ಮಾಲಿಕೆ 4 : ಮಠ, ಮಹಾಮಠ, ಹಿರೇಮಠ, ಪೀಠ, ಪ್ರತಿಷ್ಠಾನಗಳು ಬೋಧಿಸದೆ ಬಚ್ಚಿಟ್ಟ ವಚನಗಳು
*ಮಠ, ಮಹಾಮಠ, ಹಿರೇಮಠ, ಪೀಠ, ಪ್ರತಿಷ್ಠಾನಗಳು ಬೋಧಿಸದೆ ಬಚ್ಚಿಟ್ಟ ವಚನ ಮಾಲಿಕೆ-4*
*ಮಠ, ಪೀಠ, ಪ್ರತಿಷ್ಠಾನಗಳು ಬಸವ ಭಕ್ತರು ನಿರ್ಮಿಸಿದ ಬಸವ ತತ್ವದ ಬೆಳಕಿನ ಗಟ್ಟಿಗಳು. ಅವುಗಳನ್ನು ಅಂಧಕಾರದ ಒಡಲಲ್ಲಿ ಬಯ್ಚಿಡುವುದು ಬೇಡ. ಬೆಳಕು ಬೀರುವ ವಚನ ವಿಜಯೋತ್ಸವಗಳು ನಿಲ್ಲಬಾರದು. ಯಾವುದೇ ಮಠ ಪೀಠ ಪ್ರತಿಷ್ಠನಗಳ ವ್ಯಾಜ್ಯ ನ್ಯಾಯಲಯ (Court)ದ ಮೆಟ್ಟಿಲು ಹತ್ತಬಾರದು. ಸದ್ಭಭಕ್ತರ ಆಸ್ತಿಗಾಗಿ ನ್ಯಾಯಲಯದ ಬಾಗಿಲ ತಟ್ಟುವುದು ಊರ ಸೀರೆಯ ನೋಡಿ ಅಗಸ ತಡಬಡಗೊಂಡಂತೆ..!!*
-ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ
ವಚನ
*ಅರ್ಥ ಪ್ರಾಣ ಅಭಿಮಾನಕ್ಕೆ ಒಡೆಯರು ಸದ್ಭಕ್ತರಲ್ಲದೆ*
*ಎನಗಾರೂ ಇಲ್ಲವಯ್ಯಾ*
*ಭೃತ್ಯಾಪರಾಧಃ ಸ್ವಾಮಿನೋ ದಂಡಃ*
*ಲಿಂಗದೇವಾ ನೀವೇ ಪ್ರಮಾಣು.*
-ಧರ್ಮಗುರುಬಸವಣ್ಣನವರು
ಗುರು ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪ ರಚಿಸಿ ಮಹಾಮನೆ ಕಟ್ಟಿ, ಅರಿವು, ಆಚಾರ, ಅನುಭಾವಗಳನ್ನು ಜನ ಮಾನಸದಲ್ಲಿ ನೆಲೆಗೊಳಿಸುವ ಕಾರ್ಯವನ್ನು ಮಾಡುತ್ತಿರುವುದನ್ನು ನೋಡಿ ಅಸಂಖ್ಯಾತ ಶರಣರು ಅವರ ಕಾರ್ಯಕ್ಕೆ ಕೈಜೋಡಿಸಿದರು. ಇದರಿಂದ ಅನುಭಾವ ಮಂಟಪದ ದಾಸೋಹದ ಭಂಡಾರಕ್ಕೆ ಅಪಾರವಾದ ಕಾಣಿಕೆ ಹರಿದು ಬರುತ್ತಿತ್ತು. ಆ ಕಾಣಿಕೆ ಎಷ್ಟು ಬರುತಿತ್ತು ಎಂದರೆ ಕೊಂಡೆಗಳಿಗೆ, ಗುರು ಬಸವಣ್ಣನವರು ಶರಣರು ಕೊಟ್ಟ ಕಾಣಿಕೆಯಿಂದ ಇಂತಹ ಮಹಾನ್ ಕಾರ್ಯ ಮಾಡುತ್ತಿದ್ದಾರೋ ಅಥವಾ ಅರಮನೆಯ ಬೊಕ್ಕಸವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೋ ಎಂದು ಅನುಮಾನ ಬರುವಷ್ಟು ದಾಸೋಹದ ಕಾಣಿಕೆ ಅನುಭಾವ ಮಂಟಪದ ದಾಸೋಹ ಭಂಡಾರಕ್ಕೆ ಬರುತಿತ್ತು.
