ಅಖಂಡ ಬ್ರಹ್ಮಚಾರಿ ಗುರು ಬಸವಣ್ಣನವರೊಬ್ಬರೇ

 ಅಖಂಡ ಬ್ರಹ್ಮಚಾರಿ ಗುರು ಬಸವಣ್ಣನವರೊಬ್ಬರೇ


ಸತಿಯ ಕಂಡು ವ್ರತಿಯಾದ ಬಸವಣ್ಣ. ವ್ರತಿಯಾಗಿ ಬ್ರಹ್ಮಚಾರಿಯಾದ ಬಸವಣ್ಣ. ಬ್ರಹ್ಮಚಾರಿಯಾಗಿ ಭವಗೆಟ್ಟನಯ್ಯಾ ಬಸವಣ್ಣ. ಗುಹೇಶ್ವರ ಲಿಂಗದಲ್ಲಿ ಅಖಂಡ ಬ್ರಹ್ಮಚಾರಿ ಬಸವಣ್ಣ ಒಬ್ಬನೇ.

ಬ್ರಹ್ಮಚರ್ಯೆ ಎನ್ನುವುದು ಬಹುದೊಡ್ಡ ಸಾಧನೆ. ಅದು ಕೇವಲ ಸಾಧನೆ ಮಾಡಿ ಬಿಡುವಂತಹುದಲ್ಲ ಇಡೀ ಜೀವಮಾನವೆಲ್ಲ ಕಾಯ್ದುಕೊಳ್ಳುವಂತಹದ್ದು. ಗುರು ಬಸವಣ್ಣನವರ ಬಗ್ಗೆ ಗುರು ಅಲ್ಲಮಪ್ರಭುದೇವರು ಹೇಳುವ ಮೇಲಿನ ವಚನದಲ್ಲಿ ವಿಶೇಷವಾದ ಅರ್ಥವಿದೆ. ಗುರು ಬಸವಣ್ಣನವರ ಕೆಲವು ವಚನಗಳನ್ನು ಗಮನಿಸಿದರೆ ಅವರು ಸಾಧಿಸಿದ ಸಾಧನೆ ಮತ್ತು ತಾವು ಮದುವೆಯಾಗಿ ಕರೆತಂದ ಶರಣೆ ನೀಲಗಂಗಮ್ಮನವರಿಗೂ ಬೋಧಿಸಿದ ಬೋಧನೆ ಅಗಾಧವಾದುದು. 

ಮೊದಲಿಗೆ ಇಬ್ಬರು ಸತಿಪತಿಗಳಾಗಿ ಬದುಕಿ ನಂತರದ ದಿನಗಳಲ್ಲಿ ಇಬ್ಬರೂ ಲಿಂಗದೇವರಿಗೆ ಸತಿಯಾದರು. ಗುರು ಬಸವಣ್ಣನವರ ಈ ಕೆಳಗಿನ ವಚನ ಅವರು ಮದುವೆಯಾಗಿ ಶರಣೆ ನೀಲಗಂಗಮ್ಮನವರನ್ನು ಮನೆ ತುಂಬಿಸಿಕೊಂಡ ದಿನ ಬರೆದ ವಚನ ಎನಿಸುತ್ತದೆ. ಆ ವಚನದ ಸಾಲುಗಳು ಹೀಗಿವೆ:

*ಐದು ಮಾನವ ಕುಟ್ಟಿ ಒಂದು ಮಾನವ ಮಾಡು, ಕಂಡಾ ಮದವಳಿಗೆ!*

*ಇದು ನಮ್ಮ ಬಾಳುವೆ, ಮದವಳಿಗೆ! ಇದು ನಮ್ಮ ವಿಸ್ತಾರ, ಮದವಳಿಗೆ!*

ಐದು ಮಾನ ಎಂದರೆ ಐದು ಸೇರು (ಧಾನ್ಯಗಳ ಅಳತೆ ಮಾಡುವ ಒಂದು ಅಳತೆಗೋಲು) ಐದು ಸೇರು ಇರುವಂತಹ ಧಾನ್ಯಗಳನ್ನು ಕುಟ್ಟಿ ಒಂದೇ ಮಾನವ ಮಾಡು - ಒಂದೇ ಸೇರು ಮಾಡು. ಎಂದರೆ ಪಂಚೇಂದ್ರೀಯಗಳೊಡನೆ ಕೂಡಿ ಚರಿಸುವಂಥ ಮನವನ್ನು ಲಿಂಗಾನುಭಾವದ ಒನಕೆಯಿಂದ ಕುಟ್ಟಿ ಒಂದೇ ಮನ - ಉನ್ಮನವನ್ನಾಗಿ ಮಾಡು. ಆ ಮನ ಸದಾ ಲಿಂಗದೇವನ ಧ್ಯಾನದಲ್ಲಿರುವಂತೆ ಮಾಡು, ಇದೇ ನಮ್ಮ ಮುಂದಿನ ಬಾಳುವೆ ಇದುವೇ ನಮ್ಮ ವಿಸ್ತಾರ - ನಾವು ಸಾಧಿಸಬೇಕಾದ ಸಾಧನೆ, ಎಂದು ಇನ್ನು ಮದುಮಗಳಾಗಿರುವ ಶರಣೆ ನೀಲಗಂಗಮ್ಮನವರಿಗೆ ಹೇಳುತ್ತಿದ್ದಾರೆ. 

*ಅದರಂತೆ ಲೋಕರೂಢಿಗಾಗಿ ಮತ್ತು ಗ್ರಹಸ್ಥ ಜಂಗಮರಿಗೆ ಆದರ್ಶ ವಾಗಿ ನಿಲ್ಲಲು ಕೆಲ ಕಾಲ ಅವರು ಸತಿಪತಿಯಂತೆ ಇದ್ದರೂ ನಂತರ ತಾಯಿ ಮಗ ತಂದೆ ಮಗಳು ಎನ್ನುವ ಭಾವವನ್ನಳವಡಿಸಿಕೊಂಡಿರುವುದನ್ನು ಪರಮದಾಸೋಹಿ ಮಹಾ ಶರಣೆ ನೀಲಗಂಗಮ್ಮನವರ ಈ ವಚನದಿಂದ ಕಂಡುಕೊಳ್ಳಬಹುದು.*

ಮಡದಿ ಎನಲಾಗದು ಬಸವಂಗೆ ಎನ್ನನು. ಪುರುಷನೆನಲಾಗದು ಬಸವನ ಎನಗೆ. ಭಯದ ಕುಳವ ಹರಿದು ಬಸವಂಗೆ ಶಿಶುವಾನಾದೆನು, ಬಸವನೆನ್ನ ಶಿಶುವಾದನು. ಪ್ರಮಥರು ಪುರಾತರು ಸಾಕ್ಷಿಯಾಗಿ ಸಂಗಯ್ಯನಿಕ್ಕಿದ ದಿಬ್ಯವ ಮೀರದೆ ಬಸವನೊಳಗಾನಡಗಿದೆ.

