ಸಾವನ್ನು ಸ್ವಾಗತಿಸಲಿಕ್ಕೆ ಸಿದ್ಧರಾಗಿ ಗುರುಬಸವಣ್ಣನವರಿಗಾಗಿ ಅದರೊಡನೆ ಯುದ್ಧ ಮಾಡಿದ ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿಯವರು
ಸಾವನ್ನು ಸ್ವಾಗತಿಸಲಿಕ್ಕೆ ಸಿದ್ಧರಾಗಿ ಗುರುಬಸವಣ್ಣನವರಿಗಾಗಿ ಅದರೊಡನೆ ಯುದ್ಧ ಮಾಡಿದ ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿಯವರು*
-Sachidanand Prabhu Chatnalli
9888894454
ಕೆಲವು ವರ್ಷಗಳ ಹಿಂದೆ ಬಸವ ಮಂಟಪದಲ್ಲಿ ಕೆಲವೊಂದು ಹಳೆಯ ಭಾವಚಿತ್ರಗಳ ಸಂಗ್ರಹ ನನ್ನ ಕಣ್ಣಿಗೆ ಬಿತ್ತು. ಅದರಲ್ಲಿ ಮೂರು ಭಾವಚಿತ್ರಗಳು ನನ್ನ ಗಮನ ಸೆಳೆದವು. ಒಂದು ಕ್ಷಣ ಸರ್ವಾಂಗದಲ್ಲಿ ಕಂಪನವಾಯಿತು. ನನಗರಿವಿಲ್ಲದೆ ಕಣ್ಣಿನಿಂದ ಅಶ್ರು ಬಿಂದುಗಳು ಬರಲಾರಂಭಿಸಿದವು! ಕಾರಣ, ಆ ಭಾವಚಿತ್ರಗಳು 1972ನೇ ಇಸವಿಯಲ್ಲಿ ಬೆಂಗಳೂರಿನ ಬಸವ ಮಂಟಪ ಕಟ್ಟುವಾಗ ತೆಗೆದಂಥವುಗಳು. ಆ ಮೂರು ಭಾವಚಿತ್ರದಲ್ಲಿ ಪೂಜ್ಯ ಮಾತಾಜಿಯವರು ತಲೆಯ ಮೇಲೆ ಸೆರಗನ್ನು ಹೊದ್ದು ಸಿಮೆಂಟಿನ ಬುಟ್ಟಿಯನ್ನು ಹೊತ್ತಿದ್ದಾರೆ. ಮತ್ತೊಂದು ಭಾವಚಿತ್ರದಲ್ಲಿ ಪೂಜ್ಯ ಅಪ್ಪಾಜಿಯವರು ಕಾಂಕ್ರೀಟನ್ನು ಬುಟ್ಟಿಯಲ್ಲಿ ತುಂಬುತ್ತಿದ್ದಾರೆ. ನಾವು ಇಂದು ಬೆಂಗಳೂರಿನಲ್ಲಿ ಯಾವ ಕಟ್ಟಡದಲ್ಲಿ ಕುಳಿತು, ಪ್ರಾರ್ಥನೆ ಮಾಡುತ್ತಿದ್ದೇವೆಯೋ ಆ ಕಟ್ಟಡ ಸಾಮಾನ್ಯವಾದುದಲ್ಲ. ಅದರಲ್ಲಿ ಪೂಜ್ಯ ಅಪ್ಪಾಜಿ ಮತ್ತು ಪೂಜ್ಯ ಮಾತಾಜಿ ಬೆವರಿನ ಹನಿಗಳು ಸೇರಿಕೊಂಡಿವೆ. ಅವರ ದಿವ್ಯ ಶರೀರದ ಪರಿಶ್ರಮದಿಂದ ಈ ಬಸವ ಮಂಟಪ ನಿರ್ಮಾಣವಾಗಿದೆ. ಬಸವ ಮಂಟಪ ಕಟ್ಟುವಾಗ ಮಾತಾಜಿಯವರು ಕಲ್ಲು, ಇಟ್ಟಿಗೆ ಕಾಂಕ್ರಿಟನ್ನು ತಲೆಯ ಮೇಲೆ ಹೊತ್ತಿದ್ದಾರೆ ಎಂದು ಅರಿತಾಗ ನನ್ನ ಶರೀರದಲ್ಲಿ ಕಂಪನವಾಯಿತು. ಈ ಚಿತ್ರಗಳನ್ನು ನೋಡಿದಾಗ
ಆಳಾಗ ಬಲ್ಲವನು ಆಳುವನು ಅರಸಾಗಿ|
ಆಳಾಗಿ ಬಾಳಲರಿಯದವನು | ಕಡೆಯಲ್ಲಿ
ಹಾಳಾಗಿ ಹೋಹ ಸರ್ವಜ್ಞ||
ಎನ್ನುವ ಸರ್ವಜ್ಞನ ವಾಣಿಗೆ ಪ್ರತ್ಯಕ್ಷ ಸಾಕ್ಷಿ ಇದ್ದಂತೆ ಇದೆಯಲ್ಲವೇ?