*ಇದಕ್ಕೆ ಕಾರಣ ಗುರು ಬಸವಣ್ಣನವರ ಕೊಡುವವನೂ ಲಿಂಗದೇವ ಸ್ವೀಕರಿಸುವವನೂ ಲಿಂಗದೇವ, ಮಾಡುವವನೂ ಲಿಂಗದೇವ ಮಾಡಿಸಿಕೊಳ್ಳುವವನು ಲಿಂಗದೇವ ಎನ್ನುವ ಮನೋಭಾವ. ಇಂತಹ ಅನುಭಾವ ಮಂಟಪ ವನ್ನು ನೋಡಿ ಅಲ್ಲಿ ನಡೆಯುವ ಅನುಭಾವ ಗೋಷ್ಠಿಯನ್ನು ನೋಡಿ; ಮಹಾಮನೆಯನ್ನು ಕಂಡು ಅಲ್ಲಿ ನಡೆಯುವ ದಾಸೋಹವನ್ನು ಕಂಡು "ಸಂಗನ ಬಸವಣ್ಣನವರ ದಾಸೋದ ಘನವನೇನೆಂದೆನಬಹುದು ನೋಡಾ ಸಿದ್ಧರಾಮಯ್ಯ” ಎಂದು ಗುರು ಅಲ್ಲಮ ಪ್ರಭುದೇವರು ಉದ್ಗರಿಸಿದರೆ, ಬೊಕ್ಕಸದ ಹಣ ವ್ಯಯವಾಗುತ್ತಿದೆ ನೋಡಾ ಅರಸ ಎಂದು ಕೊಂಡೆಗಳು ಬೊಬ್ಬಿರಿದರು.*
ಒಂದು ಒಳ್ಳೆಯ ಕಾರ್ಯ ನಡೆಯುವಾಗ ಅದನ್ನು ಕೆಟ್ಟ ದೃಷ್ಟಿಕೋನದಲ್ಲಿ ನೋಡುವ ಜನರು ಅಂದು ಇದ್ದರು ಇಂದೂ ಇದ್ದಾರೆ. ಅಂದು ಅನುಭಾವ ಮಂಟಪ ಮಹಾಮನೆಯನ್ನು ಕೆಡಿಸಿದರು. ಇಂದೂ ಮಹಾಮನೆ, ಮಹಾಮಠ, ಧರ್ಮಪೀಠ, ಪ್ರತಿಷ್ಠಾನ ಮತ್ತು ಇನ್ನಿತರ ಅನುಭಾವ ಮಂಟಪದ ತದ್ರೂಪಗಳನ್ನು ಕೆಡಿಸುವ ಪ್ರಯತ್ನ ನಡೆದಿದೆ. ಕೊಲ್ಲುವೆನೆಂಬ ಭಾಷೆ ದೇವನದಾದರೆ ಗೆಲ್ಲುವೆನೆಂಬ ಭಾಷೆ ಭಕ್ತನದು ನೋಡಾ. ಎನ್ನುವಂತೆ ಕೊಲ್ಲುವುದು ಗೆಲ್ಲುವುದೊಂದು ನಿರಂತರ ಪ್ರಕ್ರಿಯೆ. ಅದೇ ರೀತಿ ಅನುಭಾವ ಮಂಟಪಗಳನ್ನು ನಡೆಸುವುದು ಅಲ್ಲಿ ನಡೆಯುವ ಅನುಭಾವ ಗೋಷ್ಠಿಗಳನ್ನು ಕೆಡಿಸುವುದು, ನಿರಂತರ ಪ್ರಕ್ರಿಯೆಯಂತೆ ಇತ್ತೀಚಿನ ಕೆಲ ಘಟನೆಯಿಂದ ಮನವರಿಕೆಯಾಗುತ್ತಿದೆ.