*ಮದುವೆಯಾದ ಮೊದಲ ದಿನ ಗುರು ಬಸವಣ್ಣನವರು ಶರಣೆ ನೀಲಗಂಗಮ್ಮನವರಿಗೆ ಹೇಳಿದ ಉಪದೇಶವನ್ನು ಆ ತಾಯಿ ಸಾಧಿಸಿಬಿಟ್ಟರು.*

ಇತ್ತೀಚೆಗೆ ಒಂದು ವಚನದಲ್ಲಿ ನಾನೊಂದು ಹೊಸ ಶಬ್ದವನ್ನು ಸಂಶೋಧಿಸಿದ್ದೇನೆ. ವಚನ ಸಂಖ್ಯೆ 48ರಲ್ಲಿ ವಚನ ಸಂಪುಟದಲ್ಲಿ ಪ್ರಕಟವಾದ ವಚನಹೀಗಿದೆ:

ಕಾಯವಿಕಾರ ಕಾಡಿಹುದಯ್ಯಾ, ಮನೋವಿಕಾರ ಕೂಡಿಹುದಯ್ಯಾ. ಇಂದ್ರಿಯ ವಿಕಾರ ಸುಳಿವುದಯ್ಯಾ !ಸುಳುವಿನೊಳಗೆ ಸುಳಿವುತ್ತಲಿದ್ದೇನೆ, ಸಿಲುಕಿಸದಿರಯ್ಯಾ !ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ. ಅನುಪಮಸುಖಸಾರಾಯ ಶರಣರಲ್ಲಿ-ಕೂಡಲಸಂಗಮದೇವಯ್ಯಾ, ಇದನೆ ಬೇಡುವೆನಯ್ಯಾ.

ಈ ವಚನವನ್ನು ಹತ್ತಾರು ಬಾರಿ ಓದಿದಾಗ, “ಅನುಪಮಸುಖಸಾರಾಯ ಶರಣರಲ್ಲಿ- “ಕೂಡಲಸಂಗಮದೇವಯ್ಯಾ, ಇದನೆ ಬೇಡುವೆನಯ್ಯಾ.” ಎನ್ನುವ ಈ ವಚನದ ಈ ಸಾಲಿನಲ್ಲಿ ದೋಷವಿದೆ ಎಂದು ನನಗೆ ಭಾಸವಾಗಲಾರಂಬಿಸಿತು. ಏಕೆಂದರೆ ಗುರು ಬಸವಣ್ಣನವರು ಶರಣರಿಗೆ ಬೇಡಿದ ವರವನ್ನು ನೀಡುವಂಥವರು. 

ತನುವ ಬೇಡಿದಡೀವೆ, ಮನವ ಬೇಡಿದಡೀವೆ,ಧನವ ಬೇಡಿದಡೀವೆ ನಿಮ್ಮ ಶರಣಂಗೆ. ಎನಗೆ ಬೇಕೆಂಬ ಭಾವ ಮನದಲ್ಲಿ ಹೊಳೆದಡೆ ಘನಮಹಿಮ, ನಿಮ್ಮ ಪಾದದಾಣೆ.

ಎಂದು ಇನ್ನೊಂದು ವಚನದಲ್ಲಿ ಹೇಳಿದ್ದಾರೆ. ಈ ವಚನದ ಆಧಾರದಿಂದ ಗುರು ಬಸವಣ್ಣನವರು ಶರಣರಲ್ಲಿ ವರವ ಬೇಡುವವರಲ್ಲ ಎಂದು ಮನದಟ್ಟಾಯಿತು. ಶರಣರಲ್ಲಿ ಬೇಡಿದರೆ ಭಕ್ತಿಯ ಭಿಕ್ಷೆ (ಎಲ್ಲರೂ  ಭಕ್ತಿವಂತರಾಗಿ ಎಂದು) ಬೇಡುತ್ತಾರೆ: 

ಭಕ್ತಿಯಿಲ್ಲದ ಬಡವ ನಾನಯ್ಯಾ: ಕಕ್ಕಯ್ಯನ ಮನೆಯಲ್ಲೂ ಬೇಡಿದೆ, ಚೆನ್ನಯ್ಯನ ಮನೆಯಲ್ಲೂ ಬೇಡಿದೆ, ದಾಸಯ್ಯನ ಮನೆಯಲ್ಲೂ ಬೇಡಿದೆ.”

*ಅವರ ಸಮಕಾಲೀನ ಶರಣರಾದ ಬಸವ ಕಲ್ಯಾಣದಲ್ಲಿ ವಾಸವಾಗಿದ್ದ ಶರಣ ಕಕ್ಕಯ್ಯ, ಚೆನ್ನಯ್ಯ ಮತ್ತು ದಾಸಯ್ಯನವರ ಮನೆಗ ಹೋಗಿ  ಅವರಿಗೆ ಲಿಂಗಾಯತ ಧರ್ಮದ ಬಗ್ಗೆ ತಿಳಿಹೇಳಿ ಲಿಂಗದೇವನಿಗೆ ಭಕ್ತರಾಗಿರಿ ಎಂದು ಹೇಳುವುದೇ ಗುರು ಬಸವಣ್ಣನವರು ಬೇಡುವ ಭಕ್ತಿ ಭಿಕ್ಷೆಯಾಗಿದೆ.*

ಈಗ 48ನೇ ಸಂಖ್ಯೆಯಲ್ಲಿ ಪ್ರಕಟವಾದ ಗುರು ಬಸವಣ್ಣನವರ ವಚನವನ್ನು ನೋಡೋಣ. ನಾನು ಈ ವಚನದಲ್ಲಿ ಸಂಶೋಧಿಸಿದ ಒಂದು ಪದಕ್ಕೆ ಇಡೀ ಕರ್ನಾಟಕದ ಮಠ ಪೀಠಗಳ ಕಾಲನ್ನು ಅಲ್ಲಾಡಿಸುವ ಶಕ್ತಿಯಿದೆ ಎಂದು ಕೆಲವು ತಿಂಗಳುಗಳ ಹಿಂದೆ ನೀಡಿದ ಉಪನ್ಯಾಸದಲ್ಲಿ ಹೇಳಿದ್ದೆ.

ಕಾಯವಿಕಾರ ಕಾಡಿಹುದಯ್ಯಾ, ಮನೋವಿಕಾರ ಕೂಡಿಹುದಯ್ಯಾ. ಇಂದ್ರಿಯ ವಿಕಾರ ಸುಳಿವುದಯ್ಯಾ !

*ಈ ಮೂರು ಸಮಸ್ಯೆಗಳು ಏಕ ಕೋಶ ಜೀವಿಯಿಂದ ಹಿಡಿದು ಬಹುಕೋಶ ಜೀವಿಯವರೆಗೆ ಒಂದೀಂದ್ರೀಯ ಬಲಿಷ್ಠವಾಗಿ ಇತರ ಇಂದ್ರೀಯಗಳು ಗೌಣವಾಗಿರುವ ಜೀವಿಯಿಂದ ಹಿಡಿದು ಪಂಚೇಂದ್ರೀಯಗಳೆಲ್ಲವೂ ಬಲಿಷ್ಠವಾಗಿರುವ ಮನುಷ್ಯ ಜೀವಿಯವರೆಗೂ ಎಲ್ಲಾ ಜೀವಿಗಳಿಗೂ ಕಾಯವಿಕಾರ, ಮನೋವಿಕಾರ, ಇಂದ್ರೀಯವಿಕಾರಗಳು ಇದ್ದೇ ಇರುತ್ತವೆ.* ಮತ್ತು ಇವುಗಳು ಸುಳಿಮಾಡಿ  ಜೀವಿಯನ್ನು ಸುತ್ತಿಸಿ ನಿತ್ರಾಣಗೊಳಿಸುತ್ತವೆ. ಗುರು ಅಲ್ಲಮ ಪ್ರಭುದೇವರ ಈ ಕೆಳಗಿನ ವಚನ ನೋಡಿ:

