ಧರ್ಮ ಪರಂಪರೆ/ವಚನ ಸಾಹಿತ್ಯ ಅರಿಯದವರು ಧರ್ಮಾಚರಣೆಯಲ್ಲಿ ಎಡಹುವುದು ಸಹಜ -ಆದರೆ ತಿದ್ದಿಕೊಳ್ಳಬೇಕು
(ಗಂಭೀರ ವಿಚಾರವಿದೆ ಸಮಯಮಾಡಿಕೊಂಡು ದಯವಿಟ್ಟು ಓದಿರಿ)
ಯಾವುದೇ ಸ್ವತಂತ್ರ ಧರ್ಮದ 11 ಲಕ್ಷಣಗಳಲ್ಲಿ ಧರ್ಮ ಪರಂಪರೆಯೂ ಒಂದು ಪ್ರಮುಖ ಲಕ್ಷಣ. ಧರ್ಮ ಪರಂಪರೆ ನಮಗೆ ಏನು ಕಲಿಸಿಕೊಡುತ್ತದೆ? ನಡೆ ನುಡಿ ಆಚಾರ ವಿಚಾರಗಳನ್ನು ಕಲಿಸಿಕೊಡುತ್ತದೆ. ಪ್ರಮುಖವಾಗಿ ಕೆಲವೊಂದು ಇಕ್ಕಟ್ಟಿನ ಸಂದರ್ಭಗಳಲ್ಲಿ ನಮ್ಮ ನಡೆ(Behavior) ಹೇಗಿರಬೇಕು ಎನ್ನುವುದನ್ನು ಕಲಿಸುತ್ತದೆ.
"ನಾನೀಗ ಇಷ್ಟಲಿಂಗ ಪೂಜೆಯಲ್ಲಿ ನಿರತನಾಗಿದ್ದೇನೆ ಪೂಜೆ ಅರ್ಧಕ್ಕೆ ನಿಲ್ಲಿಸಿ ಬರುವುದು ಸರಿಯಲ್ಲ. ಇಷ್ಟಲಿಂಗ ಪೂಜೆಯಲ್ಲಿ ನಿರತರಾಗಿದ್ದಾರೆ ಎಂದು ಹೇಳಿ ಕರೆದು ಕುಳ್ಳಿರಿಸಿ ಪೂಜೆಯಾದ ನಂತರ ನಾನು ಭೇಟಿಯಾಗುತ್ತೇನೆ." ಎಂದು ಪುನಃ ಹೇಳಿಕಳಿಸುವರು. ಆದರೂ ಗುರು ಅಲ್ಲಮಪ್ರಭುದೇವರು ಬರುವುದಿಲ್ಲ ಜೊತೆಗೆ ಗುರು ಬಸವಣ್ಣನವರ ಮೇಲೆ ಮುನಿಸು ತಾಳಲು ಆರಂಭಿಸುತ್ತಾರೆ.
ಬಿಳಿ ಹಸುವಿನ ಕರುವೆಂದ ಮಾತ್ರಕ್ಕೆ ಬಳ್ಳ ಬಳ್ಳ ಹಾಲು ಕೊಡುವುದೇ? ಸಂಗನ ಬಸವಣ್ಣ ಎಂದರೆ ಅವರಲ್ಲಿ ಏನು ಮಾತು ಮಾತಿಗೆ ಭಕ್ತಿಯಿದೆಯೇ? ಎಂದು ಗುರು ಬಸವಣ್ಣನವರ ಮೇಲೆ ಮುನಿಸು ತಾಳುತ್ತಾರೆ. ಗುರು ಅಲ್ಲಮ ಪ್ರಭುದೇವರಿಗೆ ಆಗಿನ್ನು ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳ ಬಗ್ಗೆ ಅರಿವಿರುವುದಿಲ್ಲ. ನಾನು ವಿರಕ್ತ; ಗೃಹಸ್ಥರಾದ ಗುರು ಬಸವಣ್ಣನವರು ಎದ್ದು ಬಂದು ಕಿಂಕರತೆಯಿಂದ ನನಗೆ ವಂದಿಸಿ ಭಯ ಭಕ್ಕಿಯಿಂದ ನಡೆದುಕೊಳ್ಳುತ್ತಾರೆ/ನಡೆದು ಕೊಳ್ಳಬೇಕು ಎಂದು ನಿರೀಕ್ಷಿಸಿದ್ದರು. (ನಂತರ ತತ್ವ ತಿಳಿದುಕೊಂಡಮೇಲೆ ಸಂಗನ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದರು ಒಬ್ಬ ಪರಮ ವಿರಕ್ತ ಪರಮ ಗೃಹಸ್ಥರ ಶ್ರೀಪಾದಕ್ಕೆ ನಮೋ ನಮೋ ಎಂದುದು ಇದೇ ಮೊದಲು. ಈಗಲೂ ಕೂಡ ಗೃಹಸ್ಥರು ಮಾತ್ರ ಕಾವಿಗಳಿಗೆ ಏಕೆ ನಮಸ್ಕರಿಸಬೇಕು? ಕಾವಿಗಳೇಕೆ ಸದ್ಭಕ್ತ ಗೃಸ್ಥರಿಗೆ ನಮಸ್ಕರಿಸಬಾರದು?) ಆದರೂ ಗುರು ಬಸವಣ್ಣನವರು ಇಷ್ಟಲಿಂಗಪೂಜೆಯನ್ನು ಬಿಟ್ಟು ಹೋಗುವುದಿಲ್ಲ. ಹೀಗೆ ಕೆಲ ಹೊತ್ತು ಗುರು ಅಲ್ಲಮಪ್ರಭುದೇವರು ಮತ್ತು ಶರಣ ಹಡಪದ ಅಪ್ಪಣನವರ ಮಧ್ಯೆ ಸಂಭಾಷಣೆ ನಡೆಯುತ್ತಿರುತ್ತದೆ. ಅಷ್ಟೊತ್ತಿಗೆ ಗುರು ಬಸವಣ್ಣನವರು ಇಷ್ಟಲಿಂಗಪೂಜೆ ಮುಗಿಸಿ ಎದ್ದೇಳುವಷ್ಟರಲ್ಲಿ ಗುರು ಚನ್ನಬಸವಣ್ಣನವರು ಬಂದು ಗುರು ಅಲ್ಲಮ ಪ್ರಭುದೇವರು ಆಗಮಿಸಿದಂತೆ ತೋರುತ್ತದೆ ಸ್ವಾಗತ ಮಾಡೋಣ ಬನ್ನಿ ಎಂದು ಗುರು ಬಸವಣ್ಣನವರನ್ನು ಕರೆದುಕೊಂಡು ಹೋಗುತ್ತಾರೆ.
ಈಗ ಇಷ್ಟಲಿಂಗ ಪೂಜೆಮಾಡಿಯಾಗಿದೆ ಜಂಗಮ ಸೇವೆ, ಜಂಗಮ ಸಂಭಾಷಣೆ ಮಾಡುತ್ತೇನೆ ಎಂದು ಗುರು ಅಲ್ಲಮಪ್ರಭುದೇವರನ್ನು ಕುಳ್ಳಿರಿಸಿ ಕ್ಷೇಮ ಸಮಾಚಾರ ವಿಚಾರಿಸಿ ಅವರನ್ನು ಉಪಚರಿಸುತ್ತಾರೆ. ಮೇಲಿನ ವಚನದಲ್ಲಿ ಲಿಂಗಾರ್ಚನೆಯ ಮಾಡಿ ಜಂಗಮಾರ್ಚನೆಯ ಮಾಡುವೆನು ಎನ್ನುತ್ತಾರೆ.
ಈ ನಮ್ಮ ಧರ್ಮ ಪರಂಪರೆಯಿಂದ ನಮಗೆ ಈ ಕೆಳಗಿನ ವಿಷಯಗಳು ಗೊತ್ತಾಗುತ್ತವೆ.
- ಇಷ್ಟಲಿಂಗ ಪೂಜೆ ಪ್ರಾರ್ಥನೆ ನಡೆಯುವಾಗ ಅದನ್ನು ಯಾವುದೇ ಕಾರಣಕ್ಕೂ ಅರ್ಧಕ್ಕೆ ನಿಲ್ಲಿಸಬಾರದು.
- ಇಷ್ಟಲಿಂಗ ಪೂಜೆ ಪ್ರಾರ್ಥನೆ ನಡೆಯುವಾಗ ಅತಿಥಿಗಳು ಬಂದರೆ ಅವರು ನೇರವಾಗಿ ವೇದಿಕೆಗೆ ಬಂದು ಸಭೆಗೆ ಬಂದು ಕುಳಿತು ಅವರೂ ಪ್ರಾರ್ಥನೆಯಲ್ಲಿ ಭಾಗಿಯಾಗಬೇಕು.