*ಇದಕ್ಕೆ ಕಾರಣ….….? ಇದಕ್ಕೆ ಮೂಲ ಕಾರಣ ಮಠ, ಮಹಾಮಠ, ಪೀಠ, ಪ್ರತಿಷ್ಠಾನಗಳು ಮೇಲಿನ ಗುರು ಬಸವಣ್ಣನವರ ಮೇಲಿನ ವಚನವನ್ನು ಬೋಧಿಸದೇ ಬಚ್ಚಿಟ್ಟಿದ್ದು..!!!!*
ಹಾಗಾದರೆ ಶರಣ ಬಂಧುಗಳೇ ಮೇಲಿನ ವಚನದಲ್ಲಿ ಗುರುಬಸವಣ್ಣಮವರು ಏನನ್ನು ಹೇಳುತ್ತಾರೆ?.
12ನೇ ಶತಮಾನದ ಅನುಭಾವ ಮಂಟಪ, ಮಹಾಮನೆಯ ಉದಾಹರಣೆಯೇ ಆಗಲಿ ಇಂದಿನ ಮಠ, ಮಹಾಮಠ, ಪೀಠ, ಪ್ರತಿಷ್ಠಾನಗಳ ಉದಾಹರಣೆಯೇ ಆಗಲೀ ಇವುಗಳು ಕೆಲವೇ ಕೆಲವು ವರ್ಷಗಳಲ್ಲಿ ಬೆಳೆದು ನಿಂತ ಪರಿಯನ್ನು ನೋಡಿದರೆ, ಸಮಾಜದಲ್ಲಿ ಧರ್ಮ ಕಟ್ಟುವವರ ಸಂಖ್ಯೆ, ಕಾಣಿಕೆ ಕೊಡುವವರ ಸಂಖ್ಯೆ, ದಾಸೋಹ ಮಾಡುವವರ ಸಂಖ್ಯೆ ಕಡಿಮೆಯಿಲ್ಲ; ಕೊಡುವವರ ಹೃದಯದಲ್ಲಿ ಕಲ್ಮಷವಿಲ್ಲ ಎನ್ನುವುದು ಅಂಗೈಯಲ್ಲಿರುವ ಇಷ್ಟಲಿಂಗದಷ್ಟೇ ಸ್ಪಷ್ಟವಾಗಿದೆ.
*ಹಾಗಾದರೆ ಕಲ್ಮಷ ಎಲ್ಲಿದೆ? ತೆಗೆದುಕೊಳ್ಳುವವರ ಹೃದಯದಲಿದೆ. ಪೀಠ, ಮಠ, ಮಹಾಮಠ, ಪ್ರತಿಷ್ಠಾನಗಳು ಸೂರ್ಯ ಸದೃಶವಾಗಿ ಬೆಳೆದು ನಿಂತ ಪರಿಯನ್ನು ಕಾಣಲಾಗದ ಗೂಗೆಗಳ ಕಣ್ಣಲ್ಲಿದೆ.*
*"ಅರ್ಥ ಪ್ರಾಣ ಅಭಿಮಾನಕ್ಕೆ ಒಡೆಯರು ಸದ್ಭಕ್ತರಲ್ಲದೆ*
*ಎನಗಾರೂ ಇಲ್ಲವಯ್ಯಾ"*
ತನು, ಮನ, ಧನ, ಸಮಯ, ಅಭಿಮಾನ, ಪ್ರಾಣ; ಇವುಗಳನ್ನು ಲಿಂಗಾಯತ ಧರ್ಮದಲ್ಲಿ ಷಡಂಗ ದಾಸೋಹಗಳೆಂದು ಕರೆಯುತ್ತೇವೆ. ಇದರಲ್ಲಿ ಧರ್ಮ ಕಟ್ಟಲು ಮುಖ್ಯವಾಗಿ ಬೇಕಾಗಿರುವುದು ಧನ (ಅರ್ಥ) ಮತ್ತು ಸಮಯ. ಧರ್ಮವನ್ನು ಬೆಳೆಸಲು ಬೇಕಾಗಿರುವುದು ತನು ಮತ್ತು ಮನ. ಧರ್ಮವನ್ನು ಉಳಿಸಿಲು ಬೇಕಾಗಿರುವುದು ಅಭಿಮಾನ ಮತ್ತು ಪ್ರಾಣ. ಇವುಗಳನ್ನು ಕೊಡುವವರೂ ಶರಣರೇ. ಆದ್ದರಿಂದ ಷಡಂಗ ದಾಸೋಹದಿಂದ ನಿರ್ಮಿಸಿದ ಮಠ, ಮಹಾಮಠ, ಪೀಠ ಪ್ರತಿಷ್ಠಾನ ಶರಣರದ್ದೇ ಹೊರತು ಅದನ್ನು ನೋಡಿಕೊಳ್ಳುವ ಶರಣರ ಪ್ರತಿನಿಧಿಯದ್ದಲ್ಲ.
