ಆಚರಣೆಯಲ್ಲಿ ವಿರಕ್ತ ಪೀಠಗಳ ರಾಣಿ ಜೇನಿನಂತಿದ್ದ ಬಸವ ಧರ್ಮ ಪೀಠದ ಮಾರ್ಗ ಯಾವುದು?
ಓಂ ಶ್ರೀ ಗುರು ಬಸವ ಲಿಂಗಾಯ ನಮಃ
1.ಬಸವ ಧರ್ಮದ ದಿಕ್ಸೂಚಿ ಎಂದೇ ಹೆಸರಾದ ಬಸವ ಧರ್ಮ ಪೀಠ ಎತ್ತ ಸಾಗುತ್ತಿದೆ?
2. ಆಚರಣೆಯಲ್ಲಿ ವಿರಕ್ತ ಪೀಠಗಳ ರಾಣಿ ಜೇನಿನಂತಿದ್ದ ಬಸವ ಧರ್ಮ ಪೀಠದ ಮಾರ್ಗ ಯಾವುದು?
3. ಆರು ದಶಕಗಳ ಪಯಣದಲ್ಲಿ ಬರೀ ಯಶಸ್ಸನ್ನೇ ಕಂಡ ಧರ್ಮ ಪೀಠದ ಮುಂದಿನ ಸಂಕಲ್ಪದ ಗುಟ್ಟೇನು?
4.ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಹಿತ್ಯಿಕ ಕ್ಷೇತ್ರಗಳ ಕ್ರಾಂತಿಕಾರಿಣಿಯೆಂದೇ ಹೆಸರಾದ ಪರಮ ಪೂಜ್ಯ ಲಿಂಗೈಕ್ಯ ಮಾತಾಜಿಯವರ ಸಂಕಲ್ಪಗಳಿಗೆ ಬಸವ ಧರ್ಮ ಪೀಠದಲ್ಲಿ ನೆಲೆಯಿದೆಯೇ?
5. ಇರುವುದೆಂದಾದರೆ ಶರಣ ಮೇಲಕ್ಕೆಂದು ಬಂದ ಶರಣರನ್ನು ಮಹಾದ್ವಾರದಿಂದ ಪೊಲೀಸ್ ಪಡೆಯ ಮುಖೇನ ಹಿಂದಕ್ಕೆ ಕಳುಹಿಸಿದ್ದೇಕೆ?. ಉಳವಿ ಕಾರ್ಯಕ್ರಮಕ್ಕೆ ಬಂದಂತಹ ಶರಣರನ್ನು ಬಹಿರಂಗವಾಗಿ ವೇದಿಕೆಯಿಂದಲೇ ಖಂಡನೀಯವಾಗಿ ಕೂಗಾಡಿ ಇಷ್ಟಲಿಂಗ ಪೂಜಾ ಪ್ರಾತ್ಯಕ್ಷತೆಯ ಸಮಯದಲ್ಲಿ ಹೊರ ಹಾಕಿದ್ದೇಕೆ?
6. ಶರಣ ಮೇಳದ ಗೋಪ್ಯ ವೇದಿಕೆಯಲ್ಲಿ ಜಗದ್ಗುರುವೆನಿಸಿಕೊಂಡವರು ಒಬ್ಬ ನಿಷ್ಠಾವಂತ ಶರಣೆಯ ಮೇಲೆ ಹುಚ್ಚರಂತೆ ಕೂಗಾಡಿದ್ದೇಕೆ?
7.ಪರಮ ಪೂಜ್ಯರು ನಡೆದು ಬಂದ ದಾರಿಯಲ್ಲಿ ಅವರ ಹೆಜ್ಜೆ ಗುರುತುಗಳಲ್ಲಿ ಒಂದೆಜ್ಜೆಯೂ ಕಾಣುತ್ತಿಲ್ಲವೇಕೆ?