ಕರಿಯು ಸ್ಪರ್ಶನೇಂದ್ರಿಯದಿಂದ ಬಂಧನವಡೆದಳಿಯಿತ್ತು. ಪತಂಗನು ರೂಪೇಂದ್ರಿಯದಿಂದ ಬಂಧನವಡೆದಳಿಯಿತ್ತು. ಭೃಂಗನು ಗಂಧೇಂದ್ರಿಯದಿಂದ ಬಂಧನವಡೆದಳಿಯಿತ್ತು. ಕುರಂಗನು ಶಬ್ದೇಂದ್ರಿಯದಿಂದ ಬಂಧನವಡೆದಳಿಯಿತ್ತು. ಮತ್ಸ್ಯವು ರಸನೇಂದ್ರಿಯದಿಂದ ಬಂಧನವಡೆದಳಿಯಿತ್ತು. ಇಂತೀ; ಒಂದೊಂದು ಇಂದ್ರಿಯೋದ್ರೇಕದಿಂದ ಒಂದೊಂದು ಪ್ರಾಣಿಯು ಪ್ರಳಯವಾಯಿತ್ತು. ಪಂಚೇಂದ್ರಿಯಂಗಳ, ಒಂದು ಘಟದಲ್ಲಿ ತಾಳಿಹ ಮನುಷ್ಯ ಪ್ರಾಣಿಗಳಿಗೆ, ಮರವೆ ಎಡೆಗೊಂಡು ದೇಹಮೋಹಭ್ರಾಂತು ಮುಸುಕಿ ಮಾಯೆಯ ಬಾಯ ತುತ್ತಹುದು ಚೋದ್ಯವೇನು ಹೇಳಾ ಗುಹೇಶ್ವರಾ ?

(ಕುರಂಗ = ಜಿಂಕೆ, ಚ್ಯೋದ್ಯ =  ಆಶ್ಚರ್ಯ)

ಒಂದೊಂದು ಪ್ರಾಣಿಯಲ್ಲಿ ಒಂದೊಂದು ಇಂದ್ರೀಯವಿಕಾರವಿದೆ ಅವುಗಳಿಂದ ಆ ಪ್ರಾಣಿಗಳು ಬಂಧನ/ವಿನಾಶಕ್ಕೊಳಗಾಗುತ್ತವೆ. ಆದರೆ ಮನುಷ್ಯ ಪ್ರಾಣಿಯಲ್ಲಿ ಈ ಐದೂ ಇಂದ್ರೀಯಗಳು ವಿಕಾರ ತಾಳುತ್ತವೆ. ಇದರಿಂದ ಮನುಷ್ಯನ ವಿನಾಶ, ನೈತಿಕ ಅಧಃಪತನವಾಗುವುದರಲ್ಲಿ ಆಶ್ಚರ್ಯವಿಲ್ಲ ಎಂದು ಗುರು ಅಲ್ಲಮ ಪ್ರಭುದೇವರು ಮೇಲಿನ ವಚನದಲ್ಲಿ ಹೇಳುತ್ತಿದ್ದಾರೆ.

ಸುಳುವಿನೊಳಗೆ ಸುಳಿವುತ್ತಲಿದ್ದೇನೆ, ಸಿಲುಕಿಸದಿರಯ್ಯಾ ! ಅದಕ್ಕಾಗಿ ಇಂತಹ ಸುಳಿಯಲ್ಲಿ ಸಿಲುಕಿಸದರಿರಯ್ಯಾ ಎಂದು ಲಿಂಗದೇವನಲ್ಲಿ ಗುರು ಬಸವಣ್ಣನವರು ಮೊರೆಯಿಡುತ್ತಾರೆ. ಮತ್ತು ಮೊರೆಯಿಡಲು ನಮಗೆ ಕಲಿಸುತ್ತಾರೆ.

ಮೇಲಿನ ನಾಲ್ಕು ಸಾಲುಗಳಲ್ಲಿ ಸಮಸ್ಯೆಯನ್ನು ಹೇಳಿ ಮುಂದಿನ ಮೂರು ಸಾಲುಗಳಲ್ಲಿ ಅದಕ್ಕಿರುವ ಪರಿಹಾರವೇನೆಂದು ಕಂಡುಕೊಳ್ಳುತ್ತಾರೆ. ಅವುಗಳು ಹೀಗಿವೆ.

ಅನ್ಯ ಚಿತ್ತದಲ್ಲಿರಿಸದಿರಯ್ಯಾ - ಅನ್ಯ ಚಿತ್ತವನ್ನು ತೊಡೆದುಕೊಳ್ಳುವುದರಿಂದ ಕಾಯವಿಕಾರ ತೊಲಗುತ್ತದೆ.

ನಿಮ್ಮ ಚಿತ್ತದಲ್ಲಿರಿಸದಿರಯ್ಯಾ – ಸದಾಕಾಲ ಲಿಂಗದೇವನ ಚಿತ್ತದಲ್ಲಿರುವುದರಿಂದ ಮನೋವಿಕಾರ ತೊಲಗುತ್ತದೆ. ಏಕೆಂದರೆ “ ಮನವು ಮಹಾಘನಕ್ಕೆ ಶರಣುಗತಿವೊಕ್ಕುದಾಗಿ” ಅದು ಲಿಂಗದೇವನ ಹಿಡಿತದಲ್ಲಿರುತ್ತದೆ.

ಇಂದ್ರಿಯ ವಿಕಾರ ಸುಳಿವುದಯ್ಯಾ !* ಈ ಮೂರನೆ ಸಮಸ್ಯೆಗೂ ಪರಿಹಾರ ಬೇಕಲ್ಲ! ಅದು ಈಗ ಪ್ರಕಟವಾಗಿರುವ ವಚನದಲ್ಲಿಲ್ಲ. ಹೀಗಾಗಿ ನಾನು ಹಲವಾರು ಪ್ರಕಟಣೆಗಳಲ್ಲಿ ಈ ವಚನವವನ್ನು ಹುಡುಕಿದಾಗ ಒಂದು ಪ್ರಕಟಣೆಯಲ್ಲಿ ಅಡಿಟಿಪ್ಪಣಿಯ ಪಾಠಾಂತರಗಳಲ್ಲಿ 

“ಅನುಪಮಸುಖಸಾರಾಯ ಶರಣರಲ್ಲಿ ಕೂಡಿಸು,  ಕೂಡಲಸಂಗಮದೇವಯ್ಯಾ, ಇದೇ ವರವ ನಿಮ್ಮಲ್ಲಿ ಬೇಡುವೆನಯ್ಯಾ.”* ಎನ್ನುವ ಶಬ್ದಗಳು ಗೋಚರಿಸಿದವು. 

         ಇದರಿಂದ ನನಗಾದ ಸಂತೋಷ ಅಷ್ಟಿಷ್ಟಲ್ಲ!

ಹಾಗದರೆ ಇದರ ಅರ್ಥವೇನೆಂದು ನೋಡೋಣ:

ಅನುಪಮಸುಖಸಾರಾಯ ಶರಣರಲ್ಲಿ ಕೂಡಿಸು – ಶರಣರ ಸಂಗದಲ್ಲಿರುವುದರಿಂದ ಮಾತ್ರ ಒಬ್ಬ ವ್ಯಕ್ತಿ ಇಂದ್ರೀಯ ವಿಕಾರಗಳನ್ನು ಗೆಲ್ಲಲು ಸಾಧ್ಯವಿದೆ.

