ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ - ಮಡಿವಾಳ ಮಾಚಿದೇವರ ವಚನ ನಿರ್ವಚನ

 ಮಡಿವಾಳ ಮಾಚಿದೇವರ ವಚನ ನಿರ್ವಚನ


ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ.

ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು.

ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ.

ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ.

ಸನ್ನಹಿತವು ಬಸವಣ್ಣನಿಂದ,

ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ.

ಜಂಗಮ ಬಸವಣ್ಣನಿಂದ.

ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ.

ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ.

ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ, ಶೂನ್ಯ ಕಾಣಾ, ಕಲಿದೇವರದೇವಾ.

- ಮಡಿವಾಳ ಮಾಚಿದೇವ

ಸಮಗ್ರ ವಚನ ಸಂಪುಟ: 8   ವಚನದ ಸಂಖ್ಯೆ: 526


*ಭಾವಾರ್ಥ:*

ಲಿಂಗಾಯತ ಧರ್ಮದ ಆಯತ, ಸ್ವಾಯತ, ಸನ್ನಿಹಿತ ಮತ್ತು ಪಂಚ ವಿಧಗಳಾದ ಗುರು-ಲಿಂಗ-ಜಂಗಮ-ಪ್ರಸಾದ-ಪಾದೋದಕಗಳು ಬಸವಣ್ಣನವರಿಂದಲೇ ಕೊಡಲ್ಪಟ್ಟವೆಂಬುದನ್ನು ಮಡಿವಾಳ ಮಾಚಿದೇವರು ಸ್ಪಷ್ಟಪಡಿಸಿದ್ದಾರೆ. ಬಸವ ಪೂರ್ವದಲ್ಲಿ ಗುರು-ಲಿಂಗ-ಜಂಗಮ-ಪ್ರಸಾದ-ಪಾದೋದಕಗಳು ಅರಿವಿಲ್ಲದ ಕುರುಹುಗಳಾಗಿ ಕೇವಲ ಸ್ಥಾವರವಾಗಿದ್ದವು. ಗುರು ಬಸವಣ್ಣನವರು, ತಮ್ಮ ಅನುಭಾವದ ಬೆಳಗಿನಿಂದ ಗುರು-ಲಿಂಗ-ಜಂಗಮಕ್ಕೆ ಹೊಸ ಭಾಷ್ಯ ಬರೆದರು. ಕೇವಲ ಕುರುಹಾಗಿದ್ದ ಶಬ್ದಗಳಿಗೆ ಅರಿವಿನ ಸಿಂಚನವನ್ನು ಮಾಡಿದರು. ಭಕ್ತನ ಕಾಯದೊಳಗೆ ಗುರು-ಲಿಂಗ-ಜಂಗಮದ ಆಯತವನ್ನು ತೋರಿ, ಲಿಂಗವನ್ನು ಅರಿವಿನ ಕುರುಹಾಗಿ ಮಾಡಿ ನೋಟದ ಭಕ್ತಿಯನ್ನು ಕೊಟ್ಟರು.  ಈ ಸತ್ಯವನ್ನು ಲಿಂಗಾಯತ ಧರ್ಮದ ಅನುಯಾಯಿಗಳು ಒಕ್ಕೊರಲಿನಿಂದ ಹೇಳಬೇಕೆಂದು ಮಾಚಿದೇವರು ಆಗ್ರಹಿಸಿದ್ದಾರೆ. ಹೇಳದಿದ್ದರೆ ಲಿಂಗಾಯತ ಧರ್ಮಕ್ಕೆ ಅಪಾಯವೆಂಬುದನ್ನು ಸ್ಪಷ್ಟವಾಗಿ ತಿಳಿಸಿ ಹೋಗಿದ್ದಾರೆ!


