ಲೋಕದ ಡೊಂಕ ತಿದ್ದಬಾರದೇ? (ಭಾಗ-2/7)

ಪೂಜ್ಯ ಶ್ರೀ ವಿಶ್ವಗುರು ಬಸವಣ್ಣನವರು 880 ವರ್ಷಗಳಹಿಂದ ಅಂದರೆ ಹನ್ನೆರಡನೆ ಶತಮಾನದಲ್ಲಿ ಲೋಕದ ಡೊಂಕ ತಿದ್ದಿದ ಪರಿ ಗೊತ್ತಿರದವರು ಈ ಜಗತ್ತಿನಲ್ಲಿ ಯಾರಿದ್ದಾರೆ? ಗುರು ಬಸವಣ್ಣನವರು ಲೋಕದಲ್ಲಿ ಹುಟ್ಟುತ್ತಲೇ ಲೋಕದ ಡೊಂಕ ತಿದ್ದಿದವರು.

ಬೆಳೆದು ದೊಡ್ಡವರಾಗುತ್ತ ಲೋಕದ ಡೊಂಕ ತಿದ್ದಲೆತ್ನಿಸಿದರು. ಲೋಕದ ಡೊಂಕ ತಿದ್ದುವಿಕೆ ಅವರಿಗೆ 8ನೇ ವಯಸ್ಸಿಗೆ ಮನೆ ಬಿಡುವಂತೆ ಮಾಡಿತು. ಮನೆ ತೊರೆದರೇ ವಿನಃ ಲೋಕದ ಡೊಂಕನ್ನು ತಿದ್ದುವುದನ್ನು ತೊರೆಯಲಿಲ್ಲ. ಲೋಕದ ಡೊಂಕ ತಿದ್ದುತ್ತ ಡೊಂಕಿರದ ಮಾರ್ಗವಾದ ಲಿಂಗಾಯತ ಧರ್ಮವನ್ನು ತಮ್ಮ ಜೀವಮಾನದಲ್ಲೇ ಕಟ್ಟಿಕೊಟ್ಟರು.

ಲೋಕದ ಡೊಂಕು ತಿದ್ದುವಿಕೆಗೆ ಅವರು ಬಹು ದೊಡ್ಡ ತ್ಯಾಗ ಮಾಡಿದರು. ಲೋಕದ ಡೊಂಕ ತಿದ್ದುವಿಕೆಗೆ ಗುರು ಬಸವಣ್ಣನವರು ತೆತ್ತ ಬೆಲೆ ಪ್ರಧಾನಿ ಪಟ್ಟ. ಲೋಕದ ಡೊಂಕ ತಿದ್ದಲಿಕ್ಕೆ ಹರಳಯ್ಯ ಮಧುವಯ್ಯ ಶೀಲವಂತರು ತೆತ್ತ ಬೆಲೆ ತಮ್ಮ ಪ್ರಾಣ. ಲೋಕದ ಡೊಂಕ ತಿದ್ದಿದ್ದುಕ್ಕಾಗಿ ಗುರು ಬಸವಣ್ಣಣವರು ಪಡೆದ ಶಿಕ್ಷೆ ಕಲ್ಯಾಣವನ್ನು ತೊರೆಯುವ ಗಡಿಪಾರು ಶಿಕ್ಷೆ. ಆದಿ ಶರಣರು ಪಡೆದ ಪ್ರತಿಫಲ ತಲೆದಂಡ ಮತ್ತು ಉಟ್ಟ ಬಟ್ಟೆಯಲ್ಲಿಯೇ ರಾತ್ರೋರಾತ್ರಿ ವಚನ ಸಾಹಿತ್ಯದ ಗಂಟು ಹೊತ್ತು ಕಲ್ಯಾಣ ತೊರೆಯುವ ಅನಿವಾರ್ಯತೆ.

ಗುರು ಬಸವಣ್ಣನವರು ಹಾಗು ಆದಿ ಶರಣರು ಲೋಕದ ಡೊಂಕ ತಿದ್ದುವುದಕ್ಕಾಗಿ ಕಲ್ಯಾಣ ತೊರೆದರೇ ಹೊರತು ಲೋಕದ ಡೊಂಕ ತಿದ್ದುವುದನ್ನು ತೊರೆಯಲಿಲ್ಲ. ಏಕೆಂದರೆ ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ. ಇಲ್ಲಿರುವ ಓರೆ ಕೋರೆ ಡೊಂಕುಗಳನ್ನು ತಿದ್ದುವುದು ಕರ್ತಾರ ಲಿಂಗದೇವನ ಅಸ್ಥಿತ್ವದಲ್ಲಿ ಅವನ ಅಪಾರ ಕಾರುಣ್ಯದಲ್ಲಿ ನಂಬಿಕೆಯಿರುವ ಪ್ರತಿಯೊಬ್ಬರ ಜವಾಬ್ದಾರಿ ಎಂದು ಬಲವಾಗಿ ನಂಬಿದ ಮಹಾಮಹಿರವರು.