*ಹೀಗೆ ಧರ್ಮವನ್ನು ಕಟ್ಟಲು, ಧರ್ಮದ ಪ್ರಾತಿನಿಧಿಕ ಸಂಸ್ಥೆಗಳಾದ ಮಠ, ಪೀಠ, ಪ್ರತಿಷ್ಠಾನ ಹಾಗು ಬಸವ ಮಂಟಪಗಳನ್ನು ಕಟ್ಟಲು ನೀಡುವ ಅರ್ಥಕ್ಕೆ ಯಾರು ಒಡೆಯರು? ಹಾಗೆ ಕಟ್ಟಿದ ಮಠ, ಪೀಠ, ಪ್ರತಿಷ್ಠಾನ ಹಾಗು ಬಸವ ಮಂಟಪಗಳಿಗೆ ಯಾರು ನಿಜವಾದ ಒಡೆಯರು ಎನ್ನುವುದನ್ನು ಮಠ, ಪೀಠ, ಪ್ರತಿಷ್ಠಾನಗಳು ಬೋಧಿಸಲೇ ಇಲ್ಲ. ಬದಲಾಗಿ ಎಲ್ಲವೂ ನನ್ನದೇ ನಾನು ಗಳಿಸಿದ್ದು ಇದಕ್ಕೆ ನಾನೆ ಒಡೆಯ ಎನ್ನುವ ಮನೋಭಾವ ತಾಳಿದರು. ಇಂಥವರನ್ನು “ಊರ ಸೀರೆಗೆ ಅಗಸ ತಡಬಡಗೊಂಬಂತೆ, ಹೊನ್ನೆನ್ನದು ಮಣ್ಣೆನ್ನದು ಎಂದು ಮರುಳಾದೆ, ಲಿಂಗದೇವಾ ನಿಮ್ಮನರಿಯದ ಕಾರಣ ಕೆಮ್ಮನೆ ಕೆಟ್ಟೆನಯ್ಯಾ” ಎಂದು ಗುರು ಬಸವಣ್ಣನವರು ವಿಡಂಬಿಸುತ್ತಾರೆ.*
ಮಠ, ಪೀಠ, ಪ್ರತಿಷ್ಠಾನದಗಳು ಗುರು-ಚರದ ಹೆಸರಿನಲ್ಲಿ ಕಾಯಕ ಮಾಡಿ ಬಂದ ಪದಾರ್ಥವನ್ನು ತನ್ನ ಗಳಿಕೆ ಎಂದು ಭಾವಿಸಿ. ಅದರ ಮೇಲೆ ವ್ಯಾಮೋಹ ಬೆಳಸಿಕೊಂಡರು. ಅದರ ಮೇಲೆ ಅಧಿಕಾರ ತನ್ನದೆಂದರು. ಆದರೆ ಗುರು ಬಸವಣ್ಣನವರು ಮಠ ಪೀಠ ಕಟ್ಟಿ ಬೆಳೆಸಿದ ಸದ್ಭಕ್ತರೇ ಅದರ ಒಡೆಯರೆಂದರು. ಆದ್ದರಿಂದಲೇ ಅನುಭಾವ ಮಂಟಪ ಭೌತಿಕವಾಗಿ ಇಪ್ಪತ್ತೇಳು ವರ್ಷನಡೆದರೂ, ಎಂಟು ನೂರಾ ಐವತ್ತು ವರ್ಷಗಳಿಂದಲೂ ಅದರ ಸಂಸ್ಕೃತಿ ಮುಂದುವರೆದಿದೆ. ಅವನಿ, ಅಂಬರ, ಇನನಿರುವವರೆಗೂ ಮುಂದುವರೆಯುತ್ತದೆ.
