ಕಲ್ಯಾಣದ ಪ್ರಧಾನ ಮಂತ್ರಿ ಗುರು ಬಸವಣ್ಣನವರ ಯುದ್ಧ ವಿರೋಧ ನೀತಿ.

ಯುದ್ಧವೆಂದರೆ ಅದೊಂದು ಭಯಾನಕ ಸನ್ನಿವೇಶ. ಅಂಥ ಸನ್ನಿವೇಶವನ್ನು ಯುದ್ಧವಾದ ನಂತರವೇ ಅನುಭವಕ್ಕೆ ತಂದುಕೊಳ್ಳಬೇಕಾಗಿಲ್ಲ, ಯುದ್ಧದ ಸನ್ನಿವೇಶ ಕಲ್ಪಿಸಿಕೊಂಡರೂ ಎಂಥವರಿಗಾದರೂ ಅದರ ಪರಿಣಾಮದ ಬಗ್ಗೆ ಅರಿವಾಗುತ್ತದೆ. ಯುದ್ಧದಿಂದ ಅನೇಕ ಸಾವು ನೋವುಗಳುಂಟಾಗುತ್ತವೆ. ಯುದ್ಧದ ಪರಿಣಾಮದಿಂದ ಅನೇಕ ಜನ ಮಹಿಳೆಯರು ವಿಧವೆಯರಾಗುತ್ತಾರೆ, ಅನೇಕ ಮಕ್ಕಳು ಅನಾಥರಾಗುತ್ತಾರೆ. ಅನೇಕ ಜನ ಅಮಾಯಕರೂ ಸಾಯುತ್ತಾರೆ ಮತ್ತು ಅನೇಕರು ಗಾಯಗೊಳ್ಳುತ್ತಾರೆ. ಯುದ್ಧದಿಂದಾಗಿ ಭೌಗೋಳಿಕ ಪ್ರದೇಶವೂ ತನ್ನ ನೈಸರ್ಗಿಕತೆಯನ್ನು ಕಳೆದುಕೊಂಡ ಹಾಳಾಗುತ್ತದೆ. ಒಟ್ಟಾರೆ ಯುದ್ಧದ ಪರಿಣಾಮಗಳು ಅತ್ಯಂತ ಕರುಣಾಜನಕ, ಹೃದಯವಿದ್ರಾವಕ, ಮನಕಲಕುವಂತಾಗಿರುತ್ತವೆ. ಈ ಹಿಂದೆ ಜಗತ್ತು ಅನೇಕ ಯುದ್ಧಗಳನ್ನು ಕಂಡಿದೆ, ಎರಡು ಮಹಾಯುದ್ಧಗಳನ್ನೂ ಕಂಡಿದೆ. ಎರಡನೇ ಮಹಾಯುದ್ಧದಲ್ಲಿ ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿ ಎನ್ನುವ ಪಟ್ಟಣಗಳ ಮೇಲೆ ಅಣುಬಾಂಬ್ ಗಳನ್ನು ಹಾಕಲಾಯಿತು. ಇದರ ಪರಿಣಾಮದಿಂದ ಇಂದಿಗೂ ಆ ಎರಡೂ ಪಟ್ಟಣಗಳ ಭೌಗೋಳಿಕ ಪರಿಸರ ಶಾಶ್ವತವಾಗಿ ಊನವಾಯಿತು. ಅಣುಬಾಂಬಿನ ಪರಿಣಾಮವಾಗಿ ಇಂದಿಗೂ ಆ ಪಟ್ಟಣಗಳಲ್ಲಿ ಅತಿ ಹೆಚ್ಚಿನ ಅಂಗವಿಕಲ ಮಕ್ಕಳು ಜನಿಸುತ್ತಿವೆ. ಅಲ್ಲಿನ ಪರಿಸರದ ಮೇಲೆ ಯುದ್ಧ ಶಾಶ್ವತವಾದ ಗಾಢ ಪರಿಣಾಮವನ್ನು ಬೀರಿದೆ. 

ಇಂದು ಸಹ ಜಗತ್ತು ಯುದ್ಧ ಭೀತಿಯಿಂದ ನಲುಗುತ್ತಿದೆ. ಅಮೇರಿಕಾ ಮತ್ತು ಇರಾನ್ ಗಳ ಯುದ್ಧ ಬಹು ದೊಡ್ಡ ಭೀತಿಯನ್ನು ಸೃಷ್ಟಿಸಿದೆ. 

ಅನೇಕ ಉಗ್ರ ಸಂಘಟನೆಗಳು ಹುಟ್ಟಿಕೊಂಡು ಜಗತ್ತನ್ನು ಭಯಭೀತವಾದ ವಾತವರಣದಲ್ಲಿ ಮುಳುಗಿಸಿವೆ. ಭಾರತ ದೇಶದ ಮೇಲೂ ನಿರಂತರ ಆಕ್ರಮಣಗಳು, ದಾಳಿಗಳು, ಭಯೋತ್ಪಾದಕರಿಂದ ಹೀನ ಕೃತ್ಯಗಳು ನಡೆಯುತ್ತಲೇ ಇವೆ. 