- ಅತಿಥಿಗಳು ಬಂದಾಗ ಕರೆತರಲಿಕ್ಕೆ ಪೂಜೆಗೆ ಕುಳಿತವರು ಅಥವಾ ಪ್ರಾರ್ಥನೆಗೆ ಕುಳಿತವರು ಹೋಗಬಾರದು. ಸೇವಕರಿಗೆ ಅಥವಾ ಪೂಜೆ ಪ್ರಾರ್ಥನೆಗೆ ಕೂಡದ ವಾಹನ ಚಾಲಕರಿಗೆ ಅತಿಥಿಗಳನ್ನು ಕರೆತರಲು ಕಳಿಸಬೇಕು.
- ಪ್ರಾರ್ಥನೆ ಮುಗಿದ ಮೇಲೆ ಪೂಜೆ ಮುಗಿದ ಮೇಲೆ ಎಷ್ಟಾದರೂ ವೈಭವದಿಂದ ಸ್ವಾಗತಿಸಬಹುದು. ಆದರೆ ಪ್ರಾರ್ಥನೆಯ ಮಧ್ಯದಲ್ಲೇ ಎದ್ದು ಹೋಗುವುದು ತಪ್ಪು.
ಈ ಒಂದು ಪರಂಪರೆಯನ್ನು ಪೂಜ್ಯ ಶ್ರೀ ಮಾತೆ ಮಹಾದೇವಿಯವರು ಮತ್ತು ಪೂಜ್ಯ ಶ್ರೀ ಲಿಂಗಾನಂದ ಗುರುದೇವರು ಆಚರಿಸುತ್ತಿದ್ದರು. ನಾವು ನೋಡಿದ ಹಾಗೆ ಮಾತಾಜಿಯವರು ಸಭೆಯಿಂದ ಸ್ವತಃ ಎದ್ದು ಹೋಗಿ ಯಾವುದೇ ಅತಿಥಿಗಳನ್ನು ಸ್ವಾಗತಿಸಿದ ಉದಾಹರಣೆಗಳಿಲ್ಲ.
ಅವರ ಕಾರ್ಯಕ್ರಮಕ್ಕೆ ಅನೇಕ ಬಾರಿ ಮುಖ್ಯ ಮಂತ್ರಿಗಳು ಮಂತ್ರಿಗಳು ಆಗಮಿಸಿದ್ದರು. ದೊಡ್ಡ ದೊಡ್ಡ ಮಠದ ಸ್ವಾಮೀಜಿಗಳೂ ಆಗಮಿಸಿದ್ದರು ಆದರೆ ಮಾತಾಜಿಯವರು ಯಾವತ್ತೂ ಎದ್ದು ಹೋಗಿ ಯಾರನ್ನು ಸ್ವಾಗತಿಸಿದವರಲ್ಲ. ಪ್ರಾರ್ಥನೆ ನಡೆಯುವಾಗ ಅನೇಕ ಬಾರಿ ಅತಿಥಿಗಳು ಆಗಮಿಸಿದ್ದಾರೆ. ಕೆಲವೊಮ್ಮೆ ಶರಣರು ಅವರನ್ನು ಪ್ರಾರ್ಥನೆಯ ಮಧ್ಯದಲ್ಲಿಯೇ ವೇದಿಕೆ ಮೇಲೆ ಕುಳ್ಳಿಸಿದ್ದಾರೆ ಕೆಲವೊಮ್ಮೆ ವೇದಿಕೆಯ ಕೆಳಗಿನ ಆಸನದಲ್ಲಿ ಕುಳ್ಳಿರಿಸಿ ಪ್ರಾರ್ಥನೆ ಮುಗಿದ ನಂತರ ವೇದಿಕೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಪ್ರಾರ್ಥನೆಯನ್ನು ಯಾವತ್ತೂ ಅರ್ಧಕ್ಕೆ ನಿಲ್ಲಿಸಿಲ್ಲ.