ಗುರು ಬಸವಣ್ಣನವರು ಲಿಂಗೈಕರಾದಮೇಲೆ 273 ವರ್ಷಗಳ ನಂತರ ಮರ್ತ್ಯಲೋಕದ ಮಹಾಮನೆಯಲ್ಲಿ ಜನಿಸಿದ ಗುರು ನಾನಕರು ಲೋಕದ ಡೊಂಕನ್ನು ತಿದ್ದಿದರು. ಇತರ ಮಹಾತ್ಮರಷ್ಟು ವಿರೋಧಗಳನ್ನು ಅವರು ಎದುರಿಸದಿದ್ದರೂ ಸತಿ ಸಹಗಮನ ಪದ್ಧತಿ, ದೌರ್ಜನ್ಯ(tyranny)ದಬ್ಬಾಳಿಕೆಗಳ ವಿರುದ್ಧ, ಅಸಮಾನತೆಯ ವಿರುದ್ಧ, ಜಾತಿಭೇದದ ವಿರುದ್ಧ, ಇಸ್ಲಾಂ ಧರ್ಮದಲ್ಲಿದ್ದ ಕೆಲವೊಂದು ಮೂಢನಂಬಿಕೆಗಳ ವಿರುದ್ದ ಧ್ವನಿಯೆತ್ತಿದುದ್ದರಿಂದ ಸಮಕಾಲೀನ ಸಂಪ್ರದಾಯವಾದಿಗಳಿಂದ ನಿಂದನೆ ಹಾಗೂ ವಿರೋಧಗಳನ್ನು ಎದುರಿಸಿದರು. ಆದರೆ ಲೋಕದ ಡೊಂಕನ್ನು ತಿದ್ದುವುದನ್ನು ಬಿಡಲಿಲ್ಲ. ಲೋಕದ ಡೊಂಕು ತಿದ್ದುತ್ತ ನಡೆದ ಅವರ ನಡೆಯೇ ಮುಂದೆ ಸಿಖ್‌ ಧರ್ಮವಾಯಿತು.

ಗುರು ಬಸವ ತತ್ವವನ್ನು ತಮ್ಮ ಮಸ್ತಕದ ಮೇಲೆ ಹೊತ್ತು ಲೋಕದ ಡೊಂಕ ತಿದ್ದಿದ್ದರು ಗುರು ಲಿಂಗಾನಂದ ಸ್ವಾಮೀಜಿಯವರು. ಇದಕ್ಕಾಗಿ ಅವರು ಎದುರಿಸಿದ ನೋವು ಅಪಾರ. ಅವರ ಚರಿತ್ರೆ ಓದಿದ ಪ್ರತಿಯೊಬ್ಬರಿಗೂ ಇದು ಗೊತ್ತಿದೆ. ಮಠ ಸಂಪತ್ತು ಆಸ್ತಿ ತೊರೆದರೇ ಹೊರತು ಸತ್ಯ ತೊರೆಯಲಿಲ್ಲ ಲೋಕದ ಡೊಂಕನ್ನು ತಿದ್ದುವುದನ್ನು ತೊರೆಯಿಲ್ಲ.

ಇದೇ ಪಥದಲ್ಲಿ ಸಾಗಿದ ಪೂಜ್ಶ ಶ್ರೀ ಮಾತೆ ಮಹಾದೇವಿಯವರು ಲೋಕದ ಡೊಂಕ ತಿದ್ದುವಲ್ಲಿ ತಮಗೆ ಬರಬೇಕಾದ ಅಪಾರ ಗೌರವ, ತಮ್ಮಲ್ಲಿರುವ ಅಪಾರವಾದ ಪಾಂಡಿತ್ಯಕ್ಕಾಗಿ ಬರಬೇಕಾದ ಪ್ರಶಸ್ತಿ, ಮೆರವಣಿಗೆ, ಗೌರವ ಸನ್ಮಾನಗಳನ್ನು ತೊರೆದರೇ ಹೊರತು ಲೋಕದ ಡೊಂಕನ್ನು ತಿದ್ದುವುದನ್ನು ತೊರೆಯಲಿಲ್ಲ. ಕೊನೆಗ ತಮ್ಮ ಪ್ರಾಣ ತೊರೆದರೇ ಹೊರತು ಕೊನೇ ಕ್ಷಣದ ವರೆಗೂ ಲೋಕದ ಡೊಂಕನ್ನು ತಿದ್ದುವುದನ್ನು ತೊರೆಯಲಿಲ್ಲ.

