ಪೂಜ್ಯ ಶ್ರೀ ಮಾತೆ ಮಹಾದೇವಿಯವರ ಬದುಕು ಗಿಳಿಯೋದಿನಂತಿರಲಿಲ್ಲ

ಗುರು ಬಸವಣ್ಣನವರ ವಚನ: ಗಿಳಿಯೋದಿ ಫಲವೇನು ಬೆಕ್ಕು ಬಹುದ ಹೇಳಲರಿಯದು. ಜಗವೆಲ್ಲ ಕಾಂಬ ಕಣ್ಣು, ತನ್ನ ಕೊಂಬ ಕೊಲ್ಲೆಯ ಕಾಣಲರಿಯದು, ಇದಿರ ಗುಣವ ಬಲ್ಲೆವೆಂಬರು ತಮ್ಮ ಗುಣವ ತಾವರಿಯರು ಲಿಂಗದೇವಾ.

  ಗಿಳಿ ಏನು ಹೇಳಿಕೊಟ್ಟರೂ ಅದನ್ನು ಕಲಿಯುತ್ತದೆ. ಅದನ್ನೇ ಪುನರಾವರ್ತನೆ ಮಾಡುತ್ತಿರುತ್ತದೆ. ಗಿಳಿಶಾಸ್ತ್ರದವರು ಗಿಳಿಗಳಿಗೆ ಕೆಲವು ಸಂಸ್ಕೃತ ಶ್ಲೋಕಗಳನ್ನು, ಪ್ರವಚನಗಳನ್ನು ಹೇಳಿಕೊಟ್ಟಿರುತ್ತಾರೆ. ಅದು ಅವರ ಸಂಜ್ಞೆಯನುಕರಿಸಿ ತಾನು ಬಾಯಿಪಾಠ ಮಾಡಿದ ಶ್ಲೋಕಗಳನ್ನು ಶಾಸ್ತç ಕೇಳುವವರ ಮುಂದೆ ಹೇಳುತ್ತಿರುತ್ತದೆ. ಆದರೆ ಅದರ ಅರ್ಥ ಗಿಳಿಗೆ ಗೊತ್ತಿರುವುದಿಲ್ಲ. 

ಬೇರೆಯವ ಭವಿಷ್ಯ ಹೇಳುವ ಗಿಳಿ ತನ್ನ ಭವಿಷ್ಯವನ್ನೇ ತಾನರಿಯುವುದಿಲ್ಲ. ಯಾವ ದಿಕ್ಕಿನಿಂದ ಬೆಕ್ಕು ಬಂದು ಅದನ್ನು ತಿಂದುಹಾಕುತ್ತದೆಯೋ ಎನ್ನುವ ಜ್ಞಾನ ಆ ಗಿಳಿಗೆ ಇರುವುದಿಲ್ಲ. ಕೇಡು ಯಾವ ವೇಷದಲ್ಲಿ, ಯಾವ ರೂಪದಲ್ಲಿ ಬಂದು ಅದರ ಅವನತಿಗೊಳಿಸುವುದೋ ಎನ್ನುವ ಜ್ಞಾನ, ಪ್ರವಚನ ಬಾಯಿಪಾಠ ಮಾಡಿದ ಗಿಳಿಗೆ ಇರುವುದಿಲ್ಲ.  ಅದು ಸದಾ ಜಾಗೃತವಾಗಿರುವುದಿಲ್ಲ. 

ಇಡೀ ಜಗತ್ತಿನ ಆಗು ಹೋಗುಗಳ ಬಗ್ಗೆ ಬಾಯಿ ಪಾಠ ಮಾಡಿದರೂ ತನ್ನನ್ನು ಕೊಲ್ಲುವ ಸಾವು (ಕೊಲ್ಲೆ) ಯಾವ ಕಡೆಯಿಂದ ಬರುತ್ತದೆ, ತನ್ನಗೆ ಹಾನಿ ಮಾಡುವಂಥವ ಹಿತ ಶತ್ರುಗಳು  ಯಾವ ರೂಪದಲ್ಲಿ ಬರುತ್ತಾರೆ ಎನ್ನುವ ಜ್ಞಾನ ಅದಕ್ಕಿರುವುದಿಲ್ಲ. ಬೇರೆಯವರ ಗುಣಗಳ ಬಗ್ಗೆಯೇ ಹೇಳುವ ಗಿಳಿ ತನ್ನ ಗುಣದ ಬಗ್ಗೆ ತನಗಿರುವ ಜ್ಞಾನದ ಕೊರತೆಯ ಬಗ್ಗೆ ತಾನರಿಯುವುದಿಲ್ಲ. ಇದು  ಗುರು ಬಸವಣ್ಣನವರ ಮೇಲಿನ ವಚನದ ತೋರು ಅರ್ಥ.

