ವಚನಗಳನ್ನು ಓದೋಣ! ಕೊರಾನಾಗಿಂತ ಕ್ರೂರಿಗಳನ್ನು ಸೋಲಿಸೋಣ!!
||ಓಂ ಶ್ರೀ ಗುರು ಬಸವ ಲಿಂಗಾಯನಮಃ||
866666
ವಚನಗಳನ್ನು ಓದೋಣ! ಕೊರಾನಾಗಿಂತ ಕ್ರೂರಿಗಳನ್ನು ಸೋಲಿಸೋಣ!!
ಅನಿಮಿಷನಲ್ಲಮಯ್ಯ, ಮರುಳಶಂಕರಯ್ಯ,
ಕೋಲಶಾಂತಯ್ಯ, ಮಾದಾರ ಧೂಳಯ್ಯ,
ಮಿಂಡಮಲ್ಲಿನಾಥ, ಚೆನ್ನಬಸವಣ್ಣ,
ಚೇರಮರಾಯ, ತೆಲುಗ ಜೊಮ್ಮಣ್ಣ, ಕಿನ್ನರಯ್ಯ,
ಹಲಾಯುಧ, ದಾಸಿಮಯ್ಯ, ಭಂಡಾರಿ, ಬಸವರಾಜ ಮುಖ್ಯವಾದ
ಚೆನ್ನಮಲ್ಲಿಕಾರ್ಜುನದೇವರ ದೇವನ ಶರಣರಿಗೆ ನಮೋ ನಮೋ ಎಂಬೆನು.
ಅಂದು ಮಂಟಪದ ಹೆಜ್ಜೇನು ಗಂಟೇರು ಕೆಡಿಸಿದಾಗ ಕಂಟಕವಿಲ್ಲದೆ ಜೇನು ಹುಳುವಿಂತೆ ಶರಣ ದುಂಬಿಗಳು ಭವದೊಳಗೆ ಹಾರ್ಹಾರಿ ಹೊಸ ಮತದ ಹುಟ್ಟನ್ನು ಕಟ್ಟಿ ಸವೆಯದೆ ಇರುವ ಸವಿ ಜೇನಾಗಿ ವಚನ ಜೇನನ್ನು ಕೊಟ್ಟಿದ್ದಾರೆ.
ಕರೆದು ಆಶೀರ್ವಾದಿಸಿ ಹರಸಿ ಒಪ್ಪಿಸಿ, ವರ ಚೆನ್ನಬಸವ ಶರಣರಿಗೆ ಕಂಟಕವು ಹುರಿಯಾಳು ಕಾಯೋ ಹೊಸ ಮತವ ಎಂದು ಗುರು ಚೆನ್ನಬಸವಣ್ಣನವರಿಗೆ ಗುರು ಬಸವಣ್ಣನವರು ಜವಾಬ್ದಾರಿ ಕೊಟ್ಟು, ಭರವಸೆ ಇಟ್ಟು ಕಲ್ಯಾಣ ಬಿಟ್ಟು ಹೋಗಿದ್ದರು.
ಹಾಗೆಯೇ ಪೂಜ್ಯ ಶ್ರೀ ಮಾತೆ ಮಹಾದೇವಿ ಮಾತಾಜಿಯವರು ಕೂಡ ನಮ್ಮೆಲ್ಲರಿಗೂ ಆಶೀರ್ವಾದ ಮಾಡಿದ್ದಾರೆ ಜವಾಬ್ದಾರಿ ಕೊಟ್ಟಿದ್ದಾರೆ, ಭರವಸೆ ಇಟ್ಟಿದ್ದಾರೆ. ಇನ್ನೇನು ಕೊರೊನಾ ಹೋಯಿತು ನಾವೆಲ್ಲ ಸಂತೋಷದಿಂದ ಸಾಮೂಹಿಕ ಪ್ರಾರ್ಥನೆ ಮಾಡುತ್ತ ಅನುಭಾವ ಗೋಷ್ಟಿಗಳನ್ನು ಮಾಡುತ್ತ ಶರಣರ ಸಂಗದಲ್ಲಿ ನಲಿಯೋಣ ಎನ್ನುವಷ್ಟರಲ್ಲಿ, ಕೆಲವು ದುಷ್ಟ ಶಕ್ತಿಗಳು ಕೊರನಾಗಿಂತ ಕ್ರೂರಿಯಾಗಿ ನಮ್ಮ ಸಂಘಟನೆ, ನಮ್ಮ ಸಾಮೂಹಿಕ ಪ್ರಾರ್ಥನೆ ನಮ್ಮ ಅನುಭಾವಗೋಷ್ಠಿಗಳನ್ನು ಕೆಡೆಸುವ ಪ್ರಯತ್ನ ಮಾಡಿದ್ದಾರೆ.