*ಗುರು ಬಸವಣ್ಣನವರು ಕೊಟ್ಟ ಅರ್ಥ ಪ್ರಾಣ ಅಭಿಮಾನಕ್ಕೆ ಒಡೆಯರು ಸದ್ಭಕ್ತರು ಎನ್ನುವ ಈ ಸೂತ್ರ ಮರೆತುದರಿಂದಲೇ, ಇದನ್ನು ಬೋಧಿಸದೇ ಮುಚ್ಚಿಟ್ಟಿರುವುದರಿಂದಲೇ, ಭಕ್ತರ ಸಂಪತ್ತನ್ನು ತನ್ನ ಸಂಪತ್ತೆಂದು ಭ್ರಮೆಗೊಳಗಾಗಿದ್ದುದ್ದರಿಂದಲೇ ಮಠ, ಪೀಠ, ಪ್ರತಿಷ್ಠಾನಗಳು ಎರಡೆಂಟು ಇಲ್ಲವೇ ಮೂರೆಂಟು ವರ್ಷಗಳಲ್ಲೇ ಅಳಿವಿನ ಅಂಚಿಗೆ ಬಂದು ನಿಲ್ಲುತ್ತಿವೆ.*
ಭಕ್ತರಿಗೆ, ಮಠ ಪೀಠ ಪ್ರತಿಷ್ಠಾನಗಳು, *ಈ ಮಠ ನಿಮ್ಮದು ಇದರ ಸಂಪತ್ತು ನಿಮ್ಮದು ಇದರ ರಕ್ಷೆ ಶಿಕ್ಷೆ ನಿಮ್ಮದೇ ಎಂದು ಬೋಧಿಸಿದ್ದರೆ ಯಾವುದೇ ಮಠಗಳು, ಪೀಠಗಳು, ಪ್ರತಿಷ್ಠಾನಗಳು ಇತಿಹಾಸದ ದರಂತ ಕಥೆಗಳಾಗದೇ ದಂತ ಕಥೆಗಳಾಗಿ ಉಳಿಯುತ್ತವೆ.*
*“ಭೃತ್ಯಾಪರಾಧಃ ಸ್ವಾಮಿನೋ ದಂಡಃ*
*ಲಿಂಗದೇವಾ ನೀವೇ ಪ್ರಮಾಣು"*
ಸೇವಕ ಅಪರಾಧ ಮಾಡಿದರೆ ಒಡೆಯನು ದಂಡ ಕಟ್ಟಿ ಸೇವಕನ್ನು ಬಿಡಿಸಿಕೊಂಡುವ ಬರುವಂತೆ, ಲಿಂಗದೇವಾ…ಅನುಭಾವ ಮಂಟಪ ಮಹಾಮನೆ ನಡೆಸುವಲ್ಲಿ ನನ್ನಿಂದೇನಾದರೂ ತಪ್ಪಾದರೆ ಅದರ ಹಾನಿ ನಿನಗೇ ಆಗುತ್ತದೆ ಆದ್ದರಿಂದ ನನ್ನಿಂದ ತಪ್ಪಾಗದಂತೆ ನೋಡಿಕೊಳ್ಳುವುದೂ ನಿನ್ನ ಜವಾಬ್ದಾರಿ. ಲಿಂಗದೇವಾ.. ನಿನಗೆ ಕೆಟ್ಟ ಹೆಸರು ಬರದಂತೆ ನನ್ನನ್ನು ರಕ್ಷಿಸುವುದು ನಿನ್ನದೇ ಹೊಣೆ ಎಂದು ಸಂಪೂರ್ಣ ಶರಣಾಗಿದ್ದರು. ಆದರೆ ಇಂದಿನ ಮಠ ಪೀಠ ಪ್ರತಿಷ್ಠಾನ ನಡೆಸುವವರು ಯಾರಿಗೆ ಶರಣಾಗಿದ್ದಾರೆ ಯಾವುದಕ್ಕೆ ಶರಣಾಗಿದ್ದಾರೆ ಎನ್ನುವುದನ್ನು ಅವಲೋಕನ ಮಾಡಿಕೊಂಡರೆ ಎಲ್ಲಾ ಸಮಸ್ಯೆಗಳು ಅಲ್ಲೇ ಪರಿಹಾರವಾಗುತ್ತವೆ.