ಉದಾ :1:ಪ್ರವಚನಗಳು ಎಲ್ಲೂ ನಡೆಯುತ್ತಿಲ್ಲ
2:ಶಿಬಿರಗಳು, ತಾತ್ವಿಕ ಕಾರ್ಯಾಚರಣೆಗಳು ನಡೆಯುತ್ತಿಲ್ಲ
3: ಸಾಹಿತ್ಯ ಮಾರಾಟ, ಸಾಹಿತ್ಯ ರಚನೆ, ಸಾಹಿತ್ಯ ಮುದ್ರಣ ಇವುಗಳ ವಿಚಾರವಾಗಿ ಯೋಚಿಸುತ್ತಿಲ್ಲವೇಕೆ?
8.ಇರುವ ಜಂಗಮ ಮೂರ್ತಿಗಳ ಲ್ಲಿ ಅನೇಕರು ಶಿಸ್ತು ಇರದೆ, ಕೋಪಕ್ಕೆ ಸುಳ್ಳಿಗೆ ಹೆಸರಾಗಿರುವುದು. ಇದಕ್ಕೆ ಪರಿಹಾರವೇ ಹುಡುಕುತ್ತಿಲ್ಲವೇಕೆ?
9.ಪೂಜೆ, ಧ್ಯಾನ, ಯೋಗದಲ್ಲಿ ಲೀನವಾಗಿ ಲಿಂಗಾಂಗ ಸಾಮರಸ್ಯ ಹೊಂದಿ ಭಕ್ತರನ್ನು ಉದ್ಧರಿಸಬೇಕಾದ ಇವರು ಮಾಡುತ್ತಿರುವುದಾದರೂ ಏನು?
10. ಪರಮ ಪೂಜ್ಯ ಮಹಾ ಮಾತಾಜಿಯವರ ಜನ್ಮ ದಾತೆಯಾದ ಪೂಜ್ಯ ಗಂಗಮ್ಮಜ್ಜಿ ಯವರನ್ನು ಆಶ್ರಮದಲ್ಲಿ ಉಳಿಸಿಕೊಳ್ಳುವ ಸಂದರ್ಭದಲ್ಲಿ ನನ್ನ ತಾಯಿ ಎನ್ನುವ ಅಭಿಮಾನದಿಂದ ಇರುವುದಾದರೆ ಇಲ್ಲಿ ಅವಕಾಶವಿಲ್ಲ ಎಂದು ಪೂಜ್ಯ ಮಾತಾಜಿಯವರು ಹೇಳಿದ್ದರು. ಒಂದೊಂದು ರೂಪಾಯಿಯನ್ನು ಯೋಚನೆ ಮಾಡಿ ಖರ್ಚು ಮಾಡುತ್ತಿದ್ದರು. ಐಷಾರಾಮಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರಲಿಲ್ಲ. ಹೀಗಿರುವಾಗ ಮಂಜುನಾಥ ಬಂಡಿ ಯವರಿಗೆ ಎರೆಡು ನಿವೇಶನಗಳನ್ನು ಕೊಟ್ಟಿದ್ದಲ್ಲದೆ, ಅವರು ಕೊಟ್ಟ 24ಲಕ್ಷ ರೂಗಳನ್ನು ವಾಪಸು ಕೊಟ್ಟಿದ್ದೀರಿ, ಇದರ ಬೆಲೆ ಮತ್ತು ಅರ್ಥವನ್ನು ತಿಳಿಸುವಿರಾ?