ಇದರಿಂದ ನಾವು ವಿಚಲಿತರಾಗದೆ ನಾವು ಈ ಮೂಲಕ ಅನುಭಾವ ಗೋಷ್ಠಿಗಳನ್ನು ಮಾಡುತ್ತ, ಲಿಂಗಾಯತ ಧರ್ಮದ ನಿಜ ಜ್ಞಾನ ಪಡೆಯುತ್ತ, ನಿಜ ಆಚರಣೆಗಳನ್ನು ಮಾಡುತ್ತ, ಮಠ ಪೀಠ ಪ್ರತಿಷ್ಠಾನಗಳು ಬೋಧಿಸದೆ ಮುಚ್ಚಿಟ್ಟ ಗುರು ಬಸವಣ್ಣನವರ ಪ್ರಾಣ ಸ್ವರೂಪವಾದ ವಚನಗಳನ್ನು ಓದುತ್ತ ಒಬ್ಬರ ಅನುಭಾವ ಒಬ್ಬರು ನಿರಂತರವಾಗಿ ಹಂಚಿಕೊಳ್ಳುತ್ತ ನಮ್ಮ ಅನುಭಾವ ಮಂಟಪ ಸಂಸ್ಕೃತಿಯನ್ನು ಉಳಿಸೋಣ., ಧರ್ಮವನ್ನು ಉಳಿಸೋಣ ಬೆಳೆಸೋಣ ಮತ್ತು ಶರಣರು ಸೇರಿದ ಪಾವನದ ಮಾಲೆಯನ್ನು ಸೇರೋಣ. ಎಲ್ಲೆಲ್ಲಿ ಬಸವ ಮಂಟಪಗಳಲ್ಲಿ ಪ್ರಾರ್ಥನೆ ಮಾಡಲು ಅವಕಾಶವಿಲ್ಲವೋ ಆ ಊರುಗಳಲ್ಲಿ ವಾರಕ್ಕೊಂದು ಮನೆಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬೇಕಾಗಿ ವಿನಂತಿಸುತ್ತೇನೆ.
ದಾರ್ಶನಿಕ ಜಂಗಮರಾದ ಪರಮ ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿ ಹಾಗು ಮಾತೆ ಮಹಾದೇವಿ ಮಾತಾಜಿ ಈ ಧರ್ಮಕ್ಕಾಗಿ ಎಲ್ಲವನ್ನೂ ಮಾಡಿಟ್ಟಿದ್ದಾರೆ. ಇನ್ನು ಮುಂದೆ ಈ ಧರ್ಮ ಕೇವಲ ಗ್ರಹಸ್ಥ ಜಂಗಮರಿಂದ ಮಾತ್ರ ಉಳಿಯುತ್ತದೆ. ವಿರಕ್ತ ಜಂಗಮರು ತಮ್ಮ ಮೂಲ ಕರ್ತವ್ಯಗಳನ್ನು ಮರೆತು ಪೀಠಾಧಿಕಾರ, ರಾಜಕಾರಣದಲ್ಲಿ, ಭಕ್ತರನ್ನು ಒಡೆದಾಳುವುದರಲ್ಲಿ
ಮಗ್ನವಾಗಿದ್ದಾರೆ.