ಯಾವ ಜಂಗಮರು ಕಾವಿಗಳು ಶರಣರ ಸಂಗದಲ್ಲಿ ಅಂದರೆ ಸಾಮೂಹಿಕ ಪ್ರಾರ್ಥನೆ, ನೆನಹು, ಮತ್ತು ಶರಣರ ಅನುಭಾವಗೋಷ್ಠಿಗಳಲ್ಲಿ ನಿರಂತರವಾಗಿ ಭಾಗವಹಿಸುವುದಿಲ್ಲವೋ ಅವರು ಇಂದ್ರೀಯವಿಕಾರಗಳನ್ನು ಗೆಲ್ಲಲು ಸಾಧ್ಯವೇ ಇಲ್ಲ ಎನ್ನುವ ನಿರ್ಣಯವನ್ನು ಈ ವಚನ ಕೊಡುತ್ತದೆ.*

ಲಿಂಗದೇವಯ್ಯಾ ಇದೇ ವರವ ನಿಮ್ಮಲ್ಲಿ ಬೇಡುವೆನಯ್ಯಾ ಎಂದು ಗುರು ಬಸವಣ್ಣನವರು ಈ ಮೂರು ಸಮಸ್ಯೆಗಳಿಗೆ ಮೂರು ವರಗಳನ್ನು ಲಿಂಗದೇವರಲ್ಲಿ ಬೇಡುತ್ತಿದ್ದಾರೆ. ಮತ್ತು ನಮಗೆ ಯಾವ ವರವನ್ನು ಲಿಂಗದೇವರಲ್ಲಿ ಬೇಡಬೇಕು ಎಂದು ತಿಳಸಿಕೊಡುತ್ತಿದ್ದಾರೆ.

ಈ ವಚನದ ಆಳಕ್ಕೆ ಇಳಿದು ಇಂದಿನ ಮಠ ಪೀಠ ಗಳ ಪೀಠಾಧೀಶರ ಬ್ರಹ್ಮಚರ್ಯೆಯನ್ನು ವಿಶ್ಲೇಷಿಸುವುದಾದರೆ, ಕೆಲವರು ಮಾತ್ರ ದಿನಕ್ಕೊಂದು ಗಂಟೆಯಂತೆ ಪ್ರವಚನ ಮಾಡುತ್ತಾರೆ ಇಂತಹವರಿಗೆ ತಕ್ಕಮಟ್ಟಿಗೆ ಶರಣರ ಸಂಗ ದೊರೆಯುತ್ತದೆ. ಆದರೆ  ಹೆಚ್ಚಿನ ಕಾವಿಗಳು ಧರ್ಮ ಪ್ರಚಾರ ವಚನಗಳ ಅಧ್ಯಯನ ಬಿಟ್ಟು, ಕೇವಲ ಶಾಲೆ ಕಾಲೇಜು ಕಾಂಪ್ಲೆಕ್ಸ ಗಳನ್ನು ಮಾಡಿಕೊಂಡು ಅಪಾರವಾದ ಧನವನ್ನು ಸಂಪಾದಿಸುತ್ತಾರೆ ಈ ಧನದ ಅಮಲು ಅವರನ್ನು ಖಂಡಿತವಾಗಿಯೂ ಇಂದ್ರೀಯ ವಿಕಾರಿಯನ್ನಾಗಿ ಮಾಡುತ್ತಿದೆ ಮತ್ತು ಮಾಡಿದದೆ.*

ಕೆಲ ಕಾವಿಧಾರಿಗಳು ಕಾರ್ಯಕ್ರಮದ ಆವರಣದಲ್ಲೇ ಇದ್ದರೂ ಒಂದು ದಿನವೂ ಸಂಪೂರ್ಣವಾಗಿ ಶರಣ ಮೇಳ ಕಲ್ಯಾಣ ಪರ್ವಗಳ ಅನುಭಾವ ಗೋಷ್ಠಿಗಳಲ್ಲಿ ಭಾಗವಹಿಸುವುದಿಲ್ಲ. ಅವರಿಗೆ ಇದು ರುಚಿಸುವುದೇ ಇಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಬಂದ ಮಾಹಿತಿಯಿಂದ ಅವರ ಬೇರೊಂದಿಹುದು ಎಂದು ಗೊತ್ತಾಗಿದೆ. ಕೆಲ ಕಾವಿಗಳು ಬಸವ ಮಂಟಪಗಳಲ್ಲೇ ಇದ್ದರೂ ಒಂದು ದಿನವೂ ಸಂಪೂರ್ಣವಾಗಿ ಸಾಮೂಹಿಕ ಪ್ರಾರ್ಥನೆ ಮತ್ತು ಶರಣರ ಸಂಗದಲ್ಲಿ ಬೆರೆತು ಅನುಭಾವ ಗೋಷ್ಠಿ ಕೇಳಿದವರಲ್ಲ ಮಾಡಿದವರಲ್ಲ. 

ಈ ಕಾರಣಕ್ಕಾಗಿ ಗುರು ಬಸವಣ್ಣನವರ ಮೇಲಿನ ವಚನದ ಪ್ರಕಾರ ಇವರಲ್ಲಿ ಇಂದ್ರೀಯ ವಿಕಾರಗಳು ಶಮನವಾಗಿಲ್ಲವೆಂದೇ ಅರ್ಥ.

ಕಾವಿಗಳ ದೌರ್ಜನ್ಯಕ್ಕೆ ಒಳಗಾದವರ ಕೆಲವೇ ಕೆಲವು ಪ್ರಕರಣಗಳು ಸುದ್ದಿಯಾಗುತ್ತವೆ ಹೆಚ್ಚಿನ ಪ್ರಕರಣಗಳು ಮುಚ್ಚಿಹೋಗುತ್ತವೆ ಕೆಲವೊಮ್ಮೆ ದೌರ್ಜ್ಯನ್ಯಕ್ಕೊಳಗದಾದವರು ಬಡತನದ ಕಾರಣದಿಂದಲೋ ಹಣದ ಆಸೆಯಿಂದಲೂ ದೂರನ್ನು ದಾಖಲಿಸಲು ಹಿಂಜರಿಯುತ್ತಾರೆ.

ಈ ನಿಟ್ಟಿನಲ್ಲಿ ಮಠ ಪೀಠಗಳ ಹಿರಿಯ ಪೀಠಾಧಿಕಾರಿಗಳ/ಸ್ವಾಮಿಗಳ/ ಮಾತಾಜಿಗಳ ಕರ್ತ್ಯವ್ಯವೂ ಬಹಾಳಷ್ಟಿದೆ:

1. ಕೆಲವರು ಮದುವೆಯಾಗಿ ಮಕ್ಕಳು ಮೊಮ್ಮಕ್ಕಳು ಮಾಡಿಕೊಂಡು ಕಾವಿದೀಕ್ಷೆ ಕೇಳುತ್ತಾರೆ.

2. ಕೆಲವರು ಹೊಟ್ಟೆಹೊರೆಯಲು ಕಾವಿದೀಕ್ಷೆ ಕೇಳಿಕೊಂಡು ಬರುತ್ತಾರೆ.