ಅಂದು ಲಿಂಗಾಯತ ಧರ್ಮದ ಇತಿಹಾಸದಲ್ಲಿ ಮೊಟ್ಟ ಮೊದಲ ಬಸವ ಮಂಟಪ ಬೆಂಗಳೂರಿನಲ್ಲಿ ಕಟ್ಟುವಾಗ ಸ್ವತಃ ಪೂಜ್ಯ ಮಾತಾಜಿಯವರು, ಅಪ್ಪಾಜಿಯವರು, ಆಳಿನಂತೆ ಕಟ್ಟಡ ಕಟ್ಟಲಿಕ್ಕೆ ಸಿಮೆಂಟು , ಇಟ್ಟಿಗೆ, ಮಣ್ಣು, ಕಲ್ಲು, ನೀರುಗಳನ್ನು ತಲೆಯ ಮೇಲೆ ಹೊತ್ತು ಕೆಲಸ ಮಾಡಿದ್ದಾರೆ. ಪಕ್ಕದಲ್ಲಿದ್ದ ಬಾಡಿಗೆ ಮನೆಯಲ್ಲಿ ಉಳಿದು ಕಟ್ಟಡ ಕಟ್ಟಲಿಕ್ಕಾಗಿ ಹಗಲೆಲ್ಲಾ ದುಡಿದು ಸಾಯಂಕಾಲ ಪ್ರವಚನ ಮಾಡಿದುದರಿಂದ ಇಂದು ನಮ್ಮಂಥ ಅಸಂಖ್ಯಾತ ಶರಣರ ಹೃದಯ ಸಿಂಹಾಸನದ ಮೇಲೆ ರಾರಾಜಿಸುವ ಅರಸಿಯಾಗಿದ್ದಾರೆ ಪೂಜ್ಯ ಮಾತಾಜಿಯವರು.
ಪೂಜ್ಯ ಮಾತಾಜಿಯವರ ತಾಯಿ ತಂದೆಯರಾದ ಶರಣೆ ಗಂಗಮ್ಮ ತಾಯಿ, ಮತ್ತು ಶರಣ ಡಾ. ಬಸಪ್ಪನವರು ಬೆಂಗಳೂರಿನ ಬಸವ ಮಂಟಪ ನಿವೇಶನದ ದಾಸೋಹಿಗಳು. ಆಗರ್ಭ ಶ್ರೀಮಂತ ಮನೆತನದವರು ಪೂಜ್ಯ ಮಾತಾಜಿಯವರು. ಅವರ ತಂದೆಯವರಾದ ಲಿಂ. ಡಾ. ಬಸಪ್ಪನವರು ಈ ಬಸವ ಮಂಟಪದ ನಿವೇಶನದಲ್ಲಿ ನರ್ಸಿಂಗ್ ಹೋಮ್ (ಆಸ್ಪತ್ರೆ) ಕಟ್ಟಿಸಬೇಕು, ತಮ್ಮ ಮಗಳನ್ನು ವೈದ್ಯರನ್ನಾಗಿ ಮಾಡಿ ಈ ನರ್ಸಿಂಗ್ ಹೋಮ್ ಅವರಿಗೆ ವಹಿಸಿಕೊಡಬೇಕು ಎನ್ನುವ ಸಂಕಲ್ಪದಿಂದ ಖರೀದಿಸಿದ್ದರು. ಅವರ ಸಂಕಲ್ಪದಂತೆ ಆ ನಿವೇಶನದಲ್ಲಿ ಆಸ್ಪತ್ರೆಯಾಗಲಿಲ್ಲ, ಅವರ ಮಗಳು ವೈದ್ಯರಾಗಲಿಲ್ಲ. ಆದರೇನಂತೆ? ಅದಕ್ಕೂ ಮಿಗಿಲಾದ ಭವರೋಗ ವೈದ್ಯರಾದರು. ಜೀವನದಲ್ಲಿ ನೊಂದವರ ಬೆಂದವರ ಅನೇಕ ಜೀವಗಳನ್ನು ಉಳಿಸಿದ್ದಾರೆ, ಆತ್ಮ ಹತ್ಯೆ ಮಾಡಿಕೊಳ್ಳಬೇಕು ಎಂದು ಮನೆಯಲ್ಲಿ ವಿಷ ತಂದಿಟ್ಟು ಒಂದೇ ಒಂದು ಪ್ರವಚನ ಕೇಳಿ ಸಾಯೋಣ ಎಂದು ಬಂದವರು ಪ್ರವಚನ ಕೇಳಿ, ಹೊಸ ಮನುಷ್ಯರಾಗಿ ಪುನರ್ಜನ್ಮ ಪಡೆದಂತೆ ಇಂದು ಅನೇಕರು ಜೀವನದಲ್ಲಿ ಮತ್ತೆ ಎದ್ದು ನಿಂತ ಅನೇಕ ಘಟನೆಗಳಿವೆ.
