Part 5 : ಲಿಂಗದೇವಾ ಮತ್ತು ಕೂಡಲ ಸಂಗಮದೇವಾ ಒಂದು ಅಧ್ಯಯನ

ಲಿಂಗದೇವಾ ಮತ್ತು ಕೂಡಲ ಸಂಗಮದೇವಾ ಒಂದು ಅಧ್ಯಯನ; ಭಾಗ-5

-ಶರಣ ಸಚ್ಚಿದಾನಂದ ಪ್ರಭು ಚಟ್ನಳ್ಳಿ



ಗುರು ಬಸವಣ್ಣನವರು ಭಕ್ತಿಯ ಪಥದಲ್ಲಿ ಮುನ್ನಡೆಯುತ್ತ, ಬಾಲ್ಯದಲ್ಲಿಯೇ ಶಿವಭಕ್ತಿಯ ಪರಾಕಾಷ್ಠೆಯನ್ನು ತಲುಪುತ್ತಾರೆ. ವೈಚಾರಿಕವಾಗಿ ಬೆಳೆಯುತ್ತಾ ಹೋದಂತೆ ಅವರು ಶಿವನೇ ಬೇರೆ ಸಚರಾಚರ ಬ್ರಹ್ಮಾಂಡಕ್ಕೆಲ್ಲ ಒಡೆಯನಾಗಿ, ಸರ್ವವ್ಯಾಪಿ, ಸರ್ವಶಕ್ತ, ಸರ್ವಜ್ಞನಾದ ದೇವರೇ ಬೇರೆ ಎಂದು ಅರಿಯುತ್ತಾರೆ. ಆಗಲೇ ಅವರ ಹೃದಯದಲ್ಲಿ ಇಷ್ಟಲಿಂಗದ ಕಲ್ಪನೆ ಮೂಡುತ್ತದೆ. ನಿರಾಕಾರ ನಿರವಯನಾದ ಪರಮಾತ್ಮನನ್ನು ಇಷ್ಟಲಿಂಗರೂಪದಲ್ಲಿ ಸಾಕಾರ ಗೊಳಿಸಿ ಅಂತಹ ಪರಮಾತ್ಮನನ್ನು ‘ಲಿಂಗದೇವ’ ಎಂದು ಕರೆದರು. 

*“ಹೊನ್ನ ಹಾವುಗೆಯ ಮೆಟ್ಟಿದವನ! ಮಿಡಿಮುಟ್ಟಿದ ಕೆಂಜೆಡೆಯವನ!"      ಎಂದು ಶಿವನ ನಿಲವು ಮತ್ತು ಸ್ವರೂಪ ವರ್ಣನೆ ಮಾಡುವಂತಹ ಗುರು ಬಸವಣ್ಣನವರು ಬಾಲ್ಯದಲ್ಲಿ ಬರೆದ ವಚನಗಳನ್ನು ಓದಿ "ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ" “ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗವು” ಎನ್ನುವಂಥ ಧರ್ಮಗುರುವಾಗಿ ಗುರು ಬಸವಣ್ಣನವರು ಬರೆದ ದೇವರ ಸ್ವರೂಪದ ವಚನಗಳನ್ನು ಓದಿದಾಗ ಈ ಎರಡೂ ವಚನಗಳಲ್ಲಿರುವ ವಚನಾಂಕಿತದ ಬಗ್ಗೆ ಮನಸಸ್ಸಿನಲ್ಲಿ ಗೊಂದಲ ಏಳಲು ಆರಂಭಿಸುತ್ತದೆ. ಏಕೆಂದರೆ ಹೊನ್ನ ಹಾವುಗೆ ಮೆಟ್ಟಿದವನು, ಕರದಲ್ಲಿ ಕಪಾಲ ಹಿಡಿದವನು, ಚೋಳಂಗೆ ಹೊನ್ನ ಮಳೆ ಕರೆದವನು, ದಕ್ಷನ ಯಜ್ಞವ ಕೆಡಿಸಿದವರು ಜಗದಗಲ ಮುಗಿಲಗಲ ಮಿಗೆಯಗಲವಾಗಿರುವುದಕ್ಕೆ ಸಾಧ್ಯವೇ ಇಲ್ಲ.