*ಭಾಷ್ಯ:*

*ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ.*

ನಡೆ-ನುಡಿಯೊಂದಾದ ಸತ್ಯಧರ್ಮವನ್ನು ಕೊಟ್ಟ ಬಸವಣ್ಣನವರ ಖ್ಯಾತಿ ಕಲ್ಯಾಣದ ಸುತ್ತ-ಮುತ್ತ ಮಾತ್ರವಲ್ಲದೆ ಜಂಬೂ ದ್ವೀಪದ ಉದ್ದಗಲಕ್ಕೂ ಹಬ್ಬಿತ್ತು. ಅಂತೆಯೇ ಕಾಶ್ಮೀರದ ಅರಸು ಮಹಾದೇವ ಭೂಪಾಲ, ಕಂದಹಾರದಿಂದ ಮರುಳ ಶಂಕರದೇವ, ಕಳಿಂಗದಿಂದ ಸುಜ್ಞಾನ ದೇವ, ಮಧ್ಯಪ್ರದೇಶದಿಂದ ಡೋಹಾರ ಕಕ್ಕಯ, ಗುಜರಾತಿನಿಂದ ಆದಯ್ಯ, ತಮಿಳು ನಾಡಿನಿಂದ ಮಾದಾರ ಚೆನ್ನಯ್ಯ, ಆಂಧ್ರದಿಂದ ತೆಲುಗು ಜೊಮ್ಮಯ್ಯ ಮಾತ್ರವಲ್ಲದೆ, ಭಾರತಭೂಮಿಯ ಇತರ ಪ್ರದೇಶಗಳಿಂದ ಅನೇಕ ಶರಣರು ಬಸವಗುರು ಪ್ರಣೀತ ಲಿಂಗವಂತ ಧರ್ಮದ ಉಪದೇಶ ಪಡೆಯಲು ಕಲ್ಯಾಣದ ಅನುಭಾವ ಮಂಟಪದತ್ತ ಧಾವಿಸಿದ್ದರು. ಬಸವಗುರುವಿನ ಸಾನಿಧ್ಯದಲ್ಲಿ ಅನುಭಾವವನ್ನು ಪಡೆದ ಬಹುತೇಕರು ಭಾರತದಾದ್ಯಂತ ಜಂಗಮರಾಗಿ ಸಂಚರಿಸಿ ಬಸವ ತತ್ವವನ್ನು ಪಸರಿಸುತ್ತಿದ್ದರು. ಇದನ್ನು ಕಂಡ ಮಡಿವಾಳ ಮಾಚಿದೇವರು, ಎತ್ತೆತ್ತ ನೋಡಿದಡೂ ಬಸವ ತತ್ವದ ಬಳ್ಳಿ ಹಬ್ಬಿದೆ ಎಂದು ನುಡಿದಿರುವುದು ಉತ್ಪ್ರೇಕ್ಷೆಯ ಮಾತಲ್ಲ; ಸತ್ಯವಾದ ಮಾತು. 

 

*ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು.*

ಅಂಗದೊಳಗೆ ಆಚಾರವ ತೋರಿ, ಆ ಆಚಾರವೇ ಲಿಂಗವೆಂದರಿದ ಬಸವಣ್ಣನವರು, ಅರಿವಿನಿಂದೊಡಗೂಡಿದ ಆಚರಣೆಯೇ ಲಿಂಗವೆಂದು ಸಾಧಿಸಿದರು. ನಡೆ-ನುಡಿಯಲ್ಲಿ ಸಮನ್ವಯತೆ ತಂದರು. ನುಡಿದಂತೆ ನಡೆಯುವುದು ಸಾಧ್ಯವೆಂದು ತೋರಿಸಿದರು. ಇದನ್ನು ಕಂಡು ಜನಸಾಮಾನ್ಯರು ಪ್ರಭಾವಿತರಾದರು. ಜನಮಾನಸದಲ್ಲಿ ಅರಿವು ಮೂಡಿತು. ಅರಿವಿನಿಂದ ಗುರುವಾದರು. ಆಚಾರದಿಂದ ಲಿಂಗವಾದರು ಅರಿವು-ಆಚಾರಗಳ ಅನುಷ್ಟಾನದ ಅನುಭಾವದಿಂದ ಲಿಂಗವೆಂಬ ಗೊಂಚಲಾದರು.


*ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ.*

ಬಸವಪಥದಲ್ಲಿ ಮುನ್ನಡೆದ ಭಕ್ತರ ಮನದಲ್ಲಿ ಅರಿವೆಂಬ ಗುರುಬೀಜವಂಕುರಿಸಿತು, ಲಿಂಗವೆಂಬ ಎಲೆಯಾಗಿ, ವಿಚಾರವೆಂಬ ಹೂವಾಗಿ, ಆಚಾರವೆಂಬ ಕಾಯಾಗಿ, ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿದವು. ಆ ಹಣ್ಣುಗಳನ್ನು ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವೇ ಹರಿದು ದೇವನಿಗೆ ಅರ್ಪಿತವಾಯಿತು. ಆ ಭಕ್ತಿಯೆಂಬ ರಸಗಂಗೆಯಲ್ಲಿ ಕಾಯಕ-ದಾಸೋಹದ ತೆಪ್ಪಗಳು ತೇಲಿದವು. ಭಕ್ತರ ಮನೆಗಳೇ ಮಹಾಮನೆಗಳಾದವು.


*ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ. ಸನ್ನಹಿತವು ಬಸವಣ್ಣನಿಂದ,*

ಮನೆಗಳೇ ಮಹಾಮನೆಗಳಾದವು, ಮರ್ತ್ಯಲೋಕವೇ ಶಿವಲೋಕವಾಯಿತು. ಹಿಂದೆಂದೂ ಕಾಣದಂತಹ ಅದ್ಭುತ ಪರಿವರ್ತನೆಗೆ ಇತಿಹಾಸ ಸಾಕ್ಷಿಯಾಯಿತು. ಇದಕ್ಕೆ ಕಾರಣಿಕರ್ತರಾದವರು ಗುರು ಬಸವಣ್ಣನವರು. ತನ್ನ ಮೂಲ ಚೈತನ್ಯವನ್ನು ಅರಿವಿಗೆ ತಂದುಕೊಂಡು, ಅರಿವಿನ ಕುರುಹಾದ ಇಷ್ಟಲಿಂಗವನ್ನು ಆಯತವಾಗಿ ಮಾಡಿಕೊಂಡು, ಭಕ್ತಿ ಸಾಧನೆಯಿಂದ ಸ್ವಾಯತವಾಗಿ, ಕುರುಹಳಿದ ಪ್ರಾಣಲಿಂಗವಾಗಿ, ಮುಂದುವರೆದು ಎಲ್ಲ ಮೇರೆಗಳನ್ನು ಮೀರಿ ಲಿಂಗವೇಪ್ರಾಣವಾಗಿ, ಭಾವಲಿಂಗ ಸನ್ನಿಹಿತವಾಗುವ ಮಾರ್ಗವನ್ನು ಜಗತ್ತಿಗೆ ಪರಿಚಯಿಸಿದವರು ಗುರು ಬಸವಣ್ಣನವರು.


*ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ. ಜಂಗಮ ಬಸವಣ್ಣನಿಂದ. ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ.*

ಬಸವಣ್ಣನವರಿಗಿಂತ ಪೂರ್ವದಲ್ಲಿ ಗುರು-ಲಿಂಗ-ಜಂಗಮ-ಪ್ರಸಾದ-ಪಾದೋದಕವೆಂಬ ಪಂಚವಿಧಗಳು ಸ್ಥಾವರವಾಗಿದ್ದವು. ವ್ಯಕ್ತಿಗಳು ಗುರುವಾಗಿ, ಶಿಷ್ಯ ಪರಂಪರೆಗಳನ್ನು ಬೆಳೆಸಿಕೊಂಡು, ಗುರುವೆಂಬ ಅಹಂಕಾರಕ್ಕೆ ತುತ್ತಾಗಿದ್ದರು. ಲಿಂಗವು ಸ್ಥಾವರವಾಗಿ ಗುಡಿಗಳಲ್ಲಿ ಕೆಮ್ಮನೆ ಉಪಚಾರಕ್ಕೆ ಒಳಗಾಗಿತ್ತು. ಜಂಗಮವು, ಕಾವಿ ಕಾಷಾಂಬರವ ಧರಿಸಿ ಅರಿವಿಲ್ಲದಂತಾಗಿತ್ತು. ತಿನ್ನದ ಸ್ಥಾವರ ಲಿಂಗಕ್ಕೆ ಹಿಡಿದ ನೈವೇದ್ಯವೇ ಪ್ರಸಾದವಾಗಿತ್ತು. ಒಳಗೆ ತೊಳೆಯಲರಿಯದೆ ಹೊರಗೆ ಕಾಲು ತೊಳೆದು ಕುಡಿಯುವ ಅಜ್ಞಾನದ ನೀರು ಪಾದೋದಕವಾಗಿತ್ತು.