 ಪ್ರಪಂಚದ ಇತಿಹಾಸ ಮತ್ತು ಭಾರತದ ಇತಿಹಾಸವನ್ನು ನೋಡಿದರೆ ಗುರು ಬಸವಣ್ಣನವರಿಗಿಂತ ಮುಂಚೆ ಅನೇಕ ಯುದ್ಧಗಳಾಗಿವೆ ಅವರ ನಂತರವೂ ಯುದ್ಧಗಳಾಗಿವೆ. ಕ್ರಿ.ಪೂ. 324ರಲ್ಲಿ ಚಂದ್ರಗುಪ್ತ ಮೌರ್ಯ ಮತ್ತು ಅವನ ಮಂತ್ರಿ ಚಾಣಕ್ಯ (ವಿಷ್ಣುಗುಪ್ತ) ಅನೇಕ ಯುದ್ಧಗಳನ್ನು ಮಾಡಿದ್ದರು. ಸಾಮನ್ಯವಾಗಿ ಅಂದಿನ ಕಾಲದ ರಾಜರ ಮಂತ್ರಿಗಳು ಯುದ್ಧ ನಿಪುಣರಾಗಿರುತ್ತಿದ್ದರು. ಕ್ರಿ.ಪೂ 262ರಲ್ಲಿ ಚಕ್ರವರ್ತಿ ಅಶೋಕನು ಆಳುತ್ತಿದ್ದ ಕಾಲ ಅವರಿಗೆ ರಾಧಗುಪ್ತನೆಂಬ ಮಂತ್ರಿಯಿದ್ದ. ಅಶೋಕನು ಮಾಡಿದ ಕಳಿಂಗ ಯುದ್ಧ ಈ ಜಗತ್ತು ಎಂದೆಂದಿಗೂ ಮರೆಯದ ಯುದ್ಧ ಏಕೆಂದರೆ ಅಂದಿನ ಕಾಲದಲ್ಲಿಯೇ ಅಶೋಕನ ಸೈನಿಕರು ಮತ್ತವರ ಪ್ರಜೆಗಳು ಸೇರಿ ಒಂದು ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಹೆಚ್ಚುಕಡಿಮೆ ಅದರಷ್ಟೇ ಕಳಿಂಗ ರಾಜನ ಸೈನಿಕರು ಮತ್ತು ಪ್ರಜೆಗಳೂ ಮೃತಪಟ್ಟಿದ್ದರೆಂದು ಇತಿಹಾಸಕಾರರು ಹೇಳಿದ್ದಾರೆ. 

ಅಂದಿನ ಯುದ್ಧಗಳು ವರ್ಷಗಳವರೆಗೆ/ ದಶಕಗಳವರೆಗೆ ನಡೆಯುತ್ತಿದ್ದವು.ಯುದ್ಧದಲ್ಲಿ ಆದ ಸಾವು ನೋವುಗಳನ್ನು ಸ್ವತಃ ನೋಡಿದ ಚಕ್ರವರ್ತಿ ಅಶೋಕ ಅತ್ಯಂತ ದುಃಖಿತನಾದ. ಮನಪರಿವರ್ತನೆಗೊಂಡು ಇನ್ನು ಮುಂದೆ ಯುದ್ಧ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದ. ಬೌದ್ಧ ಧರ್ಮ ಸ್ವೀಕರಿಸಿ ಅದನ್ನು ಪ್ರಚಾರ ಮಾಡುತ್ತ ಮುಂದೆ ತುಂಬಾ ಒಳ್ಳೆಯ ಕಾರ್ಯಗಳನ್ನು ಮಾಡಿದ್ದನಾದರೂ ಒಬ್ಬ ಚಕ್ರವರ್ತಿ ಹಾಗು ಅವರ ಮಂತ್ರಿಗೆ ಯುದ್ಧದ ಪರಿಣಾಮಗಳ ಬಗ್ಗೆ ಮುಂದಾಲೋಚನೆ ಇರಬೇಕು ಅದರಿಂದಾಗುವ ಸಾವು, ನೋವು ಪರಿಣಾಮಗಳನ್ನು ಯುದ್ಧಮಾಡಿಯೇ ತಿಳಿದುಕೊಳ್ಳಬೇಕಾಗಿಲ್ಲ.