ಇಂಥಹ ಶಿವರು ಒಂದಾನೊಂದು ಸೀಮಿತವಾದ ಕಾಲದಲ್ಲಿ ಸೀಮಿತವಾದ ಪ್ರದೇಶದಲ್ಲಿ ಬದುಕಿ ಮತ್ತೊಂದು ದಿನ ಲಿಂಗೈಕ್ಯರಾದವರು. ಹೀಗಾಗಿ ಅವರಿಗೆ ಆದಿ ಮಧ್ಯೆ ಅವಸಾನಗಳೆಲ್ಲವೂ ಇವೆ. "ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ", "ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗವು" ಎಂದು ದೇವರ ಸ್ವರೂಪ ವರ್ಣನೆ ಮಾಡುವಾಗ ಈ ವಿವರಣೆ ಕೂಡಲಸಂಗಮದೇವನಿಗೆ ಹೇಗೆ ಅನ್ವಯವಾಗುತ್ತದೆ ಎನ್ನುವ ಗೊಂದಲ ಎದುರಾಗುತ್ತದೆ. ಎರಡೂ ಸಂದರ್ಭದಲ್ಲಿ ‘ಕೂಡಲಸಂಗಮದೇವಾ' ಎನ್ನುವ ವಚನಾಂಕಿತವೇ ಸೂಕ್ತವಿದೆ ಎಂದು ತಿಳಿದರೆ ಇದು ಬಹುದೊಡ್ಡ  ತಾತ್ವಿಕ ದೋಷವಾಗುತ್ತದೆ. 


ಈ ಕೆಳಗಿನ ಎರಡು ವಚನಗಳನ್ನು ಅವಲೋಕಿಸೋಣ


ಬಾಲಕ ಬಸವಣ್ಣನವರ ವಚನ:

ಶಿವಲೋಕಕ್ಕೆ ಸರಿ ಬೇರೆ ಲೋಕವಿಲ್ಲ,

ಶಿವಮಂತ್ರಕ್ಕೆ ಸರಿ ಬೇರೆ ಮಂತ್ರವಿಲ್ಲ. 

ಜಗಕ್ಕೆ ಇಕ್ಕಿದೆ ಮುಂಡಿಗೆಯನೆತ್ತಿಕೊಳ್ಳಿ

ಕೂಡಲಸಂಗಮದೇವನೊಬ್ಬನೆ ದೈವವೆಂದು.


ಧರ್ವಗುರು ಬಸವಣ್ಣನವರ ವಚನ:

ಭಕ್ತಿಯೆಂಬ ಪಿತ್ತ ತಲೆಗೇರಿ ಕೈಲಾಸದ ಬಟ್ಟೆಯ

ಹತ್ತುವ ವ್ಯರ್ಥರ ಕಂಡು ಎನ್ನ ಮನ ನಾಚಿತ್ತು, ನಾಚಿತ್ತು.

ಕೈಲಾಸವೆಂಬುದೇನೊ, ಪೃಥ್ವಿಯ ಮೇಲೊಂದು ಮೊರಡಿ,

ಆ ಪೃಥ್ವಿಗೆ ಲಯವುಂಟು, ಆ ಮೊರಡಿಗೆಯೂ ಲಯವುಂಟು,  

ಅಲ್ಲಿರ್ಪ ಗಂಗೆ ವಾಳುಕ ಸಮ ರುದ್ರರಿಗೂ ಲಯವುಂಟು,       

ಇದು ಕಾರಣ, `ಯದ್ಧೃಷ್ಟಂ ತನ್ನಷ್ಟಂ' ಎಂಬ

ಶ್ರುತಿಯ ನೋಡಿ ತಿಳಿದು, ಬಟ್ಟಬಯಲು ತುಟ್ಟತುದಿಯ

ಮೆಟ್ಟಿ ನಿಂದ ಲಿಂಗದೇವಾ, ನಿಮ್ಮ ಶರಣ.

