ಲೋಕದ ಡೊಂಕ ತಿದ್ದಬಾರದೇ? (ಭಾಗ-5/7)


ಲೋಕದ ಡೊಂಕ ನೀವೇಕೆ ನಿಮ್ಮದೆಂಬಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ.

ಒಟ್ಟಾರೆ ನಾವೇನೂ ಯಾವುದೇ ಹೊಸ ತಪ್ಪು ಮಾಡುತ್ತಿಲ್ಲ. ನಮ್ಮ ಧರ್ಮ ಶಾಸ್ತ್ರಗಳಲ್ಲಿ ಹೇಳುವುದನ್ನೇ ನಾವು ಮಾಡುತ್ತಿದ್ದೇವೆ. ನಮ್ಮ ಹಿರಿಯರು ಮಾಡುತ್ತಿದ್ದುದ್ದನ್ನೇ ನಾವೂ ಮಾಡುತ್ತಿದ್ದೇವೆ. ಇಡೀ ಲೋಕವು ಮಾಡುತ್ತಿರುವ ಆಚರಣೆಯ್ನನೇ ನಾವು ಮಾಡುತ್ತಿದ್ದೇವೆ. ಎಂದು ಸಂಪ್ರದಾಯವಾದಿಗಳು ಪ್ರಶ್ನಿಸಿದ್ದಾಗ ಗುರು ಬಸವಣ್ಣನವರು ಅವರಿಗೆ ಹೇಳಿದ ವಚನವಿದು.

“ಲೋಕದ ಡೊಂಕ ನೀವೇಕೆ ನಿಮ್ಮದೆಂಬಿರಿ”? ವೇದಗಳಲ್ಲಿರುವ ತಪ್ಪು, ಶಾಸ್ತೃಗಳಲ್ಲಿರುವ ತಪ್ಪು, ಶ್ರುತಿ-ಸ್ಮೃತಿಗಳಲ್ಲಿರುವ ತಪ್ಪು, ಮನುಶಾಸ್ತ್ರದಲ್ಲಿರುವ ತಪ್ಪು ಇಡೀ ಲೋಕವೇ ಮಾಡುವ ತಪ್ಪನ್ನು ನೀವೇಕೆ ನಿಮ್ಮದೆಂಬಿರಿ? ಅದೇ ಲೋಕ ಮಾಡುವ ತಪ್ಪನ್ನು ನೀವೇಕೆ ಮಾಡುವಿರಿ? ನೀವಿಗ ತಿದ್ದಿಕೊಳ್ಳಿ. ನಾನು ಅವುಗಳನ್ನೆಲ್ಲ ಅಧ್ಯಯನ ಮಾಡಿದ್ದೇನೆ ಅವುಗಳು ತಪ್ಪು ಅದಕ್ಕಾಗಿ ನಾನು ಹೊಸ ಮಾರ್ಗ ನೀಡುತ್ತಿದ್ದೇನೆ. ಆ ನಿಮ್ಮ ತಪ್ಪುಗಳನ್ನು ತಿದ್ದಿಕೊಂಡು ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ನಿಮ್ಮ ವರ್ತನೆಗಳನ್ನು ಬದಲಿಸಿಕೊಳ್ಳಿ. ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನಿಮ್ಮ ಮನಸ್ಸಿನ ಭಾವನೆಗಳನ್ನು ಬದಲಾಯಿಸಕೊಳ್ಳಿ ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ, ದೇವನೊಬ್ಬನನೇ ಕಾಣಿರೊ, ಇಬ್ಬರು ಮೂವರೆಂಬುದು ಹುಸಿ ನೋಡಾ ! ಲಿಂಗದೇವನಲ್ಲದೆ ಇಲ್ಲೆಂದಿತ್ತು ವೇದ. ಎಂದು ಗುರು ಬಸವಣ್ಣನವರು ತಿಳಿಹೇಳಿ ಲೋಕದ ಡೊಂಕ ತಿದ್ದಿದ್ದಾರೆ. “ನಾನು ವೇದಗಳನ್ನು ಸರಿಯಾದ ರೀತಿಯಲ್ಲಿ ಓದಿದ್ದೇನೆ. ಅವುಗಳ ಸಾರವನ್ನು ಪರಿಗಣಿಸಿದರೆ ಒಬ್ಬನೇ ದೇವರೆಂದು ವೇದಗಳು ಹೇಳುತ್ತವೆ. ಆದರೆ ಅವುಗಳನ್ನು ತಪ್ಪಾಗಿ ಅರ್ಥ ಮಾಡಲಾಗಿದೆ. ಅದಕ್ಕಾಗಿ ನಾನೀಗ ನಿಮಗೆ ಸೃಷ್ಟಿ ಕರ್ತ ಲಿಂಗದೇವನ ಪ್ರತಿನಿಧಿಯಾಗಿ ಹೇಳುತ್ತಿದ್ದೇನೆ ತಿದ್ದಿಕೊಳ್ಳಿ ಎಂದು ಗುರು ಬಸವಣ್ಣನವರು ಹೇಳುತ್ತಾರೆ.