11. ಪರಮ ಪೂಜ್ಯರು ಲಿಂಗೈಕ್ಯರಾದಾಗಿನಿಂದ ಅವರ ಸಂಶೋಧನೆಯ ಪರಿಶ್ರಮದ ಕ್ರಾಂತಿಕಾರಿ ಫಲವಾದ ವಚನಾಂಕಿತವನ್ನು ಹಿಂದೆ ತೆಗೆದುಕೊಳ್ಳುವ ಹುನ್ನಾರ ನಡೆಸಿದ್ದು, ಯಾವ ಆತ್ಮೀಯರಲ್ಲೂ ನಿಮ್ಮ ಭಾವನೆಯನ್ನು ಹಂಚಿಕೊಳ್ಳದೆ ಸಂಶೋಧನೆ ಮತ್ತು ಅವರ ಸಂಕಲ್ಪಗಳಿಗೆ ಬದುಕ ಸವೆಸಿ ಅವರಿಗೆ ಕೀರ್ತಿ ತರಬೇಕಾದ ನೀವು ಲಿಂಗದೇವಾಂಕಿತಕ್ಕೆ ತಿಲಾಂಜಲಿಯನಿಟ್ಟಿದ್ದು ಸರಿಯೇ?
12.ಬಹುದೇವೋಪಾಸನೆಯಿಂದ ನಿರಾಕಾರ ನಿರ್ಗುಣ ಪರಮಾತ್ಮನ, ಏಕದೇವೋಪಾಸನೆಯತ್ತ ಕೊಂಡೊಯ್ಯುವ ಪ್ರಯತ್ನದಲ್ಲಿ ಮಹಾಧಿಕೃತವೆಂದೆನಿಸುವ ಲಿಂಗದೇವ ವಚನಾಂಕಿತವನ್ನು ಬಸವಣ್ಣನವರೇ ಬಳಸಿದ್ದರೆಂದು ಹೇಳಿದ್ದಲ್ಲದೇ, ವಚನಗಳಲ್ಲಿ ಲಿಂಗದೇವ ಎನ್ನುವ ಪದವಿರುವುದು ಸತ್ಯಾ. ಹೀಗಿರುವಾಗ ಲಿಂಗಾಯತ ಧರ್ಮದ ದೇವರ ಹೆಸರು ಲಿಂಗದೇವ ಎಂದು ಗುರುತಿಸಿದ್ದು ವಚನಾಂಕಿತದಲ್ಲಿ ಬಳಸದೆ ಇರಲು ಹೇಗೆ ಸಾಧ್ಯ?.
ಯಾವುದಕ್ಕೂ ಸಮಯ ಕಾಯಬೇಕಲ್ಲ, ಹಸಿ ಹಾಲಿಗೆ ಹೆಪ್ಪಾಕಿದರೆ ತುಪ್ಪ ಸಿಗದಲ್ಲವೇ?.ಹಾಲು ಕಾದು ಕೆನೆಗಟ್ಟುವ ಸಮಯದಲ್ಲಿ ತಾವು ಮಾಡಿದ್ದು ಸರಿಯೆಂದೆನಿಸುವುದೇ?, ಆತ್ಮಾವಲೋಕನ ಮಾಡಿಕೊಳ್ಳಿ.
13. ಯಾವ ಉದ್ದೇಶಕ್ಕಾಗಿ ಮಹಾ ಗುರುಗಳು ಬದುಕಿದ್ದರೋ ಅದರ ಒಂದಂಶವಾದರೂ ಆಧ್ಯಾತ್ಮಿಕ ಅಭಿವೃದ್ಧಿ, ಧಾರ್ಮಿಕ ಚಟುವಟಿಕೆಗಳು ಸಂಸ್ಥೆಯಲ್ಲಿಲ್ಲದಿರುವುದು ತಮಗೆ ಮುಜುಗರ ವಾಗುತ್ತಿಲ್ಲವೇಕೆ?
14. ಯಾವ ಉದ್ದೇಶಕ್ಕಾಗಿ ಪರಮ ಪೂಜ್ಯರುಗಳಿಂದ ಧರ್ಮ ಪೀಠಗಳು
ಅವಿರ್ಭವಿಸಿದವೋ ಆ ಉದ್ದೇಶಗಳು ಸಾಫಲ್ಯವಾಗದಿರುವುದು ಘನ ಗುರುಗಳಿಗೆ ಮಾಡಿದ ಅವಮಾನವಲ್ಲವೇ?