ಗುರು-ಲಿಂಗ-ಜಂಗಮ, ದೇವಾಲಯವೆಂಬ ಶಬ್ದಗಳು ಬಸವ ಪೂರ್ವದಲ್ಲಿ ಇದ್ದರೂ ಸಹ, ಅವುಗಳಲ್ಲಿ ಅರಿವು-ಆಚಾರ-ಅನುಭಾವವಿರಲಿಲ್ಲ, ನಿಜಭಕ್ತಿ ಇರಲಿಲ್ಲ. ಅವುಗಳು ಕೇವಲ ಕುರುಹುಗಳಾಗಿ, ಸ್ಥಾವರವಾಗಿದ್ದವು, ಮೌಢ್ಯತೆಗೊಳಗಾಗಿದ್ದವು. ಗುರು ಬಸವಣ್ಣನವರು, ತಮ್ಮ ಅನುಭಾವದ ಬೆಳಗಿನಿಂದ ಗುರು-ಲಿಂಗ-ಜಂಗಮಕ್ಕೆ ಹೊಸ ಭಾಷ್ಯ ಬರೆದರು. ಕೇವಲ ಕುರುಹಾಗಿದ್ದ ಶಬ್ದಗಳಿಗೆ ಅರಿವಿನ ಸಿಂಚನವನ್ನು ಮಾಡಿದರು. ಲಿಂಗವನ್ನು ಅರಿವಿನ ಕುರುಹಾಗಿ ಮಾಡಿ ನೋಟದ ಭಕ್ತಿಯನ್ನು ಕೊಟ್ಟರು. ಭಕ್ತಿಯಿಂದ ಶುದ್ಧ-ಸಿದ್ದ-ಪ್ರಸಿದ್ಧವಾದ ಭಕ್ತನ ಕಾಯವೇ ಕೈಲಾಸವೆಂದು ಸಾರಿದರು. ಕಾಯದೊಳಗೆ ಗುರು-ಲಿಂಗ-ಜಂಗಮದ ಆಯತವನ್ನು ತೋರಿ ದೇಹವೇ ದೇವಾಲಯವೆಂದು ಸಿದ್ಧಪಡಿಸಿದರು.

ಅರಿವು-ಆಚಾರ-ಅನುಭಾವದಿಂದೊಡಗೂಡಿದ ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನವೆಂಬ ತ್ರಿವಿಧವನರ್ಪಿಸಿ, ತ್ರಿವಿಧವನೊಂದು ಮಾಡಿದಾತ ಪ್ರಸಾದಿಯೆಂದು ನಿರೂಪಿಸಿದರು. ಪ್ರಸಾದಿಯಾಗಿ ಪಾದೋದಕವೆಂಬ ವಚನ ಸಾಹಿತ್ಯವನ್ನು ಹರಿಸಿದರು. ಎಲ್ಲ ಭಕ್ತರ ಮನವ ಬೆಳಗಲೆಂದು ಇಳೆಗೆ ಬಂದ ಶಿವ ಬೆಳಕಾದರು. ಶಿವನೇ ಆದರು. ದೇವನಿಗೆ ದೇವನಾಗಿ ಹೋಗುವ ಮಾರ್ಗವನ್ನು ತೋರಿದರು.   

ಇಷ್ಟೆಲ್ಲ ಮಾಡಿಯೂ, ಮಾಡಬೇಕು, ಮಾಡದಂತಿರಬೇಕು, ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು ಎಂದು ಮುಗಿದ ಕೈ, ಬಾಗಿದ ತಲೆಯಾಗಿ ನಿಂದು ಇದೆಲ್ಲವೂ ಕೂಡಲಸಂಗಯ್ಯನಿಂದಲೇ ಆಯಿತು ಎಂದ ವಿನಯ ಮೂರ್ತಿ ಬಸವಣ್ಣನವರನ್ನು ಕಂಡ ಅಸಂಖ್ಯಾತ ಶರಣರು ಬೆರಗಾದರು. “ನೋಟದ ಭಕ್ತಿ ಬಸವನಿಂದಾಯಿತ್ತು” ಎಂದು ಸಿದ್ಧರಾಮೇಶ್ವರರು ವಚಿಸಿದರೆ, “ಅರಿವು ಕುರುಹನೆ ಅರಸಿ ಬರಲು ಆ ಕುರುಹು ಅರಿವನೊಳಗೊಂಡುದನು ಅರಿದ ಮೊದಲ ಗುರು ಬಸವಣ್ಣ” ನೆಂದು ಚನ್ನಬಸವಣ್ಣನವರು ಸ್ವರವಚನವೊಂದರಲ್ಲಿ ನೆನೆದರು. ಅಲ್ಲಮ ಪ್ರಭುಗಳಾದಿಯಾಗಿ ಎಲ್ಲ ಶರಣರೂ ಬಸವಣ್ಣನವರಿಂದಲೇ ಗುರು-ಲಿಂಗ-ಜಂಗಮ-ಪ್ರಸಾದ-ಪಾದೋದಕಗಳು ಕೊಡಲ್ಪಟ್ಟವೆಂದು ಬಹುವಿಧವಾಗಿ ಸ್ಪಷ್ಟಪಡಿಸಿ, ಬಸವಣ್ಣನವರೊಬ್ಬರೇ ಜಗದ್ಗುರುವೆಂದು ಸಿದ್ಧಪಡಿಸಿ ಹೋಗಿದ್ದಾರೆ.


*ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ.*

ಇಂತಹ ಅನುಪಮ ಮಾರ್ಗವನ್ನು ನಡೆದು-ನುಡಿದು ತೋರಿದ ಬಸವಣ್ಣನವರೇ ಲಿಂಗಾಯತ ಧರ್ಮದ ಮೂಲಿಗರೆಂದು ಈ ಜಗತ್ತು ಅರ್ಥ ಮಾಡಿಕೊಳ್ಳಬೇಕು. ಭಾರತದಾದ್ಯಂತ ಪಸರಿಸಿರುವ ಬಸವ ಭಕ್ತರು ಈ ಸತ್ಯವನ್ನು ಪ್ರಚಾರ ಮಾಡಬೇಕು. ಗುರು-ಲಿಂಗ-ಜಂಗಮ-ಪ್ರಸಾದ-ಪಾದೋದಕವೆಂಬ ಪಂಚವಿಧಗಳು ಬಸವಣ್ಣನವರಿಂದಲೇ ಕೊಡಲ್ಪಟ್ಟವು ಎಂಬುದನ್ನು ಸಾರಿ ಸಾರಿ ಹೇಳಬೇಕು. ಇಲ್ಲದಿದ್ದರೆ, ಪಟ್ಟಭದ್ರ ಹಿತಾಸಕ್ತಿಯುಳ್ಳ ಪುರೋಹಿತಶಾಹಿಗಳು, ಇದನ್ನು ಮತ್ತೆ ಸ್ಥಾವರೀಕರಿಸಿ ಆಪೋಷನ ತೆಗೆದುಕೊಳ್ಳುವ ಅಪಾಯವಿದೆ ಎಂದು ಮಾಚಿದೇವರು ಆವಾಗಲೇ ಎಚ್ಚರಿಸಿದ್ದಾರೆ.   


*ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ, ಶೂನ್ಯ ಕಾಣಾ, ಕಲಿದೇವರದೇವಾ.*

ಇಂತಹ ಘನಲಿಂಗ ಧರ್ಮವನ್ನು ವಿಶ್ವಕ್ಕೆ ಕೊಟ್ಟ ಬಸವಣ್ಣನವರನ್ನು ಇಷ್ಟಲಿಂಗ ಪೂಜೆಯ ಸಮಯದಲ್ಲಿ ಬಸವಾ, ಬಸವಾ ಬಸವಾ ಎಂದು ಮಜ್ಜನಕ್ಕೆರೆದರೆ ಧರ್ಮಗುರುವಿಗೆ ಸಲ್ಲಿಸುವ ಗೌರವವೆಂಬುದು ಮಡಿವಾಳ ಮಾಚಿದೇವರಾದಿಯಾಗಿ ಎಲ್ಲ ಶರಣರ ಅಭಿಪ್ರಾಯ. ಧರ್ಮಗುರು ಬಸವಣ್ಣನವರನ್ನು ಮರೆತ ಲಿಂಗಾಯತರ ಭಕ್ತಿ ಶೂನ್ಯ; ಅವರ ಅವಸಾನವೂ ನಿಶ್ಚಿತ.

ಮಡಿವಾಳ ಮಾಚಿತಂದೆಯ ಈ ವಚನದ ಆಶಯವನ್ನು ಅರಿತು, ಎಲ್ಲ ಲಿಂಗಾಯತರು ಬಸವಣ್ಣನವರನ್ನೇ ಧರ್ಮಗುರುವೆಂದು ಪ್ರತಿಪಾದಿಸುತ್ತ ಬಸವ ತತ್ವವನ್ನು ಆಚರಣೆಯಲ್ಲಿ ತಂದರೆ, ಮುಂಬರುವ ದಿನಗಳಲ್ಲಿ ಬಸವ ಧರ್ಮವು ಸ್ವತಂತ್ರವಾಗಿ ವಿಶ್ವವೆಲ್ಲಾ ಪಸರಿಸಿ, ಜಾಗತಿಕ ಧರ್ಮಗಳಲ್ಲಿ ಸಾಲಿನಲ್ಲಿ ತಲೆ ಎತ್ತಿ ನಿಲ್ಲುವುದು ಶತಸಿದ್ಧ!


ಶಿವಶರಣಪ್ಪ ಮದ್ದೂರ್, ಬೆಂಗಳೂರು



ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…