ಇಲ್ಲಿ ನರ್ಸಿಂಗ್ ಹೋಮ್ ಆಗುವ ಬದಲಿಗೆ, ಬಸವ ಮಂಟಪವಾಯಿತು. ವಿಶ್ವ ಕಲ್ಯಾಣ ಮಿಷನ್ ಎನ್ನುವ ಸಂಸ್ಥೆಯಾಯಿತು. ಇದರ ಮೂಲಕ ಅನೇಕ ಗ್ರಂಥಗಳು ಎನ್ನುವ ಔಷಧಿಗಳು ಜನಮನಕ್ಕೆ ದೊರೆತು, ಅಂತಃಸತ್ವವನ್ನು ಗಳಿಸಿಕೊಂಡು ಮತ್ತೆ ಲಿಂಗಾಯತ ಧರ್ಮ ತಲೆ ಎತ್ತಿ ನಿಲ್ಲಲು ಸಾಧ್ಯವಾಯಿತು.
ಪೂಜ್ಯ ಮಾತಾಜಿಯವರ ತಂದೆಯವರಾದ ಶರಣ. ಲಿಂ. ಡಾ. ಬಸಪ್ಪನವರ ಸಂಕಲ್ಪವೂ ಹುಸಿಯಾಗಲಿಲ್ಲ; ಅವರು ಕಲ್ಪಿಸಿ ಕೊಂಡಿರುವುದಕ್ಕಿಂತ ಹೆಚ್ಚಿನ ಜನಸೇವೆ ಬಸವ ಮಂಟಪದಿಂದ ಆಗಿದೆ ಎನ್ನುವುದರಲ್ಲಿ ಸಂದೇಹವೇನಿಲ್ಲ. ಆದರೆ ಅವರ ನಿಜ ಸಂಕಲ್ಪದಂತೆ ಬಸವ ಮಂಟಪದ ಪಕ್ಕದಲ್ಲಿಯೇ ಇಂದು ಸಿಟಿ ಆಸ್ಪತ್ರೆ ಎನ್ನುವ ಬೃಹತ್ತಾದ ಆಸ್ಪತ್ರೆಯಾಗಿರುವುದು, ಮಹಾತ್ಮರ ಸಂಕಲ್ಪಗಳು ಹುಸಿಯಾಗುವುದಿಲ್ಲ ಎನ್ನುವುದಕ್ಕೆ ಜೀವಂತ ಉದಾಹರಣೆ ಆಗಿದೆ!
ಸಚ್ಚಿದಾನಂದ ಸ್ವರೂಪವಾದ, ನಿತ್ಯ ನಿರಂಜನ ಪರಂಜ್ಯೋತಿ, ನಿತ್ಯ ನಿಜವನ್ನೊಳಕೊಂಡ, ಅರಿವಿನ ಬೆಳಗನುಟ್ಟು ನಿಂದ ನಿರಂಜನ ಜಂಗಮ ಪೂಜ್ಯ ಮಾತಾಜಿಯವರ ಹುಟ್ಟುಹಬ್ಬ ಪ್ರತಿ ವರ್ಷ ಮಾರ್ಚ 13ರಂದು ಬಂರುತ್ತದೆ.