15. ತಾವು ಬಸವ ಧರ್ಮ ಪೀಠದ ಪೀಠಾಧ್ಯಕ್ಷರು ನಿಜ, ನಾವು ಮನೋಲ್ಲಾಸದಿಂದ ಹೃದಯ ತುಂಬಿ ಒಪ್ಪಿಕೊಳ್ಳುತ್ತೇವೆ. ಆದರೆ ಪರಮ ಪೂಜ್ಯ ಮಾತಾಜಿಯವರ ಸಾಹಿತ್ಯ ಕ್ಷೇತ್ರದ ಅಧ್ಯಕ್ಷರೇ ಅಥವಾ ಅವರ ಸಂಶೋಧನೆಯ ಪಿತಾಮಹರೇ ತಾವು, ನಿಮ್ಮ ಅಂತರಾತ್ಮವನ್ನು ಒಂದು ಸಾರಿ ಪ್ರಶ್ನಿಸಿ ನೋಡಿ.
16. ಪೂಜ್ಯ ಪೀಠಾಧ್ಯಕ್ಷರು ಮಾತಾಜಿಯವರಲ್ಲಿ ಮನವಿ : ಪೂಜ್ಯರೇ ಲಿಂಗದೇವ ಅಂಕಿತ ನಾಮವನ್ನು ಬಸವ ಧರ್ಮ ಪೀಠ ಮಾಡಿದ್ದೇ? ಅಥವಾ ಅಂಕಿತನಾಮ ಸಂಶೋಧಕರು ಪರಮ ಪೂಜ್ಯ ಮಾತಾಜಿಯವರೇ?
ಸಂಶೋಧಕರು ಪೂಜ್ಯ ಮಾತಾಜಿಯವರು ಅಂದಮೇಲೆ ತಮಗೆ ಅಂಕಿತಾನಾಮವನ್ನು ಹಿಂಪಡೆಯಲು ಯಾವ ಹಕ್ಕಿದೆ?. ಏಕೆಂದರೆ ಅಂಕಿತನಾಮದ ಸಂಶೋಧನೆ ಬಸವ ಧರ್ಮ ಪೀಠದ್ದಲ್ಲ... ಅಲ್ಲವೇ?...
17. ಪರಮ ಪೂಜ್ಯ ಮಾತಾಜಿಯವರು ಕೊಟ್ಟ ಸಾಹಿತ್ಯವಿರಲಿ ಅಥವಾ ಬಸವ ಧರ್ಮಕ್ಕೆ ಅವರು ಕೊಟ್ಟ ಕೊಡುಗೆ, ಧರ್ಮದ ಲಕ್ಷಣಗಳಿಂದ ಹಿಡಿದು ಧರ್ಮ ಪೀಠಗಳು ಸೇರಿದಂತೆ ಧರ್ಮ ಸಂಸ್ಕಾರಗಳನ್ನು ಜಗತ್ತಿಗೆ ಕೊಟ್ಟವರು ಪರಮ ಪೂಜ್ಯ ಮಾತಾಜಿಯವರಲ್ಲವೇ? ಅಥವಾ ಅದರಲ್ಲಿ ತಮ್ಮ ಕೊಡುಗೆಯೇನಾದರೂ ಇದೆಯೇ?, ಇಲ್ಲವೆಂದಮೇಲೆ ಅವರ ಪರಿಶ್ರಮದ ಸಂಶೋಧನೆಯ ಫಲ ಲಿಂಗದೇವನನ್ನು ಹಿಂಪಡೆಯಲು ತಾವು...?
