ಲೋಕದ ಡೊಂಕ ತಿದ್ದಬಾರದೇ? (ಭಾಗ-3/7)
ಇದು ವಚನ ಸಂಪುಟಗಳಲ್ಲಿ ಪ್ರಕಟವಾದ ಗುರು ಬಸವಣ್ಣನವರ ಒಂದು ವಚನ. ಈ ವಚನದ ಮೊದಲ ಸಾಲು ಈ ಮೊದಲು, ಲೋಕವನ್ನು ತಿದ್ದಿದವರ ನಡೆಯನ್ನು ಪ್ರಶ್ನಿಸುವಂತಿದೆ. ಈ ವಚನದ ಪ್ರಕಾರ ಲೋಕದ ಡೊಂಕನ್ನು ನಾವು ತಿದ್ದಬಾರದೇ?
ಕೇವಲ ನಾವು ನಾವೇ ಸುಧಾರಿಸಿಕೊಂಡು, ಇಷ್ಟಲಿಂಗಯೋಗಮಾಡಿಕೊಂಡು, ನಮ್ಮತನುವನ್ನು, ದಿನನಿತ್ಯ ಉತ್ತಮ ಚಿಂತನೆಗಳನ್ನು ಮಾಡಿಕೊಂಡು, ಮೂರು ಹೊತ್ತು ಇಷ್ಟಲಿಂಗ ಪೂಜೆ ಎರಡು ಹೊತ್ತು ಅನುಭಾವ ಗೋಷ್ಠಿಗಳನ್ನು ಮಾಡಿಕೊಂಡು ನಮ್ಮ ಮನಸ್ಸನ್ನು ಸಂತೈಸಿಕೊಂಡರೆ ಸಾಕೇ?
“ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲ ಸಂಗಮದೇವಾ” ಎನ್ನುವ ವಚನದ ಸಾಲು ಮೊದಲನೆಯಸ ಸಾಲಿನ ಅರ್ಥಕ್ಕೆ ವಿರುದ್ದವಾಗಿದೆ. ನೆರೆಮನೆಯವರು ಧರ್ಮಸಮ್ಮತವಲ್ಲದ ಆಚರಣೆಗಳನ್ನು ಮಾಡಿ ದುಃಖವನ್ನು ತಂದುಕೊಂಡಾಗ, ಧರ್ಮಸಮ್ಮತವಲ್ಲದ ನಡೆಯನ್ನು ನಡೆದು ಸಂಘಟನೆಗಳ ಪದವಿಯಿಂದ ಪದಚ್ಯುತಿ ಹೊಂದಿ ದುಃಖ ಪಡುತ್ತಿರುವಾಗ, ಇದು ಅವರ ಕರ್ಮ ಅವರವರು ಮಾಡಿದ ಕರ್ಮ ಅವರು ಅನುಭವಿಸುತ್ತಾರೆ ಎಂದು ಮರುಗಿದರೆ ಲಿಂಗದೇವರು ಮೆಚ್ಚುವುದಿಲ್ಲ.
ಬದಲಿಗೆ ಅಂಥವರಿಗೆ ಮಠ ಪೀಠ ಪ್ರತಿಷ್ಠಾನಗಳ ಒಡೆಯರು ಇಂತಹ ನಿನ್ನ ನಡೆ ತಪ್ಪಿದೆ. ನೀನು ಬಹುದೇವತೋಪಾಸನೆ ಮಾಡಬಾರದು, ಗಣೇಶ ಉತ್ಸವಗಳಲ್ಲಿ ಹೋಗಿ ಕುಣಿಯಬಾರದು. ಪರಧನ, ಪರಸ್ತ್ರೀ, ಪರದೈವದ ಸಂಗಗಳು ನೈತಿಕ ಮತ್ತು ಧಾರ್ಮಿಕ ಅಃಧಪತನಕ್ಕೆ ಕಾರಣವಾಗುತ್ತವೆ ಎಂದು ಧರ್ಮ ಬೋಧನೆ ಮಾಡಿ ಅವರಲ್ಲಿ ಕೆಟ್ಟತನವನ್ನು ತೊಡೆದು ಹಾಕಿ ಅವರನ್ನು ಸಂಪೂರ್ಣ ಒಳ್ಳೆಯವರನ್ನಾಗಿ ಮಾಡಲು ಮಠ ಪೀಠ ಪ್ರತಿಷ್ಠಾನಧೀಶರಿಂದ ಸಾಧ್ಯವಿಲ್ಲವೇ? ಅಥವಾ ಹಣದಲ್ಲಿ ಸಿರಿವಂತರು ವೈಯಕ್ತಿಕ ನಡೆ ನುಡಿ ಪ್ರಶ್ನಿಸಿದರೆ ಮಠ ಪೀಠ ಪ್ರತಿಷ್ಠಾನಗಳಿಗೆ ಕಾಣಿಕೆ ಬರುವುದು ತಪ್ಪುತ್ತದೆ ಎನ್ನುವ ಭಯವೇ?