ಮಹಾನ ಗೃಹಸ್ಥ ಜಂಗಮ ಫ.ಗು. ಹಳಕಟ್ಟಿಯವರಂತೆ, ಉತ್ತಂಗಿ ಚೆನ್ನಪ್ಪನವರಂತೆ, ಜಯದೇವಿ ತಾಯಿ ಲಿಗಾಡೆಯವರಂತೆ ನಾವೆಲ್ಲರೂ ಸಾಹಿತ್ಯವನ್ನು ಬರೆದು, ಈಗಾಗಲೇ ಬರೆದುದ್ದನ್ನು ಸಂರಕ್ಷಿಸಿ, ಲಿಂಗಾಯತ ಧರ್ಮದ ಉಳಿಯುವಿಕೆಯಲ್ಲಿ ಗೃಹಸ್ಥ ಜಂಗಮರಾಗಿ ಸೇವೆ ಸಲ್ಲಿಸಲು ಕಂಕಣ ಬದ್ಧರಾಗಬೇಕಿದೆ.
ನನ್ನ ಹಿಂದಿನ ನನ್ನ ಲೇಖನಗಳು ಮತ್ತು ಮುಂಬರುವ ಲೇಖನಗಳು ಕೂಡ ಸಂಶೋಧನಾತ್ಮಕ ಲೇಖನಗಳಾಗಿರುವುದರಿಂದ ಅವುಗಳನ್ನು ಸಣ್ಣದಾಗಿ ಬರೆಯಲು ಸಾಧ್ಯವಾಗುವುದಿಲ್ಲ ಮುಂದೊಮ್ಮೆ ಇವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತೇನೆ. ಉದ್ದನೆಯ ಲೇಖನಗಳನ್ನು ಸಮಯ ಮಾಡಿಕೊಂಡು ಕಂತಿನಲ್ಲಿ ಓದಿದರೂ ಪರವಾಗಿಲ್ಲ ಆದರೆ ಪೂರ್ತಿ ಓದಬೇಕಾಗಿ ಕಳಕಳಿಯ ಮನವಿ.
ಬಾಳತ್ವಕ್ಕೆಂದು ಮಧುವ ತಂದು ಕೊಡನ ತುಂಬಿದ ಜೇನಹುಳುವಿನಂತೆ ತಾನುಂಬುದು, ತನ್ನೆಂಜಲ ಜಗವುಂಬುದು ನೋಡಯ್ಯಾ. ಎನ್ನುವ ಗುರು ಬಸವಣ್ಣನವರ ವಚನದ ನುಡಿಗಳಂತೆ ಒಂದು ಜೇನು ಹುಳು ಒಂದು ಹನಿ ಜೇನು ತುಪ್ಪವನ್ನು ಸಂಗ್ರಹಿಸಲು ನೂರಾರು ಮೈಲಿ ಹಾರಾಡಿ ನೂರಾರು ಹೂವುಗಳ ಮಕರಂದವನ್ನು ಸವಿದು ಒಂದು ಹನಿ ಜೇನುತುಪ್ಪವನ್ನು ಕೊಡುತ್ತವೆ. ಆ ಜೇನನ್ನು ಅದು ಜೇನು (Honey comb) ಗೂಡಿನಲ್ಲಿ ಸಂಗ್ರಹಿಸಿಡುತ್ತದೆ. ಅದನ್ನು ಜಗತ್ತು ಸವಿಯುತ್ತದೆ. ಹೀಗೆ ಜೇನು ಹುಳು ಮನುಕುಲಕ್ಕೆ ಅತ್ಯಂತ ಉಪಕಾರಿಯಾದ ಕೀಟ.