 ರಾಮಾಯಣ ಯುದ್ಧ (ಕ್ರಿ.ಪೂ.6000), ಮಹಾಭಾರತ ಯುದ್ಧ(ಕ್ರಿ.ಪೂ. 5000) ತರೈನ ಯುದ್ಧ(ಕ್ರಿ.ಶ.1191), ಚಂದ್ರವಾರ್ ಕದನ (ಕ್ರಿ.ಶ.1194), ಪಾಣಿಪಟ್ ಕದನ (ಕ್ರಿ.ಶ.1526), ತಾಳಿಕೋಟೆ ಕದನ (ಕ್ರಿ.ಶ.1565),ಪ್ಲಾಸಿ ಕದನ(ಕ್ರಿ.ಶ.1757), ಬಾಕ್ಸಾರ ಕದನ(ಕ್ರಿ‌.ಶ.1764), ಇಂಥ ಅತ್ಯಂತ ಭಯಾನಕ ಯುದ್ಧಗಳು ಆಗಿಹೋಗಿವೆ.

 ಕೆಲವೊಂದು ಯುದ್ಧಗಳು ಒಂದೊಂದು ಸಂತತಿಯನ್ನೇ ಅಳಿಸಿಹಾಕಿವೆ. ಅನೇಕ ಮೌಲ್ಯ ಹಾಗು ಆದರ್ಶಗಳನ್ನು ಕೊಂದುಹಾಕಿವೆ. ಹೀಗೆ ಇತಿಹಾಸದಲ್ಲಿ ಎಲ್ಲಾ ರಾಜರೂ, ಅರಸರೂ, ಚಕ್ರವರ್ತಿಗಳು, ಸಾರ್ವಭೌಮರೂ ಮತ್ತು ಅವರ ಮಂತ್ರಿಗಳು ಒಂದಿಲ್ಲ ಒಂದು ರೀತಿಯ ಯುದ್ದವನ್ನು ಮಾಡಿಯೇ ಮಾಡಿದ್ದಾರೆ ಅನೇಕ ಸಾವು ನೋವುಗಳಿಗೆ ಕಾರಣರಾಗಿದ್ದಾರೆ.

 ದೇಶದಲ್ಲಿ ಇಂಥ ಯುದ್ಧ ಸನ್ನಿವೇಶಗಳ  ಕತ್ತಲೆ ಕಾರ್ಮೋಡ ಕವಿದಿದ್ದಾಗ ರವಿರಶ್ಮಿಯಂತ ಉದಯಿಸಿದ ಗುರು ಬಸವಣ್ಣನವರು ಕಲ್ಯಾಣಿಚಾಲುಕ್ಯ ರಾಜ್ಯದ ಪ್ರಧಾನಿಯಾಗಿ ರಾಜ್ಯವನ್ನು ಮುನ್ನಡೆಸಿದ ಪರಿಯೇ ಬೇರೆಯಾಗಿದೆ.

ವಚನ:

ಆಕಳ, ಕಳ್ಳರು ಕೊಂಡೊಯ್ದರೆನ್ನದಿರಿಂಭೋ, ನಿಮ್ಮ ಧರ್ಮ!ಬೊಬ್ಬಿಡದಿರಿಂಭೋ, ನಿಮ್ಮ ಧರ್ಮ! ಅರಸಾಡದಿರಿಂಭೋ, ನಿಮ್ಮ ಧರ್ಮ!ಅಲ್ಲಿ ಉಂಬಡೆ ಸಂಗ, ಇಲ್ಲಿ ಉಂಬಡೆ ಸಂಗ,ಲಿಂಗದೇವಾ ಏಕೋಭಾವ.