3. ಕೆಲವರು ಕಾಮ ಕ್ರೋಧಾದಿಗಳನ್ನು ಗೆಲ್ಲದೇ ಮಠಕ್ಕೆ ಬಂದು ಶಾಲೆ ಕಾಲೇಜುಗಳನ್ನು ನಡೆಸಿದರೆ ಅಲ್ಲಿ ವಿದ್ಯಾರ್ಥಿಗಳ ವಾರ್ಡನಗಳ ಸಂಪರ್ಕ ಬರುತ್ತದೆ ಅವರನ್ನು ತಮ್ಮ ಇಂದ್ರೀಯವಿಕಾರಗಳಿಗಾಗಿ ಬಳಸಿಕೊಳ್ಳಬಹುದು ಎನ್ನುವ ಆಲೋಚನೆಯಿಂದ ಕಾವಿ ದೀಕ್ಷೆ ಕೇಳುತ್ತಾರೆ.

4. ಕೆಲವರು ಮಠ ಪೀಠಗಳ ಆಸ್ತಿಗಳು ಅನಾಯಾಸವಾಗಿ ಸಿಗುತ್ತದೆ ಎಂದು ಕಾವಿ  ದೀಕ್ಷೆ ಕೇಳುತ್ತಾರೆ.

5. ಕೆವರು ನಿರುದ್ಯೋಗದಿಂದ ಕಂಗೆಟ್ಟು ಭಕ್ತರ ತಲೆಮೇಲೆ ಕೈಯಿಟ್ಟರೆ ಸಾಕು ಹಣ ಬರುತ್ತದೆ ಎಂದು ಕಾವಿ ಕೇಳುತ್ತಾರೆ. 

6. ಕೆಲವರು ಅಪರಾಧಗಳ ಹಿನ್ನಲೆಯಿಂದ ಬಂದವರು ಕಾವಿಯ ಮರೆಯಲ್ಲಿ ಅಡಗಲು ಕಾವಿ ದೀಕ್ಷೆ ಕೇಳುತ್ತಾರೆ.

ಇಂತಹವರಿಗೆ ಬಂದ ಕೇಳಿದ ತಕ್ಷಣ ಕಾವಿ ದೀಕ್ಷೆ ಕೊಡಬಾರದು. ಅವರಿಗೆ ಧರ್ಮದ ಪರಿಪೂರ್ಣ ತರಬೇತಿ ಕೊಟ್ಟು ಕೆಲವೊಂದು ಪರೀಕ್ಷೆಗಳನ್ನಿಟ್ಟು ಉದಾಹರಣೆಗೆ, ಅವರ ಪ್ರಾಮಾಣಿಕತನವನ್ನು ಪರೀಕ್ಷಿಸುವ ಪರೀಕ್ಷೆಗಳು, ಅವರು ಇಂದ್ರೀಯಗಳ ಸಂಯಮ ಹೊಂದಲು ತರಬೇತಿ ಹೋಂದಿರುವುದನ್ನು ಪರೀಕ್ಷಿಸುವ ಪರೀಕ್ಷೆಗಳು ಅವರಲ್ಲಿರುವ ಭಕ್ತಿಯ ಪರೀಕ್ಷೆ ಇಂತಹವುಗಳನ್ನೆಲ್ಲ ಪರೀಕ್ಷೀಸಿ ಸೂಕ್ತವೆನಿಸಿದವರಿಗೆ ಮಾತ್ರ ಕಾವಿ ದೀಕ್ಷೆ ಕೊಡಬೇಕು. ಏಕೆಂದರೆ ಕಾವಿ ಧರಿಸಿದ ಜಂಗಮರು ಒಂದು ಸಮಾಜವನ್ನು ಒಂದು ಧರ್ಮವನ್ನು ಪ್ರತಿನಿಧಿಸುವವರಾಗಿರುತ್ತಾರೆ.* ಸಮಾಜಕ್ಕೆ ಸಂಸ್ಕಾರ ಕೊಡುವಂಥವರಾಗಿರುತ್ತಾರೆ. ಅವರು ತಪ್ಪುಗಳು ಮಾಡಿದಾಗ, ಲೈಂಗಿಕ ದೌರ್ಜನ್ಯ ಎಸಗಿರುವುದು ಸಾಬೀತಾದಾಗ (ಮರೆಯಲ್ಲಿ ದೌರ್ಜನ್ಯ ಎಸಗಿದಾಗ ಅಲ್ಲ ಸಾಬೀತಾದಾಗ ಮಾತ್ರ) ಸಮಾಜಕ್ಕೆ ಮುಜುಗರವಾಗುತ್ತದೆ.

ಲಿಂಗಾಯತ ಧರ್ಮದ 11 ಲಕ್ಷಣಗಳಲ್ಲಿ ಲಿಂಗಾಯತ ಧರ್ಮದ ಪರಂಪರೆ - ಶರಣ ಪರಂಪರೆಯೂ ಒಂದು ಲಕ್ಷಣ. 

ಈ ಲಕ್ಷಣ ನಮಗೆ ಏನು ಕಲಿಸಿಕೊಡತ್ತದೆ? ಶರಣರು ತಮ್ಮ ಜೀವನದಲ್ಲಿ ನಡೆದ ನಡೆ ಆಚರಿಸಿದ ಆಚರಣೆ, ಕಠಿಣತಮ ಮತ್ತು ಸಂದಿಗ್ಧ ಪರಿಸ್ಥಿತಿಗಳಲ್ಲಿ ಅವರು ತೆಗೆದುಕೊಂಡ ನಿರ್ಧಾರ, ಅವರು ಧರ್ಮ ಪ್ರವೇಶ ಬಯಸಿದವರಿಗೆ ಒಡ್ಡಿದ ಪರೀಕ್ಷೆಗಳು, ಇತ್ಯಾದಿ ಗಳನ್ನು ಕಲಿಸಿಕೊಡುತ್ತದೆ. 

ಅಂದು ಪರಮ ವೈರಾಗ್ಯ ಮೂರ್ತಿ, ವೈರಾಗ್ಯವೇ ಗಟ್ಟಿಗೊಂಡಂತ್ತಿದ್ದ ಜಗನ್ಮಾತೆ ಅಕ್ಕಮಹಾದೇವಿಯವರು ಅರಮನೆಯ ವೈಭವನ್ನು ಕಾಲಕಸಕ್ಕೂ ಕಡೆಯಾಗಿ ಭಾವಿಸಿ, ಶಿವಮೊಗ್ಗದ ಉಡುತಡಿಯಿಂದ ಬಸವಕಲ್ಯಾಣದವರೆಗೆ ಸರಿ ಸುಮಾರು 600ಕಿ.ಮೀ. ಗಳ ಸ್ತ್ರೀ ಸ್ವಾತಂತ್ರ್ಯದ ನಡಿಗೆಯನು ನಡೆದು ಶರಣರ ಸಂಗ ಬಯಸಿ ಬಂದಾಗ, ಬಂದಾಗ, ಪೀಠದಲ್ಲಿ ಕುಳಿತ ಹಿರಿಯ ಪೀಠಾಧೀಶರು ಮೊದಲು ಕೇಳಿದ ಪ್ರಶ್ನೆಗಳು ಯಾವುವು? ನೀನು ಯಾರು? ಇಲ್ಲೀಗೇಕೆ ಬಂದೆ? ನಿನ್ನ ಗಂಡ ಯಾರು? ನೀನು ಕಾಮವನ್ನು ಹೇಗೆ ಗೆದ್ದೆ? ಸೀರೆಯೆಂಬ ಸಿಪ್ಪೆಯನ್ನು ಏಕೆ ಕಳಚಿದೆ? ಇಂತಹ ಪ್ರಶ್ನೆಗಳ ಸುರಿಮಳೆಗೈದರು.