 ಈ ವಚನದ ಒಳಾರ್ಥದಲ್ಲಿ ಗುರು ಬಸವಣ್ಣನವರು ಅವಧಾನ ಭಕ್ತಿಯನ್ನು ಮಾಡುವ ಬಗೆಯನ್ನು ತುಂಬಿದ್ದಾರೆ. ಭಕ್ತ, ಜಂಗಮ, ಸಂಸ್ಥೆಯ ಪ್ರಮುಖರು, ಮಠ ಪೀಠಾಧೀಶರು ಸದಾ ಜಾಗೃತವಾಗಿರಬೇಕು. ನಾನು ತುಂಬಾ ಜ್ಞಾನಿಯಾಗಿದ್ದೇನೆ. ಪ್ರವಚನಗಳನ್ನು ಹಿತವಚನಗಳನ್ನು ಹೇಳುತ್ತೇನೆ ನನಗೆ ಯಾರೂ ಕೇಡು ಬಯಸುವುದಿಲ್ಲ ಎಲ್ಲರೂ ನನ್ನ ಹಿತೈಸಿಗಳೇ ಎನ್ನುವ ನಂಬಿಕೆ ಇದು ಗಿಳಿಯೋದು ಎನಿಸಿಕೊಳ್ಳುತ್ತದೆ.

ಪೂಜ್ಯ ಶ್ರೀ ಲಿಂ. ಡಾ. ಮಾತೆ ಮಹಾದೇವಿಯವರ ಬದುಕು  ಗಿಳಿಯೋದು ಆಗಿರಲಿಲ್ಲ ಅದು ಸ್ವಯಂಜ್ಞಾನದಿಂದ ಕೂಡಿತ್ತು . ಅವರು ತಮ್ಮ ಪ್ರವಚನದಲ್ಲಿ *“೧/೪ ಅಂಶ ಜ್ಞಾನ ಗುರುವಿನಿಂದ ಬರುತ್ತದೆ, ೧/೪ ಅಂಶ ಜ್ಞಾನ ಶರಣಸಂಗದಿಂದದದ ಬರುತ್ತದೆ, ೧/೪ ಅಂಶ ಜ್ಞಾನ ಸ್ವಾಧ್ಯಯದಿಂದ ಬರುತ್ತದೆ ಮತ್ತು ಉಳಿದ ೧/೪ ಜ್ಞಾನ ಸ್ವಾನುಭಾವದಿಂದ ಬರುತ್ತದೆ”* ಎಂದು ಹೇಳುತ್ತಿದ್ದರು. ಎಂತಹ ಸತ್ಯವಾದ ಮಾತು. ಅವರು ಈ ಎಲ್ಲಾ ನಾಲ್ಕೂ ವಿಧವಾದ ಜ್ಞಾನವನ್ನು ಪಡೆದವರಾಗಿದ್ದರು. ಗುರುವಿನಿಂದ ಪಡೆಯುವ ಜ್ಞಾನ ಗುರು ಲಿಂಗಾನಂದರಿಂದ ಪಡೆದರು ಮತ್ತು ಅದನ್ನು ಅಳವಡಿಸಿಕೊಂಡರು.

ನಿರಂತರ ಪ್ರವಚನ ಶರಣರ ಸಂಗ ಮಾಡುತ್ತ ಶರಣರಿಗೆ ಸ್ಪುರಿಸುವ ಜ್ಞಾನವನ್ನೂ ಸ್ವೀಕರಿಸಿದರು. ಸ್ವಯಂ ಸತತ ಅಧ್ಯಯನ ಶೀಲರಾಗಿ, ವಚನ ಶಾಸ್ತ್ರ ಓದಿದರು. ಆದಿ ಶರಣರ ಸಂಕಲ್ಪವನ್ನು ಅರಿತಿದ್ದರು. ಇದರಿಂದ ಅವರ ಸ್ವಾನುಭಾವದ ಜ್ಞಾನ ಪುಟಿದೇಳಲು ಆರಂಭಿಸಿ, ಆ ಸ್ವಾನುಭಾವದ ಜ್ಞಾನವನ್ನು ಸಾಹಿತ್ಯ ಮತ್ತು ಸಂಶೋಧನೆಗಳ  ಮೂಲಕ ನಮಗೆಲ್ಲರಿಗೂ ಉಣಬಡಿಸಿದ್ದಾರೆ.