ಗುರು ಬಸವಣ್ಣನವರು ಲೋಕದ ಡೊಂಕ ತಿದ್ದುವುದನ್ನು ತೊರೆಯಲಿಲ್ಲ, ಅವರ ನಿಜ ಅನುಯಾಯಿಗಳೂ ಲೋಕದ ಡೊಂಕ ತಿದ್ದುವುದನ್ನು ತೊರೆಯಲಿಲ್ಲ. ಹೀಗಿರುವಾಗ ಗುರು ಬಸವಣ್ಣನವರು "ಲೋಕದ ಡೊಂಕ ನೀವೆಕೆ ತಿದ್ದುವಿರಿ?" ಎಂದು ಹೇಳಲು ಸಾಧ್ಯವೇ?

ಕಾಲ ಕಾಲಕ್ಕೆ ಬಂದ ಮಹಾತ್ಮರು ಲೋಕದ ಡೊಂಕ ತಿದ್ದುವುದನ್ನು ಬಿಡಲಿಲ್ಲ. ಲಿಂಗಾಯತ ಧರ್ಮದ ಇಡೀ ಗಣಾಚಾರ ತತ್ವಕ್ಕೆ ಧಕ್ಕೆ ತಂದ ಲೋಕದ ಡೊಂಕ ನೀವೆಕೆ ತಿದ್ದುವಿರಿ? ಎಂಬ ಈ ವಚನ ನುಡಿ ಗುರು ಬಸವಣ್ಣನವರು ಹೇಳಲು ಸಾಧ್ಯವೇ?

ಭಕ್ತರು ತಪ್ಪು ಮಾಡಿದಾಗ ಕೆಲವು ಮಠ ಪೀಠ ಪ್ರತಿಷ್ಠಾನಗಳು ನಮಗೇಕೆ ಬೇಕು ಭಕ್ತರ ನಡೆ ನುಡಿ ತಿದ್ದುವುದು? ಅವರಿಗೆ ತಿದ್ದಲಿಕ್ಕೆ ಹೋದರೆ ನಮ್ಮಿಂದ ದೂರವಾಗಿ ಕಾಣಿಕೆ ಬರುವುದು ತಪ್ಪುತ್ತದೆ.
ಗುರು ಬಸವಣ್ಣನವರೇ ಕೇಳಿದ್ದಾರೆ “ಲೋಕದ ಡೊಂಕ ನೀವೇಕೆ ತಿದ್ದುವಿರಿ?” ಎಂದು. ಅದಕ್ಕೆ ಭಕ್ತರನ್ನು ಶತ ಶತಮಾನಗಳ ಕಾಲ ಅಜ್ಞಾನದಲ್ಲೇ ಇಟ್ಟು ಅವರ ತಪ್ಪುಗಳನ್ನು ತಿದ್ದದೇ ಅವರ ತಪ್ಪುಗಳನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಇಲ್ಲಿಯವರೆಗೆ ಭಕ್ತರ ಕೋಟಿ ಕೋಟಿ ಸಂಪತ್ತನ್ನು ಧಾರ್ಮಿಕ ಮುಖಂಡರು ಧಾರ್ಮಿಕ ಭಯೋತ್ಪಾದನೆಯಿಂದ ಕಬಳಿಸಿದ್ದಾರೆ.

ಲಿಂಗಾಯತ ಧರ್ಮ ಪ್ರಚಾರವಾಗಲಿಕ್ಕೆ ಲಿಂಗಾಯತ ಧರ್ಮದ ಸಿದ್ಧಾಂತಗಳಿಗೆ ಮಾರಕವಾದ, ಲಿಂಗಾಯತ ಧರ್ಮದ ಗಣಾಚಾರ ತತ್ವಕ್ಕೆ ಅಡ್ಡಿಯಾದ "ಲೋಕದ ಡೊಂಕ ನೀವೆಕೆ ತಿದ್ದುವಿರಿ?" ಎನ್ನುವ ವಚನ ನುಡಿ ಗುರು ಬಸವಣ್ಣನವರು ಹೇಳಲು ಸಾಧ್ಯವೇ????

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ….)


-ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…