ಅದೇ ರೀತಿ ಒಬ್ಬ ಅನುಭಾವಿ ಒಂದು ಪ್ರವಚನ ಕೊಡಲು ನೂರಾರು ಗ್ರಂಥಗಳನ್ನು ಓದಿ ಆನಂದಿಸಿ ಅದರಲ್ಲಿರುವ ಅನುಭಾವವನ್ನು ಮೊದಲು ಸವಿದು ಆನಂದಿಸಿ ಅಳವಡಿಸಿಕೊಂಡು ಆಚರಿಸಬೇಕಾಗುತ್ತದೆ. ಒಬ್ಬ ಲೇಖಕ ಒಂದು ಗ್ರಂಥವನ್ನು ಬರೆಯಬೇಕಾದರೆ ನೂರಾರು ಗ್ರಂಥಗಳನ್ನು ಓದಬೇಕಾಗುತ್ತದೆ. ಹಾಗೆ ಓದಿದ ಮೇಲೆ ಅಲ್ಲಿ ಸಿಗುವ ಮಕರಂದದಿಂದ ತನ್ನ ಸ್ವಾನುಭಾವದ ಜೇನು ಎನ್ನುವ ಹೊಸ ಗ್ರಂಥವನ್ನು ಕೊಡಲು ಸಾಧ್ಯವಿದೆ.
1988ರಲ್ಲಿ ಪ್ರಥಮ ಶರಣ ಮೇಳ ನಡೆದಾಗ ನನಗೆ ಎಂಟುವರೆ ವರ್ಷ ವಯಸ್ಸು 3ನೇ ತರಗತಿ ಓದುತ್ತಿದ್ದೆ ನಮ್ಮ ತಂದೆ ಶರಣ ಪ್ರಭು ರವರು ಶರಣ ಮೇಳಕ್ಕೆ ಹೋಗಿ ನನಗೆ ನಾಲ್ಕು ಪುಸ್ತಕ ತಂದಿದ್ದರು. 1. ಬಸವ ವಚನ ಸುಧಾ. 2. ದೇವರ ಮಕ್ಕಳು 3. ವಿಶ್ವಗುರು ಬಸವಣ್ಣ 4. ಭಗವದ್ಗೀತೆ.
ನಮ್ಮ ತಂದೆ ಪುಸ್ತಕ ಪ್ರೇಮಿ ತಾವೂ ನೂರಾರು ಗ್ರಂಥಗಳನ್ನು ಬೇರೆಯವರಿಂದ ಪಡೆದಾದರೂ ಓದಿದ್ದಾರೆ. ಚಿಕ್ಕವನಿರುವಾಗ ಯಾವುತ್ತು ಆಟದ ಸಾಮಾನು ತಂದುಕೊಟ್ಟಿರುವುದು ನನಗೆ ನೆನಪೇ ಇಲ್ಲ ಆಡಿದ್ದೆಲ್ಲವೂ ಚಂದಾಮಾಮ ಪತ್ರಿಕೆಯೊಂದಿಗೆ.! ಪುಸ್ತಕಗಳೊಂದಿಗೆ..!!, ವಚನ ಗ್ರಂಥಗಳೊಂದಿಗೆ...!!!
ನನಗೆ ಆಗಲೇ ಕನ್ನಡ ತುಂಬಾ ಚೆನ್ನಾಗಿ ಓದಿ ಅರ್ಥೈಸಿಕೊಳ್ಳಲು ಬರುತಿತ್ತು. ಮೊದಲ ಮೂರು ಪುಸ್ತಕಗಳನ್ನು ಓದಿ ಮುಗಿಸಿದ ಮೇಲೆ ಭಗವದ್ಗೀತೆಯನ್ನು ಓದಲು ಆರಂಭಿಸಿದೆ. ಸಂಸ್ಕೃತ ಶ್ಲೋಕಗಳು ಓದಿ ಕನ್ನಡದಲ್ಲಿರುವ ಅವುಗಳ ಅರ್ಥವನ್ನು ಓದಿದಾಗ ಏನೊಂದು ಅರ್ಥವಾಗಲಿಲ್ಲ.
