ಸಂಸ್ಕಾರ ಮತ್ತು ಸಂಘಟನೆ

(ಸಂಘಟನೆಗಳ ಸಮಾವೇಶ ಮಾಡುವವರಿಗೆ ಕೈದೀವಿಗೆ)


ನಾವು  ಶ್ರೇಷ್ಠವಾದ ಲಿಂಗಾಯತ ಧರ್ಮದ ಅನುಯಾಯಿಗಳು. ಶರಣ ಪರಂಪರೆಯ ಮಕ್ಕಳು. ನಾವು ಒಂದು ವಿಶಿಷ್ಟವಾದ ತತ್ವ  ಸಿದ್ಧಾಂತಗಳಿಗೆ ಒಳಪಟ್ಟವರು. ನಾವು ಒಂದು ಸತ್ಪಥದಲ್ಲಿ, ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದೇವೆ; ನಮ್ಮ  ಆಚರಣೆಗಳು ಇತರರಿಗಿಂತ ಭಿನ್ನವಾಗಿವೆ ಎನ್ನುವುದಕ್ಕೆ ಯಾವುದು ಸಾಕ್ಷಿ  ಏನು ಪ್ರಮಾಣ?

*ಗುರು ಶಿಷ್ಯ ಸಂಬಂಧವಾದುದಕ್ಕಿದು ಚಿಹ್ನೆ,* 

*ಹಿಂದೆ  ಬಿಟ್ಟು  ಮುಂದೆ ಹಿಡಿಯಲೇ ಬೇಕು*

*ಲಿಂಗದೇವ  ಕೇಳಯ್ಯಾ ಕಿಚ್ಚಿನೊಳಗೆ ಕೋಲ ಬೈಚಿಟ್ಟಂತಿರಬೇಕು.*

ಹಿಂದೆ ಮಾಡುತ್ತಿದ್ದ ಅನೇಕ ತಪ್ಪು ಆಚರಣೆಗಳನ್ನು ಬಿಟ್ಟು , ಮುಂದೆ ಗುರು ತೋರಿದಂಥ ಆಚರಣೆಗಳನ್ನು ಮಾಡುತ್ತಿದ್ದರೆ ಅದೇ ನಾವು ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದೇವೆ ಎನ್ನುವುದಕ್ಕೆ ಸಾಕ್ಷಿ. ಕಿಚ್ಚಿನೊಳಗೆ ಕೋಲ ಬೈಚಿಟ್ಟಂತಿರಬೇಕು, ಎಂದರೆ ಕಿಚ್ಚಿನೊಳಗೆ ಒಂದು ಮರದ ಕೋಲನಿಟ್ಟಾಗ ಅದೂ ತಾನೂ ಕಿಚ್ಚಿನ ಸ್ವರೂಪವನ್ನೇ ಪಡೆದುಕೊಳ್ಳುತ್ತದೆ. ಅದೇ ರೀತಿ ಧರ್ಮ  ಸಂಸ್ಕಾರಕ್ಕೆ  ಒಳಪಟ್ಟು  ಸನ್ಮಾರ್ಗದಲ್ಲಿ ನಡೆಯುತ್ತಿರುವ  ವ್ಯಕ್ತಿ  ನೋಡಲು ಮುನ್ನಿನಂತೆ ಕಂಡರೂ, ಮಾನವ ಸಹಜವಾದ ಮುನ್ನಿನ ಗುಣಗಳನ್ನು ಜ್ಞಾನದ ಕಿಚ್ಚಿನಲ್ಲಿ ಸುಟ್ಟುಕೊಂಡಿರಬೇಕು. ಧರ್ಮ ಮಾರ್ಗದಲ್ಲಿ  ನಡೆದು ಆದರ್ಶ ಶರಣರಾಗಬೇಕು.

ಲಿಂಗಾಯತ ಸಮಾಜಕ್ಕೆ ಒಂದು ಕಲಂಕ ಅಂಟಿಕೊಂಡಿದೆ. ಬಸವ ತತ್ವದ  ಪರುಷ ಸ್ಪರ್ಶವಾಗದೇ  ಇರುವ ಅನೇಕ ಲಿಂಗಾಯತರು ಅಧರ್ಮೀಯರು, ಅನೀತಿವಂತರಾಗಿದ್ದಾರೆ. ತನು-ಮನ-ಧನದಲ್ಲಿ ತಪ್ಪಿದ ತ್ರಿವಿಧ ತಪ್ಪಿತಸ್ತರಾಗಿದ್ದಾರೆ. ಬೇರೆಯವರ ದೃಷ್ಟಿಯಲ್ಲಿ ಲಿಂಗಾಯತರೆಂದರೆ ಜಾತಿವಾದಿಗಳು, ಮೂಢ ಭಕ್ತಿ ಮಾಡುವವರು, ಗಿಡ ಮರ ಸುತ್ತುವವರು ಎನ್ನುವ ಕಲಂಕ ಅಂಟಿಕೊಂಡಿದೆ. ಈ ಕಲಂಕವನ್ನು ತೊಡೆದು ಹಾಕುವ ಜವಾದ್ದಾರಿ ನಮ್ಮೆಲ್ಲರ ಮೇಲಿದೆ.  

ನಾವು ಆಚರಿಸುವ ಆಚರಣೆಯಿಂದ ನಮ್ಮ ನಡೆ ನುಡಿಗಳಿಂದ, ಲಿಂಗಾಯತ ಧರ್ಮವೆಂದರೆ ಹೀಗಿದೆಯೇ? ಇಷ್ಟೊಂದು ವೈಚಾರಿಕವಾಗಿ ಪ್ರಗತಿಪರವಾಗಿದೆಯೇ? ಎಂದು ಇತರರು ಆಶ್ಚರ್ಯದಿಂದ, ನಿಜವಾದ ಲಿಂಗಾಯತ ಧರ್ಮ ಅರಿಯುವಂತೆ ಮಾಡಬೇಕು. 

ಯಾವುದೇ ಒಂದು ಧರ್ಮ ಉಳಿಯಬೇಕಾದರೆ, ಧರ್ಮದ ಆಚರಣೆಯನ್ನು ಯುವ ಜನಾಂಗವು ಅಭಿಮಾನದಿಂದ ಮಾಡಬೇಕು. ಪೂಜ್ಯ ಲಿಂಗಾನಂದ ಅಪ್ಪಾಜಿಯವರು ತಾವು ಯುವಕರಿರುವಾಗಲೇ ಜಂಗಮರಾಗಿ, ೪೦ ವರ್ಷಗಳ ಕಾಲ ತಮ್ಮ ಜೀವನವನ್ನು ಬಸವ ತತ್ವಕ್ಕಾಗಿ ನಮಗಾಗಿ ಶ್ರೀಗಂಧದಂತೆ ಸವೆಸಿದರು.

*ಭವ  ಭವದಲ್ಲಿ ಭಕ್ತನಾದಡೆ ಆ ಭವವೇ ಲೇಸು ಕಂಡಯ್ಯಾ; ಎಂದೆಂದೂ ನಾನಿದನೇ ಬಯಸುವೆ ತಂದೆ ಕರುಣಿಸಯ್ಯಾ ಲಿಂಗದೇವಾ* ಎನ್ನುವ  ಗುರು ಬಸವಣ್ಣನವರ ವಾಣಿಯಂತೆ ಪೂಜ್ಯ ಮಾತಾಜಿಯವರು ತಾವು ಮುಕ್ತಿಯ ಹಂಗನ್ನು  ತೊರೆದು, ಎಷ್ಟೇ ಜನ್ಮ ಬಂದರೂ ಬಸವ ತತ್ವವನ್ನು ಪ್ರಚಾರ ಮಾಡುತ್ತೇನೆ ಎಂದು ಛಲ ತೊಟ್ಟು ಧರ್ಮಕ್ಕಾಗಿಯೇ ಬದುಕಿ ಧರ್ಮಕ್ಕಾಗಿಯೇ ಸವೆದು ಧರ್ಮಕ್ಕಾಗಿಯೇ ಲಿಂಗೈಕ್ಯರಾದರು. ಅವರ ಈ ನಿಲುವನ್ನು ನೋಡಿ ನಮ್ಮ ಯುವ ಜನಾಂಗವು ಎಚ್ಚರಗೊಳ್ಳಬೇಕು.  ನಮ್ಮಲ್ಲಿ ಧರ್ಮಾಭಿಮಾನ ಪುಟಿದೇಳಬೇಕು.

ವಚನ:

*ಮನ ಮನ ಬೆರಸಿದಲ್ಲಿ ತನು ಕರಗದಿದ್ದಡೆ,*

*ಸೋಂಕಿನಲ್ಲಿ ಪುಳಕಂಗಳು ಹೊರಹೊಮ್ಮದಿದ್ದಡೆ,*

*ಕಂಡಾಗಳಶ್ರು ಜಲಂಗಳು ಸುರಿಯದಿದ್ದಡೆ,*

*ನುಡಿವಲ್ಲಿ ಗದ್ಗದಂಗಳು ಪೊಣ್ಮದಿದ್ದಡೆ,*

*ಲಿಂಗದೇವರ ಭಕ್ತಗಿದು ಚಿಹ್ನವೆ?*

*ಎನ್ನಲ್ಲಿ ಇಲ್ಲವಾಗಿ ನಾನು ಡಂಭಕ ಕಾಣಿರೆ !*


ಇದು  ಧರ್ಮಪಿತರ ವಾಣಿ. 

ಶರಣರು ಒಬ್ಬರನ್ನೊಬ್ಬರು ಕಂಡಾಗ ಈ ರೀತಿ ಭಾವನೆಯುಂಟಾದರೆ, ಅದು ಭಕ್ತನ ಲಕ್ಷಣ ಅಲ್ಲದಿದ್ದರೆ ವೇಷಧಾರಿ ಡಂಭಕ ಎನ್ನುತ್ತಾರೆ. 