ಮೊದಲ ವಚನದಲ್ಲಿ, ಶಿವಲೋಕ ಅರ್ಥಾತ್ ಕೈಲಾಸಕ್ಕೆ ಸರಿ ಬೇರೆ ಲೋಕವಿಲ್ಲ ಎಂದ ಬಾಲಕ ಬಸವಣ್ಣನವರು, ಧರ್ಮಗುರುವಾಗಿ ಬರೆದ ನಂತರದ  ವಚನದಲ್ಲಿ ಕೈಲಾಸವೆಂಬುದೊಂದು ಮೊರಡಿ (ಮಣ್ಣುಕಲ್ಲಿನ ದಿಬ್ಬ) ಅದಕ್ಕೂ ನಾಶವಿದೆ ಅಲ್ಲಿರುವ ಗಂಗೆಯ ತಡಿಯಲ್ಲಿರುವ ಮರಳಿನಷ್ಟು ಸಂಖ್ಯೆಯಲ್ಲಿರುವ ರುದ್ರರಿಗೂ ನಾಶವಿದೆ ಎನ್ನುತ್ತಾರೆ. ಲಿಂಗದೇವನ ಶರಣರು ಕೈಲಾಸದ ಆಕಾಂಕ್ಷಿಗಳಲ್ಲ ಆದರೆ ಕೂಡಲಸಂಗಮದೇವನ ಶರಣರು ಎಲ್ಲರೂ ಕೈಲಾಸದ ಆಕಾಂಕ್ಷಿಗಳಾಗಿದ್ದರು. ಹೀಗಾಗಿ ಮೊದಲನೆ ವಚನದಲ್ಲಿ (ಬಾಲ್ಯದಲ್ಲಿ ಬರೆದ ವಚನಗಳಲ್ಲಿ)*ಕೂಡಲಸಂಗಮದೇವ* ವಚನಾಂಕಿತ ಸೂಕ್ತವಾಗುತ್ತದೆ ಮತ್ತು ಎರಡನೇ ವಚನದಲ್ಲಿ (ಧರ್ಮಗುರುವಾಗಿ ಬರೆದ ವಚನಗಳಲ್ಲಿ) *ಲಿಂಗದೇವ* ವಚನಾಂಕಿತವೇ ಸೂಕ್ತವಾಗುತ್ತದೆ.

*ಹೀಗೆ ಗುರು ಬಸವಣ್ಣನವರಿಗೆ ಲಿಂಗದೇವನ ಸಾಕ್ಷಾತ್ಕಾರವಾದ ನಂತರ ಅವರು ಬರೆದ ವಚನಗಳಿಗೂ ಬಾಲ್ಯದಲ್ಲಿ ಅವರು ಬರೆದ ವಚನಗಳಿಗೂ ತುಂಬಾ ವ್ಯತ್ಯಾಸವಿದೆ ಮಾತ್ರವಲ್ಲ ಕೆಲವೊಂದು ವಚನಗಳು ತದ್ವಿರುದ್ಧವಾದ ವಿಚಾರಗಳನ್ನು ಹೊಂದಿವೆ. ಆದ್ದರಿಂದ ಗುರು ಬಸವಣ್ಣನವರು ಬಾಲ್ಯದಲ್ಲಿ ಬರೆದ ತಮ್ಮ ಕೆಲವು ವಚನಗಳನ್ನು ಧರ್ಮಗುರುವಾಗಿ ಬರೆದ ವಚನಗಳಿಂದ ಸ್ಥಾನ ಪಲ್ಲಟ (Suಠಿeಡಿseಜe) ಮಾಡಿದ್ದಾರೆ. ಬಾಲ್ಯದಲ್ಲಿ ಅವರು ಬರೆದ ಎಲ್ಲಾ ವಚನಗಳು ಅವರು ಕೊಟ್ಟ ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳಿಗೆ ಅನ್ವಯಿಸುವುದಿಲ್ಲ. ಅದಕ್ಕಾಗಿ ಯಾರೂ ಬಾಲ್ಯದಲ್ಲಿ ಅವರು ಬರೆದ ವಚನಗಳನ್ನಿಟ್ಟುಕೊಂಡು ಲಿಂಗಾಯತ ಧರ್ಮದ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ.*

ಈ ಕಾರಣಕ್ಕಾಗಿಯೇ ಬಸವ ಧರ್ಮದ ಮಹಾಜಗದ್ಗುರು ಪೀಠದ ದ್ವಿತೀಯ ಪೀಠಾಧೀಶರಾಗಿದ್ದ ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರು ಪರಮಾತ್ಮನ ಸಾಕ್ಷಾತ್ಕಾರವಾದ ನಂತರ ಗುರು ಬಸವಣ್ಣನವರು ಬರೆದ ವಚನಗಳಿಗೆ ತಾತ್ವಿಕ ಆಧಾರದ ಮೇಲೆ ಕೂಡಲಸಂಗಮದೇವ ಎನ್ನುವ ವಚನಾಂಕಿತದ ಬದಲಿಗೆ ಗುರುಬಸವಣ್ಣನವರೇ ಕೂಡಲ ಸಂಗಮದೇವ ಪದಕ್ಕೆ ಸಮನಾಗಿ ಹಲವಾರು ವಚನಗಳಲ್ಲಿ ಬಳಸಿರುವ  ‘ಲಿಂಗದೇವ' ಎನ್ನುವ ತಾತ್ವಿಕ ವಚನಾಂಕಿತವನ್ನು ಅಳವಡಿಸಿ ವಚನಗಳನ್ನು ತಾತ್ವಿಕವಾಗಿ ಸುಸಂಬದ್ಧಗೊಳಿಸಿದ್ದಾರೆ. ವಚನ ಸಾಹಿತ್ಯ ಓದುವಾಗ ಉಂಟಾಗುವ ಮೇಲಿನ ಗೊಂದಲಗಳನ್ನು ಪರಿಹರಿಸಿದ್ದಾರೆ.

