ಪ್ರಥಮ ವಚನಕಾರರು ಗುರು ಬಸವಣ್ಣನವರೇ ಹೊರತು ದೇವರದಾಸಿಮಯ್ಯ ಅಥವಾ ಜೇಡರ ದಾಸಯ್ಯನವರಲ್ಲ

ಪ್ರಥಮ ವಚನಕಾರರು ಗುರು ಬಸವಣ್ಣನವರೇ ಹೊರತು ದೇವರದಾಸಿಮಯ್ಯ ಅಥವಾ ಜೇಡರ ದಾಸಯ್ಯನವರಲ್ಲ.

-ಸಚ್ಚಿದಾನಂದ ಪ್ರಭು ಚಟ್ನಳ್ಳಿ    9886694454


ದೇವರ ದಾಸಿಮಯ್ಯ 11ನೇ ಶತಮಾನದಲ್ಲಿ ನೇಯ್ಗೆ ಕಾಯಕ ಮಾಡುತ್ತಿದ್ದ ಒಬ್ಬ ಪರಮ ಶಿವಭಕ್ತ ಇವರು ವಚನಗಳನ್ನು ಬರೆದಿಲ್ಲ. ಆದರೆ ಜೇಡರ ದಾಸಯ್ಯನವರು ಗುರು ಬಸವಣ್ಣನವರ ಸಮಕಾಲೀನರು. ದೇವರದಾಸಿಮಯ್ಯ ನವರ ಪತ್ನಿಯ ಹೆಸರು ದುಗ್ಗಳೆ ಮತ್ತು ಜೇಡರ ದಾಸಯ್ಯನವರ ಪತ್ನಿಯ ಹೆಸರೂ ದುಗ್ಗಳೆಯೇ ಆಗಿತ್ತು. ಇದರಿಂದಾಗಿ ಅನೇಕರಿಗೆ ಈ ವಿಚಾರದಲ್ಲಿ ದ್ವಂದ್ವವುಂಟಾಗಿದೆ. 

ಜೇಡರ ದಾಸಯ್ಯ ಮತ್ತು ದುಗ್ಗಳೆಯವರು ಗುರು ಬಸವಣ್ಣನವರಿಂದ ಇಷ್ಟಲಿಂಗದೀಕ್ಷೆಯನ್ನು ಪಡೆದುಕೊಂಡಿದ್ದಾರೆ. ಗುರು ಬಸವಣ್ಣನರು ಹಾಗು ಅನುಭವ ಮಂಟಪದ ಶರಣರಿಂದ ಸ್ಫೂರ್ತಿಗೊಂಡು ದಂಪತಿಗಳಿಬ್ಬರೂ ವಚನಗಳನ್ನು ರಚಿಸಿದ್ದಾರೆ.

ದುಗ್ಗಳೆಯವರ ಎರಡು ವಚನಗಳು ಹೀಗಿವೆ:

ವಚನ:

ಬಸವಣ್ಣನಿಂದ ಗುರುಪ್ರಸಾದಿಯಾದೆನು.

ಚೆನ್ನಬಸವಣ್ಣನಿಂದ ಲಿಂಗಪ್ರಸಾದಿಯಾದೆನು.

ಪ್ರಭುದೇವರಿಂದ ಜಂಗಮಪ್ರಸಾದಿಯಾದೆನು.

ಮರುಳಶಂಕರದೇವರಿಂದ ಮಹಾಪ್ರಸಾದಿಯಾದೆನು.

ಇಂತೀ ಚತುರ್ವಿಧವು ಏಕೀಭವಿಸಿ ಪ್ರಾಣಲಿಂಗವಾದ

*ಮಹಾಮಹಿಮಂಗೆ ಶರಣೆಂದು ಬದುಕಿದೆನಯ್ಯಾ

ದಾಸಯ್ಯಪ್ರಿಯ ರಾಮನಾಥ.

ವಚನ:

ಭಕ್ತನಾದಡೆ ಬಸವಣ್ಣನಂತಾಗಬೇಕು.

ಜಂಗಮವಾದಡೆ ಪ್ರಭುದೇವರಂತಾಗಬೇಕು.

ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು.

ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು.

ಐಕ್ಯನಾದಡೆ ಅಜಗಣ್ಣನಂತಾಗಬೇಕು.

ಇಂತಿವರ ಕಾರುಣ್ಯಪ್ರಸಾದವ ಕೊಂಡು

ಸತ್ತಹಾಗಿರಬೇಕಲ್ಲದೆ ತತ್ವದ ಮಾತು ಎನಗೇಕಯ್ಯಾ

ದಾಸಯ್ಯಪ್ರಿಯ ರಾಮನಾಥ

ಒಂದು ವೇಳೆ ಜೇಡರ ದಾಸಯ್ಯ ಹಾಗು ದುಗ್ಗಳೆಯವರು ಗುರು ಬಸವಣ್ಣನವರಿಗಿಂತ ಪೂರ್ವದವರಾದರೆ ದುಗ್ಗಳೆ ಗುರು ಬಸವಣ್ಣನವರನ್ನು, ಅಲ್ಲಮಪ್ರಭುದೇವರನ್ನು ಮತ್ತು ಅವರ ಸಮಕಾಲೀನರವರನ್ನು ಮೇಲಿನ ವಚನಗಳಲ್ಲಿ ಸ್ತುತಿಸಲಿಕ್ಕೆ ಸಾಧ್ಯವಿರುತ್ತಿರಲಿಲ್ಲ.