ಅದೇ ರೀತಿ ಶ್ರೀಗಂಧದಂತೆ ಸವೆದ ಅಪ್ಪಾಜಿಯವರ  ಬದುಕು, ಮಾತಾಜಿಯವರ ಮಹಾನ್ ಕಾರ್ಯ, ೧೨ನೆಯ ಶತಮಾನದ ಶರಣರ ತ್ಯಾಗ, ಬಲಿದಾನಗಳನ್ನು ನೆನೆದು, ನಮ್ಮಲ್ಲಿ ಧರ್ಮದ ಬಗ್ಗೆ ಕಳಕಳಿ  ಈ ತತ್ವಕ್ಕಾಗಿ ದುಡಿಯುವೆನೆಂಬ ಛಲ ಮೂಡಬೇಕು. ಇಲ್ಲದಿದ್ದರೆ ನಮ್ಮಷ್ಟು, ನಿರಭಿಮಾನಿಗಳು, ಅಭಿಮಾನಶೂನ್ಯರು ಮತ್ತಾರೂ ಅಲ್ಲ.

ಇಂದು ಪಂಜಾಬ್ ಎಂದರೆ ಗುರುನಾನಕರು, ಸಿಖ್ಖರು ಎನ್ನುವ ಪದಗಳು ಇಡೀ ಜಗತ್ತಿಗೆ ಗೊತ್ತಿರುವಂತೆ, ಕನ್ನಡ ಕರ್ನಾಟಕ ಎಂದರೆ ಗುರು ಬಸವಣ್ಣನವರು, ವಚನ ಸಾಹಿತ್ಯ, ಲಿಂಗಾಯತ ಎನ್ನುವ ಪದಗಳು ಇಡೀ ಜಗತ್ತಿಗೆ ಗೊತ್ತಾಗುತ್ತಿದೆ. ಇದರ ಹಿಂದೆ ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿ ಮತ್ತು ಪೂಜ್ಯ ಶ್ರೀ ಮಾತೆ ಮಹಾದೇವಿಯವರ ಶ್ರಮ ತಪಸ್ಸು ಬಹಳ ಇದೆ. ಅವರು ಬೋಧಿಸಿದ ಬೋಧನೆ ಮಾಡಿದ ಸಂಶೋಧನೆಗಳು ಲಿಂಗಾಯತ ಧರ್ಮದ ಜೀವಾಳ. ಇಂದು ನಾವೆಲ್ಲರೂ ಎಚ್ಚೆತ್ತುಕೊಂಡು, ಧರ್ಮಾಚರಣೆ ಮಾಡುತ್ತ, ತತ್ವದ ಬಗ್ಗೆ ಕಳಕಳಿ ಹೊಂದುವುದರ ಜೊತೆಗೆ, ಪ್ರಚಾರ ಮಾಡುವುದು ಅತೀ ಅವಶ್ಯವಾಗಿದೆ. ನಮ್ಮ ದೇಶದಲ್ಲಿ ವೈದಿಕ ಪರಂಪರೆ ತುಂಬಾ ಬಲಿಷ್ಠವಾಗಿದೆ. ಶತಶತಮಾನಗಳಿಂದಲೂ ವೈದಿಕ ಪರಂಪರೆಯೊಂದಿಗೆ ಅನೇಕ ಪ್ರವಾದಿಗಳು ಮಹಾತ್ಮರು ಹೋರಾಡುತ್ತಲೇ ಬಂದಿದ್ದಾರೆ. ವೈದಿಕ ಪರಂಪರೆಯ ದಾಳಿಯಿಂದ ಲಿಂಗಾಯತ ಧರ್ಮವನ್ನುರಕ್ಷಿಸುವುದು ಎಂದಿಗಿಂತಲೂ ಇಂದು ಅತೀ ಅಗತ್ಯ ಮತ್ತು ತುರ್ತಾದ ಪರಿಸ್ಥಿತಿ ಇದೆ.

 ನಾನು ಹಲವಾರು ರಾಷ್ಟ್ರೀಯ ಬಸವ ದಳಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿ ಅನೇಕ ಶರಣರು ಭಕ್ತಿ ಶ್ರದ್ಧೆಯಿಂದ ಧರ್ಮಾಚರಣೆ ಮಾಡುತ್ತಿದ್ದಾರೆ. ಕೆಲವರು ರಾಷ್ಟ್ರೀಯ ಬಸವದಳವನ್ನು ತಮ್ಮ ವೈಯಕ್ತಿಕ ಪ್ರತಿಷ್ಠೆಗಳಿಗಾಗಿ ಬಳಸುತ್ತಿದ್ದಾರೆ. ಇವುಗಳನ್ನು ನೋಡಿ ಮಕ್ಕಳು ಏನನ್ನು ಕಲಿಯುತ್ತಾರೆ ಎನ್ನುವ ಅರಿವು ನಮಗಿರಬೇಕು. ನಮ್ಮ ಕಾಲಕ್ಕ ಧರ್ಮಾಚರಣೆ ನಿಂತು ಹೋಗಬಾರದು. ಇಂದಿನ ಮಕ್ಕಳೇ, ಇಂದಿನ ಯುವಕರೇ ನಾಳಿನ ಧರ್ಮಾನುಯಾಯಿಗಳು. ಅವರನ್ನು ಪರಿಪೂರ್ಣ ಧರ್ಮವಂತರನ್ನಾಗಿ ಶ್ರೇಷ್ಠ ಧರ್ಮದ ಉತ್ಕೃಷ್ಟ  ಅನುಯಾಯಿಗಳನ್ನಾಗಿ ರೂಪುಗೊಳಿಸುವುದು ಪ್ರತಿಯೊಬ್ಬ ತಾಯಿ ತಂದೆಯರ ಆದ್ಯ ಕರ್ತವ್ಯ. 

ಕೇವಲ ಸಂಪತ್ತು ಕೊಡದೇ ಸಂಸ್ಕಾರವನ್ನು ಕೂಡ ಕೊಟ್ಟು ಮಕ್ಕಳನ್ನು ಬೆಳೆಸಬೇಕು. ಕೇವಲ ನೀವು ಗಳಿಸಿದ ಧನಕ್ಕೆ ಅವರನ್ನು ಒಡೆಯರನ್ನಾಗಿ ಮಾಡದೆ ನೀವು ಆಚರಿಸುವ ನಿಜಾಚರಣೆಗಳ ಒಡೆಯರನ್ನಾಗಿ ಮಾಡಬೇಕು. ತಾಯಿ-ತಂದೆಯರಾದ ನೀವು, ನಿಮ್ಮ ಮಕ್ಕಳಿಗೆ ಪ್ರಾರ್ಥನೆಗೆ ಕರೆದುಕೊಂಡು ಬರದೇ ಅವರಿಗೆ ದೀಕ್ಷೆಯನ್ನು ಕೊಡಿಸದೆ ಧರ್ಮ ಸಂಸ್ಕಾರದಿAದ ವಂಚಿತರನ್ನಾಗಿ ಮಾಡಿದರೆ, ಈ ಋಣವನ್ನು ತೀರಿಸಲಿಕ್ಕೆ ಅವರು ನಿಮ್ಮನ್ನು ಮುಂದೊAದು ದಿನ ವೃದ್ಧಾಶ್ರಮಗಳಲ್ಲಿ ಇಡುತ್ತಾರೆ. ಇಂದು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗಿದೆ.  ವಯಸ್ಸಾದ ತಾಯಿ ತಂದೆಯರನ್ನು ಮಕ್ಕಳು ಹೊರಗೆ ಹಾಕುತ್ತಿದ್ದಾರೆ ಎಂದರೆ  ಇದರಲ್ಲಿ ಮಕ್ಕಳದಷ್ಟೇ ತಪ್ಪು ಎಂದು ಹೇಳಲು ನಾನು ಇಷ್ಟ ಪಡುವುದಿಲ್ಲ. ಅಂಥ ಸಂಸ್ಕಾರವನ್ನು ಕೊಟ್ಟು ಬೆಳೆಸದ ತಾಯಿ-ತಂದೆಯರದ್ದೂ ತಪ್ಪು ಎಂದು ಖಂಡಿತವಾಗಿಯೂ ಹೇಳುತ್ತೇನೆ. ಅದಕ್ಕಾಗಿ ಎಳೆಯ ಮಕ್ಕಳಿರುವಾಗಿನಿಂದಲೇ ಸಂಸ್ಕಾರವನ್ನು ಕೊಡಬೇಕು.

ಒಂದು ಧರ್ಮ ಪರಿಪೂರ್ಣವಾಗಿ ಎದ್ದು ನಿಲ್ಲಬೇಕಾದರೆ, ಅದು ತನ್ನ ಸಂಪೂರ್ಣ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ, ಆ ಧರ್ಮವನ್ನು ಕೇವಲ ಆರ್ಥಿಕವಾಗಿ ಬಡ ಜನತೆ ಹಾಗು ಮಧ್ಯಮ ವರ್ಗದ ಜನತೆಯ ಆಚರಣೆಯಿಂದ ಮಾತ್ರ ಸಾಧ್ಯವಿಲ್ಲ. ಆರ್ಥಿಕವಾಗಿ ಶ್ರೀಮಂತ ವರ್ಗದವರು, ದೊಡ್ಡ ದೊಡ್ಡ ಅಧಿಕಾರದಲ್ಲಿರುವವರು,ಲಿಂಗಾಯತ ರಾಜಕಾರಣಿಗಳು ಈ ಧರ್ಮವನ್ನು ಅಪ್ಪಿಕೊಂಡು ಆಚರಿಸಬೇಕು. 