ಗುರು ಬಸವಣ್ಣನವರು (1134-1196) ಬಸವಕಲ್ಯಾಣದಲ್ಲಿ ಚಾಲುಕ್ಯ ಅರಸ ಬಿಜ್ಜಳನ ರಾಜ್ಯದಲ್ಲಿ ಮಹಾಮಂತ್ರಿಯಾಗಿ ಆಳ್ವಿಕೆ ನಡೆಸುತ್ತಿದ್ದ ಕಾಲವದು. ಜೊತೆಗೆ ಅನುಭಾವ ಮಂಟಪ ಮತ್ತು ಮಹಾಮನೆಗಳ ನಿರ್ಮಾಣ ಮಾಡಿ ಧಾರ್ಮಿಕ ಚಟುವಟಿಕೆಗಳನ್ನು ಉತ್ತುಂಗಕ್ಕೇರಿಸಿದ ಕಾಲವದು. ಮಹಾಮನೆಯಲ್ಲಿ ನಡೆಯುತ್ತಿದ್ದ ದಾಸೋಹದಲ್ಲಿ ದಿನ ನಿತ್ಯವೂ ಸಾವಿರಾರು ಜನರು ಪ್ರಸಾದ ಸ್ವೀಕರಿಸುತ್ತಿದ್ದರು. ನಿತ್ಯವೂ ನಡೆಯುತ್ತಿದ್ದ ದಾಸೋಹದಲ್ಲಿ ಸಾಕಷ್ಟು ಹಾಲು, ಮೊಸರು ತುಪ್ಪ, ಬೇಕಾಗುತ್ತಿತ್ತು. ಇದಕ್ಕಾಗಿ ಮಹಾಮನೆಯಲ್ಲಿ ಒಂದು ಗೋಶಾಲೆ ತೆಗೆದು ಸಾಕಷ್ಟು ಆಕಳುಗಳನ್ನು ಸಾಕಲಾಗಿತ್ತು. ಆ ಆಕಳುಗಳನ್ನು ನೋಡಿಕೊಳ್ಳಲ್ಲಿಕ್ಕೆ, ಮೇಯಿಸಲಿಕ್ಕೆ ಒಂದು ತಂಡವೇ ಅಲ್ಲಿತ್ತು. ಹೀಗೆ ಒಂದು ದಿನ ಗೋಪಾಲಕರು ಆಕಳುಗಳನ್ನು ಮೇಯಿಸಲಿಕ್ಕೆ ಕರೆದುಕೊಂಡು ಹೋದಾಗ ಗುರು ಬಸವಣ್ಣನವರ ರಾಜಕೀಯ ದ್ವೇಷಿಗಳು ಗೋಪಾಲಕರ ಮೇಲೆ ದಾಳಿ ಮಾಡಿ ಎಲ್ಲಾ ಆಕಳುಗಳನ್ನು ಅಲ್ಲಿಂದ ಅಪಹರಿಸಿಕೊಂಡು ಹೋಗುತ್ತಾರೆ. ಇಂಥ ಸಂದರ್ಭದಲ್ಲಿ ಗೋಪಾಲಕರು ಓಡಿ ಬಂದು ಗುರು ಬಸವಣ್ಣನವರಿಗೆ ವಿಷಯ ತಿಳಿಸುತ್ತಾರೆ. ಆಗ ಸಹಜವಾಗಿ ಮಹಾಮನೆಯ ಇನ್ನಿತರ ಶರಣರಿಗೂ ವಿಷಯ ಗೊತ್ತಾಗಿ ಕೆಲವರು ಬೊಬ್ಬೆಯಿಟ್ಟರೆ ಇನ್ನು ಕೆಲವು ತೀವ್ರವಾದಿ ಶರಣರು ಕೋಪದಿಂದ ಕಳ್ಳರನ್ನು ಹೊಡೆಯೋಣ ಅವರನ್ನು ದಂಡಿಸೋಣ ಎಂದು ಅರಚುತ್ತಿದ್ದರು. 

ಪ್ರಧಾನಿ ಹಾಗು ದಂಢಾಧೀಶರಾದ ಗುರು ಬಸವಣ್ಣನವರು ಕ್ಷಣಮಾತ್ರದಲ್ಲಿ ತಮ್ಮ ಸೈನ್ಯವನ್ನು ಕಳುಹಿಸಿ ಅಪಹರಣಕಾರರೊಂದಿಗೆ ಯುದ್ಧಮಾಡಿ ಗೋವುಗಳನ್ನು ಬಿಡಿಸಿಕೊಂಡು ಬರಬಹುದಿತ್ತು. ಆದರೆ ಗುರು ಬಸವಣ್ಣನವರು ಬಲಪ್ರಯೋಗದಿಂದ ಇನ್ನೊಬ್ಬರನ್ನು ತಿದ್ದುವುದಕ್ಕಿಂತ ಮಾನವ ಪ್ರೇಮ, ವಿಶ್ವಪ್ರೇಮ ಪ್ರಯೋಗದ ಮೂಲಕ ಮಾಡುವ ಪರಿವರ್ತನೆ ಅತ್ಯಂತ ಶ್ರೇಷ್ಠ ಎಂದು ನಂಬಿದ್ದರು. 

ಬಂದ ಗೋಪಾಲಕರಿಗೆ ಮತ್ತು ಕೋಪದಿಂದ ಅರಚುತ್ತಿದ್ದವರಿಗೆ ಆಕಳುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ದಯವಿಟ್ಟು ಬೊಬ್ಬೆ ಹಾಕಬೇಡಿ,  ಕೋಪದಿಂದ ಕಿರುಚಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ. 

ಪ್ರತಿಯೊಬ್ಬ ಮಾನವ ಹಾಗು ಪ್ರತಿಯೊಂದು ಜೀವಿಯಲ್ಲೂ ದೇವರ ಚೈತನ್ಯ ಕಂಡ ಗುರು ಬಸವಣ್ಣನವರ ಮನೋಭಾವನೆಯ ಪರಿಯೇ ಬೇರೆ. ಎಲ್ಲರ ಹೃದಯದಲ್ಲೂ ದೇವನಿರುವಾಗ ಯಾರೇ ಪ್ರಸಾದ ಸೇವಿಸಿದರೂ ಅದು ದೇವನಿಗೆ ಸಲ್ಲುವುದು. ಯಾರೇ ಸೌಲಭ್ಯಗಳನ್ನು ಉಪಯೋಗಿಸಿದರೂ ಅದು ದೇವನಿಗೆ ಸಲ್ಲುವುದು ಎಂದು "ಅಲ್ಲಿ ಉಂಬಡೆ ಸಂಗ, ಇಲ್ಲಿ ಉಂಬಡೆ ಸಂಗ" ಎನ್ನುವ ವಿಶ್ವಪ್ರೇಮದ ಸಂದೇಶವನ್ನು ಕೊಟ್ಟಿದ್ದಾರೆ.