ನಮ್ಮ ಅನುಭಾವದ ಗಮ್ಯ, ನಮ್ಮ ಅರುಹಿನ ವಿಶ್ರಾಮ, ನಮ್ಮ ಭಾವದ ಬಯಕೆ, ನಮ್ಮ ನಿಜದ ನಿಲುವಾದ ಪೂಜ್ಯ ಮಾತಾಜಿಯವರು, ತ್ಯಾಗಾಂಗದ ಮೇಲೆ ನಿಂದು, ಭೋಗಾಂಗದ ಮೇಲೇರಿ ಯೋಗಾಂಗದ ಮೇಲೆ ಸ್ಥಿರಗೊಂಡು, ಕೋಟಿ ಜನರ ಮುಕ್ತಿಗಾಗಿ ತಾನೆ ಆದಿ ಶಕ್ತಿಯಾಗಿ ಬಾಳಿದ್ದರು.
*ಭವ ಭವದಲ್ಲಿ ಭಕ್ತನಾದರೆ ಆ ಭವವೇ ಲೇಸು ಕಂಡಯ್ಯ.
ಎಂದೆಂದೂ ನಾನಿದನೇ ಬಯಸುವೆ ತಂದೆ ಕರುಣಿಸಯ್ಯ ಲಿಂಗದೇವಾ.*
ಎನ್ನುವ ಗುರು ಬಸವಣ್ಣನವರ ವಾಣಿಯಂತೆ ಮಾತಾಜಿಯವರು ಅನೇಕ ಬಾರಿ ತಮ್ಮ ಪ್ರವಚನಗಳಲ್ಲಿ *"ನನಗೆ ಮುಕ್ತಿ ಬೇಡ ಆರಂಭದಲ್ಲಿ ಮುಕ್ತಿಯ ಆಸೆಯಿಂದ ಅಧ್ಯಾತ್ಮ ಜೀವನಕ್ಕೆ ಬಂದರೂ ಬಸವ ತತ್ವವನ್ನು ಅಧ್ಯಯನ ಮಾಡಿದ ಮೇಲೆ ಮುಕ್ತಿ ಸಪ್ಪೆ ಅನಿಸ್ತಿದೆ"* ಎಂದು ಅನೇಕ ಬಾರಿ ಹೇಳುತ್ತದ್ದರು. "ಮತ್ತೆ ಮತ್ತೆ ನನಗೆ ಜನ್ಮ ಕೊಟ್ಟು ನಿನ್ನ ಸೇವೆಯನ್ನು ಮಾಡಿಸಿಕೊ" ಎಂದು ಗುರು ಬಸವಣ್ಣನವರಲ್ಲಿ ಮೊರೆಯಿಡುತ್ತಿದ್ದರು.
ಅವರು ತಮ್ಮ ಜೀವನದುದ್ದಕ್ಕೂ ಹೋರಾಟವನ್ನೇ ಮಾಡಿಕೊಂಡು ಬಂದರು. ಜೀವನದ ಕೊನೆ ಕ್ಷಣದವರಿಗೂ ಸಾವಿನೊಡನೆ ಹೋರಾಡಿದರು. ಮಾಡಿರುವ ಕೆಲಸ ಅಲ್ಪ ಮಾಡಬೇಕಾದುದು ಇನ್ನು ಬಹಾಳಷ್ಟಿದೆ ಎಂದು ತಮ್ಮ ಪ್ರತಿ ಹುಟ್ಟು ಹಬ್ಬದಂದು ಹೇಳುತ್ತಿದ್ದರು. ದೇಹ ತುಂಬಾ ದಣಿವುಗೊಂಡು ಮುಪ್ಪಾಗಿತ್ತು. ಹೀಗಾಗಿ ಆತ್ಮ ಚೈತನ್ಯ ಹಾರಿ ಹೋಯಿತು. ಅವರ ಹಂಬಲದಂತೆ ಖಂಡಿತ ಅವರಿಗೆ ಮರು ಜನ್ಮ ದೊರೆತು ಮತ್ತೆ ಗುರು ಬಸವಣ್ಣನವರ ಸೇವೆ ಮಾಡುತ್ತಾರೆ.