*ಕೇವಲ ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರ ಮೇಲಿನ ದ್ವೇಷದಿಂದ ಗುರು ಬಸವಣ್ಣನವರ ತತ್ವಕ್ಕೆ ಮೆರಗನ್ನು ಕೊಡುವ ಅವರ ವಚನಗಳಿಗೆ ತಾತ್ವಿಕ ಸುಸಂಬದ್ಧತೆಯನ್ನು ಒದಗಿಸುವ ಲಿಂಗದೇವ ವಚನಾಂಕಿತವನ್ನು ಅನೇಕರು ದ್ವೇಷಿಸಿದ್ದಾರೆಯೇ ಹೊರತು ವಚನ ಸಾಹಿತ್ಯದ ಅಧ್ಯಯನದ ಬಲದಿಂದಲ್ಲ.* 

ವಚನ ಶಾಸ್ತ್ರೋಕ್ತವಾಗಿ ಸಂಶೊಧನಾತ್ಮಕವಾಗಿ ಲಿಂಗದೇವ ಹೇಗೆ ಗುರು ಬಸವಣ್ಣನವರ ಎರಡನೇ ವಚನಾಂಕಿತವಾಗುತ್ತದೆ ಎನ್ನುವುದನ್ನು ಸವಿವರವಾಗಿ ನಾನು *ಹರನೆಡೆಯಿಂದ ಪರಮನೆಡೆಗೆ* ಗ್ರಂಥದಲ್ಲಿ ಬರೆದಿದ್ದೇನೆ. ಲಿಂಗದೇವ ವಚನಾಂಕಿತ ಒಪ್ಪುವವರು ಮತ್ತು ಒಪ್ಪದವರೂ ಈ ಗ್ರಂಥವನ್ನು ಒಮ್ಮೆ ಓದಬೇಕೆಂದು ಒತ್ತಾಯಿಸುತ್ತೇನೆ. ಲಿಂಗದೇವ ವಚನಾಂಕಿತ ಒಪ್ಪುವವರು ಒಪ್ಪದವರಿಗೆ ಮನದಟ್ಟು ಮಾಡಿಕೊಡುವುದಕ್ಕಾಗಿ ಈ ಗ್ರಂಥವನ್ನು ಓದಬೇಕು. ಒಪ್ಪದವರು ಒಪ್ಪಿಕೊಳ್ಳುವುದಕ್ಕಾಗಿ ಈ ಗ್ರಂಥವನ್ನು ಓದಬೇಕು. ಇನ್ನೂ ಹೆಚ್ಚಿನ ವಿಚಾರಗಳನ್ನು ನನ್ನ ಮುಂದಿನ ಕೃತಿಯಲ್ಲಿ ಬರೆಯುತ್ತೇನೆ.

ಶರಣು ಶರಣಾರ್ಥಿಗಳು

ಶರಣ ಸಚ್ಚಿದಾನಂದ ಪ್ರಭು ಚಟ್ನಳ್ಳಿ



ಕಾಮೆಂಟ್‌ಗಳು

  1. ಲಿಂಗದೇವ ಅಂಕಿತ ನಾಮ ಬಸವಣ್ಣನವರು ಇಷ್ಟಲಿಂಗ ಸಂಶೋಧನೆ ಮಾಡಿದ ಮೇಲಿನ ವಚನಗಳಿಗೆ ಸೂಕ್ತ ಶರಣುಶರಣಾರ್ಥಿ ರಾಷ್ಟ್ರೀಯ ಬಸವದಳ ಕಲಬುರಗಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…