 ಮಹಾಮನೆಯಲ್ಲಿ ಹಸುಗಳನ್ನು ಸಾಕಿರುವುದು ದಾಸೋಹಕ್ಕಾಗಿ ಹಾಲು ಬೇಕೆಂದು. ಅದೇ ಹಾಲು ಮತ್ತೆಲ್ಲೋ ಉಪಯೋಗವಾಗುತ್ತಿದೆ ಅದು ದಾಸೋಹವೇ ಎಂದು ಹೇಳಿದ ಗುರು ಬಸವಣ್ಣನವರು ಆಕಳುಗಳ ಬರುವಿಕೆಗಾಗಿ ಕಾಯುತ್ತಿದ್ದ ಎಳೆಗರುಗಳನ್ನು ಬಂಡಿಯಲ್ಲಿ ಹಾಕಿಸಿ ಆಕಳುಗಳನ್ನು ಅಪಹರಿಸಿಕೊಂಡು ಹೋಗಿ ಕಟ್ಟಿರುವ ಜಾಗಕ್ಕೆ ತಲುಪಿಸುತ್ತಾರೆ. ಇದರಿಂದ ಕಳ್ಳರ ಮನಸ್ಸಿಗೆ ಹೇಗಾಗಿರಬಹುದು! ಉರಿಯುವ ಕೆಂಡದ ಮೇಲೆ ಭೋರ್ಗರೆಯುವ ಮಳೆಸುರಿದಂತೆ. ಕ್ಷಣಾರ್ಧದಲ್ಲಿ ಹೃದಯ ಪರಿವರ್ತನೆ!! ಈ ಘಟನೆಯಿಂದ ಯಾವ ಯುದ್ಧವೂ ಮಾಡಲಾರದ ಪರಿವರ್ತನೆ ಗುರು ಬಸವಣ್ಣನವರ ಮಾನವ ಪ್ರೇಮ ಮಾಡಿತು.

 ದೊಡ್ಡರಾಜ್ಯದ ಹೆಚ್ಚಿನ ಸೇನಾ ಬಲ ಹೊಂದಿದ ಚಕ್ರವರ್ತಿಗಳಿಗೆ, ಸಣ್ಣರಾಜ್ಯದ ಮಾಂಡಲೀಕ ಅರಸರು ಕಪ್ಪಕಾಣಿಗಳನ್ನು ಸಲ್ಲಿಸಬೇಕೆಂಬುದು ನಿಯಮವಿತ್ತು. ಕಪ್ಪಕಾಣಿಕೆ ಸಲ್ಲಿಸದಿದ್ದರೆ ಅವರ ಮೇಲೆ ಯುದ್ಧಮಾಡುತ್ತಿದ್ದರು. ಈ ಹಿಂದೆಯೇ ತಿಳಿಸಿದ ಹಾಗೆ ಅರಸರು ಚಕ್ರವರ್ತಿಗಳೆಂದರೆ ಅವರು ಯುದ್ಧವನ್ನು ಮಾಡುವವರು ತಮಗಿಂತ ದುರ್ಬಲ ಅರಸರ ಮೇಲೆ ಕೆಲವೊಮ್ಮೆ ಸಬಲ ಅರಸರ ಮೇಲೂ ಕುತಂತ್ರದಿಂದ ಯುದ್ಧಮಾಡಿ, ದಂಡೆತ್ತಿ ಹೋಗಿ ತಮ್ಮ ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿದ್ದರು. ಇನ್ನೊಂದು ರಾಜ್ಯದ ಸಂಪತ್ತು ದವಸ ಧಾನ್ಯಗಳನ್ನು ದೋಚುತ್ತಿದ್ದರು. ಗುರು ಬಸವಣ್ಣನವರ ಯುದ್ಧವಿರೋಧ ಮನೋಭಾವನೆಯ ಬಗ್ಗೆ ಕಾವ್ಯಗಳಲ್ಲಿ ಇನ್ನೊಂದು ಘಟನೆ ಉಲ್ಲೇಖವಾಗಿದೆ. ಬಿಜ್ಜಳ ಚಕ್ರವರ್ತಿಯ ರಾಜ್ಯದ ಸುತ್ತ ಮುತ್ತ ಅನೇಕ ಸಣ್ಣ ಸಣ್ಣ ಅರಸರು ಸಹ ರಾಜ್ಯವಾಳುತ್ತಿದ್ದರು. ಅವರಿಂದ ಕಪ್ಪ ಕಾಣಿಕೆ ಬಿಜ್ಜಳನಿಗೆ ಬರುತಿತ್ತು. ಅವರಲ್ಲಿ ಕೆಲವರು ಸ್ವಾಭಿಮಾನಿಯಾಗಿದ್ದರು. ಯುದ್ಧವನ್ನು ಎದುರಿಸುತ್ತೆವೇಯೇ ಹೊರತು ಕಪ್ಪ ಕಾಣಿಕೆ ಕೊಡುವುದಿಲ್ಲ ಎನ್ನುವ ಮನೋಭಾವದವರು.