ಲಿಂಗಾಯತ ಧರ್ಮದಲ್ಲಿ ಸಾವಿಗೆ ಯಾರು ಭಯ ಪಡುವುದಿಲ್ಲ. ಸಾವೆಂದರೆ ಸೂತಕವೂ ಅಲ್ಲ ದುಃಖದ ಸನ್ನಿವೇಶವೂ ಅಲ್ಲ. ಅದು ಜೀವನದ ಕೊನೆಯ ಸಂಭ್ರಮ. ಆದರೆ ಅಂದು ಪರಮ ಪೂಜ್ಯ ಲಿಂಗಾನಂದ ಗುರುದೇವರ ಲಿಂಗೈಕ್ಯ ಮತ್ತು ಮಾತಾಜಿಯವರ ಲಿಂಗೈಕ್ಯ ಮಾತ್ರ ನಮಗೆ ಸಂಭ್ರಮ ಅಂತ ಅನಿಸ್ತಾನೆ ಇಲ್ಲ. ಅಂದು ಲಿಂಗಾನಂದ ಗುರುದೇವರು ನಗುನಗುತ್ತ ಸಂಭ್ರಮದಿಂದಲೇ ಲಿಂಗೈಕ್ಯರಾದರು ಅದರೆ ನಮಗೆ ಇಂದಿಗೂ ಆ ದಿನ ಸಂಭ್ರಮದ ದಿನ ಅಂತ ಅನಿಸಲೇ ಇಲ್ಲ. ಸ್ವತಃ ಮಾತಾಜಿಯವರಿಗೂ ಲಿಂಗೈಕ್ಯ ಆಗಲಿಕ್ಕೆ ಇಷ್ಟ ಇರಲಿಲ್ಲ ಅದಕ್ಕೆ ಅವರು ೨ ವರ್ಷದಿಂದ ಸಾವಿನೊಂದಿಗೆ ಸೆಣಸುತ್ತಲೇ ಬಂದಿದ್ದಾರೆ. ಆದರೆ ಸಾವಿನ ಶಕ್ತಿ ಹಿರಿದಾಗಿ ಅವರ ಶಕ್ತಿ ಶೂನ್ಯವಾಗಿ ಶೂನ್ಯದಲ್ಲಿಯೇ ಬಯಲಾಗಿದ್ದಾರೆ.
ಪೂಜ್ಯರ 73ವರ್ಷಗಳ ಜೀವನದಲ್ಲಿ 54ವರ್ಷಗಳು ಧರ್ಮಕ್ಕಾಗಿ ಸವೆದಿವೆ. ತಮ್ಮ 19ನೆಯ ವಯಸ್ಸಿನಲ್ಲಿಯೇ ಜಂಗಮ ದೀಕ್ಷೆ ಪಡೆದ ಮಾತಾಜಿಯವರ ಒಂದೊಂದು ಸಾಧನೆಯೂ ಲಿಂಗಾಯತ ಧರ್ಮದ ಪುನರುತ್ಥಾನದಲ್ಲಿ ಮೈಲಿಗಲ್ಲಾಗಿ ನಿಲ್ಲುತ್ತದೆ. ಅವರು ಬರೆದ ಒಂದೊಂದು ಗ್ರಂಥವು ಲಿಂಗಾಯತ ಧರ್ಮದ ಪುನರುತ್ಥಾನದಲ್ಲಿ ದಾರಿ ದೀಪಗಳಾಗುತ್ತವೆ.
