ಸದ್ಗುಣಗಳ್ಳಿಲ್ಲದ ರೂಪ ಬಚ್ಚಲ ತಿಳಿನೀರಿಗೆ ಸಮ - Beaty without Good Mind & Character is Like clear water of Bathroom
ಸದ್ಗುಣಗಳ್ಳಿಲ್ಲದ ರೂಪ ಬಚ್ಚಲ ತಿಳಿನೀರಿಗೆ ಸಮ
(Beaty without Good Mind & Character is Like clear water of Bathroom)
-#GuruBasavanna
ಎಲವದ ಮರ ಹೂತು ಫಲವಾದ ತೆರನಂತೆ
ಸಿರಿಯಾದಡೇನು ಶಿವಭಕ್ತಿಯಿಲ್ಲದನ್ನಕ್ಕ?
ಫಲವಾದಡೇನು ಹೇಳಾ ಹಾವು ಮೆಕ್ಕೆಯಕಾಯಿ?
ಗುಣವಿಲ್ಲದ ರೂಹು ಎಲ್ಲಿದ್ದರೇನು ?
ಬಚ್ಚಲ ನೀರು ತಿಳಿಯಾದಲ್ಲಿ ಫಲವೇನು?
ಅವಗುಣಿಗಳ ಮೆಚ್ಚ ನಮ್ಮ ಲಿಂಗದೇವರು.
-ಗುರು ಬಸವಣ್ಣನವರು
ಎಲವದ ಮರ ಎಂದರೆ ಬೂರಲ ಗಿಡ ಎಂದು ಅರ್ಥ ಎಲವದ ಮರವನ್ನು ಇಂಗ್ಲೀಷ್ನಲ್ಲಿ `ಸಿಲ್ಕ್-ಕಾಟನ್ಟ್ರೀ' (Silk Cotton tree) ಎನ್ನುತ್ತಾರೆ. ಹೂತು ಎಂದರೆ ಹೂವು ಬಿಟ್ಟು, ಫಲವಾದ ತೆರನಂತೆ- ಆ ಗಿಡಕ್ಕೆ ಹಣ್ಣುಗಳು ಆದ ಹಾಗೆ ಎಂದು ಮೊದಲ ಸಾಲಿನ ಅರ್ಥ. ಬೂರಲ ಗಿಡದ ಹಣ್ಣು ಯಾರೂ ತಿನ್ನಲಾರರು. ಆ ಹಣ್ಣಿನಿಂದ ಯಾರಿಗೂ ಯಾವ ಪ್ರಯೋಜನವು ಇಲ್ಲ. ತನ್ನ ಪಾಡಿಗೆ ತಾನು ಹೂವು ಬಿಡುತ್ತೆ ಕಾಯಾಗುತ್ತೆ ಹಣ್ಣಾಗುತ್ತೆ. ಆ ಹಣ್ಣು ಬಿದ್ದು ಹೋಗುತ್ತವೆಯೇ ಹೊರತು ಮನುಷ್ಯರಾಗಲಿ ಪಶುಪಕ್ಷಿಗಳಾಗಲೀ ತಿನ್ನಲಿಕ್ಕೆ ಯೋಗ್ಯವಲ್ಲದ ಹಣ್ಣು ಅದು. ಅದೇ ರೀತಿ, ಇನ್ನೊಬ್ಬರಿಗೆ ಉಪಕಾರ ಮಾಡದ, ಇನ್ನೊಬ್ಬರ ಕಷ್ಟದಲ್ಲಿ ಸಹಾಯ ಹಸ್ತ ಚಾಚದ ಸಿರಿವಂತಿಕೆಯಿಂದ ಯಾವ ಪ್ರಯೋಜನ? ಭಕ್ತಿಯಿಲ್ಲದ, ದೇವರ ಪೂಜೆ ಪ್ರಾರ್ಥನೆ ಮತ್ತು ದಾಸೋಹಕ್ಕೆ ಧನ ಸವೆಸದ ಸಿರಿವಂತಿಕೆ, ಆ ಬೂರಲ ಗಿಡದ ಹಣ್ಣಿನಂತೆ ನಿಷ್ಪ್ರಯೋಜಕವಾದುದು ಎಂದು ಧರ್ಮಪಿತರು ಈ ವಚನದ ಮೊದಲೆರಡು ಸಾಲಿನಲ್ಲಿ ಹೇಳುತ್ತಾರೆ.
``ಫಲವಾದಡೇನು ಹೇಳಾ ಹಾವು ಮೆಕ್ಕೆಯ ಕಾಯಿ?" ಇಲ್ಲಿ ``ಹಾವು ಮೆಕ್ಕೆಯ ಕಾಯಿ" ಎಂದರೆ ಒಂದು ಬಗೆಯ ಮೆಕ್ಕೆಯ ಬಳ್ಳಿಯ ಕಾಯಿ, ಇದು ಅತ್ಯಂತ ಕಹಿಯಾಗಿರುತ್ತದೆ. `ಇಂದ್ರವಾರುಣಿ' ಎನ್ನುವುದು ಇದರ ಮತ್ತೊಂದು ಹೆಸರು. ಈ ಹಣ್ಣು ತಿನ್ನಲಿಕ್ಕೆ ಯೋಗ್ಯವಲ್ಲದುದು. ಇಂಥ ಕಾಯಿ ಹಣ್ಣಾದರೇನು ಪ್ರಯೋಜನ? ಎನ್ನುತ್ತಾರೆ.
``ಬಚ್ಚಲ ನೀರು ತಿಳಿಯಾದಲ್ಲಿ ಫಲವೇನು?" ಬಚ್ಚಲಿನಿಂದ ಬರುವ ನೀರು ಎಷ್ಟೇ ತಿಳಿಯಾಗಿದ್ದರೂ ಯಾವುದಕ್ಕೂ ಉಪಯೋಗಿಸುವುದಕ್ಕೆ ಆಗುವುದಿಲ್ಲ.
``ಗುಣವಿಲ್ಲದ ರೂಹು, ಎಲ್ಲಿದ್ದರೇನು?" ಒಬ್ಬಳು/ಒಬ್ಬನು ರೂಪವತಿ/ರೂಪವಂತ ಯಾಗಿದ್ದು ಒಳ್ಳೆಯ ಗುಣವಿಲ್ಲದಿದ್ದರೆ ಏನು ಪ್ರಯೋಜನ? ಅದು ಬೂರಲ ಹಣ್ಣಿನಂತೆ, ಹಾವು ಮೆಕ್ಕೆಯ ಕಾಯಿಯಂತೆ, ಬಚ್ಚಲ ತಿಳಿನೀರಿನಂತೆ ನಿಷ್ಪ್ರಯೋಜಕವಾದುದು" ಎನ್ನುವುದು ಈ ವಚನದ ಸಾಲುಗಳ ಅರ್ಥ.
-Sachidanand Chatnalli
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