ಆದರೆ ದುರ್ದೈವದ ಸಂಗತಿ ,ಅನೇಕ ಶ್ರೀಮಂತ ಲಿಂಗಾಯತರು ತತ್ವದ ಹತ್ತಿರವೂ ಸುಳಿಯುವುದಿಲ್ಲ ಕೆಲವು ಶ್ರೀಮಂತರು ರಾಷ್ಟ್ರೀಯ ಬಸವದಳದ ಸಂಘಟನೆಗೆ ಬಂದರೂ ಸಂಘಟನೆಗೆ ಸೇವೆ ಮಾಡುವುದಕ್ಕಿಂತ ಹೆಚ್ಚಾಗಿ ಸಂಘಟನೆಯನ್ನು ತಮ್ಮ ಸೇವೆಗೆ ತಮ್ಮ ರಾಜಕೀಯ ಬೆಳವಣಿಗೆಗೆ ಬಳಸಿಕೊಳ್ಳುತ್ತಿರುವ ಮತ್ತು ಸಂಘಟನೆಯನ್ನು ಒಡೆದು ಬದುಕುತ್ತಿರುವ ಅನೇಕ ಪ್ರಸಂಗಗಳು ಕಣ್ಣ ಮುಂದೆಯೇ ನಡೆಯುತ್ತಿವೆ. ಅವರು ಯಾವುದೇ ಧರ್ಮ ಸಂಸ್ಕಾರಕ್ಕೂ ಒಳಗಾಗುವುದಿಲ್ಲ. ಆದ್ದರಿಂದ ನಮ್ಮ ಸಮಾಜದಲ್ಲಿ ಎರಡು ಕಾರ್ಯಗಳು ತ್ವರಿತ ಗತಿಯಲ್ಲಿ ಆಗಬೇಕಿದೆ. ಒಂದನೆಯದಾಗಿ ಆರ್ಥಿಕ ಶ್ರೀಮಂತರು ಹೃದಯ ಸಿರಿವಂತರಾಗಿ, ಧರ್ಮದ  ಪರುಷ ಸ್ಪರ್ಶ ಮಾಡಿಕೊಳ್ಳಬೇಕು. ಧರ್ಮ ಸಂಸ್ಕಾರಕ್ಕೆ ಒಳಗಾಗಿ, ಧರ್ಮದ ಇತರ ಅನುಯಾಯಿಗಳೊಂದಿಗೆ ಬೆರೆಯಬೇಕು. 

ಇದು ಸಾಧ್ಯವಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ  ಇದಕ್ಕೆ ಎರಡನೆಯ ದಾರಿಯೊಂದಿದೆ. ಆರ್ಥಿಕವಾಗಿ ಹಿಂದುಳಿದ ಧರ್ಮವಂತ ಶರಣರು, ಶ್ರೀಮಂತರಾಗಬೇಕು. *ಹಾಸಿದುಡಿವೊಡೆ ಹತ್ತು ಬೆರಳುಂಟು ತನಗುಂಟು ತನ್ನ ಪ್ರಮಥರಿಗುಂಟೂ* ಎನ್ನುವ  ಧರ್ಮಪಿತರ ವಾಣಿಯಂತೆ ಚನ್ನಾಗಿ ದುಡಿಯಬೇಕು. ಇವರ ಮಕ್ಕಳು ನಿಷ್ಠೆಯಿಂದ ವಿದ್ಯಾಭ್ಯಾಸ ಮಾಡಬೇಕು. ಅಲ್ಪಾಕಾಂಕ್ಷಿಗಳಾಗಿ ಓದದೆ, ಮಹತ್ವಾಕಾಂಕ್ಷಿಗಳಾಗಬೇಕು. ಐ.ಎ.ಎಸ್, ಕೆ.ಎ.ಎಸ್ ಅಧಿಕಾರಿಗಳಾಗಬೇಕು, ಎಂ.ಪಿ, ಎಂ.ಎಲ್.ಎ, ರಾಜಕಾರಣಿಗಳಾಗಬೇಕು. ಈ ಮೂಲಕ ನಾವು ನಮ್ಮ ಧರ್ಮವನ್ನು  ಎತ್ತಿ ಹಿಡಿಯಬೇಕು, ಇದನ್ನು ಉಳಿಸಿ ಬೆಳೆಸಬೇಕು. 

ಬಡತನ ಎನ್ನುವಂಥದ್ದು ಎಲ್ಲಾ ಕಷ್ಟಗಳಿಗೂ ಕಾರಣವಾಗುತ್ತದೆ; ಅದನ್ನು  ಮೆಟ್ಟಿ  ನಿಲ್ಲಬೇಕು. ಈ ರೀತಿಯಾದ ಸಂಸ್ಕಾರವನ್ನು  ನಾವು ಜೀವನದಲ್ಲಿ ಅಳವಡಿಸಿ ಕೊಳ್ಳುವುದರಿಂದ ನಮ್ಮ ಧರ್ಮವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯವಿದೆ.

ಸಂಘಟನೆಯ ಬಗ್ಗೆ ಒಂದೆರೆಡು ವಿಷಯಗಳನ್ನು ತಿಳಿದುಕೊಳ್ಳುವುದು ಅತೀ ಅವಶ್ಯವಾಗಿದೆ. ಲಿಂಗಾಯತ ಧರ್ಮದ ಬಂಧುಗಳು ಸಂಘಟಿತರಾಗಿ ಬದುಕುವುದು ಎಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿದೆ. ಧರ್ಮಪಿತರ ವಾಣಿ ಹೇಳುತ್ತದೆ :

*ಸಿಂಗದ ನಡು ಮುರಿಯಲಾ ಸಿಂಗವೇನು ಬಾತೆ?*

*ಸೊಂಡಿಲು ಮುರಿದೊಡೆ ಗಜವೇನು ಬಾತೆ?*

*ಸಂಗ್ರಾಮದಲ್ಲಿ ವೀರನಳಿಯಲದೇನು ಬಾತೆ?*

*ಶೃಂಗಾರದ ಮೂಗ ಹೋದಡೆ ಶೃಂಗಾರವೇನು ಬಾತೆ?*

*ನಿಜ ತುಂಬಿದ ಭಕ್ತಿ ತುಳುಕಾಡದವರ ಸಂಗವೇನು ಬಾತೆ ಲಿಂಗದೇವಾ.*

ಒಂದು ಸಿಂಹದ ಶಕ್ತಿ  ಅದರ ಸೊಂಟದಲ್ಲಿ ಇರುತ್ತದೆ ; ಒಂದು ಆನೆಯ ಶಕ್ತಿ ಅದರ ಸೊಂಡಿಲಿನಲ್ಲಿ ಇರುತ್ತದೆ, ಒಂದು ಸೈನ್ಯದ ಶಕ್ತಿ ಅದರ ಮುಂದಾಳು- ಸೈನ್ಯಾಧಿಕಾರಿಯಲ್ಲಿರುತ್ತದೆ.ಅದೇ ರೀತಿ ಒಂದು ಸಮಾಜದ  ಶಕ್ತಿ ಅದರ ಸುವ್ಯವಸ್ಥಿತವಾದ ಸಂಘಟನೆಯಲ್ಲಿರುತ್ತದೆ. 

ಸೊಂಟ ಮುರಿದ ಸಿಂಹ, ಸೊಂಡಿಲು ಮುರಿದ ಆನೆ ಎಷ್ಟೇ ಬಲಿಷ್ಠವಾಗಿದ್ದರೂ ಯಾವುದೇ ಪ್ರಯೋಜನವಿಲ್ಲ; ಅದೇ ರೀತಿ, ಸಂಘಟಿತವಿಲ್ಲದ ಸಮಾಜ ಸಂಖ್ಯೆಯಲ್ಲಿ ಎಷ್ಟೇ ಇದ್ದರೂ ಯಾವುದೇ ಪ್ರಯೋಜನವಿಲ್ಲ. ಅದಕ್ಕಾಗಿ ನಾವು ನಮ್ಮಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ  ಸಂಘಟಿತರಾಗಿ ಬದುಕಬೇಕು.

since wars begin in the minds of men, it is in the minds of men that the defences of peace must be constructed.” ಎಂದು ಯುನೆಸ್ಕೊ ಸಂವಿಧಾನದ ಮುನ್ನುಡಿಯಲ್ಲಿ ಬರೆಯಲಾಗಿದೆ.

ಜಗಳ, ಒಡಕು ಎನ್ನುವಂಥದ್ದು ಮೊದಲು ಮನಸ್ಸಿನಲ್ಲಿ ಹುಟ್ಟುತ್ತದೆ ಇದಕ್ಕಾಗಿ ಶಾಂತಿಯ ಸೈನ್ಯವನ್ನು ಕಟ್ಟಬೇಕನ್ನುತ್ತದೆ ಯುನೆಸ್ಕೊ ಮುನ್ನುಡಿ. ಅದಕ್ಕಾಗಿ ನಾವು ಶಾಂತಿ, ಸಮಾಧಾನಚಿತ್ತತೆಯನ್ನು, ಹೆಚ್ಚು  ಹೆಚ್ಚು ಪೂಜೆ ಧ್ಯಾನ ಮಾಡುವುದರ ಮೂಲಕ ಮತ್ತು ವಚನ ಸಾಹಿತ್ಯ ಓದುವುದರ ಮೂಲಕ ಗಳಿಸಿಕೊಳ್ಳಬೇಕು. ಪೂಜೆ ಧ್ಯಾನ ಸಂಸ್ಕಾರ ಇಲ್ಲದ ಕೇವಲ ಶ್ರೀಮಂತಿಕೆ ಹೊಂದಿದ ವ್ಯಕ್ತಿಗಳಿಗೆ ರಾಷ್ಟ್ರೀಯ ಬಸವದಳಗಳ ಅಧಿಕಾರದ ಹುದ್ದೆಯಲ್ಲಿಡಬಾರದು. ನಿಷ್ಠಾವಂತರಾದ ಧರ್ಮವಂತರಾದ ತತ್ವ ತಿಳಿದ ಶರಣರು ಮಾತ್ರ ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳು, ಅಧ್ಯಕ್ಷರು ಕಾರ್ಯದರ್ಶಿಗಳು ಆಗಬೇಕು.