ಗುರು ಬಸವಣ್ಣ ಹಾಗು ಅನುಭವ ಮಂಟಪದ ಶರಣರನ್ನು ಸ್ತುತಿಸಿರುವ ಜೇಡರ ದಾಸಯ್ಯನವರ ವಚನಗಳು ಲಭ್ಯವಾಗಿಲ್ಲ ಆದರೂ ಜೇಡರ ದಾಸಯ್ಯನವರು ಗುರು ಬಸವಣ್ಣನವರ ಅನುಯಾಯಿ ಎನ್ನುವ ಸುಳುಹು ಅವರ ಕೆಲವು ವಚನದಲ್ಲಿ ದೊರಕುತ್ತದೆ ಆ ವಚನಗಳು ಹೀಗಿವೆ:

ವಚನ:

ಕರಸ್ಥಲದ ಜ್ಯೋತಿಯಿದು.

ಕರುವಿಟ್ಟ ಎರಕವಿದು.

ಇದರ ನೆಲೆಯ ತಿಳಿದು ನೋಡಿದಡೆ ನಿಜದಾನಂದವು.

ಹೊಲಬುದೋರದ ನಿಸ್ಸಂಗದ ಹೊಲಬನರಿದು

ಕೂಡಿದಾತನೆ ಶರಣ ಕಾಣಾ! ರಾಮಾನಾಥ.

ವಚನ:

ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ

ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ.

ನಿಮ್ಮ ಶರಣರ ಸೂಳ್ನುಡಿಯ ಒಂದರೆಘಳಿಗೆಯಿತ್ತಡೆ

ನಿನ್ನನಿತ್ತೆ ಕಾಣಾ! ರಾಮನಾಥ.

ಈ ಮೇಲಿನ ವಚನಗಳಲ್ಲಿ *'ಕರಸ್ಥಲದ ಜ್ಯೋತಿ'* ಎಂದರೆ ಇಷ್ಟಲಿಂಗ. ಇಷ್ಟಲಿಂಗವು ಗುರು ಬಸವಣ್ಣನವರಿಂದಲೇ ಕೊಡಲ್ಪಟ್ಟಿರುವುದು ನಿರ್ವಿವದಿತ. *"ಶರಣರ ಸೂಳ್ನುಡಿಯ"* ಎಂದು ಹೇಳುವಲ್ಲಿ 12ನೇ ಶತಮಾನದ ಶರಣರ ನುಡಿಗಳೇ ಹೊರತು 11ನೇ ಶತಮಾನದಲ್ಲಿ ಶರಣ ಎನ್ನುವ ಪದ ಬಳಕೆಯಲ್ಲಿರಲಿಲ್ಲ. ಮತ್ತು ಅಂದು ಅನುಭವ ಮಂಟಪದ ಶರಣ ಸಂಕುಲದಂತೆ ಯಾವುದೇ ಸಂತರ/ಶರಣರ ಒಂದು ಸಂಕುಲ ವಿರಲಿಲ್ಲ ಅಲ್ಲಲ್ಲೇ ಸಂತರು ಮಾತ್ರ ಆಗಿ ಹೋಗಿರುವುದನ್ನು ಕಾಣುತ್ತೇವೆ. 

ವಚನ:

ನೆರೆನಂಬಿ ಕರೆದಡೆ ಕುದುರೆಯಾಗಿ ಹರಿಯನೆ?

ಜಗವೆಲ್ಲ ಅರಿಯಲು ತೊರೆಯೊಳಗೆ ಬಿದ್ದ ಲಿಂಗ ಕರೆದಡೆ ಬಂದುದು ಕರಸ್ಥಲಕ್ಕೆ

ನಂಬದೆ ಕರೆದವರ ಹಂಬಲವನ್ನೊಲ್ಲನೆಮ್ಮ ರಾಮನಾಥ

ಜೇಡರ ದಾಸಯ್ಯನವರು ಅನುಭಾವ ಮಂಟಪದ ಶರಣ ಸಂಕುಲದಲ್ಲಿ ಒಬ್ಬರಾಗಿದ್ದರು ಎನ್ನುವುದಕ್ಕೆ  ಮೇಲಿನ ವಚನವೂ ಮಹತ್ವಪೂರ್ಣವಾದ ನಿರ್ದರ್ಶನವಾಗಿದೆ. 