ಕಟ್ಟಿದೆನೊರೆಯ ಬಿಟ್ಟೆ ಜನ್ನಿಗೆಯರ ಎಂದು ಗುರು ಬಸವಣ್ಣನವರು ಒಂದು ವಚನದಲ್ಲಿ ಹೇಳುತ್ತಾರೆ. ಅಂದರೆ ವೇದ ಶಾಸ್ತ್ರ ಪುರಾಣಗಳೆನ್ನುವ ಖಡ್ಗವನ್ನುಒರೆಯಲ್ಲಿ ಕಟ್ಟಿಟ್ಟುಬಿಟ್ಟೆ. ಬಿಟ್ಟೆ ಜನ್ನಿಗೆಯರ ಎಂದರೆ ಜನಿವಾರದ ಸಂಬಂಧಿಗಳನ್ನು ತೊರೆದೆ. ಲಿಂಗದೇವನ ಭಕ್ತಿ ಪಥದಲ್ಲಿ ನಡೆಯಲು ಇವುಗಳನ್ನು ತೊರೆದೆ ಎನ್ನುತ್ತಾರೆ. ಹಾಗೆಯೇ ನಾನು ಅರ್ಥವಾಗದ ಭಗವದ್ಗೀತೆಯನ್ನು ಕಟ್ಟಿಟ್ಟು ಬಿಟ್ಟೆ.
ಅಂದು ಬಿಟ್ಟರೆ ಇಂದಿನವರೆಗೂ ನಾನು ಭಗವದಗೀತೆಯನ್ನು ಓದಿಲ್ಲ. ಓದುವ ಪ್ರಸಂಗವೂ ಬರಲಿಲ್ಲ. ಏಕೆಂದರೆ ವಚನ ಸಾಹಿತ್ಯ ಓದದೆ ಬೇರಾವ ಸಾಹಿತ್ಯ ಓದಿದರೆ ಯಾವುದೇ ಪ್ರಯೋಜನವಿಲ್ಲ, ವಚನ ಸಾಹಿತ್ಯ ಓದಿದ ಮೇಲೆ ಬೇರಾವ ಸಾಹಿತ್ಯ ಓದಿದರೂ ಯಾವುದೇ ಪ್ರಯೋಜನವಿಲ್ಲ ಬೇರೆಲ್ಲ ಸಾಹಿತ್ಯಗಳು ಸಪ್ಪೆ ಎನಿಸುತ್ತವೆ. ಇಂದು ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸುವಂತೆ ಒತ್ತಡಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ನಾವು ನಮ್ಮ ಮಕ್ಕಳಿಗೆ ಮನೆಯಲ್ಲಿ ವಚನಗಳನ್ನು ಓದಿಸುವುದು ಬೋಧಿಸುವುದು, ಹಿಂದಿನ ದಿನಗಳಿಗಿಂತಲೂ ಇಂದು ಬಹಾಳ ಅವಶ್ಯಕವಾಗಿದೆ. ಇದರಿಂದ ಮಕ್ಕಳು ಶಾಲೆಯಲ್ಲಿ ಬೋಧಿಸಿದ ಬೋಧನೆಯನ್ನು ಪ್ರಶ್ನಿಸುವಂತಾಗುತ್ತದೆ. ವಚನ ಸಾಹಿತ್ಯ ನಮ್ಮ ಮಕ್ಕಳಿಗೆ ಪರಿಣಾಮಕಾರಿಯಾಗಿ ಬೋಧಿಸಿ, ನಮ್ಮ ಹೆಣ್ಣುಮಕ್ಕಳು, ಕಾಲೇಜು ಓದುವ ನಮ್ಮ ಸಹೋದರಿಯರು ರಾಮ, ಕೃಷ್ಣ, ಅಬ್ರಾಹಂ, ಇಬ್ರಾಹಿಂ ಗಳ ಪ್ರೀತಿಯ ಬಲೆಯಲ್ಲಿ ಬೀಳದಂತೆ ನೋಡಿಕೊಳ್ಳುವ ಗುರುತರವಾದ ಜವಾಬ್ದಾರಿಯೂ ನಮ್ಮ ಮೇಲಿದೆ. ಇದನ್ನರಿತರಿತರೆ ಘಟನೆ ಮರೆತರೆ ದುರ್ಘಟನೆ!!