ಪೂಜ್ಯ ಮಾತಾಜಿಯವರು ಸಾಮಾನ್ಯರಲ್ಲ, ಅವರು ಮಹಾತ್ಮರು. ಅವರನ್ನು ಮಹಾತ್ಮ ಬುದ್ಧರೊಂದಿಗೆ ಹೋಲಿಸಬಹುದು. ಬುದ್ಧ , ರಾಜಕುಮಾರ ಸಿದ್ಧಾರ್ಥನಾಗಿದ್ದಾಗ ಕೇವಲ ಒಬ್ಬನೇ ರೋಗಿ, ಒಬ್ಬನೇ ಮುದುಕ, ಒಂದೇ ಶವವನ್ನು ನೋಡಿದ. ಜೀವನ ನಶ್ವರವೆಂದು ತಿಳಿದು, ಸತ್ಯದ ಮಾರ್ಗ ಕಂಡುಕೊಳ್ಳಲಿಕ್ಕೆ ಅರಮನೆಯನ್ನು ತೊರೆದ. ತಪಸ್ಸು ಮಾಡಿ ಪರಮಾತ್ಮನ ಸಾಕ್ಷಾತ್ಕಾರ ಪಡೆದು ಬುದ್ಧನಾದ. ನಾವು ದಿನ ನಿತ್ಯವೂ ನೂರಾರು ರೋಗಿಗಳನ್ನು ಸಾವಿರಾರು ಮುದುಕರನ್ನು ಹಲವಾರು ಶವಗಳನ್ನು ನೋಡಿದರೂ, ನಮ್ಮಲ್ಲಿ ಬದಲಾವಣೆ ಬರುತ್ತಿಲ್ಲ. ಅದೇ ರೀತಿ ಪೂಜ್ಯ ಮಾತಾಜಿಯವರು ಪೂಜ್ಯ ಲಿಂಗಾನಂದ ಅಪ್ಪಾಜಿಯವರ ಒಂದೇ ಒಂದು ಪ್ರವಚನ ಕೇಳಿ ಪರಿವರ್ತಿತರಾಗಿ ಇಂಥ ಅಮೂಲ್ಯ ಧರ್ಮವನ್ನು ಒಂದೇ ಪ್ರವಚನದಿಂದ ಅರ್ಥ ಮಾಡಿಕೊಂಡು ತಮ್ಮ ಜೀವನವನ್ನು ಬಸವ ತತ್ವಕ್ಕಾಗಿ ಮುಡುಪಾಗಿಟ್ಟರು. ಪೂಜ್ಯ ಮಾತಾಜಿಯವರು ಯಾವ ರಾಜಕುಮಾರಿಗಿಂತಲೂ ಕಡಿಮೆ ಇರಲಿಲ್ಲ, ಅಗರ್ಭ ಶ್ರೀಮಂತ ಮನೆತನದವರು, ನೂರಾರು ಎಕರೆ ತೋಟ,ಗದ್ದೆ, ಅವರೇ ಹೇಳುವಂತೆ, ಅವರು ಕಾಲೇಜು ಓದುವಾಗ ಅವರ ಮೈಮೇಲೆ 350 ಗ್ರಾಂಗಿಂತ ಹೆಚ್ಚು ಬಂಗಾರವಿತ್ತಂತೆ, ಪ್ರವಚನ ಕೇಳಿದ ನಂತರ ಸರಳ ಜೀವನಕ್ಕೆ ಒಲಿದು, ನಮ್ಮೆಲ್ಲರ ಗುರು, ಬಸವ ಧರ್ಮ ಪೀಠದ ಮಹಾಜಗದ್ಗುರುವಾಗಿ ನಮ್ಮನ್ನು ಉದ್ಧರಿಸಿದ್ದಾರೆ.
ಮಾತಾಜಿಯವರಿಗಿಂತ ಮೊದಲು ಅನೇಕರು ಅನೇಕ ಸಲ ಅಪ್ಪಾಜಿಯವರ ಪ್ರವಚನ ಕೇಳಿದರೂ ಅವರಲ್ಲಿ ವೈರಾಗ್ಯ ಬರಲಿಲ್ಲ. ನಾವು ಇಂದು ಮಾತಾಜಿಯವರ ನೂರಾರು ಪ್ರವಚನ ಕೇಳಿದ ಮೇಲೂ, ನಮ್ಮಲ್ಲಿ ಇನ್ನೂ ಅವರಷ್ಟು ಕಳಕಳಿ, ತ್ಯಾಗ ಮನೋಭಾವನೆ ಬರುತ್ತಿಲ್ಲ! ಇದೇ ಮಹಾತ್ಮರಿಗೂ ಸಾಮಾನ್ಯರಿಗೂ ಇರುವ ವ್ಯತ್ಯಾಸ.
