ಲೋಕದ ಡೊಂಕ ತಿದ್ದಬಾರದೇ? (ಭಾಗ-4/7)

ವಚನದ ಮೂಲ ಪಾಠ ಹೀಗಿದೆ:

ಲೋಕದ ಡೊಂಕ ನೀವೇಕೆ ನಿಮ್ಮದೆಂಬಿರಿ?
ನಿಮ್ಮ ನಿಮ್ಮತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ.

ಈ ರೀತಿಯ ಒಂದು ಪಾಠಾಂತರ 1968ರಲ್ಲಿ ಧಾರವಾಡ ವಿಶ್ವವಿದ್ಯಾಲಯದಿಂದ ಪ್ರಕಟವಾದ ವಚನ ಸಂಪುಟಗಳಲ್ಲಿದೆ. (ಪಾಠಾಂತರವೆಂದರೆ ಬೇರೆ ಕಾಲಕ್ಕೆ ಬೇರೆ ಬೇರೆ ಹಸ್ತಪ್ರತಿಗಳಲ್ಲಿ ಸಿಕ್ಕ ಅದೇ ವಚನದಲ್ಲಿರುವ ಬದಲಾವಣೆಗಳು ಎಂದು ಅರ್ಥ)

ಏನೀ ಮೂಲ ವಚನದ ಅರ್ಥ? ಗುರು ಬಸವಣ್ಣನವರು ಸಮಾಜದಲ್ಲಿ ಪ್ರಚಲಿತವಿದ್ದ ತಪ್ಪು ತಪ್ಪಾದ ಆಚಾರ ವಿಚಾರಗಳನ್ನು ಮೂಢನಂಬಿಕೆಗಳನ್ನು ಖಂಡಿಸಿ ಅವುಗಳನ್ನು ತಿದ್ದಲೆತ್ನಿಸಿದಾಗ ಸಂಪ್ರದಾಯವಾದಿಗಳು ಗುರು ಬಸವಣ್ಣನವರೊಂದಿಗೆ ವಾದಿಸಿದ್ದಾರೆ.

ಏನೆಂದು ವಾದಿಸಿದ್ದಾರೆ?

  1. ಋಗ್ವೇದದಲ್ಲಿ ಇಂದ್ರ, ಅಗ್ನಿ, ಸೋಮ, ಸೂರ್ಯರನ್ನು ಹಲವಾರು ದೇವತೆಗಳನ್ನು ಪೂಜಿಸಬೇಕು ಎನ್ನುವುದು ಬರೆದಿದೆ. ಆದ್ದರಿಂದ ನಾವು ಬಹುದೇವತೋಪಾಸನೆ ಮಾಡುತ್ತೇವೆ. ಅದನ್ನು ತಾವು ತಪ್ಪೆಂದು ಏಕೆ ಹೇಳುವಿರಿ?

  2. ಯಜ್ಞಗಳಲ್ಲಿ ಹೋತ ಅಶ್ವ ಮೊದಲಾದ ಪ್ರಾಣಿಗಳನ್ನು ಬಲಿಕೊಡಬೇಕು, ತುಪ್ಪ ಪೀತಾಂಬರ ಹಣ್ಣು ಕಡಬು ಉಣ್ಣುವ ಪದಾರ್ಥಗಳನ್ನು ಹಾಕಿ ಸುಡಬೇಕು ಎಂದು ಯಜುರ್ವೇದದಲ್ಲಿ ಬರೆಯಲಾಗಿದೆ. ಅದನ್ನೇನಾವು ಮಾಡುತ್ತಿದ್ದೇವೆ. ಅದನ್ನು ತಪ್ಪೆಂದು ಹೇಗೆ ಹೇಳುವಿರಿ?

  3. ಮಂತ್ರ ತಂತ್ರಗಳೆಲ್ಲ ಅಥರ್ವ ವೇದದಲ್ಲಿ ಹೇಳಲ್ಪಟ್ಟಿವೆ. ಪೂಜೆ ವಿಧಾನವೆಲ್ಲ ಸಾಮವೇದಲ್ಲಿ ಹೇಳಲ್ಪಟ್ಟಿವೆ. ಅವುಗಳನ್ನೇ ಆಚರಿಸುತ್ತಿದ್ದೇನೆ ಅದು ಹೇಗೆ ತಪ್ಪಾಗುತ್ತದೆ?

  4. ಬ್ರಾಹ್ಮಣ, ಕ್ಷತ್ರೀಯ, ವೈಶೈ, ಶೂದ್ರ, ಇದು ನಮ್ಮ ಪುರಾತನ ವರ್ಣಾಶ್ರಮ ವ್ಯವಸ್ಥೆಯಿಂದ ಬಂದಿದೆ ಅದನ್ನೇ ಇಂದಿಗೂ ನಾವು ಆಚರಿಸುತ್ತಿದ್ದೇನೆ ಇದು ಹೇಗೆ ತಪ್ಪು?

  5. "ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ । ರಕ್ಷತಿ ಸ್ಥಾವಿರೇ ಪುತ್ರಾಃ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ |" ಎಂದು ಮನುಸ್ಮೃತಿಯಲ್ಲಿ ಹೇಳಲಾಗಿದೆ. ಆದ್ದರಿಂದಲೇ ಇಂದಿಗೂ ನಾವು ಸ್ತ್ರೀಯರಿಗೆ ಧರ್ಮ ಸಂಸ್ಕಾರ ಕೊಡುತ್ತಿಲ್ಲ. ಅವರನ್ನು ಶೂದ್ರರ ಸ್ಥಾನದಲ್ಲಿ ಇಟ್ಟಿದ್ದೇವೆ. ಶೂದ್ರರಿಗೆ ಮತ್ತು ಪಂಚಮ ವರ್ಣದವರಿಗೂ ಧರ್ಮ ಸಂಸ್ಕಾರ ಕೊಡಬಾರದೆಂದು ಮನುಸ್ಮೃತಿಯಲ್ಲಿಯೇ ಬರೆದಿದೆ. ಅದಕ್ಕಾಗಿ ನಾವು ಮನುಸ್ಮೃತಿಯನ್ನು ಅನುಸರಿಸುತ್ತಿದ್ದೇವೆ. ಇದೆಲ್ಲ ಹೇಗೆ ತಪ್ಪಾಗುತ್ತದೆ? ಒಂದುವೇಳೆ ಲೋಕವೆಲ್ಲ ಮಾಡುತ್ತಿರುವುದು ತಪ್ಪಾದರೆ, ಇಡೀ ಲೋಕ ಮಡುವ ತಪ್ಪನ್ನೇ ನಾವು ಮಾಡುತ್ತಿದ್ದೇವೆ ನಾವೇನು ಹೊಸ ತಪ್ಪು ಮಾಡುತ್ತಿಲ್ಲ.. ಎಂದು ಇತ್ಯಾದಿಯಾಗಿ ವಾದಿಸಿದ್ದಾರೆ.

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ....)


-ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…