ಸಂಸ್ಕಾರ ಮತ್ತು ಸಂಘಟನೆ
(ಸಂಘಟನೆಗಳ ಸಮಾವೇಶ ಮಾಡುವವರಿಗೆ ಕೈದೀವಿಗೆ) ನಾವು ಶ್ರೇಷ್ಠವಾದ ಲಿಂಗಾಯತ ಧರ್ಮದ ಅನುಯಾಯಿಗಳು. ಶರಣ ಪರಂಪರೆಯ ಮಕ್ಕಳು. ನಾವು ಒಂದು ವಿಶಿಷ್ಟವಾದ ತತ್ವ ಸಿದ್ಧಾಂತಗಳಿಗೆ ಒಳಪಟ್ಟವರು. ನಾವು ಒಂದು ಸತ್ಪಥದಲ್ಲಿ, ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದೇವೆ; ನಮ್ಮ ಆಚರಣೆಗಳು ಇತರರಿಗಿಂತ ಭಿನ್ನವಾಗಿವೆ ಎನ್ನುವುದಕ್ಕೆ ಯಾವುದು ಸಾಕ್ಷಿ ಏನು ಪ್ರಮಾಣ? * ಗುರು ಶಿಷ್ಯ ಸಂಬಂಧವಾದುದಕ್ಕಿದು ಚಿಹ್ನೆ,* *ಹಿಂದೆ ಬಿಟ್ಟು ಮುಂದೆ ಹಿಡಿಯಲೇ ಬೇಕು* *ಲಿಂಗದೇವ ಕೇಳಯ್ಯಾ ಕಿಚ್ಚಿನೊಳಗೆ ಕೋಲ ಬೈಚಿಟ್ಟಂತಿರಬೇಕು.* ಹಿಂದೆ ಮಾಡುತ್ತಿದ್ದ ಅನೇಕ ತಪ್ಪು ಆಚರಣೆಗಳನ್ನು ಬಿಟ್ಟು , ಮುಂದೆ ಗುರು ತೋರಿದಂಥ ಆಚರಣೆಗಳನ್ನು ಮಾಡುತ್ತಿದ್ದರೆ ಅದೇ ನಾವು ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದೇವೆ ಎನ್ನುವುದಕ್ಕೆ ಸಾಕ್ಷಿ. ಕಿಚ್ಚಿನೊಳಗೆ ಕೋಲ ಬೈಚಿಟ್ಟಂತಿರಬೇಕು, ಎಂದರೆ ಕಿಚ್ಚಿನೊಳಗೆ ಒಂದು ಮರದ ಕೋಲನಿಟ್ಟಾಗ ಅದೂ ತಾನೂ ಕಿಚ್ಚಿನ ಸ್ವರೂಪವನ್ನೇ ಪಡೆದುಕೊಳ್ಳುತ್ತದೆ. ಅದೇ ರೀತಿ ಧರ್ಮ ಸಂಸ್ಕಾರಕ್ಕೆ ಒಳಪಟ್ಟು ಸನ್ಮಾರ್ಗದಲ್ಲಿ ನಡೆಯುತ್ತಿರುವ ವ್ಯಕ್ತಿ ನೋಡಲು ಮುನ್ನಿನಂತೆ ಕಂಡರೂ, ಮಾನವ ಸಹಜವಾದ ಮುನ್ನಿನ ಗುಣಗಳನ್ನು ಜ್ಞಾನದ ಕಿಚ್ಚಿನಲ್ಲಿ ಸುಟ್ಟುಕೊಂಡಿರಬೇಕು. ಧರ್ಮ ಮಾರ್ಗದಲ್ಲಿ ನಡೆದು ಆದರ್ಶ ಶರಣರಾಗಬೇಕು. ಲಿಂಗಾಯತ ಸಮಾಜಕ್ಕೆ ಒಂದು ಕಲಂಕ ಅಂಟಿಕೊಂಡಿದ...