ಈ ನಿಸರ್ಗದಲ್ಲಿ, ಲಿಂಗದೇವನ ರಾಜತೇಜದಲ್ಲಿ ಒಂದು ನಿಯಮವಿದೆ. ಈ ಲೋಕದ ಉದ್ಧಾರಕ್ಕಾಗಿ ಮಹಾತ್ಮರು ಲಿಂಗದೇವನ ವಿಶೇಷ ಕಾರುಣ್ಯವನ್ನು ಹೊತ್ತು ಪೂರ್ಣಾವತಾರಿಗಳಾಗಿ ಮತ್ರ್ಯಲೋಕದಲ್ಲಿ ಹುಟ್ಟುತ್ತಾರೆ. ಆ ಮಹಾತ್ಮರು ಬಂದ ಮಣಿಹವನ್ನು ಪೂರೈಸಲು ಇನ್ನು ಅನೇಕರು ಅಂಶಾವತಾರಿಗಳಾಗಿ ಹುಟ್ಟಿ ಬರುತ್ತಾರೆ. 12ನೆಯ ಶತಮಾನದಲ್ಲಿ ಗುರುಬಸವಣ್ಣನವರು ದೇವನ ಕರುಣೆಯನ್ನು ಧರಿಸಿಕೊಂಡು ಪೂರ್ಣಾವತಾರಿಗಳಾಗಿ ಇಳೆಗೆ ಬಂದರು. ಅವರು ಬಂದ ಬಳಲಿಕೆಯ ಕಳೆಯಲು ಚನ್ನಬಸವಣ್ಣನವರು, ಅಲ್ಲಮ ಪ್ರಭುದೇವರು, ಅಕ್ಕಮಹಾದೇವಿ, ಮಡಿವಾಳ ಮಾಚಿದೇವರು ಬಂದು ಗುರುಬಸವಣ್ಣನವರು ಕೈಗೊಂಡ ಕಾರ್ಯದಲ್ಲಿ ಹೆಗಲುಕೊಟ್ಟು ಆ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದ್ದನ್ನು ಕಾಣುತ್ತೇವೆ.
ಅದೇ ರೀತಿ ಪೂಜ್ಯ ಅಪ್ಪಾಜಿಯವರು ಗುರುಬಸವಣ್ಣನವರಿಂದ ಅನುಗ್ರಹಗೊಂಡು, ಬಸವ ತತ್ವದ, ಲಿಂಗಾಯತ ಧರ್ಮದ ಪುನರುತ್ಥಾನ ಕಾರ್ಯ ಕೈಗೊಂಡಾಗ ಅಕ್ಕಮಹಾದೇವಿ ತಾಯಿಯವರ ಅನುಗ್ರಹ ಪಡೆದು ಪೂಜ್ಯ ಮಾತಾಜಿಯವರು, ಅಪ್ಪಾಜಿಯವರು ಬಂದ ಕಾರ್ಯಕ್ಕೆ ನೆರವಾದರು. ಅವರ ಬಳಲಿಕೆಯನ್ನು ತೊಡೆದು ಹಾಕಿದರು. ಇದನ್ನು ನೋಡಿದಾಗ ಅಪ್ಪಾಜಿಯವರು ಅವತಾರಿಯಾಗಿ ಬಂದು ಕಾರ್ಯ ಮಾಡುತ್ತಿರುವಾಗ ಅಂಶಾವತಾರಿಗಳಾಗಿ ಪೂಜ್ಯ ಶ್ರೀ ಮಾತೆ ಮಹಾದೇವಿ ಮಾತಾಜಿ, ಮಾತಾಜಿ ಬಂದು ಈ ಕಾರ್ಯದಲ್ಲಿ ಕೈಗೂಡಿಸಿರುವುದನ್ನು ನೋಡಿದಾಗ ಪೂಜ್ಯ ಮಾತಾಜಿಯವರು ಖಂಡಿತವಾಗಿಯೂ ಆದಿ ಶರಣರ ಸಂಕಲ್ಪದಂತೆಯೇ ಕಾರ್ಯ ನಿರ್ವಹಿಸಿದ್ದಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