ಇದರ ಜೊತೆಗೆ ಅನೇಕ ಸಂಸ್ಥೆ  ಮತ್ತು ಸಂಘಟನೆಗಳನ್ನು ಕಟ್ಟಿ ಸದಾ ಕಾಲ ಅವಧಾನ ಭಕ್ತಿ, ಜಾಗೃತ ಭಕ್ತಿಯನ್ನು ಮಾಡುತ್ತಿದ್ದರು. ಕೇವಲ ಗಿಳಿಯೋದಿನಂತೆ ವಚನ ಸಾಹಿತ್ಯ ಅರ್ಥೈಸಿಕೊಳ್ಳದೆ ಅದರ ಒಳಹೊಕ್ಕು ಎಲ್ಲವನ್ನೂ ಅರ್ಥ ಮಾಡಿಕೊಂಡಿದ್ದರು. ಯಾವ ರೂಪದಲ್ಲಿ, ಯಾವ ವೇಷದಲ್ಲಿ, ಯಾವ ಬಣ್ಣದ ಮಾತುಗಳಲ್ಲಿ ಕೊಲ್ಲೆಯು (ದುಷ್ಟರು, ಸ್ವಾರ್ಥಿಗಳು, ಕೇಡಬಯಸುವವರು, ಬೆನ್ನಲ್ಲಿ ಚೂರಿ ಹಾಕುವವರು, ವಿಘ್ನ ಹಿತೈಸಿಗಳು, ಹಿತ ಶತ್ರುಗಳು) ತಮ್ಮ ಸಂಸ್ಥೆ ಸಂಘಟನೆಗಳ ಮೇಲೆ ಬಂದೆರಗಬಹುದು ಎನ್ನುವ ಜ್ಞಾನ, ಅವಧಾನ ಮತ್ತು ಜಾಗೃತೆ ಅವರಲ್ಲಿ ಇತ್ತು. “ಆವಾಗಳೂ ಈ ತೋಂಟದ್ದಲ್ಲಿ  ಜಾಗರವಿದ್ದು ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ” ಎನ್ನುವ ಗುರು ಅಲ್ಲಮಪ್ರಭುದೇವರ ವಾಣಿಯಂತೆ ಸದಾ ಜಾಗೃತರಾಗಿ ಬಸವ ಧರ್ಮ ಪೀಠ, ಬಸವದಳಗಳನ್ನು ಸಲಹಿದರು. ಅಂತೆಯೇ ೫೦ ವರ್ಷಗಳ ಕಾಲ ಬಸವ ಧರ್ಮದ ಆಧ್ಯಾತ್ಮಿಕ ಲೋಕದಲ್ಲಿ, ಭಕ್ತಿ ಮಾರ್ಗದಲ್ಲಿ ನಮ್ಮೆಲ್ಲರ ಗುರುವಾಗಿ ಮಾರ್ಗದರ್ಶನ ಮಾಡಿದುದನ್ನು ನಾವು ಯಾರೂ ಮರೆಯುವಂತಿಲ್ಲ. 

ಲಿಂ.ಮಾತಾಜಿಯವರು ಇಂತಹ ಜ್ಞಾನಿಯಾಗಿದ್ದುದ್ದರಿಂದಲೇ ಅವರು ಯಾರದೋ ಬಾಯಿಯ ಪೀಪಿಯಾಗಿ ಒದರದೆ, ಗುರು ಬಸವಣ್ಣನವರ ಹಾಗೂ ಲಿಂಗದೇವನ ದಿವ್ಯ ಹಸ್ತದ ವೀಣೆಯಾಗಿ ನುಡಿದರು. ಯಾರದ್ದೋ ಕೈಗೊಂಬೆಯಾಗದೆ ಗುರು ಬಸವಣ್ಣನವರ ಹಾಗೂ ಲಿಂಗದೇವನ ಕೈಯ ಲೆಖ್ಖಣಿಕೆಯಾಗಿ ತಮ್ಮ ಬದುಕನ್ನು ಬದುಕಿದರು.

 ಅವರು ಇನ್ನೊಂದು ಮಾತು ಹೇಳುತ್ತಿದ್ದರು “ವ್ಯಕ್ತಿ ತನ್ನ ಸಾಮರ್ಥ್ಯವನ್ನು ಗುರುತಿಸಿಕೊಂಡು ಅದನ್ನು ವೃದ್ಧಿ ಪಡಿಸಿಕೊಳ್ಳಬೇಕು ಮತ್ತು ತನ್ನ ದೌರ್ಬಲ್ಯವನ್ನು ಗುರುತಿಸಿಕೊಂಡು ಅದನ್ನು ಕಡಿಮೆ ಮಾಡಿಕೊಳ್ಳಬೇಕು” ಎಂದು.