ಅಕ್ಟೋಬರ್ 2000 ರಲ್ಲಿ ಬಸವ ಗೊಂಗೋತ್ರಿಯಲ್ಲಿ ಶಿಬಿರ ನಡೀತಾ ಇತ್ತು. ಸಂಜೆ ನೆನಹು ಆದ ಮೇಲೆ ಸಹೋದರಿ ಸವಿತಾ ಮತ್ತು ಕವಿತಾ ವಚನ ಗಾಯನ ಮಾಡುತ್ತಿದ್ದರು. ವಚನ ಗಾಯನದ ಮಧ್ಯೆಯೇ ಮಾತಾಜಿ ವೇದಿಕೆಗೆ ಆಗಮಿಸುತ್ತಿದ್ದರು. ಆಗ ಶರಣ ವೀರಣ್ಣ ಅಣ್ಣಾ ಅವರು ವಚನ ಗಾಯನ ಮಾಡುವವರ ಮೈಕ್ ತೆಗೆದುಕೊಂಡು ಜಯಘೋಷ ಹೇಳಲು ಆರಂಭಿಸಿದರು. ಮಾತಾಜಿ ವೇದಿಕೆ ಮೇಲೆ ಬಂದು ಕುಳಿತ ತಕ್ಷಣ. ನಾನು ಬರುವ ವೇಳೆಗೆ ವಚನ ಗಾಯನ ಅರ್ಧಕ್ಕೆ ನಿಲ್ಲಿಸಿ ಜಯಘೋಷ ಕೂಗಿದ್ದು ತಪ್ಪು. ವಚನ ಹಾಡುವುದನ್ನು ಅರ್ಧಕ್ಕೆ ನಿಲ್ಲಿಸಿದರೆ ನಮ್ಮ ಧರ್ಮ ಸಂಹಿತೆಗೆ ಅಗೌರ ತೋರಿದಂತಾಗುತ್ತದೆ ಎಂದು ಮಾತಾಜಿ ಹೇಳಿದರು ಮತ್ತು ವಚನ ಗಾಯನ ಮುಂದುವರೆಸಲಿಕ್ಕೆ ಹೇಳಿದ್ದರು. ಮತ್ತು ಈ ರೀತಿ ಮತ್ತೆ ಯಾವತ್ತೂ ಮಾಡಬಾರದು ಎಂದು ತಿಳಿಹೇಳಿದರು.
ನಾನು ಕಾಲೇಜು ಓದುತ್ತಿದ್ದಾಗ (1995) ಬೀದರ್ ಬಸವ ಮಂಟಪದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದಾಗ ಪ್ರಾರ್ಥನೆ ಮಾಡುತ್ತಲೇ ವಚನಗಳ ಒಂದು ಪುಸ್ತಕ ಓದುತ್ತಿದ್ದೆ. ಅಂದಿನ ರಾಷ್ಟ್ರೀಯ ಬಸವದಳದ ಅಧ್ಯಕ್ಷರಾಗಿದ್ದ ಶರಣ ಬಸವ ಕುಮಾರ ಪಾಟೀಲರು ಕಣ್ಣು ಸನ್ನೆಯಿಂದ ನನಗೆ ಬೈದು ಪುಸ್ತಕ ಮುಚ್ಚಿ ಪ್ರಾರ್ಥನೆ ಮಾಡಲು ಹೇಳಿದ್ದರು. ಅಂದು ನಾನು ನನ್ನ ತಪ್ಪನ್ನು ತಿದ್ದಿಕೊಂಡು ಅತ್ಯಂತ ನಿಷ್ಠೆ ಹಾಗು ಭಕ್ತಿಯಿಂದ ಪ್ರಾರ್ಥನೆ ಮಾಡುವ ಗುಣ ಅಳವಡಿಸಿಕೊಂಡೆ ಅಂದು ಧರ್ಮ ಪರಂಪರೆಯನ್ನು ಶರಣ ಬಸವಕುಮಾರ ಪಾಟೀಲ ಅಣ್ಣನವರು ನನಗೆ ಅರುಹಿದ್ದರು.
ಈ ನಮ್ಮ ಧರ್ಮ ಪರಂಪರೆಯ ಬಗ್ಗೆ, ವಚನ ಸಾಹಿತ್ಯದ ಬಗ್ಗೆ ಮತ್ತು ಪ್ರಾರ್ಥನೆಯ ಮಹತ್ವದ ಬಗ್ಗೆ ಅರಿವಿರುವವರು ಯಾರೂ ಕೂಡ ಸಾಮೂಹಿಕ ಪ್ರಾರ್ಥನೆ, ಗುರು ಬಸವ ಪೂಜೆ, ಇಷ್ಟಲಿಂಗ ಪೂಜೆಗಳನ್ನು ಅರ್ಧಕ್ಕೆ ನಿಲ್ಲಿಸಿ ಬಂದವರನ್ನು ಸ್ವಾಗತಿಸಲಿಕ್ಕೋ ಅಥವಾ ಮತ್ತಾವುದೋ ಕಾರ್ಯಕ್ಕೆ ಎದ್ದೇಳುವುದಿಲ್ಲ.
