ವಚನಗಳಲ್ಲಿ ಭಗವದ್ಗೀತೆ ನಿರಾಕರಣೆ
*ವಚನಗಳಲ್ಲಿ ಭಗವದ್ಗೀತೆ ನಿರಾಕರಣೆ*
________________________________________
ನಮ್ಮ ಶರಣರು ಯಾವುದೆ ವಿಷಯವನ್ನು ಅಷ್ಟೊಂದು ಸುಲಭವಾಗಿ ಒಪ್ಪುತ್ತಿರಲಿಲ್ಲ. ಆ ವಿಷಯಗಳನ್ನು ತಮ್ಮ ಅರಿವೆಂಬ ಒರೆಗಲ್ಲಿಗೆ ಹಚ್ಚಿ ನಂತರ ಒಪ್ಪುತ್ತಿದ್ದರು. ಇದರಂತೆ ಒಪ್ಪದೆ ಇರುವ ಅನೇಕ ವಿಷಯಗಳು ಇವೆ, ಈ ವೇದ ಶಾಸ್ತ್ರ ಪುರಾಣ ಆಗಮ ತರ್ಕ ಇತ್ಯಾದಿ. ಅವೆಲ್ಲವುಗಳಲ್ಲಿ ಈ ಭಗವದ್ಗೀತೆಯೂ ಸಹ ಒಂದು, ಈ ಭಗವದ್ಗೀತೆಯನ್ನ ಅಭ್ಯಾಸಿಸಿದ ಶರಣರು ಈ ಗೀತೆಯು ಮನುಷ್ಯ ಮನುಷ್ಯರಲ್ಲಿ ಒಡಕನ್ನು ಉಂಟು ಮಾಡುತ್ತದೆ, ಪ್ರೀತಿ ಸಮತೆಯನ್ನ ಬೆಸೆಯುವುದಿಲ್ಲ, ಇದೆಲ್ಲ ಜಾತಿ ಧ್ವೇಷ ಅಸಮಾನತೆಯಿಂದ ಕೂಡಿದೆಯೆಂದು ಅದನ್ನು ತಳ್ಳಿ ಹಾಕಿದ್ದಾರೆ. ಆ ರೀತಿ ತಳ್ಳಿ ಹಾಕಿದ್ದಾರೆ ಎನ್ನುವುದಕ್ಕೆ ಬಸವಣ್ಣನವರ ವಚನಗಳೆ ನಮಗಿಲ್ಲಿ ಸಾಕ್ಷಿಪ್ರಜ್ಞೆಯಾಗಿವೆ.
*ಗೀತವ ಬಲ್ಲಾತ ಜಾಣನಲ್ಲ, ಮಾತ ಬಲ್ಲಾತ ಜಾಣನಲ್ಲ. ಜಾಣನು ಜಾಣನು, ಆತ ಜಾಣನು ಲಿಂಗವ ನೆರೆ ನಂಬಿದಾತ ಜಾಣನು, ಜಂಗಮಕ್ಕೆ ಸವೆಸುವಾತ ಆತ ಜಾಣನು, ಆತ ಜವನ ಬಾಯಲು ಬಾಲವ ಕೊಯ್ದು ಹೋದಾತ ಆತ ಜಾಣನು, ನಮ್ಮ ಕೂಡಲಸಂಗನ ಶರಣರನು*
ಭಗವದ್ಗೀತೆಯ ತಿಳಿದುಕೊಂಡವನು ಜ್ಞಾನಿ ಅಲ್ಲ, ಆ ಭಗವದ್ಗೀತೆಯ ಬಗ್ಗೆ ಮಾತನಾಡುವವನೂ ಕೂಡ ಜ್ಞಾನಿಯಲ್ಲ. ಜ್ಞಾನಿಯು ಜ್ಞಾನಿಯು, ಆತನೆ ಜ್ಞಾನಿಯು ತನ್ನೊಳಗೆ ತನ್ನನ್ನೆ ಗುರುತಿಸಿಕೊಂಡು ತನ್ನಲ್ಲಿ ಆತ್ಮವಿಶ್ವಾಸವಿಟ್ಟವನೆ ನಿಜವಾದ ಜ್ಞಾನಿಯು, ಜಂಗಮಕ್ಕೆ ಅಂದರೆ ಸಮಾಜಕ್ಕೆ ಹಸಿದ ಜೀವಕ್ಕೆ ಸವೆದುಕೊಳ್ಳುವ ಆತನೆ ಜ್ಞಾನಿಯು, ಆತ ಯಮನ ಬಾಯಿಯಲ್ಲೂ ಬಾಲವನ್ನ ಕತ್ತರಿಸಿ ಹೋದಾತ ಆತನೆ ಜ್ಞಾನಿಯು, ಅಂದರೆ ಭವವೆಂಬ ಬಳ್ಳಿಯನ್ನು ಕತ್ತರಿಸಿ ಜನನ ಮರಣದಿಂದ ದೂರಾಗಿ ಮುಕ್ತಿ ಶಿಖರವ ಏರಿದ ನಮ್ಮ ಕೂಡಲಸಂಗನ ಶರಣರೆ ನಿಜವಾದ ಜ್ಞಾನಿಗಳೆಂದು ಸಾಭೀತು ಪಡೆಸಿದ್ದಾರೆ ಇಲ್ಲಿ ಬಸವಣ್ಣನವರು.