ಲಿಂ. ಮಾತಾಜಿಯವರು ನೊಂದವರ ನಂದಾದೀಪ, ಬಡವರ ಬಂಧು,ಶೋಷಿತರ ಸಂಜೀವಿನಿ, ಸ್ತ್ರೀಕುಲದ ಭಾಗ್ಯದೇವತೆ, ಆಳವಾದ ಅಧ್ಯಯನ ಮಾಡಿದ ವಿದ್ವಾಂಸರು ಮತ್ತು ವಿದ್ವಜ್ಜನ ಪ್ರಶಂಸಿತರು, ಅಪೂರ್ವ ವಾಗ್ಮಿಗಳು, ಕ್ರಾಂತಿಕಾರಿ ಬರವಣಿಗೆಯುಳ್ಳ ಲೇಖಕಿ, ನಡೆವ ಗ್ರಂಥಾಲಯ, ನುಡಿವ ಬಸವ ಪ್ರಕಾಶ, ಶಾರೀರಿಕ ತಪ, ವಾಙ್ಮಯ ತಪ ಮತ್ತು ಮಾನಸಿಕ ತಪವೆಂಬ ಮೂರು ಬಗೆಯ ತಪಗೈದ ಉನ್ನತ ತಪಸ್ವಿಗಳು ಸಾಹಿತ್ಯ ಗಂಗೋತ್ರಿ, ವಚನ ಸಾಹಿತ್ಯ ವಿಶಾರದೆ, ಧರ್ಮಕ್ರಾಂತಿಯ ದಿವ್ಯಜ್ಯೋತಿ, ಅಭಿನವ ಅಕ್ಕಮಹಾದೇವಿ, ಪ್ರಥಮ ಮಹಿಳಾ ಜಗದ್ಗುರು ಬಂಗಾರ ಕಿರೀಟ ಬಯಸದ ಜನಪ್ರಿಯತೆಯ ಕಿರೀಟ ಧಾರಿಣಿ, ಚಿನ್ಮೂಲಾದ್ರಿಯ ಚಿತ್ಕಳೆ, ಎಲ್ಲಕ್ಕೂ ಮಿಗಿಲಾಗಿ ಲಿಂಗಾಯತ ಧರ್ಮ ಪುನರುತ್ಥಾರಕರು ಮತ್ತು ವಿಶ್ವ ಧರ್ಮ ಪ್ರವಚನಕಾರರ ನಿರ್ಮಾಪಕರು.
ಇಂಥಹ ಮಹಾಗುರು ಮಾತಾಜಿಯವರು 73 ವರ್ಷ ಪೂರೈಸಿ74ನೇ ವರ್ಷಕ್ಕೆ ಪಾದಾರ್ಪಣೆ ಮಾಡಿ ಒಂದು ದಿನವೂ ಉಳಿಯಲಿಲ್ಲ. ತಮ್ಮ ಪ್ರವಚನದಲ್ಲಿ Date of Birth ಯಾವಾಗಲೂ Date of Deathನ್ನು ತನ್ನ ಹಿಂದೆಯೇ ಕಟ್ಟಿಕೊಂಡು ಬರುತ್ತದೆ ಎಂದು ಯಾವಾಗಲೂ ಹೇಳುತ್ತಿದ್ದರು. ಅದೇ ರೀತಿ 1946ರ ಮಾರ್ಚ 13ರಂದು ಜನಿಸಿ 2019ರ ಮಾರ್ಚ 14ರಂದು ಲಿಂಗೈಕ್ಯರಾಗಿರುವುದು ಒಂದು ವೈಶಿಷ್ಟ್ಯವೇ ಸರಿ.
ಒಂದು ಕಡೆ ಸಾವು ಬಂದರೆ ಅದನ್ನು ಸ್ವಾಗತಿಸಲಿಕ್ಕೆ ಮೊದಲೇ ಗದ್ದುಗೆ (ಸಮಾಧಿ) ಸಿದ್ಧಮಾಡಿಕೊಂಡು, ಇನ್ನೊಂದುಕಡೆ ಗುರು ಬಸವಣ್ಣನವರ ತತ್ವ ಪ್ರಚಾರಕ್ಕಾಗಿ, ಲಿಂಗಾಯತ ಧರ್ಮಕ್ಕಾಗಿ ಸಾವಿನೊಡನೆ ಯುದ್ಧ ಮಾಡಿದರು ಮಾತಾಜಿ.
ಇಂದು ಇಂಥಹ ಮಹಾ ಗುರು ಮಾತಾಜಿಯವರ 76ನೇ ಜನ್ಮದಿನ ನಾಳೆ ಅವರ ಮೂರನೆಯ ಲಿಂಗೈಕ್ಯ ಸಂಸ್ಮರಣೆ. ಇಂಥ ಗುರುವನ್ನು ಜಗತ್ತಿಗೆ ನೀಡಿದ ಲಿಂಗದೇವನಿಗೆ ಶರಣೆಂದು ಮಾತಾಜಿಯವರನ್ನು ಸ್ಮರಿಸೋಣ.
-Sachidanand Prabhu Chatnalli
9888894454
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