ಅದಕ್ಕೆ ಅಕ್ಕ ತಕ್ಕವಾಗಿ ಉತ್ತರವನ್ನು ಅಷ್ಟೇ ಸಮಾಧಾನವಾಗಿ ನೀಡಿ ಎನ್ನಕ್ಕ ಜಗದಕ್ಕ ಎಂದು ಪ್ರಶ್ನೆ ಮಾಡಿದವರಿಂದ ಕರೆಸಿಕೊಂಡರು. ಎನ್ನ ಹೆತ್ತ ತಾಯಿ ಮಹಾದೇವಿಯಕ್ಕ ಎಂದು ಧರ್ಮಗುರು ಗುರು ಬಸವಣ್ಣನವರಿಂದ ಕರೆಸಿಕೊಂಡು ಶರಣ ರತ್ನವಾದರು. ಇದು ನಮ್ಮ ಶರಣ ಪರಂಪರೆ. 

ಈ ನಿಟ್ಟಿನಲ್ಲಿ ಮಠ ಪೀಠಗಳ ಹಿರಿಯ ಪೀಠಾಧಿಕಾರಿಗಳ/ಸ್ವಾಮಿಗಳು/ ಮಾತಾಜಿಗಳು ಕಾವಿ ದೀಕ್ಷೆ ಕೇಳಿ ಬಂದವರಿಗೆ ಒಂದಾದರೂ ಪ್ರಶ್ನೆ ಕೇಳಿದ್ದೀರಾ? ಕಳ್ಳತನ ಸುಳ್ಳತನ ಜಾರತನ ಮಾಡಿ ಸಂಸಾರ ಸುಖದಲ್ಲಿ ತೇಲಾಡಿ, ಮಕ್ಕಳು ಮೊಮ್ಮಕ್ಕಳನ್ನು ಪಡೆದು ಒಂದು ದಿನ ರಾತ್ರಿ  ಬಂದು ಕಾವಿ ದೀಕ್ಷೆ ಕೊಡಿಯೆಂದು ಕೇಳಿಕೊಂಡಾಗ ಬೆಳಿಗ್ಗೆ ಕದ್ದು ಮುಚ್ಚಿ ದೀಕ್ಷೆ ಕೊಟ್ಟಿದ್ದೀರಾ. ಇಂತಹವರೇನು ಮಾಡುತ್ತಾರೆ ಭಕ್ತರು ಕೊಟ್ಟ  ಕೋಟಿ ಕೋಟಿ ಹಣ ಲೂಟಿ ಮಾಡಿ, ಜಮೀನು ಸೈಟುಗಳು ಮನೆಗಳನ್ನು ಕೊಂಡುಕೊಳ್ಳುತ್ತಾರೆ.

ನಿರುದ್ಯೋಗ ಸಮಸ್ಯೆಯಿಂದ ಬಳಲಿ ಬೆಂಡಾಗಿ, ಇದರಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂದು ರಾತ್ರಿ ಬಂದು ಕಾವಿ ದೀಕ್ಷೆ ಕೇಳಿದವರಿಗೆ ಬೆಳಿಗ್ಗೆಯೇ ಯಾರ ಗಮನಕ್ಕೂ ಬರುವ ಮುಂಚೆಯೇ ಕಾವಿ ದೀಕ್ಷೆ ಕೊಟ್ಟಿದ್ದೀರಿ. ಇಂತಹವರಿಂದ ಏನು ಸಾಧಿಸಲು ಸಾಧ್ಯ ಭಕ್ತರ ಕಾಣಿಕೆ ಮಠದ ಆಸ್ತಿ ಲೂಟಿ ಮಾಡಿ ತಂದೆ ತಾಯಂದಿರಿಗೆ ಭವ್ಯವಾದ ಬಂಗಲೆ ಕಟ್ಟಿಸಿಕೊಡುವ ಸಾಧನೆ ಮಾಡುತ್ತಾರೆ.

ಅನಾಥವಾಗಿ ಅಲೆದು ಬಂದವರಿಗೆ ಅರಿವು-ಆಚಾರ-ಅನುಭಾವಗಳನ್ನು ಗುರುತಿಸದೇ ಕಾವಿ ದೀಕ್ಷೆ ಕೊಟ್ಟಿದ್ದೀರಿ ಇಂತಹವರು ಏನು ಸಾಧನೆ ಮಾಡುತ್ತಾರೆ? ನಿಮ್ಮ ಆದರ್ಶಗಳನ್ನು ಗಾಳಿಗೆ ತೂರಿ ನೀವೆ ತಪ್ಪು ಮಾಡಿದ್ದೀರೆಂದು ಪತ್ರಿಕಾಗೋಷ್ಠಿ ಮಾಡಿ ತಾವು ಭಕ್ತರ ಕಾಣಿಕೆಯಿಂದ ಸಮಾಜಕ್ಕಾಗಿ ಧರ್ಮದ ಹಿತಕ್ಕಾಗಿ ಕಟ್ಟಿದ ಸಂಸ್ಥೆಗಳಲ್ಲಿ ತನ್ನ ಒಡಹುಟ್ಟಿದವರಿಗೆ ಬಂಧು ಭಾಂದವರಿಗೆ ಸಾಕುತ್ತಾರೆ.

ಒಂದು ಎರಡು ತರಗತಿಯನ್ನೂ ಓದದೇ ಶಾಲೆ ಬಿಟ್ಟು ಹುಚ್ಚನಂತೆ ಓಡಿಬಂದವರಿಗೆ ಒಡನೇಯೇ ಕಾವಿ ದೀಕ್ಷೆ ಕೊಟ್ಟದ್ದೀರಿ. ಇವರು ಏನು ಸಾಧಿಸುತ್ತಾರೆ. ಭಕ್ತರ ಹಣದಿಂದ ಜಮೀನು ಸೈಟುಗಳು ಐಶಾರಾಮಿ ಕಾರುಗಳನ್ನು ತೆಗೆದುಕೊಂಡು ಮೆರೆಯುತ್ತಾರೆ. ತಾವು ತಮ್ಮ ಗುರುವನ್ನೇ ನಿಂದಿಸಿದಂತೆ ಗುರುದ್ರೋಹ ಮಾಡಿದಂತೆ ಒಂದು ದಿನ ತಮಗೂ ಮೂಲೆಗುಂಪು ಮಾಡಿ ಮುಂದೆ ಗುರುದ್ರೋಹ ಮಾಡಿ ಮಠ ಕಟ್ಟಿದ ಮೂಲ ಆಶಯವನ್ನೇ ಮರೆ ಮಾಚಿ ತಾಯಿತ ಕಟ್ಟುವ ಕಾರ್ಯ ಮಾಡುತ್ತಾರೆ. ಏಕೆಂದರೆ ತತ್ವಗಿಂತ ತಾಯಿತಕ್ಕೆ ನಂಬುವವರು ಹೆಚ್ಚಿನ ಜನರಿದ್ದಾರೆ.