ನುಲಿಯ ಚೆಂದಯ್ಯನವರು ಒಮ್ಮೆ ತೊರೆಯ ದಡದಲ್ಲಿ ನುಲಿಯ ಹುಲ್ಲನು ಕೊಯ್ಯುವಾಗ ಅವರು ಇಷ್ಟಲಿಂಗ ಕಟ್ಟಿಕೊಂಡ ವಸ್ತ್ರಕ್ಕೆ ಕುಡುಗೋಲು ತಾಗಿ ಇಷ್ಟಲಿಂಗವು ತೊರೆಯಲ್ಲಿ ಬಿದ್ದು ಹೋಗುತ್ತದೆ. ಸಂಜೆಯಾದ್ದರಿಂದ ನೀರಲ್ಲಿ ಮುಳುಗಿ ಇಷ್ಟಲಿಂಗವನ್ನು ಹುಡುಕಲಿಕ್ಕಾಗದೆ ಅವರು ಇಷ್ಟಲಿಂಗ ರಹಿತವಾಗಿ ಅನುಭಾವ ಮಂಟಪಕ್ಕೆ ಹೋಗುತ್ತಾರೆ. ಈ ಬಗ್ಗೆ ಶೂನ್ಯ ಸಂಪಾದನೆಯಲ್ಲಿ ಪ್ರಸ್ತಾಪಿಸಲಾಗಿದೆ. ಬಹುಶಃ ಮರುದಿನ ಅವರು ಅದೇ ಜಾಗಕ್ಕೆ ಹೋಗಿ ನೀರಿನಲ್ಲಿ ಮುಳುಗಿ ಹುಡುಕಿದಾಗ ಅದೇ ಇಷ್ಟಲಿಂಗ ಸಿಕ್ಕಿದೆ. ಈ ಘಟನೆಯನ್ನು ಜೇಡರ ದಾಸಯ್ಯನವರು ತಮ್ಮ ಮೇಲಿನ ವಚನದಲ್ಲಿ *ಜಗವೆಲ್ಲ ಅರಿಯಲು ತೊರೆಯೊಳಗೆ ಬಿದ್ದ ಲಿಂಗ ಕರೆದಡೆ ಬಂದುದು ಕರಸ್ಥಲಕ್ಕೆ* ಎಂದು ತಿಳಿಸಿದ್ದಾರೆ.

ಜೇಡರ ದಾಸಯ್ಯನವರ ಹೆಸರನ್ನು ಕೆಲವರು ಜೇಡರ ದಾಸಿಮಯ್ಯ ಎನ್ನುತ್ತಾರೆ ಸಮಗ್ರ ವಚನ ಸಂಪುಟಗಳ ಸಂಪಾದಕರೂ ಹಾಗೆಯೇ ಕರೆದಿದ್ದಾರೆ. ಇದು ತಪ್ಪು. ಅವರ ಸರಿಯಾದ ಹೆಸರು ಜೇಡರ ದಾಸಯ್ಯ. ಶರಣೆ ದುಗ್ಗಳೆಯವರ ವಚನಾಂಕಿತ ʼದಾಸಯ್ಯ ಪ್ರಿಯ ರಾಮನಾಥʼ ದಿಂದ ಇದು ಮನವರಿಕೆಯಾಗುತ್ತದೆ.

ಹೀಗಾಗಿ ಪ್ರಥಮ ವಚನಕಾರರು ಗುರು ಬಸವಣ್ಣನವರೇ ಹೊರತು ದೇವರದಾಸಿಮಯ್ಯ ಅಥವಾ ಜೇಡರದಾಸಯ್ಯನವರಲ್ಲ.

ಕೆಲವರಿಗೆ ಗುರು ಬಸವಣ್ಣನವರ ಮೇಲೆ ಒಳಗೊಳಗೆ ದ್ವೇಷ ಹೊರಗೆ ಮಾತ್ರ ಪ್ರೀತಿ. ಇಂಥವರು ಗುರು ಬಸವಣ್ಣನವರು ಪ್ರಥಮ ವಚನಕಾರರು ಎಂದು ಹೇಳಲಿಕ್ಕೆ ಅಸೂಯೆ ಪಡುತ್ತಾರೆ. ಆದರೆ ಇವರ ಪ್ರಯತ್ನ ಸೂರ್ಯನನ್ನು ಮರೆಮಾಚುತ್ತೇನೆ ಎನ್ನುವ ಅಜ್ಞಾನಿಯಂತೆ. ಶತಕೋಟಿ ಸೂರ್ಯಪ್ರಭೆ ಹೊಂದಿರುವ ಗುರು ಬಸವಣ್ಣನವರ ವ್ಯಕ್ತಿತ್ವ, ಸಾಮರ್ಥ್ಯ, ದಾರ್ಶನಿಕತ್ವ ಮತ್ತು  ಪ್ರವಾದಿತ್ವವನ್ನು ಮರೆ ಮಾಚಲು ಯಾರಿಂದಲೂ ಸಾಧ್ಯವಿಲ್ಲ...!!!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…