ಈ ರೀತಿಯ ಅರಿವಿನ ಕೊರತೆ ಇರುವವರು ಪ್ರಾರ್ಥನೆ ನಡೆಯುವಾಗ ಅರ್ಧಕ್ಕೆ ನಿಲ್ಲಿಸಿ ಧರ್ಮಕ್ಕೆ ಅಪಚಾರ ಮಾಡುತ್ತಾರೆ. ಇದರಿಂದ ಧರ್ಮ ಪರಂಪರೆಗೆ ಧಕ್ಕೆಯಾಗುತ್ತದೆ. ಸಭೆಯಲ್ಲಿ ಚಿಕ್ಕ ಮಕ್ಕಳು ಇರುತ್ತಾರೆ. ಮುಂದೆ ಧರ್ಮವನ್ನು ಮುನ್ನಡೆಸುವಂತ ಮಕ್ಕಳು ಯುವಕರಿಗೆ ಇದರಿಂದ ತಪ್ಪು ಸಂದೇಶ ಹೋಗುತ್ತದೆ. ಮುಂದೆ ಅವರು ಕಾರ್ಯಕ್ರಮಗಳನ್ನು ನಡೆಸುವಾಗ ಇದನ್ನೇ ಅನುಕರಿಸುತ್ತಾರೆ. ಅದಕ್ಕಾಗಿ ಧರ್ಮ ಪೀಠದ ಮೇಲೆ ಕುಳಿತವರು ಧರ್ಮವನ್ನು ಮುನ್ನಡೆಸುವವರು, ಧರ್ಮದ ಸಂಘಟನೆಯ ಮುಂದಾಳುಗಳು ಎನಿಸಿಕೊಂಡವರು ಧರ್ಮದಲ್ಲಿ ಈಗ ತಾನೆ ಕಣ್ಣುತೆರೆದ ಮರಿಸ್ವಾಮಿಗಳು ಲಿಂಗಾಯತ ಧರ್ಮದ ಈ ಪರಂಪರೆಯನ್ನು ಅರಿತುಕೊಂಡು ತಮ್ಮ ನಡೆಯನ್ನು ತಿದ್ದಿಕೊಳ್ಳಬೇಕು ಎಂದು ಈ ಮೂಲಕ ಎಚ್ಚರಿಸುತ್ತಿದ್ದೇನೆ.
ಧರ್ಮ ಪರಂಪರೆಯ ಈ ಆಚರಣೆಯನ್ನು ಮಾಡುವಲ್ಲಿ ತಪ್ಪಿದವರಿಗೆ ಗುರು ಬಸವಣ್ಣನವರು ಹಾಗು ಸೃಷ್ಠಿಕರ್ತ ಪರಮ ಪ್ರಭು ಲಿಂಗದೇವರು ಕ್ಷಮಿಸಿ, ಸನ್ಮಾರ್ಗದಲ್ಲಿ, ಧರ್ಮ ಮಾರ್ಗದಲ್ಲಿ, ಲಿಂಗಾಯತ ಧರ್ಮ ಪರಂಪರೆಯಲ್ಲಿ ನಡೆಯುವ ಸದ್ಬುದ್ಧಿ ಕರುಣಿಸಲೆಂದು ಪ್ರಾರ್ಥಿಸುವೆ.
-ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ
ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ
ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

ಶರಣು ಶರಣಾರ್ಥಿ 🙏🙏🙏🙏 ನಮ್ಮ ಮನೆಗೆ ಬಂದಾಗ ಇದುಸರಿಯಾಗಿದೆ ಒಂದು ಒಂದುಸಲ. ಒಂದು ಸಲ ಮಾತಾಜಿಯವರು ನಮ್ಮ ಮನೆಗೆ
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಅಳಿಸಿ🤔🔍👣📚📖👌🎯✍️💐
ಪ್ರತ್ಯುತ್ತರಅಳಿಸಿ