ಸಿಂಹರಾಜ ಎನ್ನುವ ಮಾಂಡಲೀಕ ಅರಸ ಇಂಥ ಸ್ವಭಾವದವನಾಗಿದ್ದನು ಆದ್ದರಿಂದ ಅಪಾರ ಸೈನ್ಯ ಬಲಹೊಂದಿದ್ದ ಬಿಜ್ಜಳನು ಸಿಂಹರಾಜನ ಮೇಲೆ ಯುದ್ಧ ಸಾರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ. ಆ ಕಡೆ ಸಿಂಹ ರಾಜನು ಕೂಡ ಕತ್ತಿಯನ್ನು ಝಳಪಿಸುತ್ತ ಯುದ್ಧಕ್ಕೆ ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದ. ಯುದ್ಧವನ್ನು ಇಷ್ಟ ಪಡದ ಅದನ್ನು ವಿರೋಧಿಸುವ ಗುರು ಬಸವಣ್ಣನವರು ಸಿಂಹರಾಜನ ಬಳಿಗೆ ತೆರಳಿ ಯುದ್ಧದ ಭೀಕರ ಪರಿಣಾಮಗಳ ಬಗ್ಗೆ ವಿವರಿಸುತ್ತಾರೆ. ಬಿಜ್ಜಳ ಅರಸರು ಪ್ರಜಾಪ್ರೇಮಿಯಾಗಿದ್ದಾರೆ, ತಾವೂ ಪ್ರಜಾ ಪ್ರೇಮಿಯಾಗಿದ್ದೀರಿ. “ಅಲ್ಲಿ ಉಂಬಡೆ ಸಂಗ ಇಲ್ಲಿ ಉಂಬಡೆ ಸಂಗ” ಎನ್ನುವ ವಿಚಾರವನ್ನು ಸಿಂಹರಾಜನಿಗೆ ಮನದಟ್ಟು ಮಾಡಿದ ಗುರು ಬಸವಣ್ಣನವರು, ಸಿಂಹರಾಜನು ಬಿಜ್ಜಳ ಅರಸನಿಗೆ ಕಪ್ಪಕಾಣಿಕೆಯನ್ನು ಸಲ್ಲಿಸುವಂತೆ ಮಾಡುತ್ತಾರೆ. ಇದರಿಂದ ನಡೆಯಬೇಕಾದ ಘೋರ ಯುದ್ಧವು ತಪ್ಪಿ ಹೋಯಿತು. ಈ ಘಟನೆಯನ್ನು ಕ್ರಾಂತಿಯೋಗಿ ಬಸವಣ್ಣ ಚಲನಚಿತ್ರದಲ್ಲಿ ಪೂಜ್ಯ ಶ್ರೀ ಜಗದ್ಗುರು ಮಾತೆ ಮಾಹಾದೇವಿಯವರು ಚಿತ್ರಿಸಿದ್ದಾರೆ. ಇಲ್ಲಿ "ಗುರು ಬಸವಣ್ಣನವರ ಮಾನವೀಯ ಹೃದಯ ನನ್ನನ್ನು ಶರಣಾಗುವಂತೆ ಮಾಡಿದೆ" ಎಂದು ಸಿಂಹರಾಜನು ಹೇಳಿದರೆ, "ಸಿಂಹರಾಜನ ಸಮಯ ಪ್ರಜ್ಞೆಯಿಂದ ಇದು ಸಾಧ್ಯವಾಯಿತು" ಎಂದು ಗುರು ಬಸವಣ್ಣನವರು ಸೋತ ಸಿಂಹರಾಜನಲ್ಲಿ ಗೆಲುವನ್ನು ತುಂಬುತ್ತಾರೆ. ಇದು ನಿಜವಾದ ಮುತ್ಸದ್ಧಿತನ, ನಿಜವಾದ ಪ್ರಜಾಪ್ರೇಮಿ ಪ್ರಧಾನಿಗಿರಬೇಕಾದ ಗುಣಲಕ್ಷಣ. 