*ಹೀಗೆ ಗುರು ಬಸವಣ್ಣಣವರು ನಡೆದ ನಡೆಯನ್ನು ನಡೆಯಲರಿಯದ, ಅವರು ಬೋಧಿಸಿದ ಬೋಧನೆಯನ್ನು ಬೋಧಿಸದ ಮಠ ಪೀಠ ಪ್ರತಿಷ್ಠಾನಗಳು, ತಾನು ತಪ್ಪು ಮಾಡಿದರೆ ನಂಬಿದ ಗುರುವಿಗೆ ಅವಮಾನವಾಗುತ್ತದೆ ಎಂದೂ ಅರಿಯದೇ, ಲಜ್ಚೆ ನಾಚಿಕೆಗೆಳನ್ನು ಮರೆತು, ಕಾಂಚನವೆಂಬ ಮಾಯೆಯ ನಚ್ಚಿ ಲಿಂಗದೇವನ ಮರೆದವರಿಂದ ಮಠ ಪೀಠ ಪ್ರಿಷ್ಠಾನಗಳು ಕೆಟ್ಟಿವೆ.*
ಅದಕ್ಕಾಗಿ ಶರಣ ಬಂಧುಗಳೇ ಮಠ ಪೀಠ ಪ್ರಿಷ್ಠಾನಗಳ ಮುಂದಾಳತ್ವವನ್ನು ಶರಣರೇ ವಹಿಸಿ ಯಾರೇ ಅದನ್ನು ನಿರ್ಮಾಣ ಮಾಡಿರಬಹುದು. ಅದು ನಮ್ಮ ಆಸ್ತಿ ನಮ್ಮ ಅನುಭಾವ ಮಂಟಪದ ಆಸ್ತಿ. ನಮ್ಮ ಧರ್ಮ ಪರಂಪರೆಯ ಆಸ್ತಿ. ಅದನ್ನು ರಕ್ಷಿಸುವ ಹೊಣೆ ಕೂಡ ನಮ್ಮದೇ. ಮಠ ಪೀಠ ಪ್ರತಿಷ್ಠಾನಗಳಲ್ಲಿ ನಿರಂತರವಾದ ಇಷ್ಟಲಿಂಗಾರ್ಚನೆ, ಸಾಮೂಹಿಕ ಪ್ರಾರ್ಥನೆ, ಧರ್ಮ ಚಿಂತನ ಗೋಷ್ಠಿ, ಅನುಭಾವ ಗೋಷ್ಠಿ, ವಚನ ಪಠಣ ನಡೆಸುವ ಹೊಣೆ ಸದ್ಭಕ್ತರಾದ ನಮ್ಮದೇ.
*ಮಠ ಪೀಠ ಪ್ರತಿಷ್ಠಾನಗಳಲ್ಲಿ ಶರಣ ಮೇಳ, ಕಲ್ಯಾಣ ಪರ್ವ, ವಚನ ವಿಜಯೋತ್ಸವಗಳು ನಿಲ್ಲಬಾರದು. ಮಠ ಪೀಠಗಳ ಆಡಳಿತವನ್ನೂ ಗುರುದ್ವಾರಗಳಂತೆ ಶರಣರೇ ಕೈಗೆ ತೆಗೆದುಕೊಳ್ಳಬೇಕು. ಏಕೆಂದರೆ ಇವುಗಳೆಲ್ಲವೂ ನಮ್ಮ ಆಸ್ತಿ. “The world suffers a lot. Not because of voilence of bad people, but because of the silence of the good people” ಎಂದರೆ ಈ ಜಗತ್ತು ಈ ಸಮಾಜ ಈ ಧರ್ಮ ಹೆಚ್ಚು ಕೆಡುವುದು ಕೆಟ್ಟಜನರ ಕೆಟ್ಟನಡೆಯಿಂದಲ್ಲ ಆದರೆ ಒಳ್ಳೆಯ ಜನರ ಮೌನದಿಂದ ಎಂದು ನೆಪೋಲಿಯನ್ ಬೋನಾಪಾರ್ಟೆ ಹೇಳಿದ್ದಾರೆ. ಆದ್ದರಿಂದ ನಾನಿನ್ನು ಮೌನವಾಗಿರಲಾರೆ. ಲಿಂ. ಪೂಜ್ಯ ಶ್ರೀ ಮಾತಾಜಿ ಕೊಟ್ಟುಹೋದ ಲೇಖನಿಯೆಂಬ ಖಡ್ಗವನ್ನು ಹರಿತಗೊಳಿಸುವೆ. ತಾವು……?*