ಪರಸ್ತ್ರೀಯರ ಸಂಗ ಮಾಡುವವರಿಗೆ ಬುದ್ಧಿ ಹೇಳಲಿಕ್ಕೆ ಹೋದಾಗ:

ಚಂದ್ರನೇ ಗುರುಪತ್ನಿ ಗಮನಿಯಾಗಲಿಲ್ಲವೇ ಅದರಲ್ಲಿ ನಾವು ಮಾಡಿದ್ದು ತಪ್ಪೇನಿದೆ? ಇಂದ್ರ ರಂಭೆ ಊರ್ವಶಿ ಮೇನಕೆಯರ ಸಂಗ ಮಾಡಲಿಲ್ಲವೇ? ನಾವು ಮಾಡುತ್ತಿರುವುದರಲ್ಲಿ ತಪ್ಪೇನಿದೆ? ಲೋಕದ ತಪ್ಪನೇ ನಾನು ಮಾಡುತ್ತಿದ್ದೇನೆಯೇ ಹೊರತು ಹೊಸ ತಪ್ಪು ನಾನು ಮಾಡುತ್ತಿಲ್ಲ" ಎಂದು ವಾದಿಸಿದ್ದಾರೆ.

ಅದಕ್ಕೆ ಗುರು ಬಸವಣ್ಣನವರು “ಹರಿವ ಹಾವಿಂಗಂಜೆ, ಉರಿಯ ನಾಲಗೆಗಂಜೆ, ಸುರಗಿಯ ಮೊನೆಗಂಜೆ, ಒಂದಕ್ಕಂಜುವೆ, ಒಂದಕ್ಕಳುಕುವೆ; ಪರಸ್ತ್ರೀ ಪರಧನವೆಂಬೀ ಜೂಬಿಂಗಂಜುವೆ. ಮುನ್ನಂಜದ ರಾವಳನೇವಿಧಿಯಾದ! ಅಂಜುವೆನಯ್ಯಾ, ಲಿಂಗದೇವಾ” ನೋಡಪ್ಪ ರಾವಣನು ಅಷ್ಟೈಶ್ವರ್ಯವಂತನಾಗಿದ್ದರೂ ಪರಸ್ತ್ರೀಯನ್ನು ಬಯಸಿದ್ದಕ್ಕಾಗಿ ಅವನ ಗತಿ ಏನಾಯಿತು. ಪರವಧುವನು ಮಹಾದೇವಿಯೆನ್ನಬೇಕು ಪಾರ್ವತಿ ಎಂದು ಭಾವಿಸಬೇಕು ಎಂದು ಹೇಳಿ ಲೋಕದ ಡೊಂಕನ್ನು ತಿದ್ದಿದ್ದಾರೆ.

ಈ ಎಲ್ಲಾ ವೈದಿಕ ಆಚರಣೆ ಮಾಡದೇ ಹೋದರೆ ಕೆಡುಕಾಗುತ್ತೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ನಮಗೆ ಕಷ್ಟಗಳು ಬರುತ್ತವೆ ಅದಕ್ಕಾಗಿ ನಾವು ಇವುಗಳನ್ನು ಮಾಡುತ್ತೇವೆ. ಎಂದು ಹೇಳಿದವರಿಗೆ, ಯಾರದ್ದೋ ಮನೆಯಲ್ಲಿ ಯಾವುದೋ ಕಾರಣಕ್ಕೆ ದುಃಖವಾಗಿರಬಹುದು ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಲಿಂಗದೇವಾ ಅದಕ್ಕಾಗಿ ಅವರಿಗಾದ ದುಃಖವನ್ನು ನೋಡಿ ನೀವು ಕಷ್ಟಪಟ್ಟು ಪೂಜೆ ಯಜ್ಞಗಳನ್ನು ಮಾಡುವ ಅಗತ್ಯವಿಲ್ಲ ಇಂತಹವರನ್ನು ನಮ್ಮ ಲಿಂಗದೇವರು ಮೆಚ್ಚುವುದಿಲ್ಲ ಎಂದು ಗುರು ಬಸವಣ್ಣನವರು ತಮ್ಮ ಈ ವಚನದಲ್ಲಿ ಹೇಳಿದ್ದಾರೆ.

ಹೀಗೆ ಗುರು ಬಸವಣ್ಣನವರು ಲೋಕದ ಡೊಂಕನ್ನು ತಿದ್ದಿದ ಬಗೆಯನ್ನು, ಈ ವಚನದ ಅಂತರಾರ್ಥ ವಿವರಿಸುತ್ತಾ ಹೋದರೆ ಇದೇ ಒಂದು ಪುಸ್ತಕವಾದೀತು!

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ...)


-ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…