ಇದೆ ರೀತಿಯಾಗಿ ತಮ್ಮ ಇನ್ನೊಂದು ವಚನದಲ್ಲಿ ಭಗವದ್ಗೀತೆಯ ಕುರಿತು ಹೀಗೆ ಹೇಳಿದ್ದಾರೆ.
**
ಬಸವಣ್ಣನವರು ಭಗವದ್ಗೀತೆಯನ್ನ ಕುರಿತು ಹತ್ತು ಸಾವಿರ ಗೀತವನ್ನ ಹಾಡಿ ಅದರ ಅರ್ಥವನ್ನು ಹೇಳಿದರೆ ಏನು ಫಲ? ಮನದ ಬಾಗಿಲು ತೆರೆದು ಮುಟ್ಟದಿದ್ದ ಬಳಿಕ? ಎಂದು ವೈಚಾರಿಕವಾಗಿ ಪ್ರಶ್ನಿಸಿದ್ದಾರೆ. ಅಂದರೆ ನೀವು ಭಗವದ್ಗೀತೆಯ ಅರ್ಥ ಹೇಳಿದರೆ ಅದು ನಮಗೆ ಅನುಭವಕ್ಕೆ ಬರುವುದಿಲ್ಲ ಎಂಬುದು ಬಸವಣ್ಣನವರ ವಾದವಾಗಿದೆ. ಮತ್ತೆ ಮುಂದೆ ಹೋಗಿ ಕಟ್ಟಿದರೇನು ಬಿಟ್ಟರೇನು ಮನಸ್ಸು ಲಿಂಗವನ್ನ ಮುಟ್ಟದಿದ್ದ ಮೇಲೆ? ಎಂದು ಪ್ರಶ್ನಿಸಿದ್ದಾರೆ, ಅಂದರೆ ಗೀತವನ್ನ ಬರೆದು ಇಟ್ಟುಕೊಂಡರು ಅಷ್ಟೆ, ಬಿಟ್ಟರು ಅಷ್ಟೆ. ಮುಖ್ಯವಾಗಿ ನಮ್ಮ ಮನಸ್ಸು ನಮ್ಮ ಸ್ವಯಂ ಜ್ಞಾನದಲ್ಲಿಯೆ ಕೇಂದ್ರೀಕರಿಸಿಕೊಂಡು ಮುಕ್ತವಾಗಿರಬೇಕು ಎನ್ನುವುದು ಬಸವಣ್ಣನವರ ಅನುಭವದ ನುಡಿಯಾಗಿದೆ. ಮತ್ತೆ ಈ ವಚನದ ಕೊನೆಯಲ್ಲಿ ಹೇಳುತ್ತಾರೆ, ಕೇವಲ ನಿಮ್ಮ ಭಗವದ್ಗೀತೆಯ ಮಾತುಗಳ ದೊಡ್ಡದರಿಂದಲೆ ಲಿಂಗವ ಅಂದರೆ ಜ್ಞಾನವ ಕಂಡಿರುವೆನು ಎಂದರೆ ಅಂತ ಪಾಪಿಷ್ಟರನ್ನ ನಮ್ಮ ಕೂಡಲಸಂಗಮದೇವ ಮೆಚ್ಚಿಕೊಳ್ಳುವುದಿಲ್ಲ ಎಂದು ನಿಷ್ಠೂರವಾಗಿ ಹೇಳಿದ್ದಾರೆ ಬಸವಣ್ಣನವರು. ಅಂದರೆ ಇನ್ನೊಬ್ಬರ ಬೋದನೆಗಳು ನಮ್ಮನ್ನು ಅರಿಸುವಂತೆ ಇದ್ದರೆ ಚೆನ್ನ. ತಮ್ಮ ನೇರಕ್ಕೆ ಅನುಕೂಲಕ್ಕೆ ಬರೆದಿದ್ದು ಯಾರ ಮನಸ್ಸನ್ನು ಮುಕ್ತವಾಗಿ ಇಡುವುದಿಲ್ಲ ಎನ್ನುವುದು ಇವರ ಸ್ವಾನುಭವದ ನುಡಿಯಾಗಿದೆ ಇಲ್ಲಿ.