ಗುರು ಬಸವಣ್ಣನವರು ಸಂಪ್ರದಾಯಕ್ಕೆ ವಿರುದ್ಧವಾದ ವರ್ಣಾಂತರ ವಿವಾಹ ಮಾಡಿಸಿದ್ದಾರೆ ಎಂದು ಆರೋಪಿಸಿ ಅವರಿಗೆ ಗಡಿಪಾರು ಶಿಕ್ಷೆ ವಿಧಿಸುವಂರೆ ರಾಜನಿಗೆ ಪ್ರೇರೇಪಿಸಿ ಆಜ್ಞೆ ಹೊರಡಿಸಿದಾಗ ಅನೇಕ ಶರಣರು ಅದನ್ನು ವಿರೋಧಿಸಿದ್ದರು. ಯುದ್ಧವನ್ನು ಬಲ್ಲ ಮಡಿವಾಳಮಾಚಿದೇವರು ನಾವು ಈ ಅನ್ಯಾಯದ ವಿರುದ್ಧ ಹೋರಾಡುತ್ತೇವೆ ಎಂದು ಹೇಳಿದ್ದರು. ಆ ಸಂದರ್ಭದಲ್ಲೂ ಯುದ್ಧವನ್ನು ವಿರೋದಿಸುವ ಗುರು ಬಸವಣ್ಣವನರು ಗಡಿಪಾರು ಶಿಕ್ಷೆ ಒಪ್ಪಿಕೊಂಡು ಕೂಡಲಸಂಗಮಕ್ಕೆ ಹೊರಟರೇ ವಿನಃ ಮಾಚಿದೇವರಿಗೆ ಯುದ್ಧಕ್ಕಾಗಿ ಅನುಮತಿ ನೀಡಲಿಲ್ಲ. ‘ಭಾರತ ದೇಶದ ಮಿಸೈಲ್ ತಂತ್ರಜ್ಞಾನದ ಪಿತಾಮಹ’ ಎಂದು ಕರೆಯಲ್ಪಡುವ ನಮ್ಮ ದೇಶದ ಮಾಜಿ ರಾಷ್ಟ್ರಪತಿ ಲಿಂಗೈಕ್ಯ ಶರಣ ಅಬ್ದುಲ್ ಕಲಾಮ್ ರವರಿಗೆ ವಿದ್ಯಾರ್ಥಿಯೊಬ್ಬರು ಒಂದು ಪ್ರಶ್ನೆಯನ್ನು ಕೇಳಿದ್ದರು “ನೀವು ಶಾಂತಿಯ ಮಾತನಾಡುತ್ತೀರಿ ಆದರೆ ಮಿಸೈಲ್ ಗಳನ್ನು ನಿರ್ಮಿಸುತ್ತೀರಿ ಎರಡೂ ತದ್ವಿರುದ್ಧವಲ್ಲವೇ?” ಎಂದು.

 ಆಗ ಅಬ್ದುಲ್ ಕಲಾಮ್‍ರವರು “ಶಾಂತಿ ದೇಶದ ಆಂತರಿಕ ರಕ್ಷಣೆಗೆ ಭದ್ರತೆಗೆ ಬೇಕು, ಮಿಸೈಲ್  ಬಾಹ್ಯ ಶತ್ರುಗಳಿಂದ ರಕ್ಷಿಸಿಕೊಳ್ಳಲು ಬೇಕು” ಎಂದಿದ್ದರು.ಒಂದು ದೇಶದ ಸೈನ್ಯಕ್ಕೆ ರಕ್ಷಣಾಪಡೆ(Defence) ಎನ್ನುವ ಹೆಸರಿರುತ್ತದೆಯೇ ಹೊರತು ಯುದ್ಧಪಡೆ ಎಂದು ಹೆಸರಿರುವುದಿಲ್ಲ. ಯುದ್ಧಕಲೆಯನ್ನು ಕಲಿತುಕೊಳ್ಳುವುದು ರಕ್ಷಣಾ ಪಡೆಯನ್ನು ಹೊಂದುವುದು ತಪ್ಪಲ್ಲ ಪ್ರತಿಯೊಬ್ಬರೂ ಆತ್ಮ ರಕ್ಷಣೆ ಧರ್ಮರಕ್ಷಣೆಯ ದೇಶ ರಕ್ಷಣೆ ಪ್ರಸಂಗ ಬಂದಾಗ ಯುದ್ಧ ಮಾಡಲೇ ಬೇಕು. 

