ಜಗತ್ತಿನ ಎಲ್ಲಾ ಧರ್ಮಗಳಲ್ಲಿ ಧರ್ಮಗುರುವಿಗೆ ಅಗ್ರಪೀಠ ಇರುವುದನ್ನು : ಸಮೀಕ್ಷೆ ಮಾಡಿ 🙏
ನಮ್ಮ ಬಸವ ಮಂಟಪಕ್ಕೆ ಬನ್ನಿ. ಧರ್ಮಗುರು ಬಸವಣ್ಣನವರಿಗೇ ಮುಖ್ಯ ಸ್ಥಾನ: ಕೂಡಲಸಂಗಮಕ್ಕೆ ಮಹಾಮನೆಯ ಶರಣ ಲೋಕಕ್ಕೆ ಬನ್ನಿ. ಗಣಲಿಂಗ (ಇಷ್ಟಲಿಂಗದ ಬೃಹದ್ರೂಪ) ಕ್ಕೆ ಅರ್ಥಾತ್ ಸೃಷ್ಟಿಕರ್ತ ಲಿಂಗದೇವನ ಕುರುಹಿಗೆ ಅಗ್ರಸ್ಥಾನ, ನಂತರದ ಸ್ಥಾನ ಧರ್ಮಗುರು' ಬಸವಣ್ಣನವರಿಗೆ; ಪೂಜ್ಯ ಲಿಂಗೈಕ್ಯ ಗುರುಗಳಿಗೆ ನಂತರದ ಸ್ಥಾನ. ಸಮಾಧಿ-ಗದ್ದುಗೆ ನಿರ್ಮಾಣ ಶರಣರ ಸಂಪ್ರದಾಯವಾದ ಕಾರಣ ಅದು ಸರಳವಾದ ಗದ್ದುಗೆ. ಅದರ ಮೇಲೆ ಶರಣಾಲಯ. ಈ ತತ್ತ್ವನಿಷ್ಠೆ ಮತ್ತೆಲ್ಲಿ ಕಾಣಬಹುದು ? _ಇದು ಗುರುಗಳಿಗೆ ತೋರಿಸಿದ ಅಗೌರವವಲ್ಲ. ಪೂಜ್ಯ ಗುರುಗಳು ನಮಗೆಲ್ಲ ಕಲಿಸಿರುವ ಪಾಠ_, ಸೃಷ್ಟಿಕರ್ತನಿಗೆ (ಲಿಂಗದೇವ) ಅತ್ಯುನ್ನತ ಸ್ಥಾನ, ನಂತರದ ಸ್ಥಾನ ಧರ್ಮಗುರು ಬಸವಣ್ಣನವರಿಗೆ, ಆನಂತರದ ಸ್ಥಾನ ಶರಣರಿಗೆ, ನಂತರದ ಸ್ಥಾನ ದೀಕ್ಷಾಗುರುಗಳಿಗೆ ಎಂಬುದೆ ಲಿಂಗೈಕ್ಯ ಅಪ್ಪಾಜಿಯವರ ಬೋಧೆ. ಬಹುಪಾಲು ಮಠಾಧೀಶರು ಧರ್ಮಗುರು ಬಸವಣ್ಣನವರಿಗೆ ಗೌರವಪೂರ್ಣ ಸ್ಥಾನವನ್ನು ಕೊಡದಿರುವುದನ್ನು, ನಿಧಾನವಾಗಿ ಮರೆಸುತ್ತಿರುವುದನ್ನು ಗಮನಿಸಿ, ಗುರುತಿಸಿ, ಜಗತ್ತಿನ ಎಲ್ಲಾ ಧರ್ಮಗಳಲ್ಲಿ ಧರ್ಮಗುರುವಿಗೆ ಅಗ್ರಪೀಠ ಇರುವುದನ್ನು ಸಮೀಕ್ಷೆ ಮಾಡಿ ಬೌದ್ಧರು ಬುದ್ಧನಿಗೆ, ಜೈನರು ತೀರ್ಥಂಕರ ಮಹಾವೀರರಿಗೆ, ಕ್ರೈಸ್ತರು ಏಸುಕ್ರಿಸ್ತರಿಗೆ, ಮುಸಲೀಮರು ಮೊಹಮ್ಮದರಿಗೆ ಕೊಡುತ್ತಿರುವ ಗೌರವವನ್ನು ಗ್ರಹಿಸಿ, ನಾವು ಧರ್ಮಪಿತ ಬಸವಣ್ಣನವರ ಬಸವ ಭಾವಚಿತ್ರವನ್ನು, ಬಸವ ಗುರು ಮೂರ್ತಿಯನ್ನು ಪೂಜಿಸಬೇಕೆಂದು ೧೯೭೭ರಲ್ಲಿ ನಿರ್ಧರಿಸಿ, ಆಚರಣೆಗೆ ತಂದೆವು.
ಲಿಂಗಾಯತರು ದಿಕ್ಕು ತಪ್ಪಿದವರಾಗಿ ನವಗ್ರಹ ಪೂಜೆ, ಸತ್ಯನಾರಾಯಣ, ಸಂಕಷ್ಟಿ ಗಣಪತಿ, ವರದಾ ಶಂಕರ, ಸಂತೋಷಿ ಮಾ ವ್ರತ ಎಲ್ಲ ಮಾಡುತ್ತಿರುವುದನ್ನು ನೋಡಿ ಮರಮರ ಮರುಗಿ ''ಬಸವೇಶ್ವರ ಪೂಜಾ ವ್ರತ'" ಬಳಕೆಗೆ ತಂದೆವು. ಇದಕ್ಕೆ ಪ್ರೇರಣೆ ನೀಡಿದವರು ಶ್ರೀ ಸಿದ್ದರಾಮೇಶ್ವರರು; ಕೆಳಕಂಡ ವಚನದ ಮೂಲಕ.
ಬಸವನ ಮೂರ್ತಿಯೇ ಧ್ಯಾನಕ್ಕೆ ಮೂಲ
ಬಸವನ ಕೀರ್ತಿಯೇ ಎನ್ನ ಜ್ಞಾನಕ್ಕೆ ಮೂಲ
ಬಸವಾ ಬಸವಾ ಎಂಬುದೇ ಭಕ್ತಿ ಕಾಣಾ
ಕಪಿಲಸಿದ್ಧ ಮಲ್ಲಿಕಾರ್ಜುನ
Page 13,May 2010
✒️- ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರು


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