18. ಗುಲ್ಬರ್ಗದಲ್ಲಿ ನಡೆದ ಲಿಂಗಾಯತ ಧರ್ಮ Rally ಯ ಸಂದರ್ಭದಲ್ಲಿ ಶರಣ M. B ಪಾಟೀಲ್ ರವರು ಮಾತಾಜಿಯವರಲ್ಲಿ ಲಿಂಗದೇವ ವಿಷಯ ಭಿನ್ನೈಸಿಕೊಂಡಾಗ ಪರಮ ಪೂಜ್ಯರು ತಮ್ಮ ಮಹಾನ್ ಸಂಶೋಧನೆಯ ಲಿಂಗದೇವ ಅಂಕಿತ ನಾಮವನ್ನು ಹಿಂಪಡೆಯದೆ ಬಸವ ವಚನ ದೀಪ್ತಿ ಮರು ಮುದ್ರಣ ಮಾಡುವುದಿಲ್ಲವೆಂದು ನೀಡಿದ ಹೇಳಿಕೆ ತಮಗೆಲ್ಲರಿಗೂ ಜಗಜ್ಜಾಹಿರಾ.... ಅಶ್ವತ್ಥಾಮಾ ಅಥಹ್ ಕುಂಜರಃ ನ್ಯಾಯದಂತೆ ಪರಮ ಪೂಜ್ಯರು ಹೇಳಿಕೆ ಕೊಟ್ಟಿದ್ದನ್ನ ತಾವೆಲ್ಲರೂ ಅಂದು ಶ್ಲ್ಯಾಘಿಸಿದವರೇ... ಆದರೆ ಇಂದು ಅವರೇ ಹೇಳಿಕೆ ಕೊಟ್ಟಿದ್ದರೆಂದು ಆ ಮಹಾ ಮೇರು ಪರ್ವತಕ್ಕೆ ಸೋಜಿಗವೆನಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೀರಿ...
19. ಪರಮ ಪೂಜ್ಯರು ಲಿಂಗೈಕ್ಯರಾದಾಗಿನಿಂದ ತಾವು ಜಂಗಮ ಮೂರ್ತಿಗಳನ್ನು ಒಂದು ಕಡೆ ಸೇರಿಸಿ ಸಾಮರಸ್ಯ ಮೂಡಿಸಲೇ ಇಲ್ಲ, ಬಸವ ಧರ್ಮಪೀಠದ ಸಂಕಲ್ಪಗಳಿಗಾಗಿ ನಾವುಗಳು ಬದುಕಬೇಕೆಂದು ತಾವು ಪ್ರೇರೇಪಿಸಲೇ ಇಲ್ಲ, ತಪ್ಪು ಒಪ್ಪುಗಳಾಗದಂತೆ ಜಾಗರೂಕತನ ವಹಿಸಿ ಎಲ್ಲ ಜಂಗಮ ಮೂರ್ತಿಗಳನ್ನು ಹಾಗೂ ಕಾರ್ಯಕರ್ತರನ್ನು ಕಾರ್ಯೋನ್ಮುಖರನ್ನಾಗಿ ಮಾಡಲಿಲ್ಲ. ಇದನ್ನೆಲ್ಲ ಗಮನಿಸಿದರೆ ತಾವು ಮೂರು ವರ್ಷದಿಂದಲೂ ಲಿಂಗದೇವ ವಚನಾಂಕಿತ ಹಿಂಪಡೆಯುವ ಹುನ್ನಾರದಲ್ಲೇ ಕಾರ್ಯನಿರತರಾಗಿದ್ದೀರೆಂದು ಅನಿಸುತ್ತದೆ..
20. ಪೂಜ್ಯ ಚನ್ನಬಸವಾನಂದ ಸ್ವಾಮೀಜಿಯವರನ್ನು ಏಕಾಏಕಿ ಯಾವುದೇ ಸೂಚನೆಯಿಲ್ಲದೆ ಕಮಿಟಿಯಿಂದ ತೆಗೆದು ಪ್ರಚಾರವನ್ನು ಕೊಟ್ಟಿರಿ. ಇದರ ಪರಿಣಾಮ ಜಗತ್ತಿಗೆ ಬುದ್ಧಿ ಹೇಳಿದ ಧರ್ಮಪೀಠ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿತ್ತು.