ನಮ್ಮ ಧರ್ಮದ ಪ್ರತಿನಿಧಿಗಳೆನಿಸಿಕೊಂಡ ಪೀಠಾಧೀಶರು, ಕಾವಿ ಧಾರಿಗಳು, ಮಠಗಳ ಒಡೆಯರು, ನಮ್ಮ ಧರ್ಮದ ಸಂಘಟನೆಗಳ ಮುಂದಾಳತ್ವ ವಹಿಸಿದ, ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ತಪ್ಪುಗಳನ್ನು ಮಾಡಿದಾಗಲೂ ತಿದ್ದಬಾರದೇ? ಧರ್ಮಸಮ್ಮತವಲ್ಲದ ನಡೆಯನ್ನು ನಡೆದಾಗ ಲಿಂಗವಂತನು ಲಿಂಗವಂತನಿಗೆ ಬುದ್ಧಿಯನ್ನು ಹೇಳಬಾರದೇ?
ಇವರುಗಳು ಧರ್ಮಸಮ್ಮತವಲ್ಲದ ನಡೆಯನ್ನು ನಡೆದಾಗಲೂ, ಅನೇಕ ಸಾಮಾಜಿಕ, ಧಾರ್ಮಿಕ ನೈತಿಕ ತಪ್ಪುಗಳನ್ನು ಎಸಗಿದಾಗಲೂ, ಅವರನ್ನು ನಾವು ಬೆಳೆಸಿದ ಮಠ ಪೀಠ ಪ್ರತಿಷ್ಠಾನಗಳಲ್ಲಿ ಗೌರವ ಸನ್ಮಾನ ಮಾಡಬೇಕೆ?
ಧರ್ಮದ ಮುಖಂಡರುಗಳು ಲಿಂಗಾಯತ ಧರ್ಮಕ್ಕೆ ಹೊರತಾದ ಆಚರಣೆ ಮಾಡಿದಾಗ, ಹೊರಜಗತ್ತಿಗೆ ʼಲಿಂಗಾಯತ ರೆಂದರೆ, ಬಹುದೇವೋಪಾಸನೆ ಮಾಡುವವರು, ವೀರಶೈವಾಚರಣೆಗಳನ್ನು ಪೋಷಿಸುವವರು, ವೀರಶೈವ ಆಚರಣೆಗಳನ್ನು ಮಾಡುವವರು, ಪರಸ್ತ್ರೀ ಪೀಡಕರು, ಪರಧನ ಭುಂಜಕರು, ಪರದೈವ ಆರಾಧಕರು ಸಿಕ್ಕ ಕಡೆ ನೀರಿನಲ್ಲಿ ಮುಳುಗಿ ಮುಳುಗಿ ಪಾಪದ ಲೈಸನ್ಸ ರಿನೆವಲ್ ಮಾಡಿಕೊಳ್ಳುವವರುʼ ಎನ್ನುವ ಸಂದೇಶ ಬಿಂಬಿತವಾಗುವಾಗಲೂ ಲಿಂಗಾಯತ ಧರ್ಮದ ಮುಖಂಡತ್ವ ವಹಿಸಿದವರ ನಡೆಯನ್ನು ತಿದ್ದಬಾರದೇ?
ನಮ್ಮ ಕಣ್ಣಮುಂದೆಯೇ ಇಂತಹ ಅನೇಕ ಘಟನೆಗಳು ನಡೆದರೂ ಮಠ ಪೀಠ ಪ್ರತಿಷ್ಠಾನಗಳ ಒಡೆಯರು ಅಂತಹವರನ್ನು ತಮ್ಮ ಮಠ ಪೀಠ ಪ್ರತಿಷ್ಠಾನಗಳಲ್ಲಿ ಹಾರ ತುರಾಯಿ ನೀಡಿ ಗೌರವಿತ್ತಿರುವುದನ್ನು, ದೊಡ್ಡ ದೊಡ್ಡ ವೇದಿಕೆಗಳಲ್ಲಿ ಹೊಗಳುವುದನ್ನು ಕಾಣುತ್ತಿದ್ದೇವೆ. ತಪ್ಪನ್ನು ಮಾಡಿದಾಗ ತಪ್ಪನ್ನು ತಿದ್ದದ್ದೇ ಹೋದರೆ, ಮಾಡಿದ ತಪ್ಪು ತಪ್ಪೆಂದು ತಿಳಿಹೇಳದಿದ್ದರೆ ಮುಂದಿನ ಪೀಳಿಗೆ ತಪ್ಪೇ ಸರಿಯಾದ ಮಾರ್ಗವೆಂದು ಭಾವಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ.
ನನ್ನ ಈ ವಿಚಾರ ಧಾರೆ ತಪ್ಪಿದ್ದರೆ ಯಾರೂ ಬೇಕಾದರೂ ಖಂಡಿಸಬಹುದು.
-ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ
ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