ಎಲ್ಲಾ ರಾಷ್ಟ್ರೀಯ ಬಸವ ದಳದ ಶರಣರು, ಗಮನವಿಟ್ಟು  ತಿಳಿದುಕೊಳ್ಳಬೇಕು.ಅಮೇರಿಕಾದ ಅಧ್ಯಕ್ಷರಾಗಿದ್ದ ಜ್ಹಾನ್.ಎಫ್. ಕೆನಡಿ ಒಂದು ಮಾತು ಹೇಳಿದ್ದಾರೆ. *Ask not what your country can do for you, but ask what you can do for your country.”ರಾಷ್ಟ್ರ ನನಗೇನು ಕೊಟ್ಟಿದೆ/ ನನಗೇನು  ಮಾಡಿದೆ ಎಂದು ಕೇಳಬೇಡ ರಾಷ್ಟ್ರಕ್ಕಾಗಿ ನಾನೇನು ಕೊಡಬಲ್ಲೆ/ ನಾನೇನು ಮಾಡಬಲ್ಲೆ ಎಂದು ಕೇಳು ಎನ್ನತ್ತಾರೆ. ನೋಡಿದಿರಾ ಎಂಥಾ ಮಾತು!  ಇಂಥಾ ಮನೋಭಾವನೆಯಿಂದಲೇ ಅವರು ಅಷ್ಟೊಂದು ದೊಡ್ಡ  ಶ್ರೀಮಂತ ಮತ್ತು ಬಲಿಷ್ಠವಾದ ರಾಷ್ಟ್ರವನ್ನುಅವರು ಕಟ್ಟಿದ್ದಾರೆ. 

ಅದೇ ರೀತಿ, ರಾಷ್ಟ್ರೀಯ ಬಸವ ದಳದಲ್ಲಿರುವ ವ್ಯಕ್ತಿ ಈ ಸಂಘಟನೆ ನನಗೇನು ಕೊಟ್ಟಿದೆ? ಸಂಘಟನೆಯಿಂದ ನಾನೇನು ಪಡೆದುಕೊಳ್ಳಬಹುದು  ಎಂದು ಯೋಚಿಸದೆ, ಸಂಘಟನೆಗಾಗಿ  ನಾನೇನು ಕೊಟ್ಟಿದ್ದೇನೆ ಎಂದು ತನ್ನನ್ನು ತಾನು ಪ್ರಶ್ನಿಸಿಕೊಳ್ಳಬೇಕು, ನನಗೆಷ್ಟು ಜನ 

ಗೌರವ ಮನ್ನಣೆ ಕೊಡುತ್ತಾರೆ? ಎನ್ನುವುದಕ್ಕಿಂತ ನಾನೆಷ್ಟು  ಜನರಿಗೆ ಗೌರವ ಮನ್ನಣೆ ಕೊಡುತ್ತಿದ್ದೇನೆ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಂಡರೆ ಸಂಘಟನೆಯು ಬಲವಾಗಿ ಬೆಳೆಯುತ್ತದೆ.

ಸಂಘಟನೆ ಎಂದರೆ ಇಡೀ ಸಂಘಟನೆಯೇ ಎದ್ದು ನಿಲ್ಲಬೇಕು. ಒಬ್ಬ ವ್ಯಕ್ತಿ ವೈಯಕ್ತಿಕವಾಗಿ ಕಾಣಿಸಿಕೊಳ್ಳಲಿಕ್ಕೆ  ಪ್ರಯತ್ನ  ಮಾಡಬಾರದು. ಉದಾರಣೆಗೆ  ಈಗ ನೀವು ಒಂದು ಬಸವ ಮಂಟಪದ ಕಟ್ಟಡ ಕಟ್ಟುತ್ತಿದ್ದೀರಾ ಎಂದು ಕೊಳ್ಳಿ. ಕಟ್ಟಡದಲ್ಲಿ ಎಲ್ಲಾ ಕಲ್ಲುಗಳು ಸಮವಾಗಿ ಇರುತ್ತವೆ, ಯಾವುದಾದರೂ ಒಂದು ಕಲ್ಲು, ಹೊರಗೆ ತೋರಿಸಿಕೊಳ್ಳಬೇಕು ಎಂದು ಸ್ಪಲ್ಪ ಹೊರಕ್ಕೆ ಜರುಗಿದರೆ, ಅದನ್ನು ಕೆತ್ತಿ ಸರಿ ಮಾಡುತ್ತಾರೆ. ನಾನು ಕೆತ್ತಿಸಿಕೊಳ್ಳುವುದಿಲ್ಲ  ಎಂದರೆ ಕಿತ್ತಿ  ಬಿಸಾಕುತ್ತಾರೆ;  ಮತ್ತೊಂದು  ಕಲ್ಲು  ಸೇರಿಸುತ್ತಾರೆ. ಅದಕ್ಕಾಗಿ ಯಾವುದೇ ಕಲ್ಲು  ಹೊರಗೆ  ತೋರಿಸಿಕೊಳ್ಳದೆ  ಇಡೀ  ಕಟ್ಟಡವೇ ಹೇಗೆ  ಎದ್ದು ಕಾಣುತ್ತೋ ಅದೇ ರೀತಿ ಇಡೀ ಸಂಘಟನೆಯೇ ಎದ್ದು ಕಾಣಬೇಕು. ಒಂದು ವೇಳೆ ಯಾರಾದರೂ ವ್ಯಕ್ತಿ  ತೋರಿಸಿಕೊಳ್ಳಲು ಪ್ರಯತ್ನ ಪಟ್ಟರೆ ಪರಮಾತ್ಮ ಆ ಕಲ್ಲಿನಂಥ ಪರಿಸ್ಥಿತಿ ಮಾಡುತ್ತಾನೆ  ಎನ್ನುವುದನ್ನು  ಮರೆಯಬಾರದು. 

*ರಾಷ್ಟ್ರೀಯ ಬಸವದಳ ಎನ್ನುವ ಭವ್ಯವಾದ ಮಂಟಪದ ಕಟ್ಟಡದಲ್ಲಿ ತಾನು ವೈಯಕ್ತಿಕವಾಗಿ ಮೆರೆಯಬಂದ ಅನೇಕ ಕಲ್ಲುಗಳನ್ನು ಲಿಂಗದೇವರು ಕಿತ್ತು ಹಾಕಿರುವ ಅನೇಕ ಜ್ವಲಂತ ಉದಾಹರಣೆ ನಮ್ಮ ಮುಂದಿವೆ. ಕೆಲವು ಭಕ್ತರ ಹೃದಯ ಪೀಠದಲ್ಲಿರಬೇಕಾದವರು ಅಹಂಕಾರ ಮದ ಮತ್ಸರಗಳ ಪೀಠದ ಮೇಲೆ ವಿಕೃತಲಾಂಕಾರ ಗೊಂಡಿದ್ದಾರೆ. ಕೆಲವರು ಇಡೀ ರಾಷ್ಟ್ರದ ಸಂಘಟನೆ ಮುನ್ನಡೆಸುತ್ತೇನೆ ಎಂದು ಬಂದು ಮೂಲೆಗುಂಪಾಗಿದ್ದಾರೆ. ಇವೆಲ್ಲವೂ ಸಂಘಟನೆಗೆ ಬಗೆದ ದ್ರೋಹದ ಫಲಗಳಾಗಿವೆ. ಎಕೆಂದರೆ ಸಂಘಟನೆ ಎಂದರೆ ಜಂಗಮ. ಜಂಗಮವು ಲಿಂಗದೇವನ ಮುಖ. ಲಿಂಗದೇವನ ಮುಖಕ್ಕೆ ಮಸಿಬಳೆಯಲೆತ್ನಿಸುವವರಿಗೆ ಲಿಂಗದೇವ ಸುಮ್ಮನೆ ಬಿಡುವನೇ?*

*ರಾಷ್ಟ್ರೀಯ  ಬಸವ ದಳದ ಸಂಘಟನೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಇವುಗಳು ತುಂಬಾ ಗೌರವದ ಅಥವಾ ಇತರರ ಮೇಲೆ ಅಧಿಕಾರ ಚಲಾಯಿಸಲಿಕ್ಕೆ ಇರುವ ಹುದ್ದೆಗಳಲ್ಲ. ಯಾರು ಇತರರಿಗಿಂತ ಹೆಚ್ಚು ಸೇವೆ ಮಾಡುತ್ತಾರೋ. ಅವರಿಗೆ ಸೇವೆ ಮಾಡಲು ಅವಕಾಶ ಮಾಡಿಕೊಡುವಂಥ ಹುದ್ದೆಗಳು. ಅದಕ್ಕಾಗಿ ಇಂಥ ಸ್ಥಾನಮಾನಗಳಿಗೆ ಪೈಪೋಟಿ ನಡೆಯಬಾರದು ಮತ್ತು ಇಂಥ ಪದನಾಮ ಹೊಂದಿದವರು ಇತರರನ್ನು ಕೆಳದರ್ಜೆಗಿಳಿಸಿ ಮಾತನಾಡಬಾರದು.* 