ಈ ಬೆಳವಣಿಗೆಗಳು ತಮ್ಮ ಮನಸ್ಸಿಗೆ ಕಸಿವಿಸಿ, ಮುಜುಗರ, ನೋವು ಏನನ್ನೂ ತಂದು ತಮ್ಮ ಮುಂದೆ ನಿಲ್ಲಿಸುತ್ತಿಲ್ಲವೇ?....
ಭಾವ ತುಂಬಿದ ಭಿನ್ನಹ : ಪೂಜ್ಯರೇ ಇತಿಹಾಸ, ಧರ್ಮ, ಯೋಗ ಮತ್ತು ಆಧ್ಯಾತ್ಮ ಇವುಗಳ ಬಗ್ಗೆ ಪ್ರಶ್ನೆ ಮಾಡಬೇಕಾದ ನಾವು ಅನಿವಾರ್ಯವಾಗಿ ಈ ಮೇಲಿನ ಪ್ರಶ್ನೆಗಳನ್ನು ಕೇಳಬೇಕಾಗಿದೆ. ತಮ್ಮ ಮನಸ್ಸಿಗೆ ಬೇಸರ ಅಥವಾ ನೋವು ತರುವ ಇಚ್ಛೆ ಬಸವ ಸಾಕ್ಷಿಯಾಗಿಯೂ ನಮಗಿಲ್ಲ.. ಪರಮ ಪೂಜ್ಯ ಅಪ್ಪಾಜಿ ಮಾತಾಜಿಯವರ ಶಿಷ್ಯರಾದ ನಮಗೆ ಇಂದಿನ ಈ ಸ್ಥಿತಿ ಅನಿವಾರ್ಯತೆಯನ್ನು ತಂದಿದೆ. ಧರ್ಮ ಪ್ರಚಾರ ಮಾಡಬೇಕಾದ ನಮ್ಮ ಸ್ವಾಮೀಜಿಗಳು ಧರ್ಮ ಪ್ರಚಾರ ಮಡುತ್ತಿಲ್ಲ. ಸಾಮೂಹಿಕ ಪೂಜೆ, ಧ್ಯಾನ, ಯೋಗ ಶಿಬಿರಗಳನ್ನು ನಡೆಸಬೇಕಾದ ಧರ್ಮಪೀಠದ ಗುರುಗಳು ಯಾರೂ ತಮ್ಮ ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿಲ್ಲ.
ನಮ್ಮ ಉದ್ದೇಶ ಇಷ್ಟೇ, ತಮ್ಮನ್ನು ಹೊರತು ಪಡಿಸಿ ಇರುವ ಎಲ್ಲಾ ಜಂಗಮ ಮುರ್ತಿಗಳು ಅರ್ಚನೆ, ಅರ್ಪಣೆ, ಅನುಭಾವದೊಂದಿಗೆ ನಿರಂತರ ಪ್ರಚಾರದಲ್ಲಿರಬೇಕು.. ಲೌಕಿಕರಿಗಿಂತ ಕೆಟ್ಟದಾಗಿ ಕೂಗಾಡಿ ಅರಚಾಡುವ ಸ್ವಾಮೀಜಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವುದು ಒಳ್ಳೆಯದೆಂದು ನಮ್ಮ ಬೇಡಿಕೆ..
ಎಲ್ಲಾ ವ್ಯವಸ್ಥೆಯನ್ನು ಸರಿಪಡಿಸುತ್ತೀರೆಂದು ನಂಬಿದ್ದೇವೆ....
ದಯಮಾಡಿ ಹೋರಾಟದ ಅನಿವಾರ್ಯತೆ ತರಬೇಡಿ....
ಮಾತೆ ಮಹಾದೇವಿ ಸಾಹಿತ್ಯ ಸಂರಕ್ಷಣಾ ಸಮಿತಿ
ಹಾಗೂ
ರಾಷ್ಟ್ರೀಯ ಬಸವದಳ ಲಿಂಗಾಯತ ಧರ್ಮ
ಅಕ್ಕನಾಗಲಾಂಬಿಕಾ ಮಹಿಳಾ ಗಣ
Source : WhatsApp


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