ಆದ್ದರಿಂದ ಶರಣ ಬಂಧುಗಳೇ ಒಳ್ಳೆಯ ಜನರಾದ ನಾವು ಈಗ ಸುಮ್ಮನೆ ಕೂಡುವ ಕಾಲ ಇದಲ್ಲ. ನಾವು ಎಚ್ಚರಗೊಳ್ಳಲೇ ಬೇಕು ಕೆಟ್ಟ ಜನರು ಕೆಟ್ಟದನ್ನು ಪ್ರದರ್ಶಿಸಲಿಕ್ಕೆ ಯಾವುದೇ ಲಜ್ಜೆ ನಾಚಿಕೆ ಇಲ್ಲಿದಿರುವಾಗ ಧರ್ಮವಂತರಾದ ನಾವು, ಒಳ್ಳೆಯವರಾದ ನಾವು ಲಜ್ಜೆಗೆಟ್ಟಾದರೂ, ನಾಣು ಗೆಟ್ಟಾದರೂ ಮಠ ಪೀಠ ಪ್ರತಿಷ್ಠಾನಗಳನ್ನು ಉಳಿಸೋಣ. ಕೆಲದ ಸಂಸಾರಿಗಳು ನಗುತಿರ್ದಡಿರಲಿ, ಮರ್ತ್ಯಲೋಕದ ಈ ಕರ್ತಾರನ ಕಮ್ಮಟವನ್ನು ನಿರಂತರವಾಗಿ ಸುಂದರವಾಗಿಡುವ ಸ್ವಚ್ಛವಾಗಿಡುವ ಕಾರ್ಯವನ್ನು ಲಿಂಗದೇವನಿಗೆ ಶರಣುಗತಿವೊಕ್ಕಿ ಮಾಡೋಣ.
*೧೨ನೇ ಶತಮಾನದಲ್ಲಿ ಆಡಳಿತದಲ್ಲಿ ರಾಜಶಾಹಿ ಇತ್ತು ಬಸವ ಧರ್ಮದಲ್ಲಿ ಗಣತಂತ್ರವಿತ್ತು, ಪ್ರಜಾಪ್ರಭುತ್ವವಿತ್ತು. ರಾಜಶಾಹಿಯ ದೌರ್ಜನ್ಯದಿಂದ ಬಸವ ಧರ್ಮದ ಗಣತಂತ್ರ ನುಚ್ಚು ನೂರಾಯಿತು. ಅದಕ್ಕಾಗಿಯೇ ೧೨ನೇ ಶತಮಾನದ ಶರಣರು ೮೦೦ ವರ್ಷಗಳ ಕಾಲ ಕಾಯ್ದು ಆಡಳಿತದಲ್ಲಿ ಗಣತಂತ್ರ ಪ್ರಜಾಪ್ರಭುತ್ವ ಬಂದಾಗ ೨೧ನೇ ಶತಮಾನದಲ್ಲಿ ಬಂದರು.*
*ಇಂತಹ ಸಂದರ್ಭದಲ್ಲಿ ಧರ್ಮದಿಂದ ಗಣತತಂತ್ರ ವ್ಯವಸ್ಥೆಯನ್ನು ಹೊಡೆದೋಡಿಸಿ ನಿರಂಕುಶತ್ವವನ್ನು ಜಾರಿಗೆ ತಂದರೆ, ಶರಣರು ಈ ಮರ್ತ್ಯಲೋಕಕ್ಕೆ ಮತ್ತೆಂದೂ ಬಾರರು. ಆಗ ನಾವು ನೀವೆಲ್ಲರೂ ಲಿಂಗದೇವನಿಲ್ಲದ ಠಾವು ನರವಿಂಧ್ಯದೊಳಗೆ ಬದುಕಬೇಕಾಗುತ್ತದೆ. ಲಿಂಗಾಯತ ಧರ್ಮ ಮೂಲತಃ ಗಣಧರ್ಮ. ಅದಕ್ಕಾಗಿ ಈ ಧರ್ಮದಲ್ಲಿರುವ ಗಣತಂತ್ರ ವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವುದು ಈ ಧರ್ಮದ ಪ್ರತಿಯೊಬ್ಬ ಅನುಯಾಯಿಯ ಮೂಲಭೂತ ಕರ್ತವ್ಯ.*