ಪ್ರತಿಯೊಬ್ಬರು ತಮಗೆ ಕೊಟ್ಟಿರುವ ಪದನಾಮಗಳಿಗೆ ತಕ್ಕಂತೆ ಕೆಲಸ ಮಾಡಿ ಆ ಸ್ಥಾನಕ್ಕೆ ಗೌರವವನ್ನು ತಂದು ಕೊಡಬೇಕು. ಕೆಲವರು ರಾ.ಬ.ದಳದ ಸಂಘಟನೆಯಲ್ಲಿ ಭಾಗವಹಿಸಿ, ಉತ್ತಮ ಕೆಲಸಗಳನ್ನು ಮಾಡುತ್ತ, ಎಲ್ಲರ ಮೆಚ್ಚುಗೆಗೂ ಪಾತ್ರರಾಗುತ್ತಾರೆ. ಒಳ್ಳೆಯ ಕೀರ್ತಿಯನ್ನು ಗಳಿಸಿಕೊಂಡಿರುತ್ತಾರೆ. ಇದನ್ನು ನೋಡಿ ಕೆಲವರಿಗೆ ಸಹಿಸಲಿಕ್ಕಾಗದೆ ಅವರ ಮೇಲೆ ಹೊಟ್ಟೆ ಕಿಚ್ಚನ್ನು ಸಾಧಿಸುತ್ತಾರೆ. ಕೆಲವರು ಮತ್ಸರವನ್ನು ಹೊರಗಡೆ ತೋರಿಸಲಿಕ್ಕೆ ಆಗಿದಿದ್ದರೂ ಒಳಗೊಳಗೇ ಮತ್ಸರಿಸುತ್ತಾರೆ. ಒಳ್ಳೆಯ ಕಾರ್ಯಗಳನ್ನು ಮಾಡುವವರ ಮೇಲೆ, ಛಾಡಿ ಹೇಳುತ್ತಾ, ಆರೋಪ ಹೊರಿಸುತ್ತಾರೆ ಇದು ಧರ್ಮಪಿತರು ಮನ್ನಿಸದೇ ಇರುವ ವರ್ತನೆ. ಹೀಗೆ ಮಾಡುವುದರಿಂದ ಅವರು ಧರ್ಮಪಿತರ ಮತ್ತು ಲಿಂಗದೇವನ ಅವಕೃಪೆಗೆ ಪಾತ್ರರಾಗುತ್ತಾರೆ.

ವಚನ:

*ಕೋಣನ ಹೇರಿಂಗೆ ಕುನ್ನಿ ಬುಸುಕುತ್ತ ಬಡುವಂತೆ*

*ತಾವೂ ನಂಬರು ನಂಬುವರನೂ ನಂಬಲೀಯರು*

*ತಾವು ಮಾಡರು ಮಾಡುವರನೂ ಮಾಡಲೀಯರು*

*ಮಾಡುವ ಭಕ್ತರ ಕಂಡು ಸೈರಿಸಲಾರದೆ*

*ಕೂಗಿಡೆ, ಕೂಗಿಡೆ, ನರಕದಲ್ಲಿಕ್ಕುವ ನಮ್ಮ ಲಿಂಗದೇವಾ.*

ತಾವೂ ಮಾಡದೆ, ಮಾಡುವ ಭಕ್ತರ ಕಂಡು ಸೈರಿಸಲಾರದೆ ಹೊಟ್ಟೆ ಕಿಚ್ಚು ಪಡುವವರನ್ನು ಲಿಂಗದೇವರು ನರಕದಲ್ಲಿಕ್ಕುತ್ತಾನೆ. *ಪೂಜ್ಯ ಶ್ರೀ ಮಾತೆ ಮಹಾದೇವಿಯವರು ಲಿಂಗದೇವ ವಚನಾಂಕಿತವನ್ನು ಅಳವಡಿಸಿ ಅನೇಕ ಕಾರ್ಯ ಮಾಡಿದರು ಸಂಘಟನೆಯ ಭಾರ ಹೊತ್ತರು ದೇಶ ವಿದೇಶಗಳಲ್ಲಿಯೂ ಧರ್ಮ ಪ್ರಚಾರ ಮಾಡಿದರು. ಬಸವಕಲ್ಯಾಣವನ್ನು ನವಕಲ್ಯಾಣವನ್ನು ಮಾಡಿದರು. ಅವರು ಹೊತ್ತ ಭಾರ ತನಗೆ ಹೊರಲಿಕ್ಕೆ ಸಾಧ್ಯವಿಲ್ಲ ಎಂದು ಗೊತ್ತಿರುವ ಕುನ್ನಿಗಳು ಸುಮ್ಮನೆ ಹಿಂದಕ್ಕೆ ಸರಿಬೇಕೇ ಹೊರತು ಪೂಜ್ಯ ಶ್ರೀ ಮಾತೆ ಮಹಾದೇವಿಯವರು ಹೊತ್ತ ತತ್ವವೇ ಸರಿಯಿಲ್ಲ ಎಂದು ಬುಸುಗುಡುವವರು ಕುಂಭೀಪಾಕ ನರಕ್ಕಕಿಳಿಯುವದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ.*

ಒಂದೇ ಮನೆಯಲ್ಲಿ ಇರುವ ಸದಸ್ಯರಲ್ಲಿಯೇ ಅನೇಕ ಭಿನ್ನಾಭಿಪ್ರಾಯಗಳಿರುತ್ತವೆ. ಮತ್ತು ಒಬ್ಬೊರಿಗೆ ಒಂದೊಂದು ರೀತಿಯ ಕೆಲಸ ಮಾಡುವ ಸಾಮರ್ಥ್ಯವಿರುತ್ತದೆ. ಒಬ್ಬರಿಗೆ ಸಾಮಾನು ಖರೀದಿ ಮಾಡುವುದರಲ್ಲಿ ಪರಿಣಿತಿ ಇರುತ್ತದೆ. ಮತ್ತೆ ಒಬ್ಬರಿಗೆ ಮನೆಯ ಒಳಗಡೆಯ ಕೆಲಸಗಳನ್ನು ಅಚ್ಚು ಕಟ್ಟಾಗಿ ಮಾಡುವ ಸಾಮರ್ಥ್ಯವಿದ್ದರೆ, ಇನ್ನೊಬ್ಬರಿಗೆ ಹೊರಗಡೆಯ ಕೆಲಸ ವ್ಯವಹಾರ ನೋಡಿಕೊಳ್ಳುವ ಸಾಮರ್ಥ್ಯವಿರುತ್ತದೆ. ಆಗ ಅವರವರ ಆಸಕ್ತಿ ಮತ್ತು ಪರಿಣಿತಿ ಇರುವ ಕೆಲಸಗಳಿಗೆ ಅವರನ್ನು ಬಿಟ್ಟರೆ ಅವರು ಆ ಕಾರ್ಯವನ್ನು ಹೆಚ್ಚು ದಕ್ಷತೆಯಿಂದ ನಿರ್ವಹಿಸಬಲ್ಲರು.

ಅದೇ ರೀತಿ ಸಂಘಟನೆಯಲ್ಲಿ ಭಾಗಿಗಳಾದವರಿಗೂ ಇದೇ ರೀತಿಯ ವಿಭಿನ್ನ ರೀತಿಯ ಆಸಕ್ತಿ ಮತ್ತು ಪರಿಣಿತಿ ಇರುತ್ತದೆ. ಎಲ್ಲರೂ ಎಲ್ಲಾ ಕಾರ್ಯಗಳನ್ನು ನೋಡಿಕೊಳ್ಳಲಿಕ್ಕೆ ಆಗುವುದಿಲ್ಲ. ಯಾರಿಗೆ ಯಾವ ಯಾವ ಸಾಮರ್ಥ್ಯವಿರುತ್ತದೆಯೋ ಅವರನ್ನು ಆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಕೆಲವರು ಪ್ರವಚನ ಚೆನ್ನಾಗಿ ಮಾಡುತ್ತಾರೆ ಮತ್ತೆ ಕೆಲವರು ಚೆನ್ನಾಗಿ ಬರೆಯಬಹುದು. ಕೆಲವರು ದಾಸೋಹ ಸೇವೆ ಚೆನ್ನಾಗಿ ಮಾಡಬಹುದು . ಕೆಲವರು ಅತಿಥಿಗಳ ಉಪಚಾರ ಚೆನ್ನಾಗಿ ಮಾಡಬಹುದು. ಅನೇಕರು ``ವೇದಿಕೆಯ ಮೇಲೆ ಮಾತನಾಡಲಿಕ್ಕೆ ಎಲ್ಲರಿಗೂ ಬರುತ್ತದೆ ಕೆಲಸ ಮಾಡಬೇಕು" ಎಂದು ಚುಚ್ಚು ಮಾತನಾಡುತ್ತಾರೆ. ಎಲ್ಲರಿಗೂ ಮನಮುಟ್ಟುವಂತೆ ಮನಸ್ಸು ಪರಿವರ್ತನೆಯಾಗುವಂತೆ ಒಂದು ಪ್ರವಚನ/ಭಾಷಣ ಮಾಡಲಿಕ್ಕೆ ಅದರ ಹಿಂದಿನ ಶ್ರಮ ಉಪನ್ಯಾಸ ಮಾಡುವವರಿಗೇ ಗೊತ್ತು. ಅಲ್ಲದೇ ಇಂದು ನಮ್ಮ ಜನರ ಮನಸ್ಸನ್ನು ತಾತ್ವಿಕವಾಗಿ ಆಧ್ಯಾತ್ಮಿಕವಾಗಿ ಗಟ್ಟಿಗೊಳಿಸುವುದು ತುಂಬಾ ಅವಶ್ಯಕತೆ ಇದೆ.