ತಮ್ಮಿಂದ ಕಾವಿ ಪಡೆಯಲು ಬಂದವರಿಗೇ “ಕಾಮವನ್ನು ಹೇಗೆ ಗೆದ್ದೇ? ಪಂಚೇಂದ್ರೀಯಗಳು ಹರಿಹಂಚು ಮಾಡಿ ಕಾಡುತ್ತವೆ ಇವುಗಳನ್ನು ಹೇಗೆ ನಿಗ್ರಹಿಸುವ?” ಎನ್ನುವ ಪ್ರಶ್ನೆ ಕೇಳಿದ್ದೀರಾ? ಅರಿಷಡ್ವರ್ಗಗಳೆಂಬೆ  ಆರುತೆರೆಗಳು ಬಲು ಮೀರಿಬಂದು ಭವಸಾಗರದಲ್ಲಿ ಮುಳುಗಿಸುತ್ತವೆ ಇವುಗಳನ್ನು ಹೇಗೆ ದಾಟುವೇ ಎನ್ನುವ ಪ್ರಶ್ನೇ ಕೇಳಿದ್ದೀರಾ?

ಅಷ್ಟಮದಗಳೆಂಬ ಮತ್ತೇರಿದ ಆನೆಗಳು ನೀನು ಸಾಯುವುದಕ್ಕೆ ಮುನ್ನವೇ ನಿನ್ನ ಕುಣಿ ತೋಡುತ್ತವೆ ಅಷ್ಟಮದಗಳ ಆನೆಗಳನ್ನೂ ನೀನು ಹೇಗೆ ಮರ್ದಿಸುವೇ ಎನ್ನುವ ಪ್ರಶ್ನೇ ಕೇಳಿದ್ದೀರಾ?

ಅಥವಾ ಪಂಚೇಂದ್ರೀಯಗಳನ್ನು ಅರಿಷಡ್ವರ್ಗಗಳನ್ನು ಅಷ್ಟಮದಗಳನ್ನು ನನ್ನಿಂದಲೇ ಗೆಲ್ಲಲು ಸಾಧ್ಯವಾಗಿಲ್ಲ  ನನ್ನ ಶಿಷ್ಯರಿನ್ನು ಎಳೆಯರು ಅವರಿಂದ ಹೇಗೆ ಗೆಲ್ಲಲು ಸಾಧ್ಯ? ಎಂದು ಕೇವಲ ಕಾವಿಕೊಟ್ಟ (ಅಪ)ಕೀರ್ತಿಗೆ ಪಾತ್ರರಾಗಬೇಕೆಂದು ಕೊಟ್ಟುಬಿಟ್ಟಿರೋ…!!!

ಜೀವಗೋಳವೆಂಬ ಪೃಥ್ವಿಯ ಮೇಲೆ ಮನುಕುಲವೆಂಬ ಬೀಜವಂಕುರಿಸಿ 3ಲಕ್ಷ ವರ್ಷಗಳಾದವು. ಇಷ್ಟು ದೀರ್ಘ ಕಾಲದ ಅವಧಿಯ ನಂತರ ಈ ಮನುಕುಲವೆಂಬ ಮಹಾವೃಕ್ಷ ಬೆಳೆದು ದೊಡ್ಡದಾಗಿ ಗುರುಬಸವಣ್ಣನವರೆಂಬೆ ಹೂವು ಅರಳಿಸಿತು. ಅನುಭಾವ ಮಂಟಪವೆಂಬ ಕಾಯಾಯಿತ್ತು ಲಿಂಗಾಯತ ಧರ್ಮ ವೆಂಬ ಹಣ್ಣಾಯಿತ್ತು. 

ಇಂತಹ ಗುರು ಬಸವಣ್ಣನವರೆಂಬ ಹೂವನ್ನೇ ಹೊಸಕಿಹಾಕುವ ದುಸ್ಸಾಹಸಕ್ಕೆ ಕೈಹಾಕುತ್ತಿದ್ದೀರಾ? ಅನುಭಾವ ಮಂಟಪ ಸಂಸ್ಕೃತಿಯ ಕಾಯಿಯನ್ನೇ ಬೀಳಿಸುವ ಪಾಪ ಕರ್ಮಕ್ಕೆ ಗುರಿಯಾಗುತ್ತಿದ್ದೀರಾ? ಲಿಂಗಾಯತ ಧರ್ಮವೆಂಬ ಹಣ್ಣನ್ನೇ ಕೆಡಿಸಿಹಾಕಲು ಪ್ರಯತ್ನಿಸುವ ಪಂಚಮಹಾಪಾತಕವನ್ನೇ ಮೈಗೂಡಿಸಿಕೊಳ್ಳುತ್ತೀದ್ದೀರಾ? 

ಕನ್ನಡ ನಾಡಿನ ಮಠಾಧೀಶರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ ಎನ್ನುವುದನ್ನು ಮರೆತಿದ್ದೀರಾ? ಎಲ್ಲ ಮಠಗಳಂತಲ್ಲದ ಕನ್ನಡನಾಡಿನ ಮಠಗಳ ಕಿರೀಟಪ್ರಾಯವಾದ ಬಸವ ಧರ್ಮ ಪ್ರಚಾರ ಮಾಡುವ ಪೀಠದ ಜವಾಬ್ದಾರಿ ಎಲ್ಲ ಮಠ ಪೀಠ ಪ್ರತಿಷ್ಠನಗಳಿಗಿಂತ ಹೆಚ್ಚೆಂಬುದು ಮರೆತಿರುವಿರಾ? ದುರ್ನಡತೆ ತೋರುವ ಮಠ ಪೀಠ ಪ್ರತಿಷ್ಠಾನಗಳ ಸ್ನೇಹ ತಮಗೇಕೆ? ಅಥವಾ ತಮ್ಮ ದುರ್ನಡತೆಗಳನ್ನು ಮುಚ್ಚಿಕೊಳ್ಳಲು  ದುರ್ಜನರ ಸಂಗ ಬಯಸಿದ್ದೀರಾ? ಕನ್ನಡ ನಾಡಿನ ಮಠ ಪೀಠಾಧೀಶರಿಗೆ ಲಿಂ. ಮಾತಾಜಿಯವರಿಂದ ಸಂಸ್ಕಾರಗೊಂಗ ಒಬ್ಬ ಬಸವ ಭಕ್ತನ ಪ್ರಶ್ನೆಗಳಿವು.

ನನ್ನ ಸಹ ಸಾಧಕ ಗ್ರಹಸ್ಥ ಜಂಗಮ ಶರಣ ಬಂಧುಗಳಲ್ಲಿ ನನ್ನ ಕಳಕಳಿಯ ಮನವಿ ಏನೆಂದರೆ: 

1. ತಾವು ಕೂಡ ಜಂಗಮರೇ. ಕಾವಿ ಕಂಡು ಅಡ್ಡಡ್ಡ ಬಿದ್ದು ದುಡ್ಡನ್ನು ಕಳೆದುಕೊಳ್ಳದಿರಿ. 

2. ಜಂಗಮರು ತಮ್ಮ ಮನೆಗೆ ಪಾದ ಪೂಜೆಗೆ ಬಂದರೆ ಕನಿಷ್ಠ ಒಂದು ಗಂಟೆಯಾದರೂ ಅನುಬಾವ ಗೋಷ್ಠಿ ಮಾಡಲು ತಿಳಿಸಿ. 24ಸಾವಿರ ವಚನಗಳಿವೆ. ಪ್ರತಿ ಬಾರಿ ಹೇಳಿದ ವಚನವೇ ಹೇಳಿ ಕಾಣಿಕೆ ಕಿತ್ತುಕೊಳ್ಳಲು ಅವಕಾಶ ಕೊಡದಿರಿ.