ಹೀಗೆ ಅವರು ತಮ್ಮ ಜ್ಞಾನವನ್ನು ಅರಿತಿದ್ದರು, ತಮ್ಮನ್ನು ತಾವು ಅರಿತಿದ್ದರು. ತಮಗೆ ಯಾರು ಹಿತವರು ಎನ್ನುವುದನ್ನು ಚೆನ್ನಾಗಿ ಅರಿತಿದ್ದರು. 

ಜಗವೆಲ್ಲ ಕಾಂಬ ಅವರ ಕಣ್ಣು ಸ್ವಯಂನ್ನು ಕಂಡಿತು. ಗುರು ಬಸವಣ್ಣನವರ ತತ್ವಗಳಿಗೆ ವಿರುದ್ಧವಾಗಿ ನಡೆಯುವ ಯಾವುದೇ ಮಠಾಧೀಶರೊಂದಿಗೆ ಸ್ನೇಹ ಬೆಳೆಸಿದವರಲ್ಲ. ಗುರು ಬಸವಣ್ಣನವರ ತತ್ವಗಳಿಗೆ ವಿರುದ್ಧವಾಗಿ ನಡೆಯುವವರು ಎಷ್ಟೇ ದೊಡ್ಡ ಮಠಾಧೀಶರರಾದರು ಅವರ ನಡೆಯನ್ನು ಖಂಡಿಸುತ್ತಿದ್ದರು.

ಪೂಜ್ಯ ಶ್ರೀ ಲಿಂ.ಮಾತೆ ಮಹಾದೇವಿಯವರ ಬಳಿವಿಡಿದು ಗುರು ಬಸವಣ್ಣನವರ ಜ್ಞಾನದ ವಂಶವಾಹಿನಿಗಳನ್ನು ಹಂಚಿಕೊಂಡು ಹುಟ್ಟಿ ಬೆಳೆದಿರುವ ನಾವು, ಯಾರು ನಮಗೆ ನಂಬಿಸಿ ಬೆನ್ನಲ್ಲಿ ಚೂರಿ ಹಾಕುವ ಕೆಲಸ ಮಾಡುತ್ತಾರೆ, ಯಾರು ಹಿತೈಷಿಗಳು ಯಾರು ವಿಘ್ನ ಹಿತೈಸಿಗಳು ಯಾರು ವೇಷಧಾರಿಗಳು ಎನ್ನುವ ಅವಧಾನ ನಮ್ಮಲಿರಬೇಕು. ಎಲ್ಲರನ್ನೂ ಸುಖಾಸುಮ್ಮನೆ ನಂಬುವುದೂ ಅವಧಾನ ಭಕ್ತಿಯಲ್ಲ. ಎದುರಿಗೆ ಖಡ್ಗ ಹಿಡಿದು ಬಂದ ವ್ಯಕ್ತಿ ಜೊತೆಗೆ ಹೋರಾಡಬಹುದು ಗೆಲ್ಲಬಹುದು. ಬೆನ್ನಿಗೆ ಚೂರಿ ಹಾಕುವ ವ್ಯಕ್ತಿಯ ಜೊತೆ ಹೊರಾಡಲಿಕ್ಕೂ ಆಗಲ್ಲ ಗೆಲ್ಲುವುದಂತು ದೂರದ ಮಾತು. ಇತಿಹಾಸದ ಎಲ್ಲಾ ದುರಂತಗಳು ಬೆನ್ನಿಗೆ ಚೂರಿ ಹಾಕುವವರಿಂದಲೇ ನಡೆದಿವೆ. 

 ಲಿಂ.ಮಾತೆ ಮಹಾದೇವಿಯವರು ತಮ್ಮ ಜೀವನದುದ್ದಕ್ಕೂ ಯಾವುದೇ ಆಸೆ ಆಮಿಷಗಳಿಗೆ ಒಳಗಾಗಿದವರಲ್ಲ.  ಲಿಂ. ಮಾತಾಜಿಯವರ ಜ್ಞಾನ ಪರಂಪರೆಯ ಉತ್ತರಾಧಿಕಾರಿಗಳಾದ ನಾವೆಲ್ಲರೂ ಅವರಂತೆ ಅವಧಾನ ಭಕ್ತಿ ಅಳವಡಿಸಿಕೊಂಡರೆ ಮಾತ್ರ ಅವರು ಬೆಳೆಸಿದ ಗುರು ಬಸವಣ್ಣನವರ ತತ್ವಗಳನ್ನು ನಾವು ಮುಂದಿನ ಪೀಳಿಗೆಗೆ ಕೊಡಲು ಸಾಧ್ಯವಿದೆ. 

 -ಸಚ್ಚಿದಾನಂದ ಪ್ರಭು ಚಟ್ನಳ್ಳಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…