ವಚನ:

*ಭಕ್ತನಾಯಿತ್ತೆ ಭಕ್ತಿ ದಾಸೋಹ, ಯುಕ್ತನಾಯಿತ್ತೆ ಯುಕ್ತಿ ದಾಸೋಹ;*

*ಐಕ್ಯನಾಯಿತ್ತೆ ಮಮಕಾರ ದಾಸೋಹ*

*ಸರ್ವದಲೆ ದಾಸೋಹವೇ ಬೇಕು*

*ಈ ದಾಸೋಹದ ಅನುವ ಕೂಡಲ ಸಂಗಯ್ಯ ತಾನೆ ಬಲ್ಲ.*

ಈ ರೀತಿಯ ಸೂತ್ರಗಳನ್ನು ಪಾಲಿಸಿದಾಗ ನಮ್ಮ ರಾ.ಬ.ದಳದ ಸಂಘಟನೆ, ಸಾಮಾಜಿಕವಾಗಿ, ತಾತ್ವಿಕವಾಗಿ, ಹೆಚ್ಚು ಬಲಶಾಲಿಯಾಗುತ್ತದೆ.

ಅನೇಕರು ಸಮಾಜದ ಹಿತಕ್ಕಾಗಿ ಧರ್ಮದ ಏಳಿಗೆಗಾಗಿ ಒಂದು ಕಡೆ ಸೇರಿ ಪ್ರಾರ್ಥನೆ ಚಿಂತನೆ, ಕಾರ್ಯಗಳನ್ನು  ಮಾಡುವುದೇ ಸಂಘಟನೆ. ಇಂಥ ಕಾರ್ಯದಲ್ಲಿ  ತೊಡಗಿದ್ದಾಗ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ವಿಚಾರಗಳಿರುತ್ತವೆ. ಅವರು ರಾ.ಬ.ದಳದಂಥ ಸಂಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದರೆ ಖಂಡಿತವಾಗಿಯೂ ಅವರಲ್ಲಿ ಬಸವ ಭಕ್ತಿ  ಇದ್ದೇ ಇದೆ. 

ಆದರೆ ಕೆಲವೊಮ್ಮೆ ಅವರ ಮನಸ್ಸಿನಲ್ಲಿರುವ ಭಕ್ತಿ ಅಭಿಮಾನ  ಇವರಿಗೆ ಅರ್ಥವಾಗುವುದಿಲ್ಲ. ಇವರ ಅಭಿಮಾನ ಅವರಿಗೆ ಗೊತ್ತಾಗುವುದಿಲ್ಲ . ಇಬ್ಬರೂ ಮಾಡುವುದು ಗುರು ಬಸವಣ್ಣನವರಿಗೋಸ್ಕರವೇ, ಆದರೆ  ಇಬ್ಬರಲ್ಲಿ  ಭಿನ್ನಾಭಿಪ್ರಾಯ ಬರುತ್ತದೆ. ಆಗ ಏನು ಮಾಡುವುದು ಸಂಘಟನೆಯಿಂದ ಯಾರಾದರೊಬ್ಬರು ದೂರ ಹೋಗುವುದೇ? ಬೇಡ ಇದು ಒಳ್ಳೆಯದಲ್ಲ. ಧರ್ಮಪಿತರನ್ನು ಕೇಳೋಣ ಏನು ಹೇಳುತ್ತಾರೆ.

ವಚನ:

*ಕಬ್ಬಿನ ಮೇಲೆ ಜೇನನಿಟ್ಟಿತ್ತೆಂಬರು*

*ಅವು ಒಂದರ ಸಿಹಿಯನೊಂದು ಅರಿಯವು*

*ಭಕ್ತ ಮತ್ತು ಜಂಗಮದ ನಡುವೆ, ಅರ್ಥ ಪ್ರಾಣ ಅಭಿಮಾನ*

*(ಅಹಂಕಾರ)ವೆಂಬ ಸಿಗುರು ಕಾಡಿತ್ತು ಕಾಣಾ ಲಿಂಗದೇವಾ.*

ಧರ್ಮಪಿತರು ಎಷ್ಟು ಸೂಕ್ಷಮಗ್ರಾಹಿ ಇದ್ದಾರೆ ಎನ್ನುವುದು ಈ ವಚನದಿಂದ ಅರ್ಥವಾಗುತ್ತದೆ. ಕಬ್ಬಿನ ಮೇಲೆ ಜೇನು ಹುಳಗಳು ಜೇನು ಗೂಡನ್ನು ಕಟ್ಟಿವೆ. ಅದನ್ನು ನೋಡಿ ಧರ್ಮಪಿತರಿಗೆ ಆಶ್ಚರ್ಯವಾಗಿದೆ, ಕಬ್ಬಿನಲ್ಲಿಯೂ ಸಿಹಿ ಇದೆ ಜೇನಿನಲ್ಲಿಯೂ ಸಿಹಿ ಇದೆ. ಆದರೆ ಒಂದರ ಸಿಹಿ ಇನ್ನೊಂದಕ್ಕೆ ಗೊತ್ತಾಗುವುದಿಲ್ಲ ಕಾರಣ ಕಬ್ಬಿನ ಮೇಲೆ ಇರುವ ಸಿಗುರು/ಸಿಪ್ಪೆ . 

ಅದೇ ರೀತಿ ಒಂದು ಸಂಘಟನೆಯಲ್ಲಿ ಭಾಗಿಗಳಾಗಿರುವ ಇಬ್ಬರಲ್ಲೂ ಬಸವ ಭಕ್ತಿಯ, ಸಮಾಜ ಪ್ರೇಮದ, ಸೇವಾ ಮನೋಭಾವದ ಸಿಹಿ ಇದೆ. ಇಬ್ಬರೂ ಕಾರ್ಯ ಮಾಡುತ್ತಿರುವುದು ಗುರು ಬಸವಣ್ಣನವರಿಗಾಗಿಯೇ. ಆದರೂ ಒಬ್ಬರನ್ನೊಬ್ಬರು ಅರ್ಥ ಮಾಡಿ                   ಕೊಳ್ಳಲಿಕ್ಕಾಗದೆ, ಅವರಲ್ಲಿ ವೈಮನಸ್ಸು  ಹುಟ್ಟಿದರೆ ಅದಕ್ಕೆ ಕಾರಣ ಅಹಂಕಾರ. 

ಈ ಅಹಂಕಾರ ತುಂಬಾ ಸೂಕ್ಷ್ಮವಾಗಿರುತ್ತದೆ. ಈ ಅಹಂಕಾರವೆಂಬ ಸಿಗುರು ಯಾರ ಮನದಲ್ಲಿಯೇ ಇರಲಿ ಅದನ್ನು ಕಳಚಿ ಕೊಳ್ಳಬೇಕು. ಕಬ್ಬಿನ ಹಾಲಿನಲ್ಲಿ  ಜೇನು ಬೆರೆತಾಗ ಸಿಹಿ ಹೆಚ್ಚಾಗುವಂತೆ ಅಹಂಕಾರ ರಹಿತವಾಗಿ ಒಬ್ಬರ ಮನಸ್ಸನ್ನು  ಇನ್ನೊಬ್ಬರು ಅರ್ಥಮಾಡಿಕೊಂಡು ಮುನ್ನಡೆದಾಗ ಸಂಘಟನೆಗೆ ಇನ್ನಷ್ಟು ಮತ್ತಷ್ಟು ಬಲ ಬರುತ್ತದೆ ಮತ್ತು ಪರಮಾತ್ಮನ ಅನುಗ್ರಹವೂ ಹರಿದು ಬರುತ್ತದೆ.

ವಚನ:

*ಅಹಂಕಾರ ಮನವನಿಂಬುಗೊಂಡಲ್ಲಿ ಲಿಂಗ ತಾನೆಲ್ಲಿಪ್ಪುದೋ?*

*ಅಹಂಕಾರ ಎಡೆಗೊಡದೆ ಲಿಂಗ ತನುವಾಗಿರಬೇಕು*

*ಅಹಂಕಾರ ರಹಿತವಾದಲ್ಲಿ ಸನ್ನಿಹಿತ ಕಾಣಾ ನಮ್ಮ ಲಿಂಗದೇವ.*

ಅಹಂಕಾರ ರಹಿತವಾದಲ್ಲಿ ಲಿಂಗದೇವರು ನಮ್ಮಲ್ಲಿ  ವಾಸಿಸುತ್ತಾನೆ. 

``ಅಪ್ಪನು ನಮ್ಮ ಮಾದಾರ ಚನ್ನಯ್ಯಾ ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯಾ" ಎಂದು ಗುರು ಬಸವಣ್ಣನವರು ಎಲ್ಲ ಜಾತಿ ಮತ ಪಂಥದವರನ್ನು  ಅಪ್ಪಿಕೊಂಡು ಲಿಂಗದೀಕ್ಷೆಯನ್ನು ನೀಡಿ ಅವರನ್ನು ಲಿಂಗಾಯತ ಧರ್ಮದ ಅನುಯಾಯಿಗಳನ್ನಾಗಿ ಮಾಡಿದರು. ಲಿಂಗಾಯತ ಧರ್ಮ ಹುಟ್ಟಿದ್ದೇ ಕೆಳಗೆ ಬಿದ್ದವರನ್ನು  ಮೇಲೆ ಎತ್ತಿಕೊಳ್ಳಲಿಕ್ಕೆ, ಕಲ್ಯಾಣ ಕ್ರಾಂತಿ  ನಡೆದುದೇ  ಸಮಾನತೆಗಾಗಿ. ಅದಕ್ಕಾಗಿ ಬೇರೆ ಬೇರೆ ಜಾತಿಗಳಿಂದ ನಮ್ಮ ಪ್ರಾರ್ಥನೆಗೆ, ಸಂಘಟನೆಗೆ, ಧರ್ಮಕ್ಕೆ ಬರುವಂಥವರನ್ನು ಆತ್ಮೀಯತೆಯಿಂದ           ಬರಮಾಡಿಕೊಂಡು  ಗೌರವಿಸಬೇಕು.