*ಅದಕ್ಕಾಗಿ ಶರಣರೇ ಈಗಾಗಲೇ ನ್ಯಾಯಲಯದ ಮೆಟ್ಟಿಲು ಹತ್ತಿರುವ ಮಠ ಪೀಠ ಪ್ರತಿಷ್ಠಾನಗಳ ಸಮಸ್ಯೆಯನ್ನು ಮಠದಂಗಳದಲ್ಲೇ; ಕಾಣಿಯ ಸೋಲದ ಅರ್ಧಕಾಣಿಯ ಗೆಲ್ಲದ ಬಲುಜಾಣನಾದ ನ್ಯಾಯಧೀಶನ ನ್ಯಾಯಲಯದಲ್ಲೇ ಬಗೆಹರಿಸೋಣ. ನ್ಯಾಯಲಯದ ಮೆಟ್ಟಿಲು ಹತ್ತಲು ಹವಣಿಸುತ್ತಿರುವ ಮಠ, ಪೀಠ ಪ್ರತಿಷ್ಠಾನಗಳನ್ನು ಉಳಿಸೋಣ. ಮಠ ಪೀಠ ಪ್ರತಿಷ್ಠಾನಗಳನ್ನು ಬಸವ ತತ್ವದ ಬೆಳಕಿನ ಗಟ್ಟಿಗಳನ್ನಾಗಿ ಮಾಡೋಣ. ಮಠ, ಪೀಠ, ಪ್ರತಿಷ್ಠಾನಗಳು ಬೋಧಿಸದೆ ಬಚ್ಚಿಟ್ಟ ವಚನಗಳನ್ನು ಓದೋಣ, ನಮ್ಮ ಮಠ, ಪೀಠ ಪ್ರತಿಷ್ಠಾನಗಳಲ್ಲಿ ನಾವೇ ನಿಲ್ಲಿಸದೇ ವಚನ ವಿಜಯೋತ್ಸವ ಮಾಡೋಣ, ವಚನ ಪಠಣ ನಡೆಸೋಣ, ಅನುಭಾವ ಗೋಷ್ಠಿ ಹೂಡೋಣ, ಅನುಭಾವ ಮಂಥನ ಮಾಡೋಣ. ಹೊಸತನದೆಡೆಗೆ ಸಾಗೋಣ ಗುರುಬಸವಪ್ರಿಯ ಲಿಂಗದೇವನ್ನು ಕೂಡೋಣ.*
ಶರಣು ಶರಣಾರ್ಥಿಗಳು
-ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ
9886694454
28-01-2022

ಚಟ್ನಳ್ಳಿ ಸ್ವಾಮೀಜಿ ಬಹಳ ಚೆನ್ನಾಗಿ ಬರೆದಿದ್ದಾರೆ ತಪ್ಪು ಕಂಡಾಗ ವಿರೋಧ ಮಾಡಿ ಗೋತ್ತಿದ್ದು ಸುಮ್ಮನೆ ಇರ ಬೇಡಿ ವಿರೋಧಿಸಿ .ಎಂದು ಪರಮ ಪೂಜ್ಯ ಡಾಕ್ಟರ್ ಜಗದ್ಗುರು ಮಾತೇಮಾಹಾದೇವಿ ಮಾತಾಜಿ ಲಿಂಗದೇವ ಸಂಶೋಧನೆ ಬಗ್ಗೆ ಯಾರಾದರು ತಪ್ಪು ಮಾತಾಡಿದರೆ ಎದ್ದೇಳಿ ಜಾಗ್ರ ರಾಗಿ ಎಂದು ಹೇಳಿದ್ದಾರೆ. ಶರಣುಶರಣಾರ್ಥಿ
ಪ್ರತ್ಯುತ್ತರಅಳಿಸಿ