ಇದೆ ಬಸವಣ್ಣನವರು ತಮ್ಮ ಇನ್ನೊಂದು ವಚನದಲ್ಲಿ ಇದೆ ಭಗವದ್ಗೀತೆಯ ಕುರಿತು ಈ ರೀತಿ ಹೇಳಿದ್ದಾರೆ.
*ಗೀತವ ಹಾಡಿದಡೇನು, ಶಾಸ್ತ್ರ-ಪುರಾಣವ ಕೇಳಿದಡೇನು, ವೇದವೇದಾಂತವ ನೋಡಿದಡೇನು ? ಮನವೊಲಿದು ಲಿಂಗಜಂಗಮವ ಪೂಜಿಸಲರಿಯದವರು ಎಲ್ಲರಲ್ಲಿ [ಪ್ರಾ]ಜ್ಞರಾದಡೇನು ? ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ.*
ಈ ಭಗವದ್ಗೀತೆಯ ಜೊತೆಗೆ ಈ ಶಾಸ್ತ್ರ ಪುರಾಣ ವೇದಗಳನ್ನು ಕುರಿತು ವೈಚಾರಿಕವಾಗಿ ಪ್ರಶ್ನೆಗಳನ್ನ ಮಾಡುತ್ತ ಅವುಗಳನ್ನ ನಿರಾಕರಿಸಿದ್ದು ಇಲ್ಲಿ ಕಂಡು ಬರುತ್ತದೆ. ಈ ಭಗವದ್ಗೀತೆಯನ್ನ ಹಾಡಿದರೇನು, ಶಾಸ್ತ್ರ ಪುರಾಣವನ್ನ ಕೇಳಿದರೇನು, ವೇದಗಳಲ್ಲಿನ ವೇದವನ್ನು ನೋಡಿದರೇನು? ತಮ್ಮನ್ನು ತಾವೆ ಒಲಿಸಿಕೊಂಡು ತಮ್ಮಲ್ಲಿರುವ ಜ್ಞಾನವನ್ನ ಬಹಿರಂಗದಲ್ಲಿ ಆಚರಿಸದವರು ಎಲ್ಲರ ಬಾಯಲ್ಲಿ ಪ್ರಜ್ಞಾವಂತರೆಂದು ಹೊಗಳಿಸಿಕೊಂಡರೆ ಏನು ಬಂತು? ಎಂದು ಪ್ರಶ್ನಿಸುತ್ತ ನಮ್ಮ ಶಿವಭಕ್ತ ಶಿವಶರಣರ ಹಾಗೆ ಭಕ್ತಿ ಇಲ್ಲದಿದ್ದರೆ ನಮ್ಮ ಕೂಡಲಸಂಗಮದೇವ ನಿಮ್ಮನ್ನು ಸ್ವೀಕರಿಸುವುದಿಲ್ಲ ಅಂದರೆ ನೀವು ಎಷ್ಟೆ ಗ್ರಂಥಗಳನ್ನ ಓದಿಕೊಂಡು ಹೇಳಿದರು ನೀವು ಸಮಾಜದ ನೋವು ಕಷ್ಟಗಳಿಗೆ ಹಸಿವಿಗೆ ಸ್ಪಂದಿಸಿದಿದ್ದರೆ ಆ ಗ್ರಂಥಗಳ ಓದು ಭೋದನೆ ವ್ಯರ್ಥ ಎನ್ನುವಂತ ಮಾತನ್ನ ತಿಳಿಸಿದ್ದಾರೆ ಬಸವಣ್ಣನವರು. ಒಟ್ಟಾರೆ ನಮ್ಮ ಶರಣರು ಈ ಭಗವದ್ಗೀತೆಯನ್ನ ಧಿಕ್ಕರಿಸಿದ್ದಾರೆ ಎಂದೆ ಇಲ್ಲಿ ಹೇಳಬಹುದಾಗಿದೆ.
ಶ್ರೀಮತಿ ರುದ್ರಮ್ಮ ಅಮರೇಶ ಹಾಸಿನಾಳ ಗಂಗಾವತಿ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