ಆದರೆ ಆಕ್ರಮಣಕಾರಿ ಯುದ್ಧವನ್ನು ವಚನ ಸಾಹಿತ್ಯ ವಿರೋಧಿಸುತ್ತದೆ. ಗುರು ಬಸವಣ್ಣನವರ ನೇತೃತ್ವದಲ್ಲಿ ಶರಣರು ಯುದ್ಧಕಲೆಯನ್ನು ಕಲಿತವರಾಗಿದ್ದರು. ಅದನ್ನು ಅವರು ಆತ್ಮ ರಕ್ಷಣೆ, ವಚನಸಾಹಿತ್ಯ ರಕ್ಷಣೆ ಹಾಗು ಧರ್ಮ ರಕ್ಷಣೆಗಾಗಿ ಪ್ರಯೋಗಿಸಿದ್ದರೇ ಹೊರತು ಯಾರೂ ಆಕ್ರಮಣಕಾರಿಗಳಾಗಿರಲಿಲ್ಲ.  ವಚನ ಸಾಹಿತ್ಯದ ಈ ಮನೋಭಾವವನ್ನು, ಯುದ್ಧವಿರೋಧ ನೀತಿಯನ್ನು ಭಾರತ ದೇಶದ ಎಲ್ಲಾ ರಾಜ್ಯಗಳು ಅಳವಡಿಸಿಕೊಂಡರೆ ಇಲ್ಲಿರುವ ನದಿ ನೀರಿನ ಹಂಚಿಕೆಯ ವಿವಾದಗಳು, ಗಡಿ ಸಮಸ್ಯೆಗಳು, ಜನಾಂಗೀಯ ಜಗಳಗಳು, ಭಾಷೆಯ ಸಮಸ್ಯೆಗಳು ನಿವಾರಣೆಯಾಗಿ ಇಡೀ ಭಾರತ ದೇಶವೇ ಗುರು ಬಸವಣ್ಣನವರ ಕಲ್ಯಾಣ ರಾಜ್ಯವಾಗುತ್ತದೆ. ಶಾಂತಿ, ಪ್ರೀತಿ, ನೆಮ್ಮದಿಗಳ ನೆಲೆವೀಡಾಗುತ್ತದೆ, ಅಧ್ಯಾತ್ಮ ಆನಂದಗಳ ನಂದನವನವಾಗುತ್ತದೆ.  ಪ್ರಪಂಚದ ಎಲ್ಲಾ ರಾಷ್ಟ್ರಗಳು ತಮ್ಮ ವಿದೇಶಾಂಗ ನೀತಿಯಲ್ಲಿ ಗುರು ಬಸವಣ್ಣನವರ ‘ಅಲ್ಲಿ ಉಂಬಡೆ ಸಂಗ ಇಲ್ಲಿ ಉಂಬಡೆ ಸಂಗ’ ಎನ್ನುವ ಸೂತ್ರವನ್ನು ಅಳವಡಿಸಿಕೊಂಡರೆ ಇಡೀ ಜಗತ್ತೇ ಒಂದು ಕಲ್ಯಾಣ ರಾಜ್ಯವಾಗುತ್ತದೆ ಅದು ಶಾಂತಿ ಪ್ರೀತಿಗಳ ನೆಲೆವೀಡಾಗುತ್ತದೆ. ಇಡೀ ಭೂಲೋಕವೆ ಗುರು ಬಸವಣ್ಣನವರ, ಪರಮಾತ್ಮನ ಮಹಾಮನೆಯಾಗುತ್ತದೆ.  

ಇಡೀ ವಚನ ಸಾಹಿತ್ಯದಲ್ಲಿ ಯುದ್ಧ ಮತ್ತು ಕದನ ಎನ್ನುವ ಪದಗಳೇ  ಎಲ್ಲಿಯೂ ಬಳಕೆಯಾಗಿಲ್ಲ. ಎಂಟು ವಚನಗಳಲ್ಲಿ ‘ಕಾದುವ’ ಎನ್ನುವ ಶಬ್ದ ಬಳಕೆಯಾಗಿದೆ ಅದು ಕೇವಲ ಆಧ್ಯಾತ್ಮಿಕ ಸಾಧನೆಯ ಹೋಲಿಕೆಗಾಗಿ ಮಾತ್ರ. ನಾಲ್ಕೈದು ವಚನಗಳಲ್ಲಿ ‘ಕಾಳಗ’ ಎನ್ನುವ ಪದ ಬಳಕೆಯಾಗಿದೆಯಾದರೂ ಆ ಕಾಳಗ ನಡೆಯಬೇಕಾಗಿರುವುದು ಕರಂಣಂಗಳಲ್ಲಿ ಎಂದು ಎಚ್ಚರಿಸಿ ಸೂಚಿಸಿದ್ದಾರೆ.

ಆದ್ದರಿಂದ ಅಮೇರಿಕಾ ಮತ್ತು ಇರಾನ್  ದೇಶಗಳು ಕೂಡಲೇ ಯುದ್ದವನ್ನು ನಿಲ್ಲಿಸಬೇಕು.

 ಯುದ್ಧ(ಕಾಳಗ)ವನ್ನು ಮಾಡುವುದೇ ಆದರೆ ಅಕ್ಕ ಪಕ್ಕದ ರಾಜ್ಯಗೊಳೊಂದಿಗೆ/ನೆರೆಯ ರಾಷ್ಟ್ರದವವರೊಂದಿಗಲ್ಲ ಬದಲಾಗಿ ನಿಮ್ಮ ಅಂತರಂಗದಲ್ಲಿ ಅಡಗಿರುವ ಅವಗುಣಗಳೆಂಬ ಶತ್ರುಗಳೊಂದಿಗೆ ಮಾಡಿ.....!!

ಶರಣು ಶರಣಾರ್ಥಿ


-ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ 9886694454

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…