ನಾನು ಹೈಸ್ಕೂಲ್ ಓದುವಾಗ ಇತಿಹಾಸದಲ್ಲಿ ರಾಜರಾಮ ಮೋಹನರಾಯ, ಬಾಲಗಂಗಾಧರ ತಿಲಕರು ಮಾಡಿದ ಸಾಮಾಜಿಕ ಸುಧಾರಣೆಯ ಬಗ್ಗೆ ನಮ್ಮ ಶಿಕ್ಷಕರು ಬೋಧಿಸುತ್ತಿದ್ದಾಗ ಅವರೊಂದಿಗೆ ಚರ್ಚೆಗೆ ಇಳಿಯುತ್ತಿದ್ದೆ ಇಂತಹ ಸುಧಾರಣೆಯನ್ನು ಗುರು ಬಸವಣ್ಣನವರು ಹನ್ನೆರಡನೇ ಶತಮಾನದಲ್ಲೇ ಮಾಡಿದ್ದರು. ಅದನ್ನು ಅಂದಿನ ಸಮಾಜ ಅಳವಡಿಸಿಕೊಂಡಿದ್ದರೆ ರಾಜರಾಮ ಮೋಹನರಾಯ, ಬಾಲಗಂಗಾಧರ ತಿಲಕರಿಗೆ ಈಗ ಕಷ್ಟ ಪಡುವ ಅಗತ್ಯವಿರಲಿಲ್ಲ ಎಂದು ಹೇಳಿದ್ದೆ. ಆ ಶಿಕ್ಷಕರ ಹೆಸರು ʼಬಾಪುʼ ತುಂಬಾ ಜ್ಞಾನಿಗಳು ಮತ್ತು ಗುರು ಬಸವಣ್ಣನವರ ಬಗ್ಗೆ ಅರಿತವರಾಗಿದ್ದರು. ಅಂದಿನ ಮುಂದಿನ ವಿಷಯವೆಲ್ಲ ಗುರು ಬಸವ ಮಯವಾಗಿತ್ತು. ಆ ಶಿಕ್ಷಕರು ಈಗಲೂ ಬೀದರ ಜಿಲ್ಲೆಯ ಒಂದು ಶಾಲೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ.
ಹೀಗೆ ಅಂದು 1988ರಲ್ಲಿ ಆರಂಭವಾದ ನನ್ನ ವಚನ ಸಾಹಿತ್ಯದ ಅಧ್ಯಯನಕ್ಕೀಗ 34 ವರ್ಷ. 2002ರಲ್ಲಿ ಕಲ್ಯಾಣಕಿರಣದಲ್ಲಿ ಒಂದು ಸಂಶೋಧನಾತ್ಮಕ ಲೇಖನ ಬರೆದಿದ್ದೆ. ಅಂದಿನಿಂದ ಆರಂಭವಾದ ನನ್ನ ಸಂಶೋಧನಾ ಅಧ್ಯಯನ ಮತ್ತು ಬರವಣಿಗೆಗೀಗ 20 ವರ್ಷ. ಈ ಮಧ್ಯೆ ಹಲವಾರು ಐತಿಹಾಸಿಕ ಕಾದಂಬರಿಗಳು, ಜೀವನ ಚರಿತ್ರೆಗಳು ಸಂಶೋಧನಾ ಗ್ರಂಥಗಳನ್ನು, ಸಾಹಸಗಾಥೆಗಳನ್ನು, ಕಾದಂಬರಿಗಳನ್ನು ವಿಮರ್ಶಾ ಗ್ರಂಥಗಳನ್ನು ನಾನು ಓದಿದ್ದೇನೆ ಮತ್ತು ಆನಂದಿಸಿದ್ದೇನೆ. ಹಿಂದಿ, ಮರಾಠಿ, ತೆಲಗು ಮತ್ತು ಆಂಗ್ಲ ಭಾಷೆಯಲ್ಲಿ ಲಭ್ಯವಿರುವ ಶರಣರ ಸಾಹಿತ್ಯವನ್ನೂ ಓದಿದ್ದೇನೆ. ಜೊತೆಗೆ 2 ಬಾರಿ ಸಮಗ್ರವಚನ ಸಾಹಿತ್ಯದ 20000ಕ್ಕೂ ಅಧಿಕವಿರುವ ವಚನಗಳನ್ನುಓದಿದ್ದೇನೆ.