3. ಗುರುಗಳು ತಮ್ಮ ಕನಸಲ್ಲಿ ಬಂದು ಕಾಣಿಕೆ ಕೊಡಿ ಎಂದು ಹೇಳಿದರೆ ಮಾತ್ರ ಕಾಣಿಕೆ ಕೊಡಿ, ಕೇಳುವವರ ಕನಸಲ್ಲಿ ಮಾತ್ರ ಏಕೆ ಹೇಳಬೇಕು?

4. ತಮ್ಮ ಹೆಣ್ಣು ಮಕ್ಕಳು /ಗಂಡು ಮಕ್ಕಳನ್ನು ಮಠಗಳ ಹಾಸ್ಟೆಲ್ ಗಳಲ್ಲಿ ಬಿಡದಿರಿ. (ಕೆಲವೊಂದು ಮಠಗಳಲ್ಲಿ ಗಂಡುಬಾಕರೂ ಕೂಡ ಇದ್ದಾರೆಂದು ತಿಳಿದುಬಂದಿದೆ)

5. ತುಂಬಾ ಬಡತನವಿದ್ದರೆ ಸರಕಾರ ನಡೆಸುವ ಹಾಸ್ಟೆಲ್ಗಳಿವೆ ಅಲ್ಲಿ ತಮ್ಮ ಮಕ್ಕಳನ್ನು ಬಿಡಿ.

6. ದುಷ್ಟರಾದ ಜಂಗಮರಿಗೆ ಕಾವಿ ನೀಡಿ ಅವರ ದುಷ್ಟತನವನ್ನು ಪೋಷಿಸಿದರೆ ಬಡತನ ಬಂದು ಆವರಿಸಿಕೊಳ್ಳುತ್ತದೆ.

ಅನೇಕ ಜನ ಕಾವಿಗಳೂ ತಮಗೆ ಸಮಾಜದಲ್ಲಿ ಒಳ್ಳೆಯ ಹೆಸರಿದೆ ನಾನು ಯಾವುದೇ ತಪ್ಪು ಮಾಡಿದರೂ ನಡೆಯುತ್ತದೆ ಸಮಾಜ ಅದನ್ನು ಗಮನಿಸುವುದಿಲ್ಲ ಎಂದು ಭಾವಿಸಿರುತ್ತಾರೆ. ಇಂಥವರಿರುತ್ತಾರೆ ಎನ್ನುವ ಅರಿವಿದ್ದೇ  ಅಕ್ಕನವರ ಈ ಕೆಳಗಿನ ಉಪದೇಶ ಮಾಡಿದ್ದಾರೆ

ಅರಿವು ಸಾಧ್ಯವಾಯಿತ್ತೆಂದು,

ಗುರುಲಿಂಗಜಂಗಮವ ಬಿಡಬಹುದೆ ?

ಸಂದು ಸಂಶಯವಳಿದು ಅಖಂಡ ಜ್ಞಾನವಾಯಿತ್ತೆಂದು

ಪರಧನ ಪರಸ್ತ್ರೀಯರುಗಳಿಗೆ ಅಳುಪಬಹುದೆ ?

'ಯತ್ರ ಜೀವಃ ತತ್ರ ಶಿವಃ' ಎಂಬ ಅಭಿನ್ನ ಜ್ಞಾನವಾಯಿತ್ತೆಂದು

ಶುನಕ ಸೂಕರ ಕುಕ್ಕುಟ ಮಾರ್ಜಾಲಂಗಳ ಕೂಡೆ ಭುಂಜಿಸಬಹುದೆ ?

ಭಾವದಲ್ಲಿ ತನ್ನ ನಿಜದ ನೆಲೆಯನರಿತಿಹುದು'

ಸುಜ್ಞಾನ ಸತ್ಕ್ರಿಯಾ ಸುನೀತಿ ಮಾರ್ಗದಲ್ಲಿ ವರ್ತಿಸುವುದು.

ಹೀಂಗಲ್ಲದೆ ಜ್ಞಾನವಾಯಿತ್ತೆಂದು ತನ್ನ ಮನಕ್ಕೆ ಬಂದಹಾಂಗೆ

ಮೀರಿನುಡಿದು ನಡೆದೆನಾದಡೆ

ಶ್ವಾನಗರ್ಭದಲ್ಲಿ ಹುಟ್ಟಿಸದೆ ಬಿಡುವನೆ ಚೆನ್ನಮಲ್ಲಿಕಾರ್ಜುನದೇವರದೇವನು?

ಅರವು ಸಾಧ್ಯವಾಗಿದೆ ಎಂದು ಗುರು-ಲಿಂಗ-ಜಂಗಮ ತತ್ವವನ್ನು ಮೀರಿ ನಡೆಯಲಾಗದೆ. ಜನ ತನಗೆ ಬಹಾಳ ಜ್ಞಾನಿ ಎಂದು ಕರೆಯುತ್ತಾರೆ. ಜ್ಞಾನಿಗಳಾದ ಗುರುಗಳೇ ನನ್ನನ್ನು ಒಳ್ಳೆಯವನೆಂದು ಗುರುತಿಸಿದ್ದಾರೆ ನಾನು ಯಾವ ಅನೈತಿಕ ಚಟುವಟಿಕೆ ಮಾಡಿದರೂ ಜನ ನಂಬುವುದಿಲ್ಲ ಎಂದು ಅನೇಕ ಕಾವಿಧಾರಿಗಳು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮನವರಿಯದ ಕಳ್ಳತನವಿಲ್ವಲ್ಲ ಎನ್ನುವ ಮಹಾತ್ಮರ ವಾಣಿಯಂತೆ ಮನ ಮಾಡಿದ ಕಳ್ಳತನಕ್ಕೆ ಹಿಡಿದಿರ್ಪ ಲಿಂಗವೇ ಘಟ ಸರ್ಪವಾಗಿ ಕಾಡುತ್ತದೆ. ಜ್ಞಾನ ವಾಯಿತ್ತಿಂದು ಮನಕ್ಕೆ ಬಂದ ಹಾಗೆ ನಡೆದಡೆ ಲಿಂಗದೇವನು ಶ್ವಾನ ಗರ್ಭದಲ್ಲಿ ಹುಟ್ಟಿಸುತ್ತಾನೆ ಎಂದು ಅಕ್ಕ ಅತ್ಯಂತ ಪಕ್ಕವಾಗಿ ಹೇಳಿದ್ದಾರೆ.

ಕಾವಿ ಹಾಕಿದ ತಕ್ಷಣ ಒಡಹುಟ್ಟಿದ ಕಾಮ ಕರಗಿ ಹೋಗುವುದಿಲ್ಲ ಕಾವಿ ಧರಿಸಿದವರೂ ನಮ್ಮಂತೆಯೇ ಎಂದು ಭಾವಿಸಿ, ಅವರಿಗೆ ಸಂಯಮ ಹೊಂದುವ ತರಬೇತಿ ಕೊಡಬೇಕಾಗುತ್ತದೆ ಮತ್ತು ಸಾಧನೆ ಮಾಡಲು ಅವಕಾಶ ಸೂಕ್ತ ಮಾರ್ಗ ದರ್ಶನ ಬೇಕಾಗುತ್ತದೆ. ಇಲ್ಲದಿದ್ದರೆ ಅದುಮಿಟ್ಟ ಆಸೆಗಳು ಸಮಾಜಕ್ಕೆ ಘಾತಕವಾಗಿ ಮಾರ್ಪಡುತ್ತವೆ.

ಸಚ್ಚಿದಾನಂದ ಪ್ರಭು ಚಟ್ನಳ್ಳಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…