗುಗಳು ಸಾಮನ್ಯವಾಗಿ ಅಮೃತ ಸಮಾನವಾಗಿರುತ್ತಾರೆ ಆದರೆ ವಿಷವರ್ತುಲದಲ್ಲಿ ಸಿಕ್ಕಿ ಹಾಕಿಕೊಂಡಿರುತ್ತಾರೆ. ವಿಷಕಂಠರಿಗೆ ಮಾತ್ರ ವಿಷ ವರ್ತುಲವನ್ನು ಭೇದಿಸಿ ಅಮೃತ ಸಮಾನವಾದ ಗುರುಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಸಾಮಾನ್ಯ ಜನರಿಗೆ ವಿಷವರ್ತುಲದಲ್ಲಿ ಇರುವ ಗುರು ವಿಷಯಕ್ಕೆ ಸಮಾನವೇ.!!  ಏಕೆಂದರೆ ಅಮೃತ ರೂಪ ಗುರುವಿನಲ್ಲಿಗೆ ತೆರಳಬೇಕಾದರೆ ವಿಷ ವರ್ತುಲವನ್ನು ದಾಟಲೇ ಬೇಕು ವಿಷವರ್ತುಲ  ದಾಟುವಷ್ಟರಲ್ಲಿಯೇ ಕುಸಿಯಲು ಆರಂಭಿಸುತ್ತಾರೆ.

ಸರ್ವ ಶಿಷ್ಯರಿಗೂ ಅಮೃತವಾಗಿರಬಲ್ಲ ಗುಣ, ಶಕ್ತಿ, ಸಾಮರ್ಥ್ಯವಿರಬಲ್ಲ ಗುರುಗಳು ಜಂಗಮರು ಮಾತ್ರ ಮೇಲಿನ ಇಂಥ ವಚನಗಳನ್ನು ಬೋಧಿಸುತ್ತಾರೆ. ಕೆಲವರಿಗೆ ಅಮೃತವಾಗಿ ಕೆಲವರಿಗೆ ವಿಷವಾಗುವ ಗುಣಗಳುಳ್ಳ ಗುರುಗಳು/ಜಂಗಮರು ತಮ್ಮ ಶಿಷ್ಯಂದಿರಲ್ಲೇ ಜಗಳ ಹಚ್ಚಿ ಸುಮ್ಮನೇ ನೋಡುವಂಥ ಗುರುಗಳು ಇಂಥ ವಚನಗಳನ್ನು ಇದುವರೆಗೂ ಬೋಧಿಸಿಲ್ಲ ಮುಂದೆ ಬೋಧಿಸುವುದೂ ಇಲ್ಲ. 

*ಅದಕ್ಕಾಗಿ ಶರಣ ಬಂಧುಗಳೇ ವಿಷವಾಗುವ ಗುರುಗಳನ್ನು ತಿರಸ್ಕರಿಸೋಣ, ವಿಷವರ್ತುಲದಲ್ಲಿರುವ ಗುರುಗಳನ್ನು ಹೊರಗೆ ತರೋಣ.  ವಚನಗಳನ್ನು ಓದೋಣ, ಗುರುಬಸವಣ್ಣನವರ ಮನದಾಳ ತಿಳಿಯೋಣ, ಅನುಭಾವ ಮಂಥನ ಮಾಡೋಣ, ಹೊಸತನದೆಡೆಗೆ ಸಾಗೋಣ.*


*ಶರಣು ಶರಣಾರ್ಥಿಗಳು*

-

9886694454

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…