ವಚನ:

*ಆವ ಕುಲವಾದಡೇನು ಲಿಂಗವಿದ್ದವನೆ ಕುಲಜನು*

*ಕುಲವನರಸುವರೆ ಶರಣರಲ್ಲಿ  ಜಾತಿ ಸಂಕರನಾದ ಬಳಿಕ?*

*ಒಕ್ಕುದ ಕೊಂಬೆನವರಲ್ಲಿ, ಕೂಸ ಕೊಡುವೆ ಲಿಂಗದೇವಾ*

*ನಂಬುವೆ ನಿಮ್ಮ  ಶರಣರನು.*

ಕೂಸು  ಎಂದರೆ ಹೆಣ್ಣು  ಮಗು, ಕುನ್ನಿ ಎಂದರೆ ಗಂಡು ಮಗು. ಯಾರೇ ಇರಲಿ ಅವರು ಲಿಂಗದೀಕ್ಷೆ  ಹೊಂದಿ ಲಿಂಗಾಯತರಾದಾಗ ಅವರೊಡನೆ ಕೊಡುಕೊಳ್ಳುವ  ವೈವಾಹಿಕ ಸಂಬಂಧಗಳನ್ನು ಬೆಳೆಸಬೇಕು ಎಂದು ಧರ್ಮಪಿತರು ಆದೇಶಿಸಿದ್ದಾರೆ. ಕೂಸು ಕೊಡುವೆ ಎಂದರೆ ನಮ್ಮ ಮಗಳನ್ನು  ಕೊಟ್ಟು ಮದುವೆ ಮಾಡುತ್ತೇನೆ ಎನ್ನುತ್ತಾರೆ. 

ಅದಕ್ಕಾಗಿ ರಾಷ್ಟ್ರೀಯ ಬಸವ ದಳದ ಶರಣರು ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಳ್ಳಬೇಕು. ಹಲವುವಿಧದಲ್ಲಿ ಧರ್ಮವಂತರಾಗಿ ಕೆಲವು ವಿಧಗಳಲ್ಲಿ ಅಧರ್ಮಿಯಾದರೆ  *ಹಲವು ಕಾಲ ಧಾವತಿಗೊಂಡು ಒಟ್ಟಿದ ಹಿದಿರೆಯು ಒಂದು ಮಿಡುಕುರಿಯಲ್ಲಿ ಬೇವಂತೆ, ಸಲೆ ನಲೆ ಸನ್ನಿಹಿತನಾದ ಭಕ್ತನ ಭಕ್ತಿಯು ಒಂದನಾಯತದಿಂದ ಕೆಡುವುದು*", ಎನ್ನುವ ಧರ್ಮಪಿತರ ವಾಣಿಯಂತೆ ಹಲವು ಕಾಲ ಮಾಡಿದ ಭಕ್ತಿಯು ಇಂಥ ವರ್ತನೆಯಿಂದ ಕುಂದುತ್ತದೆ. ನಲವತ್ತು ವರ್ಷ ಧರ್ಮ ಪ್ರಚಾರ ಮಾಡಿ ಒಂದು ದಿನ ದುಷ್ಟರ ಸಹವಾಸ ಮಾಡಿ ತಾನೆ ಪ್ರಚಾರ ಮಾಡಿದ ಧರ್ಮವನ್ನು ಕೆಡಿಸಿದವರು ಖಂಡಿತವಾಗಿಯೂ ಧರ್ಮಪಿತರ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. ಅದಕ್ಕಾಗಿ ಶರಣರು ಎಲ್ಲರನ್ನು ಇಂಬಿಟ್ಟುಕೊಳ್ಳಬೇಕು ಎಂದು  ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ. 

ಕ್ರಿಯಾಮೂರ್ತಿಗಳಿಗೆ ಇಂಥ ಅವಕಾಶ ಸಿಕ್ಕಾಗ ಎಲ್ಲಾ ಜಾತಿಯವರಿಗೂ ದೀಕ್ಷೆ ನೀಡಬೇಕು. ಮಾತ್ರವಲ್ಲ  ದೀನ ದಲಿತರಿಗೆ ಧರ್ಮದ ಪರುಷ ಸ್ಪರ್ಶ ಮಾಡಿಸಬೇಕು. ಅವರನ್ನು ಅಜ್ಞಾನ, ಮೂಢ ನಂಬಿಕೆಯ ಕೂಪದಿಂದ  ಮೇಲೆತ್ತಬೇಕು. 

*5000 ಕಿ.ಮೀ. ದೂದಲ್ಲಿ ಬೆತ್ಲೆಹೆಮಿನಲ್ಲಿ ಹುಟ್ಟಿದ ಯೇಸು ಕ್ರಿಸ್ತ ನಮ್ಮ ನೆರೆಹೊರೆಯವರಿಗೆ ಹತ್ತಿರದವರಾದರು̤. 3000 ಕಿ.ಮೀ. ದೂರದಲ್ಲಿ ಮೆಕ್ಕಾದಲ್ಲಿ ಹುಟ್ಟಿದ ಮಹ್ಮದ ಪೈಗಂಬರ ನಮ್ಮ ಅಕ್ಕಪಕ್ಕದ ಮನೆಯವರಿಗೆ ಹತ್ತಿರವಾದರು. 2000 ಕಿ.ಮೀ. ದೂರದಲ್ಲಿರುವ ಲುಂಬಿನಿಯಲ್ಲಿ ಹುಟ್ಟಿರುವ ಬುದ್ಧ ನಮ್ಮ ಸುತ್ತ ಮುತ್ತಲಿರುವವರೆಲ್ಲರಿಗೂ ಹತ್ತಿರವಾದರು. ಗುರುನಾನಕರು ಮಹಾವೀರರು ಅನೇಕರಿಗೆ ಹತ್ತಿರವಾದರು. ಆದರೆ ನಮ್ಮ ರಾಜ್ಯದಲ್ಲೇ ನಮ್ಮ ಪಕ್ಕದ ಉರಲ್ಲೇ ಹುಟ್ಟಿದ ಗುರು ಬಸವಣ್ಣನವರು ನಮ್ಮ ಪಕ್ಕದ ಮನೆಯವರಿಗೇ ಹತ್ತಿರವಾಗಲು ನಾವು ಬಿಡಲಿಲ್ಲವಲ್ಲ!!. ಇಂದು ಅನೇಕ ದಲಿತರು ಬೇರೆ ಬೇರೆ ಜನಾಂಗದವರು ವಿದೇಶಿ ಧರ್ಮಗಳಿಗೆ ಮತಾಂತರವಾಗಲು ಹೆಚ್ಚಿನ ಕಾರಣಕರ್ತರು ಲಿಂಗಾಯತರು. ತನ್ನ ಧರ್ಮವನ್ನರಿಯದ ತನ್ನ ಧರ್ಮವನ್ನು ಇತರರಿಗೆ ನೀಡದ, ತನ್ನ ಧರ್ಮವನ್ನು ಸ್ವೀಕರಿಸಿದ ಇತರರನ್ನು ಸಮಾನತೆಯಿಂದ ಕಾಣದ ಕೆಟ್ಟ ಲಿಂಗಾಯತರಿಂದ ಇಂದು ನಮ್ಮ ದೇಶದಲ್ಲಿ ಅನ್ಯ ಧರ್ಮಿಯರ ಸಂಖ್ಯೆ ಹೆಚ್ಚಿಗಿದೆ.*

ರಾಷ್ಟ್ರೀ ಬಸವ ದಳದ ಸಂಘಟನೆಯಲ್ಲಿ  ತೊಡಗಿಸಿಕೊಂಡ  ಸಮಷ್ಟಿ  ಪ್ರಜ್ಞೆಯುಳ್ಳ ಶರಣರು ಗಮನಿಸಬೇಕಾದ ಸೂಕ್ಷ್ಮವಾದ ವಿಷಯವೊಂದಿದೆ. ತಮಗೆ ಬಸವ ತತ್ವವನ್ನು ಪರಿಚಯಿಸಿ ಧರ್ಮ ಮಾರ್ಗದಲ್ಲಿ ನಡೆಯಲು  ಮಾರ್ಗದರ್ಶನ  ಮಾಡಿದವರು ಕೆಲವೊಮ್ಮೆ ಅಲ್ಪಾಕಾಂಕ್ಷಿಗಳಾಗಿ ತಾವೇ ಬೋಧನೆ ಮಾಡಿದಂಥ ಮಾರ್ಗದಿಂದ ಹಿಂದೆ ಸರಿಯಬಹುದು, ಆಸೆ ಆಮಿಷಗಳಿಗೆ ಬಲಿಯಾಗಿ ತನ್ನ ಮೂಲ ತತ್ವದಿಂದ ಸರಿದು ಬೇರೊಂದು ದಾರಿಯಲ್ಲಿ  ಅವರು  ನಡೆಯಬಹುದು. ಆಗ ಶರಣರು ದೃಢ ಮನಸ್ಸಿನವರಾಗಿ ನಮ್ಮ ಮೂಲ ದಾರಿಯಲ್ಲಿಯೇ  ನಾವು ನಡೆಯಬೇಕು. ಪೂಜ್ಯ ಶ್ರೀ ಮಾತೆ ಮಹಾದೇವಿಯವರ ಆದೇಶಗಳನ್ನೇ ನಾವು ಪಾಲಿಸಬೇಕು. ಇದು ಬಿಟ್ಟು ನನಗೆ ದೀಕ್ಷೆ ಕೊಟ್ಟವರೇ ಬೇರೆ ದಾರಿ ಹಿಡಿದಿದ್ದಾರೆ ಎಂದು  ಅಳಿ ಮನಸ್ಸಿನವರಾಗಬಾರದು, ಋಣ ಎನ್ನುವಂಥದ್ದು, ಪುಣ್ಯದ ಬುತ್ತಿ ಎನ್ನುವಂಥದ್ದು  ತೀರಿದಾಗ ಕೆಲವೊಮ್ಮೆ ಈ ರೀತಿ ಆಗುತ್ತದೆ. ಅದಕ್ಕಾಗಿ  ಶರಣ ಬಂಧುಗಳು 

ಮೂಲ ದಾರಿಯಲ್ಲಿಯೇ  ನಡೆದು ನಮ್ಮ ಅಮೂಲ್ಯ  ಧರ್ಮ ಸಿದ್ದಾಂತ ಸಂಶೋಧನೆಗಳನ್ನು  ನಾವು ಬೆಳಸಬೇಕು.