ನಾನು ನನ್ನ ಸ್ವಾನುಭಾವಕ್ಕಾಗಿ ಸ್ವಾನಂದಕ್ಕಾಗಿ ಓದುತ್ತಿದ್ದರೂ ಓದುತ್ತ ಓದುತ್ತ ಗುರು ಬಸವಣ್ಣನವರು ಮೇಲೆ ಹೇಳಿದ ಜೇನು ಹುಳುವಿನ ಉದಾಹರಣೆ ಓದಿದ ಮೇಲೆ, ನಾನು ಓದಿ ಅನುಭಾವವನ್ನು ಪಡೆದು ಸ್ವಾರ್ಥಿಯಾಗದೆ ಜೇನು ಹುಳುವಿನಂತೆ ನಾನು ಉಂಡ ಸ್ವಾನುಭಾವದ ಮಕರಂದವನ್ನು ವಚನಗಳ ರೂಪದಲ್ಲಿ ಲೇಖನಗಳ ರೂಪದಲ್ಲಿ ಸಂಗ್ರಹಿಸಿಡಬೇಕು ಆಗ ಅದನ್ನು ಜಗತ್ತೂ ಸವಿಯುವುದು. ಇದರಿಂದ ಜೇನು (Honey bee) ಹುಳುವಿನಂತೆ ನನ್ನ ಬದುಕು ಸಾರ್ಥಕವಾಗುತ್ತದೆ ಎನಿಸಿ ಲೇಖನಗಳನ್ನು ಪುಸ್ತಕಗಳನ್ನು ಬರೆಯುತ್ತಿದ್ದೇನೆ. ನನ್ನ ಬರವಣಿಗೆ ಓದುಗರು ಮೆಚ್ಚಿಕೊಂಡಿರುವುದಕ್ಕೆ ಸಾಕ್ಷಿಯಾಗಿ ನನ್ನ 11 ಪುಸ್ತಕಗಳಲ್ಲಿ ನಾಲ್ಕೈದು ಪುಸ್ತಕಗಳು 3-4 ಮುದ್ರಣ ಕಂಡಿವೆ. ಇದು ಒಬ್ಬ ಲೇಖಕನಿಗೆ ಹೆಮ್ಮೆಯ ವಿಚಾರ.
ಹಾಗೇಯೇ ತಾವು ಕೂಡ ನನ್ನ ಮುಂಬರುವ ಸಂಶೋದನಾತ್ಮಕವಾದ ಲಿಂಗಾಯತ ಧರ್ಮದ ಇತಿಹಾಸದಲ್ಲಿ ಹೊಸ ಪುಟಗಳನ್ನು ಸೃಷ್ಟಿಸುವ ಕೆಲವೇ ತಿಂಗಳುಗಳಲ್ಲಿ ಪ್ರಕಟಗೊಳ್ಳಲಿರುವ ಗ್ರಂಥಗಳಿಗಾಗಿ ನಿರೀಕ್ಷಿಸಿ ಅವುಗಳ ಪ್ರಕಟಗೊಂಡ ಮೇಲೆ ಓದಿ ನನ್ನನ್ನು ಹರಸಿ ಪ್ರೋತ್ಸಾಹಿಸಬೇಕಾಗಿ ವಿನಂತಿಸುತ್ತೇನೆ.
ಶರಣು ಶರಣಾರ್ಥಿಗಳೊಂದಿಗೆ
-ನಿಮ್ಮೆಲ್ಲರ ಹಳೆಯ ಚಿಕ್ಕ ತಮ್ಮ
ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