ಎಂದು ಧರ್ಮಪಿತರು ಹೇಳುತ್ತಾರೆ.

ವಚನ:

*ಒಡೆಯರುಳ್ಳ ಆಳಿಂಗೆ ಕೇಡಿಲ್ಲ ಕಾಣಿರೋ*

*ಊರೆನ್ನದೆ ಅಡವಿಯೆನ್ನದೆ ಆಳನರಸಿ ಬಹ ಆಳ್ದರುಂಟೇ?*

*ಜೋಳವಾಳಿ ಬಿಜ್ಜಳಂಗೆ ಆಳಾದಡೇನು*

*ವೇಳೆ ವಾಳಿಂಗೆ ಕೂಡಿ ಕೊಂಡಿಪ್ಪ ನಮ್ಮ ಲಿಂಗದೇವಾ.*

ಗುರು ಬಸವಣ್ಣನವರಂಥ, ಒಡೆಯರನ್ನು ಪೂಜ್ಯ ಶ್ರೀ ಲಿಂಗಾನಂದರಂತಹ, ಪೂಜ್ಯ ಶ್ರೀ ಮಾತೆ ಮಹಾದೇವಿಯವರಂತಹ ಗುರುಗಳನ್ನು ಹೊಂದಿರುವವರಿಗೆ ಯಾವುದೇ ಕೇಡು ಎನ್ನುವಂಥದ್ದೇ ಇಲ್ಲ.

*ಒಡೆಯರುಳ್ಳ ತೊತ್ತಾನು; ತಾಯಿಯುಳ್ಳ ಶಿಶುವಾನು;*

*ಸ್ವತಂತ್ರವೇಕಯ್ಯಾ, ನಿನ್ನವರ ನಡುವೆ ಎನಗೆ?*

*ನಿಮ್ಮವರು ಎನ್ನನೊಲ್ಲದಿಪ್ಪ ದುಃಖವನು ಮರೆವೆನೇ ನಾನು*

*ನಿಮ್ಮವರಾಜ್ಞೆಯ ಮೀರಿದೆನಾಯಿತ್ತಾದಡೆ ನಿಮ್ಮಾಣೆಯಯ್ಯಾ*

*ಕಪಿಲಸಿದ್ಧ ಮಲ್ಲಿಕಾರ್ಜುನ.*

ನಾವು ಅನಾಥರಲ್ಲ   ಗುರು ಬಸವಣ್ಣನವರು - ವಚನ ಸಾಹಿತ್ಯವೆಂಬ ತಂದೆ -ತಾಯಿಯನ್ನು ಹೊಂದಿರುವಾಗ ನಾವು ಅನಾಥರಂತೆ ಅಲೆಯುವುದೇಕೆ? ನಮಗೆ ಸ್ವತಂತ್ರವೇಕೆ?" ಎನ್ನುತ್ತಾರೆ ಗುರು ಸಿದ್ಧರಾಮೇಶ್ವರರು. ಗುರುವಿನ ಆಜ್ಞೆಯನ್ನು ಧಿಕ್ಕರಿಸಿದ ಗುರು ಗುರವಲ್ಲ ನರನಿಗಿಂತ ಕಡೆ. ಅದಕ್ಕಾಗಿ ರಾಷ್ಟ್ರೀಯ ಬಸವ ದಳದ ಶರಣರು ಯಾರೇ ಇರಲಿ ವೈಯಕ್ತಿಕವಾಗಿ ಬೆಳೆಯುವ ಮನೋಭಾವವನ್ನು  ಬಿಟ್ಟು   ಸಾಂಸ್ಥಿಕ ಪ್ರಜ್ಞೆಯನ್ನು  ಮೈಗೂಡಿಸಿಕೊಳ್ಳಬೇಕು.

ಈ ಮೇಲಿನ  ನಮ್ಮ ಎಲ್ಲಾ ಕಾರ್ಯಗಳು ಕಾಯಕ ಎನ್ನುವ  ರಂಗಭೂಮಿಯ ಮೇಲೆ ನಡೆಯ ಬೇಕು. ಪೂಜ್ಯ ಮಾತಾಜಿಯವರು ಹೇಳುತ್ತಾರೆ.``ಪೂಜೆ ಧ್ಯಾನಗಳೆಂದರೆ, ಹೋಳಿಗೆಯೂಟವಿದ್ದ ಹಾಗೆ, ಮೂರು ಹೊತ್ತು ಅದನ್ನೇ  ತಿನ್ನಲಿಕ್ಕೆ ಸಾಧ್ಯವಿಲ್ಲ. ಆದರೆ ಕಾಯಕ ಎಂದರೆ ರೊಟ್ಟಿ / ಮುದ್ದೆ ಊಟವಿದ್ದ ಹಾಗೆ ಮೂರು ಹೊತ್ತು ದಿನಾಲು ಸ್ವೀಕರಿಸಬಹುದು.*ಚಿತ್ತ ಶುದ್ಧದಲ್ಲಿ ಕಾಯಕ ಮಾಡುವ ಸದ್ಭಕ್ತರಿಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು* ಎನ್ನುವ ಆಯ್ದಕ್ಕಿ ಲಕ್ಕಮ್ಮನವರ ವಚನದಂತೆ ಪ್ರತಿಯೊಬ್ಬರೂ ಕಾಯಕ ಜೀವಿಗಳಾಗಲೇಬೇಕು. ಶರಣ ಧರ್ಮದಲ್ಲಿ ಆಲಸ್ಯಕ್ಕೆ ಸ್ಥಾನವಿಲ್ಲ,

ಕೊನೆಯದಾಗಿ  ಇನ್ನೂ ಒಂದು ಮಾತು. 

ವಚನ ಸಾಹಿತ್ಯ ಜೀವನದಲ್ಲಿ ಎಂದೋ ಒಂದು ದಿನ  ಓದುವಂಥ  ಸಾಹಿತ್ಯವಲ್ಲ. ಕೆಲವು ವಚನಗಳನ್ನು ಓದಿಕೊಂಡು, ಕೆಲವು ಪ್ರವಚನಗಳನ್ನು ಬಾಯಿ ಪಾಠ ಮಾಡಿಕೊಂಡು ಜೀವನವೀಡೀ ಗಿಳಿಯಂತೆ ಹೆಳಿದ್ದೇ ಹೇಳುತ್ತ ಸಾಗುವುದು ಜೀವನವಲ್ಲ. ವಚನ ಸಾಹಿತ್ಯ ಜೀವನದ ಆರಂಭದಿಂದ ಓದುವಂಥ ಸಾಹಿತ್ಯ ಇದಾಗಿದೆ. ಅದು ನವ ನವನೀತವಾದ ಸಾಹಿತ್ಯವಾಗಿದೆ, ಬಗೆದಷ್ಟು ಹೊರಹೊಮ್ಮುವ ಜೀವಂತ ಸಾಹಿತ್ಯವಾಗಿದೆ.

 ನಮ್ಮ ಲೌಕಿಕ ಜೀವನದ ಕಾರ್ಯದಕ್ಷತೆಯೂ ವಚನ ಸಾಹಿತ್ಯ ಓದುವುದರಿಂದ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಇದನ್ನು ಓದುವುದರಿಂದ ಅವರ ಗ್ರಹಣ ಶಕ್ತಿ, ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ಅದಕ್ಕಾಗಿ ವಚನ ಸಾಹಿತ್ಯವು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಬೇಕು. ಅದನ್ನು ಓದಿ ಅರಿತು, ಅಳವಡಿಸಿಕೊಂಡು ಆಚರಿಸಬೇಕು. ಈ ರೀತಿ ನಾವು ಧರ್ಮ ಮಾರ್ಗದಲ್ಲಿ  ನಡೆದಾಗ ಧರ್ಮಪಿತರು ತಮ್ಮ ತನು ಮನಗಳ ಬಗೆದು ಇಂಬಿಟ್ಟುಕೊಳ್ಳುತ್ತಾರೆ. ಧರ್ಮಪಿತರ ಮನೋರಥದಂತೆ ನಡೆದು ಅವರ ಕೃಪೆಗೆ ಪಾತ್ರರಾಗೋಣ.  ಸೃಷ್ಟಿಕರ್ತ ಲಿಂಗದೇವನ  ಮೆಚ್ಚುಗೆಯ ಮಕ್ಕಳಾಗೋಣ.

(2007ರ ಶರಣಮೇಳದಲ್ಲಿ ಮಾಡಿದ ಉಪನ್ಯಾಸ ಪ್ರಸ್ತುತ ಬದಲಾವಣೆಗಳೊಂದಿಗೆ)

-ಸಚ್ಚಿದಾನಂದ ಪ್ರಭು ಚಟ್ನಳ್ಳಿ


Please Comment Your Thought on this article

ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…